
ಬೆಂಗಳೂರು(ಸೆ.06): ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಅಧಿಸೂಚನೆ ರದ್ದು ಕೋರಿ ಬಾಗಲಕೋಟೆ ಜಿಲ್ಲೆ ಹುನಗುಂದ ನಿವಾಸಿ ಅಬ್ದುಲ್ ಜಬ್ಬಾರ್ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರ ಪೀಠ ವಜಾಗೊಳಿಸಿತು. ಜತೆಗೆ, 2020ರಿಂದ ಖಾಲಿಯಿರುವ ವಕ್ಫ್ ಮಂಡಳಿಯ ‘ಮುತವಲ್ಲಿ’ ಕೋಟಾದ ಒಂದು ಸದಸ್ಯ ಸ್ಥಾನ ಭರ್ತಿ ಮಾಡುವಂತೆ ಅರ್ಜಿದಾರರು ಆ.8ರಂದು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.
ಮೇಲ್ಮನೆಯಲ್ಲಿ ಮಾಣಿಪ್ಪಾಡಿ ವರದಿ ಮಂಡನೆ: ಸದನದಲ್ಲಿ ಕೋಲಾಹಲ, ಕಲಾಪ ಮುಂದಕ್ಕೆ
ಈ ಆದೇಶದಿಂದ ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ (ಸೆ.4) ನಡೆದಿರುವ ಚುನಾವಣೆಯ ಫಲಿತಾಂಶ ಪ್ರಕಟಿಸಲು ಇದ್ದ ಕಾನೂನಿನ ತೊಡಕು ನಿವಾರಣೆಯಾಗಿದೆ. ಈ ಹಿಂದೆ ಚುನಾವಣೆ ನಡೆಸಲು ಅನುಮತಿ ನೀಡಿದ್ದ ಹೈಕೋರ್ಟ್, ಫಲಿತಾಂಶ ಪ್ರಕಟಿಸಬಾರದು ಎಂದು ಸೆ.1ರಂದು ಆದೇಶಿಸಿತ್ತು. ಅದರಂತೆ ನಿಗದಿಯಂತೆ ಸೆ.4 ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸಿರಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಚಿತ್ರದುರ್ಗ ಮೂಲದ ಕೆ.ಅನ್ವರ್ ಬಾಷಾ ಅವಿರೋಧವಾಗಿ ಆಯ್ಕೆಗೊಂಡಿದ್ದರು.
ವಕ್ಫ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಾದರೆ ಪೂರ್ಣ ಪ್ರಮಾಣದಲ್ಲಿ ಆಡಳಿತ ಮಂಡಳಿ ರಚನೆಯಾಗಬೇಕು. ಆದರೆ, ಮುತವಲ್ಲಿ ಕೋಟಾದ ಒಂದು ಸದಸ್ಯ ಸ್ಥಾನ 2020ರ ಆ.8ರಿಂದ ಖಾಲಿಯಿದೆ. ಇಂತಹ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಖಾಲಿಯಿರುವ ಒಂದು ಸ್ಥಾನ ಭರ್ತಿ ಮಾಡಬೇಕು ಎಂದು ಕೋರಿ ತಾವು ಆ.8ರಂದು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಿಲ್ಲ. ಆದ್ದರಿಂದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರ್ಕಾರ ಆ.23ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಅಲ್ಲದೆ, ಮುತುವಲ್ಲಿ ಕೋಟಾದ ಖಾಲಿಯಿರುವ ಒಂದು ಸದಸ್ಯ ಸ್ಥಾನವನ್ನು ತುಂಬಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ