ಪಂಚಮಸಾಲಿ ಅಹೋರಾತ್ರಿ ಧರಣಿ ವಾಪಸ್‌: ತಾತ್ಕಾಲಿಕವಾಗಿ ಹಿಂತೆಗೆತ

By Govindaraj SFirst Published Dec 23, 2022, 12:15 PM IST
Highlights

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಡಿ.29ರಂದು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಬೆಳಗಾವಿ (ಡಿ.23): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಡಿ.29ರಂದು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಕಳೆದ ಸೋಮವಾರ ಸವದತ್ತಿಯಿಂದ ಬೆಳಗಾವಿಗೆ ಪಾದಯಾತ್ರೆ ಆರಂಭಿಸಲಾಗಿತ್ತು. ಸುವರ್ಣ ವಿಧಾನಸೌಧ ಸಮೀಪದ ಬಸ್ತವಾಡ ಬಳಿ ಗುರುವಾರ ‘ವಿರಾಟ ಪಂಚಶಕ್ತಿ ಸಮಾವೇಶ’ ಏರ್ಪಡಿಸಲಾಗಿತ್ತು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಮುದಾಯದ ಲಕ್ಷಾಂತರ ಮಂದಿ ಸಮಾವೇಶದಲ್ಲಿ ಆಗಮಿಸಿದ್ದರು. ಮೀಸಲಾತಿ ಸಿಗುವವರೆಗೂ ಅಹೋರಾತ್ರಿ ಧರಣಿ ನಡೆಸಲು ಪ್ರತಿಭಟನಾಕಾರರು ತೀರ್ಮಾನಿಸಿದ್ದರು. ಆದರೆ, ಸಿಎಂ ಭರವಸೆ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ತೆರೆ ಬಿತ್ತು.

ಪಂಚಮಸಾಲಿ ಮೀಸಲಿಗಾಗಿ ಇಂದು ‘ವಿರಾಟ ಪಂಚಶಕ್ತಿ ಸಮಾವೇಶ’: ಕೂಡಲ ಶ್ರೀ

ಬೆಳಗ್ಗೆ ಸಮಾವೇಶಕ್ಕೂ ಮೊದಲು ಸಮುದಾಯದ ಜನಪ್ರತಿನಿಧಿಗಳು ಸಭೆ ಸೇರಿ, ಮುಂದಿನ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಿದರು. ಬಳಿಕ, ಶಾಸಕರಾದ ಯತ್ನಾಳ, ಲಕ್ಷ್ಮೀ ಹೆಬ್ಬಾಳಕರ್‌ ನೇತೃತ್ವದಲ್ಲಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿ ಮಾಡಿ, ಈ ಸಂಬಂಧ ಮಾತುಕತೆ ನಡೆಸಿದರು. ಅಲ್ಲಿಂದ ನೇರವಾಗಿ ಸಮಾವೇಶಕ್ಕೆ ಆಗಮಿಸಿದ ಯತ್ನಾಳ, ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಗುರುವಾರ ಬೆಳಿಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪಂಚಮಸಾಲಿ ಸಮುದಾಯದವರು ಹಿಂದುಳಿದಿದ್ದಾರೆ. ಮೀಸಲಾತಿ ನೀಡುವ ಕುರಿತು ಸರ್ಕಾರಕ್ಕೆ ಸೂಕ್ತ ಸಲಹೆ ನೀಡುತ್ತೇವೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ವರದಿಯನ್ನು ಸರ್ಕಾರ ಒಪ್ಪಿಕೊಂಡಿದ್ದಾಗಿ ಸಿಎಂ ತಿಳಿಸಿದ್ದಾರೆ. ಡಿ.29 ರಂದು ಮೀಸಲಾತಿ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ, ಸಮಾವೇಶವನ್ನು ಮುಕ್ತಾಯಗೊಳಿಸುತ್ತೇವೆ ಎಂದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಾವು ಬರುವ ಮುಂಚೆ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿಸಬೇಕೆಂದು ನಾನು ಹೋರಾಟ ಆರಂಭಿಸಿದೆ. ಸರ್ಕಾರ ಪದೇಪದೇ ಕೊಟ್ಟಮಾತು ತಪ್ಪಿರುವುದೇ ನಾನು ಪಾದಯಾತ್ರೆ ಮಾಡಲು ಕಾರಣವಾಯಿತು. ಯಡಿಯೂರಪ್ಪ ಅವರು ಕೊಟ್ಟಮಾತು ತಪ್ಪಿದರು. ಬೊಮ್ಮಾಯಿ ಕೂಡ ಐದು ಭಾರಿ ತಮ್ಮ ಮಾತು ತಪ್ಪಿದ್ದಾರೆ. ನಾನು ಜನರಿಗೆ ನೀಡಿದ ಮಾತಿನಂತೆ ಕೂಡಲಸಂಗಮದಿಂದ ಪಾದಯಾತ್ರೆ ಪ್ರಾರಂಭಿಸಿದೆ. ಬಹಳಷ್ಟುಜನರು ಪಾದಯಾತ್ರೆ ಹತ್ತಿಕ್ಕಲು ಪ್ರಯತ್ನಿಸಿದರು. ಹೋರಾಟದ ಹಾದಿ ತಪ್ಪಿಸಲು ಪ್ರತ್ಯೇಕ ಪೀಠ ಸ್ಥಾಪಿಸಿದರು.

ಪಂಚಮಸಾಲಿ ಮೀಸಲಾತಿ: ಕಾಲಾವಕಾಶ ಪಡೆದ ಸಿಎಂ ಬೊಮ್ಮಾಯಿ

ಆದರೆ, ವಿಜಯಾನಂದ ಕಾಶಪ್ಪನ್ನವರ, ಬಸವನಗೌಡ ಪಾಟೀಲ ಯತ್ನಾಳ, ವಿನಯ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳಕರ, ಎ.ಬಿ.ಪಾಟೀಲ ಸೇರಿದಂತೆ ನಾನಾ ಮುಖಂಡರು ಕಳೆದ ಎರಡು ವರ್ಷಗಳಿಂದ ಮೀಸಲಾತಿಯ ಹೋರಾಟದಲ್ಲಿ ನಿರಂತರವಾಗಿ ಪಾಲ್ಗೊಂಡು ಬೆಂಬಲ ನೀಡಿದ್ದಾರೆ. ಇಂತಹ ದೊಡ್ಡ ಹೋರಾಟಕ್ಕೆ ಬೆಂಬಲವಾಗಿ ನಿಂತವರಿಗೆ ಮುಂಬರುವ ಚುನಾವಣೆಯಲ್ಲಿ ಪಕ್ಷಾತೀತವಾಗಿ ಪಂಚಮಸಾಲಿ ಸಮುದಾಯದವರು ಮತ ಹಾಕಬೇಕು. ಪಕ್ಷಕ್ಕಿಂತ ಜನ್ಮ ಕೊಟ್ಟಸಮಾಜ ಮುಖ್ಯವಾಗಿದೆ ಎಂದರು. ವಿಜಯಾನಂದ ಕಾಶಪ್ಪನವರ್‌, ಲಕ್ಷ್ಮೀ ಹೆಬ್ಬಾಳಕರ್‌, ಈರಣ್ಣ ಕಡಾಡಿ, ವಿಶ್ವನಾಥ ಪಾಟೀಲ ಸೇರಿದಂತೆ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

click me!