2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮಾಜದ ಮೇಲೆ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಹಳ್ಳಿಗಳಲ್ಲಿ ಹೋರಾಟ ನಡೆಸುವುದಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ ಎಡಿಜಿಪಿ ಹಿತೇಂದ್ರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬೆಳಗಾವಿ (ಡಿ.12): 2ಎ ಮೀಸಲಾತಿಗೆ ಆಗ್ರಹಿಸಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಡಿ.12 ರಿಂದ ಹಳ್ಳಿ ಹಳ್ಳಿಯಲ್ಲಿ ಹೋರಾಟ ಮಾಡುತ್ತೇವೆ. ಹತ್ತರಗಿ ಮತ್ತು ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಹೋರಾಟಗಾರರ ಮೇಲೆ ಎಡಿಜಿಪಿ ಹಿತೇಂದ್ರ ಹಲ್ಲೆ ಮಾಡಿದ್ದು, ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೋರಾಟಗಾರರ ಮೇಲೆ ಮುಫ್ತಿಯಲ್ಲಿ ಬಂದ ಪೊಲೀಸರು ಕಲ್ಲೆಸೆದರು. ಬಳಿಕ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಪೊಲೀಸರ ಕ್ರಮ ಖಂಡನಾರ್ಹ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಪ್ರತಿಯೊಂದು ಹಳ್ಳಿಹಳ್ಳಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಘೋಷಿಸಿದರು.
ಪೊಲೀಸರೇ ನಮ್ಮ ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿದ್ದಲ್ಲದೇ, ನಮ್ಮ ಸಮಾಜದ ರೈತರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮ ಸಮಾಜದವರ ಹೆಸರು ಕೆಡಿಸುವ ಹುನ್ನಾರ ಮಾಡಿದರು. ಮೊದಲು ಪೊಲೀಸರ ಮೇಲೆ ಕಲ್ಲು ಎಸೆದಿದ್ದು ಬಿನ್ ಡ್ರೆಸ್ ಮೇಲೆ ಇದ್ದ ಪೊಲೀಸರು. ಪೊಲೀಸರು ವ್ಯವಸ್ಥಿತವಾಗಿ ಹಲ್ಲೆ ಮಾಡಿದ್ದಾರೆ. ನಮ್ಮ ಸಮಾಜದ ರೈತರ ಮೇಲೆ ದಾಖಲಾದ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆಯ ಎಡಿಜಿಪಿಯಾಗಿದ್ದ ಅಲೋಕಕುಮಾರ್ ಸಮಾಜದ ಸುಮಾರು 6 ಲಕ್ಷ ಜನರು ಹೋರಾಟ ಮಾಡಿದಾಗ ನಮಗೆ ತಿಳಿ ಹೇಳುವ ಕೆಲಸ ಮಾಡಿದ್ದರು. ಆದರೆ, ಈಗಿನ ಎಡಿಜಿಪಿ ಹಿತೇಂದ್ರ ನಮ್ಮ ಹೋರಾಟಗಾರರ ಮೇಲೆ ಹಲ್ಲೆ ಮಾಡಿ, ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಎಂದಿಗೂ ನಮ್ಮ ಸಮಾಜ ಕಾನೂನು, ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಕೆಲಸ ಮಾಡಿಲ್ಲ. ಯಾವ ಸರ್ಕಾರವೂ ನಮ್ಮ ಮೇಲೆ ದಬ್ಬಾಳಿಕೆ ಮಾಡಿಲ್ಲ ಎಂದರು.
ಕಳೆದ 20 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ನಮ್ಮ ಬೇಡಿಕೆಗೆ ಸ್ಪಂದನೆ ಮಾಡಲಿಲ್ಲ. ಮಂಗಳವಾರ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟಕ್ಕೆ ಕರೆ ಕೊಟ್ಟಿದ್ದೆವು. ಅದರಂತೆ ಲಕ್ಷಾಂತರ ಸಂಖ್ಯೆಯಲ್ಲಿ ಕೊಂಡಸಕೊಪ್ಪದ ಬಳಿ ಪ್ರತಿಭಟನಾ ಸಮಾವೇಶ ನಡೆಸಿದಾಗ ಮೂವರು ಸಚಿವರು ಆಗಮಿಸಿ ಉತ್ತಮ ಅಭಿಪ್ರಾಯ ಹೇಳಿದ್ದರೆ ಮುಗಿದು ಹೋಗುತ್ತಿತ್ತು. ಆದರೆ ನಿಮ್ಮ ಅಭಿಪ್ರಾಯ ಆಲಿಸಲು ಬಂದಿದ್ದೇವೆ ಎಂದರು. ಇದಕ್ಕೆ ನಮ್ಮ ಸಮಾಜದವರು ಮುಖ್ಯಮಂತ್ರಿ ಬರಬೇಕೆಂದು ಪಟ್ಟು ಹಿಡಿದರು ಎಂದರು.
ಜಿಲ್ಲಾಡಳಿತ ಟ್ರ್ಯಾಕ್ಟರ್ ಹೋರಾಟ ನಿಷೇಧ ಮಾಡಿತ್ತು. ನಾವು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡುವ ಪ್ರಶ್ನೆಯೇ ಇಲ್ಲ. ನಾವು ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೆವು. ನಮ್ಮ ಮೇಲೆ ಲಾಠಿ ಚಾಜ್೯ ಮಾಡಿದ್ದು ಏಕೆ ಎಂದು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಲಿಂಗಾಯತ ವಿರೋಧಿಯಾಗಿದೆ. ಲಾಠಿ ಚಾಜ್೯ ಮಾಡಿದ ಮೇಲೆ ಮಾತುಕತೆಗೆ ಕರೆಯುತ್ತೇವೆ ಎಂದು ಹೇಳಿಕೆ ನೀಡಿದರು. ಮೊದಲೇ ಹೇಳಿದ್ದರೆ ಹೋಗುತ್ತಿದ್ದೆವು. ಪೊಲೀಸ್ ಅಧಿಕಾರಿಗಳು ನಮ್ಮ ಸಮಾಜದ ಮೇಲೆ ಹಲ್ಲೆ ಮಾಡಿರುವ ಕೃತ್ಯ ಖಂಡಿಸಿ ಕೊಂಡಸಕೊಪ್ಪ ಗ್ರಾಮದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯಚನ್ನರಾಜ ಹಟ್ಟಿಹೊಳಿ, ಪಂಚಮಸಾಲಿಮುಖಂಡರಾದ ನಿಂಗಪ್ಪ ಪಿರೋಜಿ, ಆರ್.ಪಿ. ಪಾಟೀಲ, ರಾಜು ಮಗದುಮ್ಮ ಮತ್ತಿತರರು ಉಪಸ್ಥಿತರಿದ್ದರು.