ಬರ ಮಾನದಂಡ ಬದಲಿಸಲು ಕೇಂದ್ರಕ್ಕೆ ಪತ್ರ: ಸಚಿವ ಕೃಷ್ಣಬೈರೇಗೌಡ

Published : Jul 22, 2023, 05:31 AM IST
ಬರ ಮಾನದಂಡ ಬದಲಿಸಲು ಕೇಂದ್ರಕ್ಕೆ ಪತ್ರ: ಸಚಿವ ಕೃಷ್ಣಬೈರೇಗೌಡ

ಸಾರಾಂಶ

ಮುಂಗಾರು ಮಳೆ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಘೋಷಿಸಲು ಇರುವ ಮಾನದಂಡಗಳನ್ನು ಬದಲಾವಣೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ವಿಧಾನಸಭೆ (ಜು.22) :  ಮುಂಗಾರು ಮಳೆ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಘೋಷಿಸಲು ಇರುವ ಮಾನದಂಡಗಳನ್ನು ಬದಲಾವಣೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಇದೇ ವೇಳೆ ಆಗಸ್ಟ್‌ ಮೊದಲ ವಾರದೊಳಗೆ ಉತ್ತಮ ಮಳೆಯಾಗಿದ್ದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬರ ಘೋಷಣೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಯಲ್ಲಾಪುರವನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಸಚಿವರಿಗೆ ಮನವಿ ಸಲ್ಲಿಸಿದ ಹೆಬ್ಬಾರ್ 

ಶುಕ್ರವಾರ ಕಾಂಗ್ರೆಸ್‌ನ ಸದಸ್ಯರು ಮುಂಗಾರು ಮಳೆ ವೈಫಲ್ಯದಿಂದಾಗಿ ರೈತರು ಆತಂಕಕ್ಕೀಡಾದ ಹಿನ್ನೆಲೆಯಲ್ಲಿ ಬರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ರಾಜ್ಯದ ಹಲವೆಡೆ ಎದುರಾಗಿರುವ ಬರಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ಕೆಲವು ತಾಲೂಕುಗಳಲ್ಲಿ ಬರದ ಛಾಯೆ ಇದೆ. ಬರ ಘೋಷಣೆಗೆ ಕೇಂದ್ರ ಸರ್ಕಾರದ ಕೆಲವು ಮಾನದಂಡಗಳಿವೆ. ಅದರನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಶೇ.60ರಷ್ಟುಮಳೆ ಕೊರತೆಯಾಗಿರಬೇಕು ಮತ್ತು ಕನಿಷ್ಠ ಮೂರು ವಾರ ಸತತವಾಗಿ ಮಳೆ ಬಂದಿರಬಾರದು ಎಂಬ ಷರತ್ತುಗಳಿವೆ. ಇದರನ್ವಯ ಆಗಸ್ಟ್‌ ಮೊದಲು ಬರ ಘೋಷಣೆ ಮಾಡಲು ಅವಕಾಶ ಇಲ್ಲ. ಪರಿಸ್ಥಿತಿ ತೀವ್ರ ವಿಕೋಪಗೊಂಡರೆ ಮಾತ್ರ ಅಕ್ಟೋಬರ್‌ ಮೊದಲ ವಾರದಲ್ಲಿ ಬರಗಾಲ ಪರಿಸ್ಥಿತಿ ಘೋಷಣೆ ಮಾಡಬಹುದು ಎಂಬುದಾಗಿ ರಾಜ್ಯಗಳಿಗೆ ಸೂಚಿಸಿದೆ ಎಂದು ಮಾಹಿತಿ ನೀಡಿದರು.

ಕೇಂದ್ರದ ನಿಯಮಗಳನ್ನು ಪಾಲಿಸಬೇಕು ಎಂದು ಕಾದುಕುಳಿತರೆ, ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮಾನದಂಡಗಳನ್ನು ಬದಲಾಯಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಪತ್ರ ಬರೆಯಲಿದ್ದಾರೆ ಎಂದರು.

ಮುಂಗಾರು ಮಳೆ ಜೂನ್‌ ತಿಂಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ಜುಲೈ ತಿಂಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಜಿಲ್ಲೆಗಳಿಗೆ ಒಂದು ಕೋಟಿ ರು. ಹಣವನ್ನು ಒದಗಿಸಲಾಗಿದೆ. ಪ್ರಸ್ತುತ 110 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದ್ದು, ಈ ಹಣವನ್ನು ಸರ್ಕಾರವೇ ಭರಿಸುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಹೊರೆಹಾಕಿಲ್ಲ. ಹೆಚ್ಚುವರಿ ಹಣದ ಅಗತ್ಯ ಇದ್ದರೆ ಅದನ್ನೂ ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಅಶಿಸ್ತಿನಿಂದ ಡ್ಯಾಮ್‌ ನಿರ್ವಹಣೆ:

ಬಿಜೆಪಿ ಸರ್ಕಾರ ರಾಜ್ಯದ ಎಲ್ಲಾ ಜಲಾಶಯಗಳನ್ನು ಅಶಿಸ್ತಿನಿಂದ ನಿರ್ವಹಿಸಿದೆ. ಪರಿಣಾಮ ಜಲಾಶಯಗಳು ಬಹುತೇಕ ಬರಿದಾಗಿವೆ. ಕಳೆದ ವರ್ಷಾಂತ್ಯದ ಡಿಸೆಂಬರ್‌ವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಜಲಾಶಯಗಳಿಗೆ ನೀರಿನ ಹರಿವು ಭರಪೂರವಾಗಿತ್ತು. ಆದರೆ, ಹಿಂದಿನ ಸರ್ಕಾರ ಜಲಾಶಯಗಳನ್ನು ಅಶಿಸ್ತಿನಿಂದ ನಿರ್ವಹಿಸಿದೆ. ನೀರನ್ನು ಬೇಕಾಬಿಟ್ಟಿನಾಲೆಗಳಿಗೆ ಹರಿಸಿದೆ. ಪರಿಣಾಮ ಬಹುತೇಕ ಜಲಾಶಯಗಳು ಖಾಲಿಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಆತ್ಮಹತ್ಯೆ, ಬರಗಾಲ ಬಗ್ಗೆ ಚರ್ಚೆ ಮಾಡಲು ಪ್ರತಿಪಕ್ಷಗಳ ನಿರ್ಧಾರ: ಬೊಮ್ಮಾಯಿ

ಜುಲೈನಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಾವೇರಿಯ ನಾಲ್ಕು ಜಲಾಶಯಗಳಿಗೆ 18,617 ಕ್ಯೂಸೆಕ್ಸ್‌ ನೀರಿನ ಒಳಹರಿವಿದೆ. ಕೃಷ್ಣಾ ನದಿಯ ಆರು ಜಲಾಶಯಗಳಿಗೆ 76,264 ಕ್ಯೂಸೆಕ್ಸ್‌ ನೀರಿನ ಹರಿವಿದೆ. ಆಲಮಟ್ಟಿಗೂ 32,146 ಕ್ಯೂಸೆಕ್ಸ್‌ ನೀರಿನ ಒಳಹರಿವಿದೆ. ಘಟಪ್ರಭ-ಮಲಪ್ರಭದಲ್ಲಿಯೂ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕಿಲ್ಲ ಎಂದು ವಿವರಿಸಿದರು. ಚರ್ಚೆಯಲ್ಲಿ ಕಾಂಗ್ರೆಸ್‌ ಸದಸ್ಯರಾದ ಎಂ.ವೈ.ಪಾಟೀಲ್‌, ಪುಟ್ಟರಂಗ ಶೆಟ್ಟಿ, ಯು.ಬಿ.ಬಣಕಾರ್‌, ಜೆ.ಟಿ.ಪಾಟೀಲ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!