Letter to CM ಹಿಜಾಬ್‌ಗೆ ಅವಕಾಶ ಕೊಡಿ, ಪಠ್ಯದಲ್ಲಿ ಭಗವದ್ಗೀತೆ ಬೇಡ, ಸಿಎಂಗೆ ಸಾಹಿತಿ,ಬುದ್ಧಿಜೀವಿಗಳಿಂದ ಪತ್ರ!

By Suvarna News  |  First Published Mar 30, 2022, 5:15 AM IST
  • ಸಿಎಂಗೆ 61 ಸಾಹಿತಿಗಳು, ಬುದ್ಧಿಜೀವಿಗಳಿಂದ ಪತ್ರ
  • ಧರ್ಮದ ಹೆಸರಲ್ಲಿ ವ್ಯಾಪಾರ ನಿರ್ಬಂಧಕ್ಕೆ ಬಿಡಬೇಡಿ
  • ಪಠ್ಯದಲ್ಲಿ ಭಗವದ್ಗೀತೆ ಬೇಡ ಎಂದು ಮನವಿ
     

ಬೆಂಗಳೂರು(ಮಾ.30): ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಬೇಕು, ವಸ್ತ್ರ ಸಂಹಿತೆ ಕಡ್ಡಾಯ ಸುತ್ತೋಲೆಯನ್ನು ವಾಪಸ್‌ ಪಡೆಯಬೇಕು, ಧರ್ಮದ ಹೆಸರಿನಲ್ಲಿ ವ್ಯಾಪಾರ ನಿರ್ಬಂಧಕ್ಕೆ ಅವಕಾಶ ನೀಡಬಾರದು, ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಪ್ರಸ್ತಾಪ ಕೈಬಿಡಬೇಕು, ಶಾಂತಿಗೆ ಭಂಗ ತರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಾಡಿನ ಪ್ರಮುಖ ಸಾಹಿತಿಗಳು ಹಾಗೂ ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಡಾ.ಕೆ. ಮರುಳಸಿದ್ದಪ್ಪ, ಡಾ. ವಿಜಯಾ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಬೊಳುವಾರ ಮಹಮದ್‌ ಕುಂಞ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್‌ ಸೇರಿದಂತೆ ಸುಮಾರು 61 ಸಾಹಿತಿಗಳು ಸಹಿ ಮಾಡಿರುವ ಪತ್ರವನ್ನು ಮುಖ್ಯಮಂತ್ರಿಯವರಿಗೆ ರವಾನಿಸಲಾಗಿದ್ದು, ಹಿಜಾಬ್‌ಗೆ ಅವಕಾಶ ನೀಡದಿರುವುದರಿಂದ ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಳೆದ ಎರಡು ವರ್ಷದಿಂದ ಶಾಲೆಗಳೇ ನಡೆದಿಲ್ಲ. ಬೆಳೆಯುವ ಮಕ್ಕಳು ಹಳೆಯ ಸಮವಸ್ತ್ರಗಳನ್ನು ತೊಡಲು ಆಗುವುದಿಲ್ಲ. ಹೀಗಿರುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿಂದಿನ ದಿನ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಲಾಗಿದೆ.

Tap to resize

Latest Videos

ಶಿಕ್ಷಣಕ್ಕಿಂತ ಧರ್ಮ ಮೇಲು ಎಂಬುದನ್ನು ಸಾಬೀತು ಮಾಡಿದ ಉಡುಪಿ ಹಿಜಾಬ್ ಹೋರಾಟಗಾರ್ತಿಯರು

ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಪ್ರಸ್ತಾಪ ಇದ್ದಕ್ಕಿದ್ದಂತೆ ಮುನ್ನೆಲೆಗೆ ಬಂದಿದೆ. ಆದ್ದರಿಂದ ಈ ಪ್ರಸ್ತಾಪ ಕೈಬಿಡಬೇಕು. ಮಕ್ಕಳು ಸಂವಿಧಾನ ಅಭ್ಯಾಸ ಮಾಡುವುದು ಅಗತ್ಯವಾಗಿದೆ. ಜಾತ್ರೆಗಳಲ್ಲಿ ಮುಸ್ಲಿಂರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರುತ್ತಿರುವುದು ಸರಿಯಲ್ಲ. ವ್ಯಾಪಾರ ವಹಿವಾಟಿಗೆ ಅಡ್ಡಿ ಉಂಟು ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಜಿಲ್ಲಾವಾರು ಸಭೆಗೆ ಸಮಾನ ಮನಸ್ಕರಿಂದ ತೀರ್ಮಾನ
ದಿ ಕಾಶ್ಮೀರ್‌ ಫೈಲ್ಸ್‌ ಚಲನಚಿತ್ರ, ಹಿಜಾಬ್‌, ವ್ಯಾಪಾರಕ್ಕೆ ನಿರ್ಬಂಧ, ಬೆಲೆ ಏರಿಕೆ ಮತ್ತಿತರ ವಿಷಯಗಳ ಬಗ್ಗೆ ಮಂಗಳವಾರ ಸಭೆ ನಡೆಸಿರುವ ಸಮಾನ ಮನಸ್ಕರು, ಈ ವಿಷಯಗಳ ವಾಸ್ತವವನ್ನು ಜನರಿಗೆ ತಿಳಿಸಲು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಪಕ್ಷಾತೀತ, ಜಾತ್ಯಾತೀತವಾಗಿ ಹೋರಾಟ ನಡೆಸಬೇಕು. ಮುಂಬರುವ ವಿಧಾನ ಸಭಾ ಚುನಾವಣೆವರೆಗೂ ನಿರಂತರವಾಗಿ ಸಭೆಗಳನ್ನು ಆಯೋಜಿಸಬೇಕು. ಸಮಾಜದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಜನರಿಗೆ ತಿಳಿಸಬೇಕು. ಯಾರಿಗೇ ಅನ್ಯಾಯವಾದರೂ ಬೆಂಬಲ ನೀಡಿ ಹೋರಾಟ ನಡೆಸಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕನಾಥ್‌, ಶಾಸಕ ಹ್ಯಾರಿಸ್‌, ಸಾಹಿತಿಗಳಾದ ಡಾ. ವಸುಂಧರಾ ಭೂಪತಿ, ಬಿ.ಟಿ.ಲಲಿತಾ ನಾಯಕ್‌, ವಕೀಲ ಅನಂತ ನಾಯಕ್‌ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ.. ಹಿಜಾಬ್ ಬೇಕು ಎಂದವರು ಬರೆಯದೇ ಮನೆಗೆ ಹೋದರು

ಜೀವಿಸುವ ಹಕ್ಕಿನ ಮೇಲಿನ ದಾಳಿ:
ಎಲ್ಲ ತಾಲೂಕುಗಳಲ್ಲಿ ಹಿಂದೂ ಸಂಘಟನೆಗಳು ತಹಶೀಲ್ದಾರರಿಗೆ ಮನವಿ ನೀಡಿ ಮುಸಲ್ಮಾನರಿಗೆ ಅಂಗಡಿ ಪರವಾನಗಿ ನೀಡದಂತೆ ಒತ್ತಾಯಿಸುತ್ತಿದ್ದಾರೆ. ಜಾತ್ರೆಗಳ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಬ್ಯಾನರ್‌ಗಳನ್ನು ಕಟ್ಟಿಎಚ್ಚರಿಕೆ ನೀಡಲಾಗುತ್ತಿದೆ. ಇದು ಜೀವಿಸುವ ಹಕ್ಕಿನ ಮೇಲಿನ ದಾಳಿಯಾಗಿದೆ. ಸಾಮರಸ್ಯದ ಈ ನೆಲವನ್ನು ಹಾಳು ಮಾಡುವುದು ಅಧಿಕಾರದಲ್ಲಿರುವ ತಮಗೆ ಶೋಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಪತ್ರದಲ್ಲಿ ಡಾ.ಕೆ.ಮರುಳಸಿದ್ದಪ್ಪ, ಡಾ.ವಿಜಯಾ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಬೊಳುವಾರ ಮಹಮದ್‌ ಕುಂಞ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್‌, ಡಾ.ರಹಮತ್‌ ತರೀಕೆರೆ, ವಾಸುದೇವ ಉಚ್ಚಿಲ, ಡಾ.ಸಿದ್ದಲಿಂಗ ಪಟ್ಟಣ ಶೆಟ್ಟಿ, ಮಾವಳ್ಳಿ ಶಂಕರ್‌ ಸೇರಿದಂತೆ ಸಾಹಿತಿಗಳು, ಚಿಂತಕರು, ಮುಖಂಡರು ಸೇರಿದಂತೆ 61 ಮಂದಿ ಹೆಸರು ಪತ್ರದಲ್ಲಿದೆ.

click me!