ಚೀನಾದಿಂದ ಬಂದ ವ್ಯಕ್ತಿಗೆ ಕೊರೋನಾ ಸೋಂಕಿಲ್ಲ, ಶೀತ ನೆಗಡಿಯಷ್ಟೇ ಆಗಿದೆ!

By Kannadaprabha News  |  First Published Jan 26, 2020, 10:39 AM IST

ಚೀನಾದಿಂದ ಬಂದ ವ್ಯಕ್ತಿಗೆ ಕೊರೋನಾ ಸೋಂಕಿಲ್ಲ| ವುಹಾನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿಗೆ ಶೀತ, ನೆಗಡಿ| ಇಲ್ಲಿಯವರೆಗೆ 493 ಮಂದಿಯ ತಪಾಸಣೆ


ಬೆಂಗಳೂರು[ಜ.26]: ಕೊರೋನಾ ವೈರಸ್‌ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ ಮುಂದುವರೆದಿದೆ. ಚೀನಾದ ವುಹಾನ್‌ ನಗರದಿಂದ ಬೆಂಗಳೂರಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರಿಗೆ ಶೀತ ಹಾಗೂ ನೆಗಡಿ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ನಗರದ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದೆ. ಅದೃಷ್ಟವಶಾತ್‌ ಅವರಲ್ಲಿ ಕೊರೋನಾ ವೈರಸ್‌ ಇಲ್ಲದಿರುವುದು ಖಚಿತಪಟ್ಟಿದೆ.

ಚೀನಾದಲ್ಲಿ ತೀವ್ರವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್‌ ನಮ್ಮ ದೇಶದಲ್ಲೂ ಆತಂಕ ಸೃಷ್ಟಿಸಿದೆ. ಚೀನಾದ ವುಹಾನ್‌ ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಅಲ್ಲಿಂದ ರಾಜ್ಯಕ್ಕೆ ಆಗಮಿಸುತ್ತಿರುವ ರಾಜ್ಯಕ್ಕೆ ಅಲ್ಲಿಂದ ಪ್ರವಾಸ ಬರುವವರನ್ನು ವಿಮಾನ ನಿಲ್ದಾಣದಲ್ಲಿಯೇ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಈವರೆಗೆ 493 ಮಂದಿಯ ತಪಾಸಣೆ ನಡೆಸಲಾಗಿದೆ.

Latest Videos

ಚೀನಾದಲ್ಲಿ ಕೊರೋನಾ, ಪರಿಸ್ಥಿತಿ ಅತೀ ಗಂಭೀರ: ಮತ್ತೆ 15 ಬಲಿ, 237 ಜನರ ಸ್ಥಿತಿ ಚಿಂತಾಜನಕ!

ಸದ್ಯ ವುಹಾನ್‌ ನಗರದ ಏಳು ಮಂದಿ ರಾಜ್ಯದಲ್ಲಿ ನೆಲೆಸಿದ್ದು, ಅವರ ಆರೋಗ್ಯದ ಬಗ್ಗೆ ನಿತ್ಯ ಪರಿಶೀಲನೆ ನಡೆಸಲಾಗುತ್ತಿದೆ. ಇವರು ವಾಪಸ್‌ ತೆರಳುವವರೆಗೂ ಅವರ ಮೇಲೆ ನಿಗಾ ಇಡಲು ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿಗೆ ಕೊರೋನಾ ದೃಢಪಟ್ಟಿಲ್ಲ:

ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ವುಹಾನ್‌ ನಗರದಿಂದ ಬಂದು ಎರಡು ದಿನಗಳಾಗಿದ್ದು, ಶೀತ ಮತ್ತು ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾವಾಗಿಯೇ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅವರ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ)ಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಕೊರೊನಾ ವೈರಸ್‌ ಸೋಂಕು ಇಲ್ಲವೆಂದು ದೃಢಪಟ್ಟಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಪತ್ರ ವಿನಿಮಯ ಆಗಿಲ್ಲ ಎಂದು ತಿಳಿದುಬಂದಿದೆ.

ಥರ್ಮಲ್‌ ಸ್ಕ್ಯಾನರ್‌ನಿಂದ ತಪಾಸಣೆ:

ಚೀನಾದಿಂದ ಆಗಮಿಸುವ ಪ್ರತಿಯೊಬ್ಬರ ಮೇಲೆ ನಿಗಾ ವಹಿಸಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಥರ್ಮಲ್‌ ಸ್ಕಾ್ಯನರ್‌ ಮೂಲಕ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವುಹಾನ್‌ ನಿಂದ ಬಂದ ಏಳು ಮಂದಿಯಲ್ಲಿ ಒಬ್ಬರಿಗೆ ವಾತಾವರಣ ಬದಲಾವಣೆಯಿಂದಾಗಿ ಶೀತ ಹಾಗೂ ನೆಗಡಿ ಕಾಣಿಸಿಕೊಂಡಿದೆ. ಅವರಿಗೆ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ವುಹಾನ್‌ನಿಂದ ಆಗಮಿಸಿರುವ ಎಲ್ಲರ ಮೇಲೂ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ವ್ಯಕ್ತಿಗೆ ಸೋಂಕು ದೃಢಪಟ್ಟಿಲ್ಲ ಎಂದು ಎನ್‌ಐವಿ ಅಧಿಕಾರಿಗಳು ನಮಗೆ ಮಾಹಿತಿ ಕಳುಹಿಸಿದ್ದಾರೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲಎಂದು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ.ಜಿ. ಪ್ರಕಾಶ್‌ ತಿಳಿಸಿದ್ದಾರೆ.

ಕೊರೋನಾ ಸೋಂಕಿತರಿಗಾಗಿ 10 ದಿನದಲ್ಲಿ ಆಸ್ಪತ್ರೆ ಕಟ್ಟಲಾರಂಭಿಸಿದ ಚೀನಾ!

click me!