ಪರಪ್ಪನ ಅಗ್ರಹಾರ ಜೈಲಾ, ಹಾಸ್ಟೆಲ್ಲಾ? ಐಸಿಸ್ ಉಗ್ರ, ವಿಕೃತ ಕಾಮಿಗೆ ಜೈಲಲ್ಲೇ ಮೊಬೈಲ್, ಟಿವಿ!

Kannadaprabha News, Ravi Janekal |   | Kannada Prabha
Published : Nov 09, 2025, 05:43 AM IST
Parappana Agrahara jail VIP treatment

ಸಾರಾಂಶ

Parappana Agrahara jail VIP treatment: ರಾಜ್ಯದ ಅತಿದೊಡ್ಡ ಜೈಲಾದ ಪರಪ್ಪನ ಅಗ್ರಹಾರದಲ್ಲಿ ಶಂಕಿತ ಉಗ್ರ ಶಕೀಲ್, ವಿಕೃತ ಕಾಮಿ ಉಮೇಶ್ ರೆಡ್ಡಿ ಹಾಗೂ ನಟ ತರುಣ್ ಕೊಂಡರಾಜು ಅವರಿಗೆ ಮೊಬೈಲ್, ಟಿವಿಯಂತಹ 'ವಿಐಪಿ ಸೌಲಭ್ಯ' ಕಲ್ಪಿಸಿರುವ ಅಕ್ರಮ ಬಯಲಾಗಿದೆ. ವಿಡಿಯೋಗಳು ವೈರಲ್

ಬೆಂಗಳೂರು (ನ.9): ರಾಜ್ಯದ ಅತಿದೊಡ್ಡ ಜೈಲಾಗಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ‘ವಿಐಪಿ ಸೌಲಭ್ಯ’ ಕಲ್ಪಿಸಿರುವ ಅಕ್ರಮ ಬಯಲಾಗಿದೆ.

ಕಾರಾಗೃಹದಲ್ಲಿ ಶಂಕಿತ ಐಸಿಸ್‌ ಉಗ್ರ ಶಕೀಲ್, ವಿಕೃತ ಕಾಮಿ ಉಮೇಶ್ ರೆಡ್ಡಿ ಹಾಗೂ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಆರೋಪಿ ಮತ್ತು ಖ್ಯಾತ ಹೋಟೆಲ್ ಉದ್ಯಮಿ ಮೊಮ್ಮಗ, ನಟ ತರುಣ್ ಕೊಂಡರಾಜು ಕಾನೂನುಬಾಹಿರವಾಗಿ ಮೊಬೈಲ್, ಟೀವಿ ಸೇರಿ ಇತರೆ ಸೌಲಭ್ಯವನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ವಿಡಿಯೋಗಳು ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ಕಾರಾಗೃಹ ಇಲಾಖೆಯ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ಒಂದು ವಿಡಿಯೋದಲ್ಲಿ 13 ಮೊಬೈಲ್‌ಗಳು, ಇಯರ್ ಫೋನ್‌ ಹಾಗೂ ಚಾರ್ಜರ್‌ಗಳಿವೆ. ಅಲ್ಲದೆ ವಿಕೃತ ಕಾಮಿ ಉಮೇಶ್ ರೆಡ್ಡಿ ಸೆಲ್‌ನಲ್ಲಿ ಹಾಟ್ ಬಾಕ್ಸ್ ಸಹ ಪತ್ತೆಯಾಗಿದೆ. ಇನ್ನು ಶಂಕಿತ ಉಗ್ರನ ಸ್ಟೀಲ್‌ ಗ್ಲಾಸ್‌ನಲ್ಲಿ ಚಹಾ ತುಂಬಿಟ್ಟುಕೊಂಡಿರುವುದು ಕಂಡು ಬರುತ್ತದೆ.

ಕಾರಾಗೃಹ ಆಡಳಿತ ವ್ಯವಸ್ಥೆ ಬಗ್ಗೆಯೇ ಅನುಮಾನ

ಜೈಲಿನಲ್ಲಿ ಕಾನೂನುಬಾಹಿರವಾಗಿ ಕೈದಿಗಳಿಗೆ ಸೌಲಭ್ಯ ಕಲ್ಪಿಸುವುದಕ್ಕೆ ನಟ ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಇದಾದ ನಂತರವೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಿರುವುದು ಕಾರಾಗೃಹ ಆಡಳಿತ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೊಲೆ ಆರೋಪ ಹೊತ್ತು ಜೈಲಿನಲ್ಲಿದ್ದ ನಟ ದರ್ಶನ್‌ ತೂಗುದೀಪ, ಅವರ ಸಹಚರರು, ರೌಡಿಗಳಾದ ವಿಲ್ಸನ್ ಗಾರ್ಡನ್‌ ನಾಗರಾಜ, ಶ್ರೀನಿವಾಸ ಹಾಗೂ ಶ್ರೀನಿವಾಸ ಅಲಿಯಾಸ್ ಗುಬ್ಬಚ್ಚಿ ಸೀನನಿಗೆ ವಿಶೇಷ ಸವಲತ್ತು ಕಲ್ಪಿಸಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಫೋಟೋ ಹಾಗೂ ವಿಡಿಯೋಗಳು ಬಹಿರಂಗವಾಗಿ ಭಾರಿ ವಿವಾದ ಸೃಷ್ಟಿಯಾಗಿತ್ತು. ನಟ ದರ್ಶನ್ ಅವರ ಜಾಮೀನು ಅರ್ಜಿ ರದ್ದುಪಡಿಸಿದ ಆದೇಶದಲ್ಲಿ ಸುಪ್ರೀಂ ಕೋರ್ಟ್‌, ಜೈಲಿನ ವಿಐಪಿ ವ್ಯವಸ್ಥೆ ಬಗ್ಗೆ ಕಿಡಿಕಾರಿತ್ತು.

ಉಮೇಶ್ ರೆಡ್ಡಿಗೆ ಮೊಬೈಲ್, ಕಲರ್‌ ಟಿವಿ!

ವಿದೇಶದಲ್ಲಿ ಅಡಗಿ ಕುಳಿತು ಅತ್ಯುಗ್ರ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಸಂಘಟನೆಯಲ್ಲಿ ಬೆಂಗಳೂರಿನ ಜುಹಾದ್‌ ಹಮೀದ್ ಶಕೀಲ್ ಮನ್ನಾ ತೊಡಗಿಕೊಂಡಿದ್ದ. 2020ರಲ್ಲಿ ಸೌದಿ ಅರೇಬಿಯಾದಿಂದ ಗಡೀಪಾರಾಗಿದ್ದ ಆತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿತ್ತು. ಅಂದಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸೆಲ್‌ನಲ್ಲಿ ಶಕೀಲ್ ಇದ್ದಾನೆ.

ಇನ್ನು ಮಹಿಳೆಯರ ಮೇಲೆ ಅತ್ಯಾ೧ಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ದಶಕಗಳಿಂದ ವಿಕೃತ ಕಾಮಿ ಉಮೇಶ್ ರೆಡ್ಡಿ ಜೈಲಿನಲ್ಲಿದ್ದಾನೆ. ಕೆಲ ಪ್ರಕರಣದಲ್ಲಿ ಆತ ಶಿಕ್ಷೆಗೆ ಗುರಿಯಾಗಿದ್ದರೆ, ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

ಕಳೆದ ಮಾರ್ಚ್‌ನಲ್ಲಿ ಡಿಜಿಪಿ ಮಲ ಮಗಳು ನಟಿ ರನ್ಯಾ ರಾವ್ ವಿರುದ್ಧ ವಿದೇಶದಿಂದ ಅಕ್ರಮ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ ಉದ್ಯಮಿ ಮೊಮ್ಮಗ ಹಾಗೂ ತೆಲಗು ನಟ ತರುಣ್ ಕೊಂಡರಾಜು ಬಂಧನವಾಗಿದೆ. ರನ್ಯಾ ರಾವ್‌ ಜತೆ ಆತ್ಮೀಯ ಒಡನಾಟ ಹೊಂದಿದ್ದ ಆತ, ಇದೇ ಸ್ನೇಹದಲ್ಲಿ ವಿದೇಶದಿಂದ ಚಿನ್ನ ಸಾಗಾಣಿಕೆಗೆ ಸ್ನೇಹಿತೆಗೆ ಸಾಥ್ ನೀಡಿದ ಆರೋಪವಿದೆ. ಈತ ಸಹ ವಿಶೇಷ ಭದ್ರತಾ ವಿಭಾಗದಲ್ಲೇ ಇದ್ದಾನೆ. ಸೆರೆಮನೆಯಲ್ಲಿ ಈ ಮೂವರ ಕೈಗೆ ಮೊಬೈಲ್ ಸಿಕ್ಕಿದೆ. ಅಲ್ಲದೆ ಉಮೇಶ್ ರೆಡ್ಡಿಗೆ ಸೆಲ್‌ನಲ್ಲಿ ಬಣ್ಣದ ಟಿವಿ ಸಹ ಇದೆ.

ಜೈಲಿನಲ್ಲಿ ಸಹ ಕೈದಿಗಳ ಜತೆ ಬಿಂದಾಸ್ ಆಗಿ ಓಡಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಶಕೀಲ್‌, ಉಮೇಶ್ ಹಾಗೂ ತರುಣ್ ಮಾತನಾಡುತ್ತಿರುವ ವಿಡಿಯೋಗಳು ಬಹಿರಂಗವಾಗಿವೆ. ಈ ವಿಡಿಯೋಗಳು ಬಹಿರಂಗವಾದ ಕಾರಾಗೃಹ ವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಚಾರಣೆ ನಡೆಸಿ ವರದಿ ನೀಡುವಂತೆ ಎಡಿಜಿಪಿ ಸೂಚನೆ:

ಜೈಲಿನಲ್ಲಿ ಅಕ್ರಮದ ವಿಡಿಯೋಗಳು ಬಹಿರಂಗವಾದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಧಿಕಾರಿಗಳನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಬಿ.ದಯಾನಂದ್ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಅಕ್ರಮದ ಕುರಿತು ದಕ್ಷಿಣ ವಲಯ ಡಿಐಜಿ ದಿವ್ಯಾಶ್ರೀ ಅವರಿಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಎಡಿಜಿಪಿ ಸೂಚಿಸಿದ್ದಾರೆ. ಈ ವರದಿ ಬಳಿಕ ಕೆಲ ಅಧಿಕಾರಿ ಮತ್ತು ಸಿಬ್ಬಂದಿ ತಲೆದಂಡವಾಗಲಿದೆ ಎಂದು ಮೂಲಗಳು ಹೇಳಿವೆ.

ದಿನಪತ್ರಿಕೆ ಚಿತ್ರೀಕರಿಸಿ ಸಾಚಾತನದ ಸಾಕ್ಷಿ?

ಬಹುತೇಕ ವಿಡಿಯೋ ಇತ್ತೀಚಿನದ್ದು:

ಜೈಲಿನಲ್ಲಿ ಕೈದಿಗಳ ವಿಲಾಸಿ ಬದುಕಿನ ಕುರಿತು ಬಿಡುಗಡೆಗೊಂಡಿರುವ ವಿಡಿಯೋಗಳ ಅಸಲಿತನಕ್ಕೆ ದಿನಪತ್ರಿಕೆಯನ್ನು ತೋರಿಸಲಾಗಿದೆ. ವಿಡಿಯೋಗಳಲ್ಲಿ ಆಂಗ್ಲ ದಿನಪತ್ರಿಕೆಯನ್ನು ತೋರಿಸಿ ದಿನಾಂಕ ಉಲ್ಲೇಖಿಸಿದ್ದಾರೆ. ಈಗ ಬಹಿರಂಗವಾದ ಐದು ವಿಡಿಯೋಗಳ ಪೈಕಿ ಒಂದನ್ನು ಮಾತ್ರ 2022ರಲ್ಲಿ ಚಿತ್ರೀಕರಿಸಲಾಗಿದೆ. ಇನ್ನುಳಿದವು ಇತ್ತೀಚಿನ ದಿನಗಳಲ್ಲಿ ಚಿತ್ರೀಕರಿಸಿದ ವಿಡಿಯೋಗಳಾಗಿವೆ ಎಂದು ತಿಳಿದು ಬಂದಿದೆ. ವಿಡಿಯೋಗಳ ಬಿಡುಗಡೆ ಹಿಂದಿನ ಕೈವಾಡ ಕುರಿತು ಇಲಾಖೆ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್