
ವಿಧಾನ ಪರಿಷತ್ (ಜು.22) : ರಾಜ್ಯದ ಜನ ನಮ್ಮ ಗ್ಯಾರಂಟಿಗಳಿಂದ ಖುಷಿಯಾಗಿದ್ದಾರೆ. ಇದರಿಂದ ಪ್ರತಿಪಕ್ಷಗಳಿಗೆ ಹೊಟ್ಟೆಯುರಿ ತಡೆದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಸದನಕ್ಕೆ ಬಾರದೆ ಧರಣಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ವಿವಿಧ ರಾಜ್ಯಗಳ ಗಣ್ಯರ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದನ್ನೇ ಮಹಾಪರಾಧ ಎಂದು ಬಿಂಬಿಸಲು ಪ್ರತಿಪಕ್ಷಗಳ ಸದಸ್ಯರು ಹೊರಟಿದ್ದಾರೆ. ನಮ್ಮ ಜನಪರ ಯೋಜನೆಗಳನ್ನು ಸಹಿಸಲು ಅವರಿಗೆ ಅಗುತ್ತಿಲ್ಲ ಎಂದ ಅವರು, 2015ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಬೆಂಗಳೂರಿನಲ್ಲಿ ನಡೆದಿತ್ತು. ಅಂದು ಅನಂತ್‌ಕುಮಾರ್ ಮನವಿ ಮಾಡಿದ್ದಕ್ಕೆ ನಿರ್ಮಲಾ ಸೀತಾರಾಮನ್ ಮತ್ತು ಗೆಹ್ಲೋಟ್ ಸೇರಿದಂತೆ ಬಿಜೆಪಿ ನಾಯಕರನ್ನು ರಾಜ್ಯದ ಅತಿಥಿಯಾಗಿ ಮಾಡಿಕೊಟ್ಟಿದ್ದೆ. ಅವರೇನು ದೇಶದ ವಿಚಾರ ಚರ್ಚೆ ಮಾಡಲು ಇಲ್ಲಿಗೆ ಬಂದಿದ್ದರಾ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಮೂಲಕ ಮತದಾರರಿಗೆ ಆಮಿಷ, ಶಾಸಕ ಸ್ಥಾನದಿಂದ ಅನರ್ಹರಾಗ್ತಾರಾ ಸಿದ್ಧರಾಮಯ್ಯ?
ಅದೇ ರೀತಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಯಿಂದ ಪ್ರತಿಪಕ್ಷದ ನಾಯಕರಿಗೆ ಆಹ್ವಾನ ನೀಡಿದ್ದರು. ಆಗ ಐಎಎಸ್ ಅಧಿಕಾರಿಗಳನ್ನು ಕುಮಾರಸ್ವಾಮಿ ನೇಮಕ ಮಾಡಿದ್ದರು. ಡ್ಯಾನಿಶ್ ಆಲಿ ಎನ್ನುವವರಿಗೆ ಜನರಲ್ ಸೆಕ್ಯೂರಿಟಿಗೆ ಐಎಎಸ್ ಅಧಿಕಾರಿ ನೇಮಿಸಿದ್ದರು. ಆಗ ಡ್ಯಾನಿಶ್ ಆಲಿ ಯಾವುದೇ ಹುದ್ದೆಯಲ್ಲಿ ಇರಲಿಲ್ಲ. ಈಗ ಬಿಜೆಪಿ ಹಾಗೂ ಜೆಡಿಎಸ್ ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ನಾವು ಹಾಗೆ ಹೇಳುವುದಿಲ್ಲ. ಬಿಜೆಪಿ ಇರಬೇಕು, ಆದರೆ ವಿರೋಧ ಪಕ್ಷವಾಗಿಯೇ ಇರಬೇಕು. ಅಧಿಕಾರಕ್ಕೆ ಬರಬಾರದು ಎಂದ ಅವರು, ಪ್ರತಿಪಕ್ಷದವರು ಇಲ್ಲದಿದ್ದರೆ ಮಾತನಾಡಲು ಖುಷಿಯೇ ಇರುವುದಿಲ್ಲ. ಅವರು ಇಂದು ಸದನದಲ್ಲಿ ಇರಬೇಕಿತ್ತು. ಜನಪರವಾದ ಬಜೆಟ್ ಸ್ವಾಗತಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸಬೂಬು ಹುಡುಕಿಕೊಂಡು ಹೊರಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಮನನ್ನು ನೋಡಲು ಸಿದ್ದರಾಮಯ್ಯನವರು ಬಸ್ ಕೊಟ್ಟಿದ್ದಾರೆ: ಎಚ್.ವಿಶ್ವನಾಥ್
ಬಜೆಟ್ ಮೆಚ್ಚಿದ ಬಿಜೆಪಿ ಶಾಸಕ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಎಚ್.ವಿಶ್ವನಾಥ್, ನಾನು ಇಲ್ಲಿರುವುದು ಸುಮ್ಮನೆ-ಅಲ್ಲಿರುವುದು ನಮ್ಮನೆ ಎಂದು ಆಡಳಿತ ಪಕ್ಷದ ಸದಸ್ಯರು ಕುಳಿತಿದ್ದ ಕಡೆಗೆ ಕೈತೋರಿಸುತ್ತಾ, ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಬ್ಯಾಂಡ್ ಸೆಟ್ ಇದ್ದಿದ್ದರೆ ಕುಣಿಯೋಣ ಎಂದೆನ್ನಿಸಿತ್ತು ಎಂದು ಬಣ್ಣಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ