PG Entrance Exam: ಪದವಿ ಪರೀಕ್ಷೆ ನಡುವೆಯೇ PG ಪ್ರವೇಶ ಪರೀಕ್ಷೆ: ವಿದ್ಯಾರ್ಥಿಗಳ ಆಕ್ರೋಶ

Kannadaprabha News   | Kannada Prabha
Published : Jun 14, 2025, 07:45 PM IST
PG entrance exam held amidst Karnataka degree exams: Students outraged

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಪರೀಕ್ಷೆ ನಡೆಯುತ್ತಿರುವಾಗಲೇ ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪರೀಕ್ಷೆ ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ. 

ಸಂದೀಪ್‌ ವಾಗ್ಲೆ

ಮಂಗಳೂರು (ಜೂ.14): ಪದವಿ ಪರೀಕ್ಷೆಗಳು ಮುಗಿದ ಬಳಿಕ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪರೀಕ್ಷೆ ನಡೆಸೋದು ವಾಡಿಕೆ. ಆದರೆ ಈ ಬಾರಿ ರಾಜ್ಯಾದ್ಯಂತ ಎಲ್ಲ ವಿವಿಗಳಲ್ಲಿ ಪದವಿ ಪರೀಕ್ಷೆ ನಡೆಯುತ್ತಿರುವಾಗ ಅದರ ನಡುವಿನಲ್ಲೇ ಎಂಬಿಎ, ಎಂಸಿಎ (ಪಿಜಿ) ಪ್ರವೇಶ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಂದಾಗಿದ್ದು, ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜೂ.22ರಂದು ನಿಗದಿಪಡಿಸಲಾಗಿರುವ ಪ್ರವೇಶ ಪರೀಕ್ಷೆ ಮುಂದೂಡಲು ವಿದ್ಯಾರ್ಥಿಗಳು ಸಹಿ ಸಂಗ್ರಹ ಅಭಿಯಾನ ನಡೆಸಿದರೂ ಕೆಇಎ ಮಾತ್ರ ಪಟ್ಟು ಸಡಿಲಿಸುತ್ತಿಲ್ಲ!

ರಾಜ್ಯದಲ್ಲಿ ವರ್ಷಂಪ್ರತಿ ಸುಮಾರು 50 ಸಾವಿರದಷ್ಟು ವಿದ್ಯಾರ್ಥಿಗಳು ಎಂಬಿಎ ಪ್ರವೇಶ ಪಡೆದರೆ, ಸುಮಾರು 40 ಸಾವಿರದಷ್ಟು ಎಂಸಿಎ ಕೋರ್ಸ್‌ ಸೇರುತ್ತಾರೆ. ಈ ಬಾರಿ ಇಷ್ಟೊಂದು ಬೃಹತ್‌ ಸಂಖ್ಯೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆಯಲ್ಲಿ ಅಂಕಗಳ ಆಧಾರದಲ್ಲಿ ರ್‍ಯಾಂಕ್‌ ನೀಡಲಾಗುತ್ತದೆ. ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಯಂತೆ ಇದರಲ್ಲೂ ಉತ್ತಮ ರ್‍ಯಾಂಕ್‌ ಪಡೆಯುವ ವಿದ್ಯಾರ್ಥಿಗಳು ರಾಜ್ಯದ ಉತ್ತಮ ಕಾಲೇಜು ಸೇರಲು ಅರ್ಹತೆ ಪಡೆಯುತ್ತಾರೆ. ಪದವಿ ಪರೀಕ್ಷೆಯ ನಡುವೆಯೇ ಪ್ರವೇಶ ಪರೀಕ್ಷೆ ನಡೆಸಿದರೆ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಬೇಕೋ, ಪದವಿ ಪರೀಕ್ಷೆಗೆ ಮೊದಲ ಆದ್ಯತೆ ನೀಡಬೇಕೋ ಎಂಬ ಗೊಂದಲ ವಿದ್ಯಾರ್ಥಿಗಳದ್ದು.

ಎಂಸಿಎ ದಾಖಲಾತಿಗೆ ಬಿಸಿಎ, ಬಿಎಸ್ಸಿ ಪದವಿ ಆಗಿರಬೇಕು. ಅಲ್ಲದೆ 12ನೇ ತರಗತಿ ಅಥವಾ ಬಿಕಾಂ, ಬಿಎ, ಬಿಬಿಎ ಪದವಿಯಲ್ಲಿ ಗಣಿತ ಅಥವಾ ಸಂಖ್ಯಾಶಾಸ್ತ್ರ ವಿಷಯ ಅಧ್ಯಯನ ನಡೆಸಿರಬೇಕು. ಅದೇ ರೀತಿ ಎಂಬಿಎ ಕೋರ್ಸ್‌ ಸೇರಲು ಬಿಬಿಎ, ಬಿಕಾಂ, ಬಿಎ, ಬಿಸಿಎ, ಬಿಎಚ್‌ಎಂ, ಬಿಎಡ್‌ ಪದವಿ ಕೋರ್ಸ್‌ ಮಾಡಿದವರಿಗೆ ಅವಕಾಶವಿದೆ. ಆದರೆ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ವಿಶ್ವವಿದ್ಯಾನಿಲಯಗಳ ಪದವಿ ಪರೀಕ್ಷೆ ಮುಗಿಯೋದೆ ಜೂನ್‌ ಅಂತ್ಯಕ್ಕೆ ಅಥವಾ ಜುಲೈ ಮಧ್ಯಭಾಗದಲ್ಲಿ.ಬೆಂಗಳೂರು ವಿವಿಯ 6ನೇ ಸೆಮಿಸ್ಟರ್‌ ಬಿಬಿಎ ಪರೀಕ್ಷೆ ಮುಗಿಯೋದು ಜೂ.30ಕ್ಕಾದರೆ, ಬಿಸಿಎ ಪರೀಕ್ಷೆ ಜೂ.16, ಬಿಕಾಂ ಜೂ.27, ಬಿಎ ಜೂ.21, ಬಿಎಸ್ಸಿ ಪರೀಕ್ಷೆ ಜುಲೈ 1ರವರೆಗೆ ನಡೆಯಲಿದೆ. ಮಂಗಳೂರು ವಿವಿಯಲ್ಲೂ ಬಿಸಿಎ ಪರೀಕ್ಷೆ ಜೂ.20ರವರೆಗೆ ನಡೆದರೆ, ಬಿಎ ಜುಲೈ 15ರವರೆಗೆ, ಬಿಎಸ್ಸಿ ಹಾಗೂ ಬಿಕಾಂ ಪರೀಕ್ಷೆ ಜೂ.30ರವರೆಗೆ ಇದೆ. ಮೈಸೂರು, ಧಾರವಾಡ, ವಿಜಯಪುರ ಅಕ್ಕಮಹಾದೇವಿ ಸೇರಿದಂತೆ ಎಲ್ಲ ವಿವಿಗಳ ಪದವಿ ಪರೀಕ್ಷೆಗಳ ವೇಳಾಪಟ್ಟಿಯೂ ಇದೇ ರೀತಿ ಇರುವಾಗ ಈ ನಡುವೆ ಜೂ.22ರಂದು ಎಂಬಿಎ, ಎಂಸಿಎ ಪ್ರವೇಶ ಪರೀಕ್ಷೆ ಬರೆಯೋದು ಹೇಗೆ ಎನ್ನುವುದೇ ಸದ್ಯದ ಗೊಂದಲ.

ಭಿನ್ನ ಪಠ್ಯಕ್ರಮ:

ಪ್ರವೇಶ ಪರೀಕ್ಷೆಗೆ ಪ್ರತ್ಯೇಕ ಪಠ್ಯಕ್ರಮ (ಸಿಲ್ಲೆಬಸ್‌) ನಿಗದಿಪಡಿಸಲಾಗಿದೆ. ಪದವಿ ಪರೀಕ್ಷೆಗೆ ಅದಕ್ಕಿಂತ ಭಿನ್ನ ಪಠ್ಯಕ್ರಮ. ವಿಭಿನ್ನ ಪಠ್ಯಕ್ರಮ ಇರುವ ಎರಡು ಪರೀಕ್ಷೆಗಳಿಗೆ ಏಕಕಾಲದಲ್ಲಿ ಅಭ್ಯಾಸ ಮಾಡುವುದು ತೀರ ಕಷ್ಟಕರ. ಕೆಲವು ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಪದವಿ ಪರೀಕ್ಷೆಗಳು ಮುಗಿದಿವೆ. ಪರಿಸ್ಥಿತಿ ಹೀಗಿರುವಾಗ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸಮಯಾವಕಾಶವೇ ಸಿಗದೆ ಉನ್ನತ ಶಿಕ್ಷಣದ ಅವಕಾಶ ವಂಚಿತರಾಗಲಿದ್ದಾರೆ ಎಂದು ಮಂಗಳೂರಿನ ನೊಂದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಸಹಸ್ರಾರು ಸಹಿ ಅಭಿಯಾನಕ್ಕೂ ಕಿಮ್ಮತ್ತಿಲ್ಲ:

ಪ್ರವೇಶ ಪರೀಕ್ಷೆ ಮುಂದೂಡುವ ಕುರಿತು ಮಂಗಳೂರಿನ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಎರಡೇ ದಿನದಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅದಕ್ಕೆ ಸಹಿ ಹಾಕಿದ್ದಾರೆ. ಆದರೂ ಪ್ರವೇಶ ಪರೀಕ್ಷೆ ದಿನಾಂಕ ಮುಂದೂಡಲು ಪ್ರಾಧಿಕಾರ ಸುತರಾಂ ಒಪ್ಪುತ್ತಿಲ್ಲ.

ಪ್ರವೇಶ ಪರೀಕ್ಷೆ ಮುಂದೂಡಿಕೆಯೇ ಏಕೈಕ ಮಾರ್ಗ

ಎಂಬಿಎ, ಎಂಸಿಎ ಪ್ರವೇಶ ಪರೀಕ್ಷೆಗೆ ರಾಜ್ಯದಲ್ಲಿ ಕೆಲವೇ ಪರೀಕ್ಷಾ ಕೇಂದ್ರಗಳಿವೆ. ಪ್ರಸ್ತುತ ದೂರದೂರುಗಳಿಗೆ ಹೋಗಿ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದೆ. ಪದವಿ ಪರೀಕ್ಷೆ ಬಳಿಕ ಪ್ರವೇಶ ಪರೀಕ್ಷೆ ನಡೆಯುತ್ತದೆ ಎಂದೇ ನಂಬಿಕೊಂಡಿದ್ದ ಈ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ತಮ್ಮೂರಿಗೆ ಹತ್ತಿರದ ಪರೀಕ್ಷಾ ಕೇಂದ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಪದವಿ ಪರೀಕ್ಷೆ ಬರೆಯುವ ನಡುವೆ ತಮ್ಮೂರಿಗೆ ತೆರಳಿ ಪ್ರವೇಶ ಪರೀಕ್ಷೆ (ಜೂ.22 ಭಾನುವಾರ) ಬರೆದು ಮತ್ತೆ ಮರುದಿನ ತಮ್ಮ ಕಾಲೇಜು ಇರುವ ದೂರದೂರಿಗೆ ತೆರಳಿ ಪದವಿ ಪರೀಕ್ಷೆ ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಪ್ರಯಾಣದಲ್ಲೇ ದಿನಪೂರ್ತಿ ಮುಗಿದೇ ಹೋಗುತ್ತದೆ, ಇನ್ನು ಪರೀಕ್ಷೆಗೆ ಓದುವುದು ಯಾವಾಗ ಎಂದು ಬೆಂಗಳೂರಿನಲ್ಲಿ ಕಲಿಯುತ್ತಿರುವ ಮಂಗಳೂರಿನ ವಿದ್ಯಾರ್ಥಿ ಕಣ್ಣೀರು ಹಾಕುತ್ತಾರೆ.

ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆ ಜೂ.22ರಂದು ಭಾನುವಾರ ನಿಗದಿಯಾಗಿದೆ. ಪರೀಕ್ಷೆಯ ಹಾಲ್‌ ಟಿಕೆಟ್‌ ಮತ್ತಿತರ ಪೂರಕ ದಾಖಲೆಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತದೆ. ಪರೀಕ್ಷೆ ಮುಂದೂಡಿಕೆಯ ಕುರಿತು ಈಗಿನ ಪ್ರಕಾರ ನಿರ್ಧಾರ ಆಗಿಲ್ಲ. ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರಿಗೆ ಯಾವುದೇ ಗೊಂದಲ ಇದ್ದರೂ ನೇರವಾಗಿ ಕಚೇರಿಗೆ ಬಂದು ಅನುಮಾನ ಪರಿಹರಿಸಿಕೊಳ್ಳಬಹುದು.

- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌