ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸಂಶೋಧನಾ ಚಟುವಟಿಕೆಗಳಿಗಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳಾದರೂ ಸಂಶೋಧನಾ ಚುಟವಟಿಕೆಗಳೇ ಶುರುವಾಗಿಲ್ಲ.
ಲಿಂಗರಾಜು ಕೋರಾ
ಬೆಂಗಳೂರು (ಮಾ.30): ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸಂಶೋಧನಾ ಚಟುವಟಿಕೆಗಳಿಗಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳಾದರೂ ಸಂಶೋಧನಾ ಚುಟವಟಿಕೆಗಳೇ ಶುರುವಾಗಿಲ್ಲ. ಇದಕ್ಕೆ ಎರಡು ಪ್ರಮುಖ ಕಾರಣಗಳು. ಮೊದಲನೆ ಯದು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಪ್ರಾಧ್ಯಾಪಕರನ್ನು ಆಯಾ ವಿವಿಗಳಿಗೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ಮಾಡುತ್ತಿರುವ ವಿಳಂಬ. ಪ್ರಾಧ್ಯಾಪಕರಲ್ಲಿ ಶೇ.80ರಷ್ಟು ಮಂದಿ ಪಿಎಚ್‌ಡಿ ಮಾಡಿದವರಾದರೂ ತಮ್ಮ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗ ದರ್ಶಕರಾಗಲು ಅವಕಾಶ ವಂಚಿತರಾಗಿದ್ದಾರೆ.
ಮತ್ತೊಂದು ಸಂಶೋಧನೆ ಅಥವಾ ಪಿಎಚ್‌ಡಿ ಅಧ್ಯಯನ ಆರಂಭಿ ವಿವಿ ಸಿದ್ಧಪಡಿಸಿರುವ ನಿಯಮಾವಳಿಗೆ (ಸ್ಟಾಟ್ಯೂಟ್) ಇನ್ನೂ ಕೂಡ ರಾಜ್ಯಪಾಲರ ಅನುಮೋದನೆ ದೊರಕಿಲ್ಲ. 'ವಿಶ್ವವಿದ್ಯಾಲಯ ಅನುದಾನ ಆಯೋಗ'ದ ನಿಯಮದ ಪ್ರಕಾರ ಸಂಶೋಧನೆ ಗಳಿಗೆ ಅನುದಾನ ಪಡೆಯಲು 12ಬಿ ಮಾನ್ಯತೆ ಇರಬೇಕು. ಪಿಎಚ್.ಡಿ ಮಾರ್ಗದರ್ಶನ ಮಾಡಲು ಅರ್ಹತೆ ಇರುವ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕರು ಇರಬೇಕು. ಸರ್ಕಾರ ವಿಲೀನ ಪ್ರಕ್ರಿಯೆ ಪೂರ್ಣಗೊ ಳಿಸದ ಕಾರಣ 60 ಅರ್ಹ ಪ್ರಾಧ್ಯಾಪಕರಿದ್ದರೂ, ಸಂಶೋಧನಾ ಕಾರ್ಯ ಆರಂಭಿಸಲುಸಾಧ್ಯವಾಗಲಿಲ್ಲ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು, 100 ವರ್ಷಗಳ ಇತಿಹಾಸವಿರುವ ಸರ್ಕಾರಿ ವಿಜ್ಞಾನ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಿದ ಬಳಿಕ ಇಲ್ಲಿನ ಪ್ರಾಧ್ಯಾಪಕರನ್ನು ಈ ವಿವಿಯಲ್ಲಿ ವಿಲೀನಗೊಳಿಸದ ಕಾರಣ ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲೇ ಇದ್ದಾರೆ.
76 ವರ್ಷ ಹಳೆಯ ಕರ್ನಾಟಕ ವಿವಿಗೆ ಆರ್ಥಿಕ ಸಂಕಷ್ಟ: 416 ಬೋಧಕ, 849 ಬೋಧಕೇತರ ಹುದ್ದೆ ಖಾಲಿ
ವಿವಿಯಲ್ಲೇ ಉಳಿಯುವ ಅಥವಾ ಬೇರೆ ಕಡೆ ವರ್ಗಾವಣೆಯಾಗಿ ಹೋಗಲೂ ಅವರಿಗೆ ಅವಕಾಶವನ್ನೂ ನೀಡಿಲ್ಲ. ಈ ಪ್ರಕ್ರಿಯೆ ನಡೆಯದೆ ಯಾರನ್ನೂ ಸಂಶೋಧನಾ ಮಾರ್ಗದರ್ಶಕರಾಗಿ ನೇಮಿಸಲು ಸಾಧ್ಯವಾಗುವು ದಿಲ್ಲ. ಇನ್ನು, ಪಿಎಚ್‌ಡಿ ಅಧ್ಯಯನ ಆರಂಭಿಸಲು ಅಗತ್ಯ ನಿಯಮಗಳನ್ನು ರೂಪಿಸಿ ರಾಜ್ಯಪಾಲರಿಗೆ ಕಳುಹಿಸಿ ವರ್ಷವಾಗಿದೆ. ನಿಯಮಗಳಲ್ಲಿ ಕೆಲ ಬದಲಾವಣೆಗೆ ಸೂಚಿಸಿ ಎರಡು ಮೂರು ವಾಪಸ್ ಕಳುಹಿಸಿದ್ದ ಕಡತವನ್ನು ಪರಿಷ್ಕರಿಸಿ ರಾಜಭವನಕ್ಕೆ ಮತ್ತೆ ಸಲ್ಲಿಸಿದೆ. ಆದರೆ, ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಇದಕ್ಕೆ ಅನುಮೋದನೆ ದೊರೆತು ಪ್ರಾಧ್ಯಾಪಕರ ವಿಲೀನ ಆದ ಕೂಡಲೇ ಸಂಶೋಧನಾ ಚಟುವಟಿಕೆ ಗಳನ್ನು ಆರಂಭಿ ಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ವಿವಿಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ರೂಸಾ ಯೋಜನೆಯಡಿ 50 ಕೋಟಿ ಅನುದಾನ: ಕೇಂದ್ರ ಸರ್ಕಾರ ಐತಿಹಾಸಿಕ ಕಾಲೇಜನ್ನು 2019ರಲ್ಲಿ ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಿ ಅಸ್ಥಿತ್ವಕ್ಕೆ ತಂದಿತ್ತು. ಆ ವರ್ಷ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ(ರೂಸಾ) ವಿವಿಗೆ 750 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಸುಸಜ್ಜಿತ ತರಗತಿ ಕೊಠಡಿ, ಸಂಶೋಧನಾ ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ಈ ವಿವಿಗೆ ಯಾವುದೇ ಸಂಯೋಜಿತ ಕಾಲೇಜುಗಳಿಲ್ಲ. ಆದರೂ, ಕೆ.ಆರ್. ಸರ್ಕಲ್ ಬಳಿಯ ವಿವಿ ಕ್ಯಾಂಪಸ್‌ನಲ್ಲೇ 15 ಪದವಿ ಹಾಗೂ ಏಳು ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 60 ಮಂದಿ ಖಾಯಂ ಪ್ರಾಧ್ಯಾಪಕರು, 70 ಮಂದಿ ಅತಿಥಿ ಉಪನ್ಯಾಸಕರು. 16ಕ್ಕೂ ಹೆಚ್ಚು ಬೋಧಕೇತರ ಗುತ್ತಿಗೆ ಸಿಬ್ಬಂದಿಕಾರ್ಯನಿರ್ವಹಿಸುತ್ತಿದ್ದಾರೆ. ದಾಖಲಾತಿ, ಪರೀಕ್ಷಾ ಶುಲ್ಕದಿಂದ ವರ್ಷಕ್ಕೆ ಸುಮಾರು 82 ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ಆ ಹಣದಲ್ಲೇ ವಿವಿಯನ್ನು ನಿರ್ವಹಿಸಲಾಗುತ್ತಿದೆ. ಖಾಯಂ ನೌಕರರಿಗೆ ಸರ್ಕಾರವೇ ವೇತನ ನೀಡುತ್ತಿದೆ.
ಕುಲಪತಿಗಳು ಪ್ರಭಾರ: ನೃಪತುಂಗ ವಿವಿಯಲ್ಲಿ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಕೊರತೆ ಇಲ್ಲ. ವಿದ್ಯಾರ್ಥಿಗಳ ದಾಖಲಾತಿಯೂ ಉತ್ತಮ ಪ್ರಮಾಣದಲ್ಲಿದೆ. ಆದರೆ, ಕಳೆದ ಕೆಲವು ತಿಂಗಳಿಂದ ಪೂರ್ಣಾವಧಿ ಕುಲಪತಿ ಇಲ್ಲದ ಕಾರಣ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಚಾರ ಗಳಿಗೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗದೆ ಹಿನ್ನಡೆಯಾಗುತ್ತಿದೆ. ಪ್ರೊ. ಶ್ರೀನಿವಾಸ ಬಳ್ಳಿ ಅವರು ಕುಲಪತಿ ಸ್ಥಾನದಿಂದ ನಿವೃತ್ತರಾದ ಬಳಿಕ ಪ್ರೊ.ಫಜೀಹಾ ಸುಲ್ತಾನ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ.
ಐತಿಹಾಸಿಕ ವಿಜ್ಞಾನ ಕಾಲೇಜು ವಿವಿ ಆಗಿದ್ದೇಗೆ?: ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಅಗತ್ಯ ಮೂಲಸೌಕರ್ಯ, ಶ್ರೇಷ್ಠ ಅಧ್ಯಾಪಕ ವೃಂದ ಸೇರಿದಂತೆ ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್) ಉನ್ನತಗ್ರೇಡ್ ಪಡೆದದೇಶದಹಲವು ಕಾಲೇಜುಗಳಿಂದವಿಶ್ವವಿದ್ಯಾಲಯದಸ್ಥಾನಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಈ ವೇಳೆ, ಶತಮಾನದ ಇತಿಹಾಸವಿರುವ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿಗೆ(1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಂದ ಸ್ಥಾಪನೆ) ಅವಕಾಶ ಸಿಕ್ಕಿತು. ಅದುವರೆಗೂ ಬೆಂಗಳೂರು ವಿವಿಯ ಸಂಯೋಜಿತ ಕಾಲೇಜಾಗಿದ್ದ ಇದು ನಂತರ ವಿಶ್ವವಿದ್ಯಾಲಯವಾಗಿ ರೂಪಾಂತರಗೊಂಡಿತು. ರೂಸಾ ಯೋಜನೆಯಡಿ ಕ50 ಕೋಟಿಗೂ ಹೆಚ್ಚು ಅನುದಾವವೂ ದೊರೆಯಿತು. ಹಾಗಾಗಿ ರಾಜ್ಯ ಸರ್ಕಾರ 2018ರಲ್ಲಿ ಕಾಯ್ದೆ ರೂಪಿಸಿ, 2019ರಲ್ಲಿ ವಿಜ್ಞಾನ ಕಾಲೇಜನ್ನು ವೃಪತುಂಗ ವಿವಿಯಾಗಿ ಅಸ್ತಿತ್ವಕ್ಕೆ ತರಲಾಯಿತು.
ಬಳ್ಳಾರಿ ಶ್ರೀಕೃಷ್ಣ ವಿವಿಯಲ್ಲಿ ಹಗರಣಗಳದ್ದೇ ಸದ್ದು: ಇಲ್ಲಿ ಆದಾಯದ್ದಲ್ಲ, ಪಾರದರ್ಶಕತೆಯದ್ದೇ ಸಮಸ್ಯೆ
ನೃಪತುಂಗ ವಿಶ್ವವಿದ್ಯಾಲಯ ದಲ್ಲಿ ಬೆಂಗಳೂರು ಸುತ್ತಮು ತ್ತಲ ಜಿಲ್ಲೆಗಳ ಬಡ, ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಶೋಧನೆ ಹೊರತು ಪಡಿಸಿ ಉಳಿದೆಲ್ಲಾ ಶೈಕ್ಷಣಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ.
-ಪ್ರೊ.ಫಜೀಹಾ ಸುಲ್ತಾನ, ನೃಪತುಂಗ ವಿವಿ ಕುಲಪತಿ (ಪ್ರಭಾರ)