ಐವರಿಗೆ ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣನ್ಯೂಸ್‌ ಯುಗಾದಿ ಪುರಸ್ಕಾರ: ಗಮನ ಸೆಳೆದ ಗಾಯನ

ಗಾನ ಗಾರುಡಿಗ ಪಂಡಿತ್‌ ಎಂ. ವೆಂಕಟೇಶ್‌ ಕುಮಾರ್‌, ಹಿರಿಯ ಕವಿ ಬಿ.ಆರ್‌.ಲಕ್ಷ್ಮಣರಾವ್‌, ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಚಿತ್ರಕಲಾವಿದ ಪ.ಸ.ಕುಮಾರ್‌ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು 2025ನೇ ಸಾಲಿನ ‘ಕನ್ನಡಪ್ರಭ’ ಹಾಗೂ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಯುಗಾದಿ ಸಂಭ್ರಮದ ‘ಯುಗಾದಿ ಪುರಸ್ಕಾರ’ಕ್ಕೆ ಭಾಜನರಾದರು. 
 

Five people receive Kannadaprabha Asianet Suvarnanews Ugadi Awards 2025 gvd

ಬೆಂಗಳೂರು (ಮಾ.30): ಗಾನ ಗಾರುಡಿಗ ಪಂಡಿತ್‌ ಎಂ. ವೆಂಕಟೇಶ್‌ ಕುಮಾರ್‌, ಹಿರಿಯ ಕವಿ ಬಿ.ಆರ್‌.ಲಕ್ಷ್ಮಣರಾವ್‌, ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಚಿತ್ರಕಲಾವಿದ ಪ.ಸ.ಕುಮಾರ್‌ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು 2025ನೇ ಸಾಲಿನ ‘ಕನ್ನಡಪ್ರಭ’ ಹಾಗೂ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಯುಗಾದಿ ಸಂಭ್ರಮದ ‘ಯುಗಾದಿ ಪುರಸ್ಕಾರ’ಕ್ಕೆ ಭಾಜನರಾದರು. ‘ಗುಬ್ಬಿಗೂಡು’ ಪ್ರಾಯೋಜಿತ ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ‘ಯುಗಾದಿ ಸಂಭ್ರಮ’ ಕಾರ್ಯಕ್ರಮದಲ್ಲಿ ಈ ಸಾಧಕರಿಗೆ ಖ್ಯಾತ ನಿರ್ದೇಶಕರಾದ ಟಿ.ಎನ್‌. ಸೀತಾರಾಮ್‌, ಬಿ.ಎಸ್‌.ಲಿಂಗದೇವರು, ಪ್ರಧಾನ ಸಂಪಾದಕ ರವಿ ಹೆಗಡೆ, ಗುಬ್ಬಿಗೂಡು ಸಂಸ್ಥೆಯ ಮಾಲೀಕ ಮಹೇಶ್‌ ಹಾಗೂ ಪುರವಣಿ ಸಂಪಾದಕ ಜೋಗಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹ 25,000 ಮೊತ್ತ, ಸ್ಮರಣಿಕೆ, ಪ್ರಮಾಣಪತ್ರ ಒಳಗೊಂಡಿದೆ.

ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಮಾತನಾಡಿ, ‘ಎಷ್ಟೋ ಬಾರಿ ನಾವು ಯಾರಿಗಾಗಿ, ಯಾಕಾಗಿ ಸಿನಿಮಾ ಮಾಡುತ್ತೇವೆ ಎಂಬ ಅನುಮಾನಗಳು ಮೂಡುತ್ತವೆ. ನಮ್ಮ ಸಿನಿಮಾಗಳು ಎಷ್ಟೋ ಬಾರಿ ದೊಡ್ಡದಾಗಿ ರಿಲೀಸ್‌ ಆಗಲ್ಲ, ಹಲವು ಮಂದಿ ನೋಡಲ್ಲ. ಆದರೆ, ಇಂತಹ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿ ಪುರಸ್ಕಾರ ನೀಡಿ ಸನ್ಮಾನಿಸಿದಾಗ, ಬೆನ್ನು ತಟ್ಟಿದಾಗ ಸ್ಫೂರ್ತಿ ಮೂಡುತ್ತದೆ, ಜವಾಬ್ದಾರಿ ಹೆಚ್ಚಾಗುತ್ತದೆ. ಅದಕ್ಕಾಗಿ ‘ಕನ್ನಡಪ್ರಭ’ದ ಕಾರ್ಯ ಶ್ಲಾಘನೀಯ’ ಎಂದರು. ಪಂಡಿತ್‌ ಎಂ. ವೆಂಕಟೇಶ್‌ ಕುಮಾರ್‌, ‘ಪ್ರಾಮಾಣಿಕ ಮನುಷ್ಯ ಏನನ್ನೂ ಬಯಸದೆ ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತ ಹೊರಡುತ್ತಾನೆ. 

Latest Videos

ಅರ್ಹರ ಮನೆ ಬಾಗಿಲಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: ಸಚಿವ ಶಿವರಾಜ ತಂಗಡಗಿ

ಸನ್ಮಾನ, ಸತ್ಕಾರ ಆಗಬೇಕು, ಪ್ರಶಸ್ತಿ ಸಿಗಬೇಕು ಎಂದು ಆಸೆ ಪಡಲ್ಲ. ಹಾಗೆ ಆಸೆ ಪಟ್ಟರೆ ಆತನ ಕೆಲಸ ಸರಿಯಾಗಿ ಆಗುವುದಿಲ್ಲ. ಸಿದ್ಧಿ ಇದ್ದರೆ ಪ್ರಸಿದ್ಧಿ ತಾನಾಗಿಯೇ ಬರುತ್ತದೆ. ಪ್ರಾಮಾಣಿಕತನಕ್ಕೆ ಯಾವಾಗಲೂ ಕಿಮ್ಮತ್ತು ಇರುತ್ತದೆ. ‘ಕನ್ನಡಪ್ರಭ’, ‘ಏಷ್ಯಾನೆಟ್‌ ಸುವರ್ಣನ್ಯೂಸ್‌’ನ ಈ ಪ್ರಶಸ್ತಿ ಪ್ರದಾನ ಕಾರ್ಯ ಮುಂದಿನ ಪೀಳಿಗೆಗೆ ಸ್ಫೂರ್ತಿ ಅಗಲಿದೆ’ ಎಂದು ಹೇಳಿದರು. ಕವಿ ಬಿ.ಆರ್‌.ಲಕ್ಷ್ಮಣರಾವ್‌, ‘ನಮ್ಮ ಪಾಡಿಗೆ ನಾವು ಸಾಹಿತ್ಯ ರಚಿಸಿಕೊಂಡು ಬಂದವರು. ನಾವು ಬರೆದ ಕವನಗಳು ನಮ್ಮ ಜೀವನದ ಸಹ ಉತ್ಪನ್ನಗಳಿದ್ದಂತೆ. ಇದನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ದೊಡ್ಡ ವಿಚಾರ. ಪ್ರಶಸ್ತಿಯನ್ನು ನಾವು ಯಾರ ಜೊತೆ ತೆಗೆದುಕೊಳ್ಳುತ್ತಿದ್ದೇವೆ ಎಂಬುದು ಮುಖ್ಯ. ಹಿರಿಯ ಸಾಧಕರ ಜೊತೆ ವೇದಿಕೆ ಹಂಚಿಕೊಂಡು ಈ ಪುರಸ್ಕಾರ ಪಡೆದಿರುವುದು ಸಂತೋಷ ತಂದಿದೆ’ ಎಂದರು.

ಹಿರಿಯ ಚಿತ್ರಕಲಾವಿದ ಪ.ಸ.ಕುಮಾರ್‌, ‘ನಮ್ಮ ಕ್ಷೇತ್ರದ ಕೆಲಸವನ್ನು ನಾವು ಸರಿಯಾಗಿ ಮಾಡಬೇಕು. ಹತ್ತು ಅಡಿ ಕಂದಕವನ್ನು ನಾವು ದಾಟಬೇಕಾದರೆ ನಾವು ಅದಕ್ಕಿಂತ ಹೆಚ್ಚಿನ ಶಕ್ತಿಯನ್ನು ಸಂಪಾದಿಸಿರಬೇಕು. ಹತ್ತು ಅಡಿಗೆ ಒಂದು ಇಂಚು ಕಡಿಮೆ ಹಾರಿದರೂ ನಾವು ಕಂದಕಕ್ಕೆ ಬೀಳುತ್ತೇವೆ ಎಂಬ ‘ಕನ್ನಡಪ್ರಭ’ದ ವೈಎನ್‌ಕೆ ಮಾತು ಜೀವನದಲ್ಲಿ ಹೆಚ್ಚು ಪರಿಣಾಮ ಬೀರಿತು. ವೃತ್ತಿಯ ಗೆಳೆಯರಿಂದ ಸಾಕಷ್ಟು ಕಲಿತಿದ್ದೇವೆ. ಇವೆಲ್ಲ ನಮ್ಮ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದರು. ನಟಿ ಅಕ್ಷತಾ ಪಾಂಡವಪುರ ಮಾತನಾಡಿ, ‘ಇದು ನನ್ನ ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಸಿಗುತ್ತಿರುವ ಮೊದಲ ಪ್ರಶಸ್ತಿ ಇದಾಗಿದೆ. ಪ್ರಶಸ್ತಿ ಎಷ್ಟು ತೂಕ ಇದೆಯೋ ಅದಕ್ಕಿಂತ ಹೆಚ್ಚಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

ವಿಶ್ವ ಗೆದ್ದ ನಮ್ಮ ಆಹಾರ ಪದ್ಧತಿ, ಏಷ್ಯಾ 50 ಅತ್ಯುತ್ತಮ ಹೊಟೇಲ್ ಪಟ್ಟಿಯಲ್ಲಿ ಭಾರತದ ಹೆಸರು

ಶ್ರೋತೃಗಳ ಗಮನ ಸೆಳೆದ ಗಾಯನ: ಯುಗಾದಿ ಪುರಸ್ಕಾರ ಸ್ವೀಕರಿಸಿದ ಪಂಡಿತ್‌ ಎಂ. ವೆಂಕಟೇಶ್‌ ಕುಮಾರ್‌ ಅವರು ಶ್ರೋತೃಗಳ ಬಯಕೆಯಂತೆ, ‘ತೊರೆದು ಜೀವಿಸಬಹುದೇ..’ ಹಾಡು ಹಾಗೂ ‘ಪ್ರಣತಿಯಿದೆ, ಬತ್ತಿಯಿದೆ..’ ಎಂಬ ವಚನ ಹಾಡಿದರು. ಅವರ ಗಾಯನ ಪ್ರೇಕ್ಷಕರ ಮನಸೂರೆಗೊಳಿಸಿತು. ಪುಟ್ಟರಾಜ ಗವಾಯಿಗಳು ‘ಸಂಗೀತವನ್ನು ಸುಮ್ಮನೆ ಕಲಿಯಿರಿ, ಅಧ್ಯಯನ ಮಾಡಿ ಸತ್ಕಾರ ಅರಸಬೇಡಿ. ಸಿದ್ಧಿ ಮಾಡಿಕೊಳ್ಳಿ, ಪ್ರಸಿದ್ಧಿ ಆಮೇಲೆ ಬರುತ್ತದೆ’ ಎನ್ನುತ್ತಿದ್ದರು ಎಂದು ಸ್ಮರಿಸಿದರು.

vuukle one pixel image
click me!