World Blood Donor Day 2025: ಬರೋಬ್ಬರಿ 108 ಬಾರಿ ರಕ್ತದಾನ ಮಾಡಿದ ಮಹಾದಾನಿ ಎಸ್‌ಬಿಐ ದೇವಣ್ಣ!

Kannadaprabha News   | Kannada Prabha
Published : Jun 14, 2025, 07:06 PM IST
Blood donor Devanna: 108 times blood donation

ಸಾರಾಂಶ

ಬಳ್ಳಾರಿಯ ಬಿ. ದೇವಣ್ಣ ಅವರು 108 ಬಾರಿ ರಕ್ತದಾನ ಮಾಡಿ, 1000ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಾರೆ. ತಮ್ಮ ಜೀವನವನ್ನು ಸಮಾಜಸೇವೆಗೆ ಅರ್ಪಿಸಿಕೊಂಡಿರುವ ಅವರು, ನಿರಂತರವಾಗಿ ರಕ್ತದಾನದ ಮಹತ್ವ ಸಾರುತ್ತಿದ್ದಾರೆ.

ಬಳ್ಳಾರಿ (ಜೂ.14): 'ರಕ್ತದಾನ ಮಹಾದಾನ' ಎಂಬ ಘೋಷಣೆ ವಿಶ್ವ ರಕ್ತದಾನ ದಿನಾಚರಣೆ ದಿನದಂದು ಮಾತ್ರ ಹೆಚ್ಚು ಕೇಳಿ ಬರುತ್ತದೆ. ರಕ್ತದಾನದ ಮಹತ್ವದ ಮಾತುಗಳು ದಿನಾಚರಣೆಗೆ ಸೀಮಿತಗೊಳ್ಳುತ್ತವೆ. ಆದರೆ, ನಗರದ ಎಸ್‌ಬಿಐ ಉದ್ಯೋಗಿಯಾಗಿದ್ದ ಬಿ. ದೇವಣ್ಣ ಅವರು ತಮ್ಮ ಇಡೀ ಬದುಕನ್ನು ಸ್ವಯಂ ರಕ್ತದಾನ, ರಕ್ತದಾನ ಶಿಬಿರಗಳು ಹಾಗೂ ರಕ್ತದಾನ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಈ ವರೆಗೆ 108 ಬಾರಿ ಸ್ವಯಂ ರಕ್ತದಾನ ಮಾಡಿರುವ ದೇವಣ್ಣ ಅವರು 1 ಸಾವಿರಕ್ಕೂ ಹೆಚ್ಚು ರಕ್ತದಾನ ಶಿಬಿರಗಳು, 100ಕ್ಕೂ ಹೆಚ್ಚು ನೇತ್ರ ಪರೀಕ್ಷಾ ಶಿಬಿರಗಳು ಹಾಗೂ 3800ಕ್ಕೂ ಅಧಿಕ ನೇತ್ರ ಚಿಕಿತ್ಸೆಗಳನ್ನು ಮಾಡಿಸಿ ಸಮಾಜಮುಖಿ ಕಾಳಜಿ ಮೆರೆದಿದ್ದಾರೆ. ಹೀಗಾಗಿಯೇ ಅವರು ಬಳ್ಳಾರಿಯಲ್ಲಿ ಬ್ಲಡ್ ಡೋನರ್ ದೇವಣ್ಣ ಎಂದೇ ಖ್ಯಾತರಾಗಿದ್ದಾರೆ.

ಸ್ಪಂದನ ಚಾರಿಟೆಬಲ್ ಟ್ರಸ್ಟ್‌ನಿಂದ ಸೇವೆ: ದೇವಣ್ಣ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದಾಗಲೂ ರಕ್ತದಾನ ಸೇರಿದಂತೆ ಅನೇಕ ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ವೇಳೆಯಲ್ಲಿನ ರಜೆಗಳನ್ನು ವೈಯಕ್ತಿಕ ಬದುಕಿಗೆ ಬಳಸಿಕೊಳ್ಳದೆ ರಕ್ತದಾನ ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಇತರ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡು ರಜೆಯ ದಿನಗಳನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ಸೇವೆಯಿಂದ ನಿವೃತ್ತಿಯಾದ ಬಳಿಕವೂ ರಕ್ತದಾನ ಹಾಗೂ ಇತರ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿರುವ ದೇವಣ್ಣನವರು, ನನ್ನ ಇಡೀ ಬದುಕು ಸಮಾಜಕ್ಕೆ ಅರ್ಪಣೆಗೊಳಿಸಿಕೊಂಡಿದ್ದೇನೆ. ದೇವರ ಕೃಪೆಯಿಂದ ನನ್ನ ಸಮಾಜಸೇವೆ ಕಾರ್ಯಕ್ಕೆ ಅನೇಕರು ಪ್ರೋತ್ಸಾಹಿಸಿ, ಸಹಕರಿಸಿದ್ದಾರೆ. ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗಲೂ ಬ್ಯಾಂಕ್ ಅಧಿಕಾರಿಗಳು, ಪ್ರೋತ್ಸಾಹಿಸಿ ಮತ್ತಷ್ಟು ಕೆಲಸ ಮಾಡುವಂತೆ ಬೆನ್ನುತಟ್ಟಿದ್ದಾರೆ ಎಂದು ಸ್ಮರಿಸಿಕೊಳ್ಳುತ್ತಾರೆ.

ದೇವಣ್ಣ ಅವರಿಗೆ ರಕ್ತದಾನ ಮಹತ್ವದ ಬಗ್ಗೆ ಎಷ್ಟು ಕಾಳಜಿಯಿದೆ ಎಂದರೆ ತನ್ನ ಮಗನ ಮದುವೆಯ ಆರತಕ್ಷತೆಯ ಸಮಾರಂಭ ವೇಳೆಯಲ್ಲೂ ರಕ್ತದಾನ ಶಿಬಿರವನ್ನು ಆಯೋಜಿಸಿ ಇತರರಿಗೆ ಮಾದರಿಯಾಗಿದ್ದಾರೆ. ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಯಾರೇ ರಕ್ತದಾನ ಶಿಬಿರ ನಡೆಸಿದರೂ ಅಲ್ಲಿಗೆ ತೆರಳಿ, ಅವರಿಗೆ ಬೇಕಾದ ಸಹಾಯ ಮಾಡುತ್ತಾರೆ. ಗೆಳೆಯರು ಸೇರಿದಂತೆ ಯಾರ ಜತೆ ಮಾತನಾಡುವಾಗಲೂ ರಕ್ತದಾನದ ಮಹತ್ವ ಕುರಿತು ತಿಳಿಸುವ ದೇವಣ್ಣ, ನೀವೂ ರಕ್ತದಾನ ಮಾಡಿ ಎಂದು ಜನರಿಗೆ ಪ್ರೇರೇಪಿಸುತ್ತಾರೆ.

ಅಪಘಾತ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ರೋಗಿಗಳು ರಕ್ತವಿಲ್ಲದೆ ಪ್ರಾಣ ಬಿಡುವ ಘಟನೆಗಳು ಕಂಡು ಬರುತ್ತವೆ. ರಕ್ತದಾನದಿಂದ ಅನೇಕರ ಜೀವ ಉಳಿಯುತ್ತದೆ. ದೇವರು ಜೀವ ಉಳಿಸುವ ಪುಣ್ಯದ ಕಾರ್ಯಕ್ಕೆ ನನ್ನನ್ನು ಪ್ರೇರೇಪಿಸಿದ್ದಾನೆ. ಹೀಗಾಗಿ ಈ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತೇನೆ. ನನ್ನ ಜೀವ ಇರುವ ವರೆಗೂ ರಕ್ತದಾನದಿಂದ ಇತರರ ಜೀವ ಉಳಿಸುವ ಕಾಯಕವನ್ನು ತಪ್ಪದೆ ಮಾಡುತ್ತೇನೆ ಎನ್ನುತ್ತಾರೆ ಬಿ. ದೇವಣ್ಣ.

ವಿದ್ಯಾರ್ಥಿಯಾಗಿರುವಾಗ ವ್ಯಕ್ತಿಯೊಬ್ಬರು ಅಪಘಾತಕ್ಕೀಡಾಗಿದ್ದರು. ಅವರ ಜೀವ ಉಳಿಯಲು ರಕ್ತದಾನ ಮಾಡಬೇಕಿತ್ತು. ಗೆಳೆಯರು ರಕ್ತದಾನ ಮಾಡಿ ಜೀವ ಉಳಿಸಿದರು. ಅದರಿಂದ ನಾನು ಪ್ರೇರಣೆಗೊಂಡು ಸ್ವಯಂ ರಕ್ತದಾನ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದೇನೆ ಎನ್ನುತ್ತಾರೆ ದೇವಣ್ಣ. ಬಿ. ದೇವಣ್ಣನವರ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಬಳ್ಳಾರಿ ಜಿಲ್ಲಾಡಳಿತ ಜಿಲ್ಲಾ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ. ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌