ಎಸ್.ಎಂ. ಕೃಷ್ಣ ಅವರ ರಾಜಕೀಯ ಜೀವನವು ಸಮಾಜವಾದದಿಂದ ಕಾಂಗ್ರೆಸ್ ಮತ್ತು ಬಿಜೆಪಿಯವರೆಗೆ ವೈವಿಧ್ಯಮಯ ಹಾದಿಯನ್ನು ಹೊಂದಿದೆ. ಗಾಂಧಿ ಕುಟುಂಬದೊಂದಿಗಿನ ಅವರ ನಿಕಟ ಸಂಬಂಧ, ದೇವೇಗೌಡರೊಂದಿಗಿನ ಮಿತ್ರತ್ವ-ಶತ್ರುತ್ವ, ಮತ್ತು ಅಂತಿಮವಾಗಿ ಬಿಜೆಪಿಗೆ ಸೇರುವ ಹಿಂದಿನ ಕಾರಣಗಳನ್ನು ಈ ಲೇಖನವು ವಿಶ್ಲೇಷಿಸುತ್ತದೆ.
ಸಮಾಜವಾದ to ಕಾಂಗ್ರೆಸ್ to ಬಿಜೆಪಿ ಕೃಷ್ಣ ಪಥ
ಘಟನೆ 1: 1961 ರಲ್ಲಿ ವಿದೇಶಿ ವ್ಯಾಸಂಗ ಮುಗಿಸಿ ಮಂಡ್ಯಕ್ಕೆ ಮರಳಿದ ಕೃಷ್ಣ ಅವರು 1962 ರಲ್ಲಿ ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ. ಕೃಷ್ಣ ಅವರ ಅಜ್ಜ ಚಿಕ್ಕೇಗೌಡರು ಮತ್ತು ತಂದೆ ಮಲ್ಲಯ್ಯ ಮೈಸೂರು ಮಹಾರಾಜರ ಕಾಲದಲ್ಲಿ ಪ್ರಜಾ ಪ್ರತಿನಿಧಿ ಸಭಾ ಸದಸ್ಯರಾಗಿದ್ದರಿಂದ ಮದ್ದೂರಿ ನಲ್ಲಿ ಬಲಾಢ್ಯ ರಾಗಿದ್ದ ಎಚ್ ಕೆ ವೀರನಗೌಡರನ್ನು ಸೋಲಿಸಲು ಅಭ್ಯರ್ಥಿಯಾಗಿ ವಿದೇಶದಿಂದ ಓದಿಕೊಂಡು ಬಂದಿದ್ದ ಈ ತರುಣನನ್ನೇ ಕಾಂಗ್ರೆಸ್ ವಿರುದ್ಧ ರಾಜಕಾರಣ ಮಾಡುತ್ತಿದ್ದವರು ಬೆನ್ನು ಹತ್ತಿದರು. ಊರವರೇ ದುಡ್ಡು ಹಾಕಿ ಪಕ್ಷೇತರರಾಗಿ ನಿಂತು ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಇಂದ ಬೆಂಬಲ ಪಡೆದ ಕೃಷ್ಣ ಗೆದ್ದರು. ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದ ವೀರನಗೌಡರು ಸೋತರು.
ಘಟನೆ 2 ಅದೇನು ಅದೃಷ್ಟವೋ ಏನೋ ಹಾಲಿ ಸಂಸದ ಆತ್ಮಾನಂದ ಅವರ ತಂದೆ ತೀರಿಕೊಂಡು 1968 ರ ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದು ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಸಂಸದರಾದವರು ದಿಲ್ಲಿಗೆ ಹೋಗಿ ಇಂದಿರಾ ಗಾಂಧೀ ಕಣ್ಣಿಗೆ ಬಿದ್ದು 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಸಂಸದರಾದರು.
ಘಟನೆ 3: 2016 ರಲ್ಲಿ ಸೋನಿಯಾ ಗಾಂಧೀ ಹತ್ತಿರ ಹೋಗಿದ್ದ ಕೃಷ್ಣ ಅವರಿಗೆ ಮೇಡಂ ಅವರು 'ನೀವೇ ರಾಜ್ಯಸಭೆ ಅಭ್ಯರ್ಥಿ ತಯಾರಿ ಮಾಡಿಕೊಳ್ಳಿ ಅಂದರಂತೆ ಇನ್ನೇನು ಕೃಷ್ಣ ಬೆಂಗಳೂರಿಗೆ ಬಂದಿಳಿಯಬೇಕು ಅಷ್ಟರಲ್ಲಿ ಕೃಷ್ಣ ಭೈರೇಗೌಡರು ರಾಹುಲ್ ಗಾಂಧಿ ಬಳಿಗೆ ಹೋಗಿ ರಾಜೀವ ಗೌಡ ಹೆಸರಿಗೆ ಒಪ್ಪಿಗೆ ಕೊಡಿಸಿದ್ದು ಕೃಷ್ಣ ಅವರನ್ನು ಕೆರಳಿಸಿತು. ಇದು ಕೊನೆಗಾಲದಲ್ಲಿ ಕಾಂಗ್ರೆಸ್ ಬಿಡಲು ಕಾರಣ ಆಯಿತು ಅಂತೆ.
undefined
ಯತ್ನಾಳ್ ಮತ್ತೆ ಮತ್ತೆ ಬಚಾವ್ ಆಗುತ್ತಿರುವುದು ಹೇಗೆ?: ಪ್ರಶಾಂತ್ ನಾತು
ಗಾಂಧೀ ನಿಷ್ಠ ಕೃಷ್ಣ
ಕೃಷ್ಣ ಯಾವತ್ತಿಗೂ ಕೂಡ ದಿಲ್ಲಿ ಮಟ್ಟದಲ್ಲಿ ಇದ್ದ ಪ್ರಭಾವ ಬಳಸಿಕೊಂಡೇ ಕರ್ನಾಟಕದಲ್ಲಿ ರಾಜಕಾರಣ ಮಾಡಿದವರು ಹೊರತು ಅವರೆಂದು ಮಾಸ್ ಲೀಡರ್ ಆಗಿ ಹೊರ ಹೊಮ್ಮಿದವರಲ್ಲ. 1973 ರಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿಸಿ ಅವರನ್ನು ವಿಧಾನ ಪರಿಷತ್ತಿಗೆ ತಂದು ಮಂತ್ರಿ ಮಾಡಿದ್ದು ಇಂದಿರಾ ಗಾಂಧಿ. ಮರಳಿ 1980 ರಲ್ಲಿ ಸಂಸದ ಮಾಡಿ ಕೇಂದ್ರ ಸಚಿವನನ್ನಾಗಿ ಮಾಡಿದ್ದು ಇಂದಿರಾ ಗಾಂಧೀ ಅವರೇ. ಆದರೆ 1984 ರ ಲೋಕಸಭೆಯಲ್ಲಿ ಸೋತ ಕೃಷ್ಣರಿಗೆ 1989 ರಲ್ಲಿ ಗೆದ್ದ ನಂತರ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆದಾಗ ಸ್ಪೀಕರ್ ಮಾಡಿದ್ದು ರಾಜೀವ್ ಗಾಂಧಿ. ಬಹುತೇಕ ಗಾಂಧಿಗಳ ಕೈಯಲ್ಲೇ ಅಧಿಕಾರ ಇದ್ದಿದ್ದರೆ ಬಂಗಾರಪ್ಪ ಕೆಳಗೆ ಇಳಿದಾಗ ಕೃಷ್ಣ ಮುಖ್ಯಮಂತ್ರಿ ಆಗಿ ಬಿಡುತ್ತಿದ್ದರು. ಆದರೆ ನರಸಿಂಹರಾಯರು ವೀರಪ್ಪ ಮೊಯಿಲಿ ಅವರನ್ನು ಮುಖ್ಯಮಂತ್ರಿ ಮಾಡಿ ಕೃಷ್ಣರನ್ನು ಉಪಮುಖ್ಯಮಂತ್ರಿ ಮಾಡಿದರು. ಕೃಷ್ಣ ಅವರು ರಾಜಶೇಖರ ಮೂರ್ತಿ ಜೊತೆ ಸೇರಿ ಭಿನ್ನಮತ ಮಾಡಿದ್ದು ಅದೇ ಅವಧಿಯಲ್ಲಿ ಮಾತ್ರ.ಆದರೆ ಆ ಭಿನ್ನಮತ ಮತ್ತು ಕಿತ್ತಾಟದಿಂದಲೋ ಏನೋ 1994 ರಲ್ಲಿ ಕಾಂಗ್ರೆಸ್ 170 ರಿಂದ 35 ರ ಆಸು ಪಾಸಿಗೆ ಇಳಿಯಿತು ಅಷ್ಟೇ ಅಲ್ಲ ಸ್ವತಃ ಕೃಷ್ಣ ಕೂಡ ಚುನಾವಣೆ ಸೋತು ಹೋದರು.
ಕೃಷ್ಣ 'ಮುಖ್ಯಮಂತ್ರಿ'ಪಥ
1994 ರಲ್ಲಿ ಒಂದು ಕಡೆ ಎಸ್ ಎಂ ಕೃಷ್ಣ ಸೋತರೆ ಇನ್ನೊಂದು ಕಡೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಾರೆ. ಹೆಚ್ಚು ಕಡಿಮೆ 40 ವರ್ಷಗಳ ತರುವಾಯ ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುತ್ತದೆ. ಆದರೆ 1996 ರಲ್ಲಿ ರಾಜ್ಯಸಭೆ ಚುನಾವಣೆ ಒಂದು ರೀತಿ ಕೃಷ್ಣ ಮತ್ತು ಕಾಂಗ್ರೆಸ್ ಭವಿಷ್ಯಕ್ಕೆ ಟರ್ನಿಂಗ್ ಪಾಯಿಂಟ್.ಸಚ್ಚಿದಾನಂದ ಸ್ವಾಮಿ ಮೂಲಕ ದೇವೇಗೌಡರನ್ನು ಸಂಪರ್ಕಿಸಿದ ಎಸ್ ಎಂ ಕೃಷ್ಣ ಜನತಾ ದಳದ ಬಳಿ ಇದ್ದ ಹೆಚ್ಚುವರಿ ಮತಗಳಿಂದ ರಾಜ್ಯ ಸಭೆಗೆ ಹೋಗುತ್ತಾರೆ. ಆಗ ಅಖಿಲ ಭಾರತೀಯ ಕಾಂಗ್ರೆಸ್ ಅಧಿವೇಶನಕ್ಕಿಂತ ಮುಂಚೆ ಸೀತಾರಾಮ್ ಕೇಸರಿ ಧರ್ಮ ಸಿಂಗ್ ರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸುತ್ತಾರೆ. ಆದರೆ ಯಾವಾಗ ಸೋನಿಯಾ ಗಾಂಧಿ ಅಧ್ಯಕ್ಷರಾಗಿ ಬರುತ್ತಾರೋ ಧರ್ಮಸಿಂಗ್‌ರನ್ನ ಬದಲಿಸಿ ಎಸ್ ಎಂ ಕೃಷ್ಣರನ್ನು ಅಧ್ಯಕ್ಷರಾಗಿ ನೇಮಿಸುತ್ತಾರೆ. ಕೆಲವರು ಹೇಳುವ ಪ್ರಕಾರ, ಡಿ ಕೆ ಶಿವಕುಮಾರ ಕೃಷ್ಣ ಅವರ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಿದಾಗ 'ಮುಂದೆ ಮುಖ್ಯಮಂತ್ರಿ ಆಗುವ ರಾಜಯೋಗ' ಇದೆ ಎಂದು ಹೇಳಿದ್ದರಂತೆ. ಹೀಗಾಗಿ ಡಿ ಕೆ ಶಿವಕುಮಾರ ಮತ್ತು ಇತರರು ಒತ್ತಡ ತಂದು ಕೃಷ್ಣರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಲಾಯಿತು. ಅದಾದ ಮೇಲೆ ಪಾಂಚ ಜನ್ಯ ಹತ್ತಿ ಚುನಾವಣೆಯಲ್ಲಿ 132 ಸೀಟು ಗೆದ್ದು ಮುಖ್ಯಮಂತ್ರಿ ಆಗಿದ್ದು ಈಗ ಇತಿಹಾಸ.
ಕೃಷ್ಣ-ಗೌಡರ ಮಿತ್ರತ್ವ ಶತ್ರುತ್ವ
ಈಗೇನು ದೇವೇಗೌಡರ ಕುಟುಂಬ ಮತ್ತು ಡಿ ಕೆ ಶಿವಕುಮಾರ ನಡುವೆ ನಾ ಬಲನೋ ನೀ ಬಲನೋ ಅನ್ನೋ ಸ್ಥಿತಿ ನೋಡುತ್ತಿದ್ದೇವೆ ಅದು ಮೊದಲು ಶುರು ಆಗಿದ್ದು ಕೃಷ್ಣ 1998 ರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದಾಗ.ತನ್ನಿಂದಲೇ ರಾಜ್ಯಸಭೆಗೆ ಬಂದ ಕೃಷ್ಣ ತನಗೆ ಸೆಡ್ಡು ಹೊಡೆದರು ಅನ್ನುವ ಸಿಟ್ಟು ದೇವೇಗೌಡರಿಗೆ ತೀರಾ ಇತ್ತೀಚ್ಚಿನವರೆಗೂ ಕೂಡ ಇತ್ತು. 1980 ರ ದಶಕದಲ್ಲಿ ಯಾವುದೋ ಒಂದು ಸಂಧರ್ಭದಲ್ಲಿ ರಾಜಕೀಯವಾಗಿ ಸುಸ್ತಾಗಿದ್ದ ಗೌಡರು ಪ್ರಣಬ್ ಮುಖರ್ಜಿ ಮೂಲಕ ಗಾಂಧೀಗಳ ಹತ್ತಿರ ಹೋಗಿ ಕಾಂಗ್ರೆಸ್ ಸೇರುವ ಪ್ರಸ್ತಾಪ ಇಟ್ಟಾಗ ಕೃಷ್ಣ ಅವರೇ ಗೌಡರಿಗೆ 'ಹಾಗೇ ಮಾಡಬೇಡಿ ಇಲ್ಲಿ ಬಂದು ಹತ್ತರಲ್ಲಿ ಹನ್ನೊಂದು ಆಗ್ತೀರಿ' ಎಂದು ಹೇಳಿ ಬೇಡ ಅಂದಿದ್ದರಂತೆ. ಅದೇ 1996 ರಲ್ಲಿ ಕುಮಾರಸ್ವಾಮಿ ಮೊದಲ ಬಾರಿ ಲೋಕಸಭೆಗೆ ಕನಕಪುರದಿಂದ ಎಂ ವಿ ಚಂದ್ರಶೇಖರ ಮೂರ್ತಿ ವಿರುದ್ಧ ಸ್ಪರ್ಧೆ ಮಾಡಿದಾಗ ಮಳವಳ್ಳಿ ಕ್ಷೇತ್ರ ಕನಕಪುರಕ್ಕೆ ಬರುತ್ತಿತ್ತು. ಕೆಲವರು ಹೇಳುವ ಪ್ರಕಾರ ಕುಮಾರಸ್ವಾಮಿ ಕೃಷ್ಣರನ್ನು ಭೇಟಿ ಮಾಡಿದ ನಂತರ ಕೃಷ್ಣ ಒಳಗಿಂದ ಒಳಗೆ ಕುಮಾರಸ್ವಾಮಿ ಗೆಲ್ಲಲು ಸಹಾಯ ಮಾಡಿದ್ದರು.ಅದಾದ ಮೇಲೆ 2004 ರಲ್ಲಿ ಅತಂತ್ರ ವಿಧಾನ ಸಭೆ ರಚನೆ ಆದಾಗ ಎಸ್ ಎಂ ಕೃಷ್ಣ ತನ್ನ ಅಳಿಯ ಸಿದ್ಧಾರ್ಥರನ್ನು ದೇವೇಗೌಡರ ಮನೆಗೆ ಕಳುಹಿಸಿದ್ದರು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗಲಿ ಕೃಷ್ಣರನ್ನು ಮುಖ್ಯಮಂತ್ರಿ ಮಾಡಿ ಎಂದು ಸಿದ್ಧಾರ್ಥ ಹೇಳಲು ಹೋದಾಗ ದೇವೇಗೌಡರು ಸಾಧ್ಯವೇ ಇಲ್ಲ ಎಂದು ಹೇಳಿ ಕಳುಹಿಸಿದ್ದರು. ಅಷ್ಟೇ ಅಲ್ಲ ಕಾಂಗ್ರೆಸ್ ಜೊತೆಗೆ ಮೈತ್ರಿಗೆ ದೇವೇಗೌಡರು ಸೋನಿಯಾ ಇಟ್ಟ ಷರತ್ತು ಎಂದರೆ ಕೃಷ್ಣ ರಾಜ್ಯ ರಾಜಕಾರಣದಲ್ಲಿ ಇರಕೂಡದು ಅವರನ್ನು ರಾಜ್ಯಪಾಲರನ್ನಾಗಿ ಕಳುಹಿಸಬೇಕು ಎಂದು. ಹೀಗಾಗಿಯೇ ಕೃಷ್ಣ ಮಹಾರಾಷ್ಟ್ರದ ರಾಜ್ಯಪಾಲರಾಗಿ ಹೋಗಬೇಕಾಯಿತು. ಈ ರಾಜ್ಯಪಾಲರಾಗುವ ಸುದ್ದಿ ಬಂದಾಗ ಕೃಷ್ಣ ಸಿಂಗಾಪುರದಲ್ಲಿದ್ದರು.ಅವರು ಒಲ್ಲದ ಮನಸ್ಸಿನಿಂದ ಮುಂಬೈ ತಲುಪಿದ್ದೇ ಒಂದು ವಾರದ ನಂತರ ವಷ್ಟೇ. ದೇವೇಗೌಡರು ಕೃಷ್ಣ ಅಷ್ಟೇ ಅಲ್ಲ ಡಿಕೆ ಶಿವಕುಮಾರರನ್ನು ಕೂಡ ಧರ್ಮಸಿಂಗ್ ಸಂಪುಟಕ್ಕೆ ಸೇರಿಸಲು ಒಪ್ಪಲಿಲ್ಲ.
ಇದು ಜೇಂಟಲ್‌ಮನ್ ಕೃಷ್ಣ ಸ್ಟೈಲ್
ಕೃಷ್ಣ ಸಾಹೇಬರು ಮುಖ್ಯಮಂತ್ರಿ ಆಗಿದ್ದಾಗ ದಿಲ್ಲಿ ಕರ್ನಾಟಕ ಭವನದ ಸಿಎಂ ಸೂಟ್ ಒಳಗಡೆ ಅವರ ಆಪ್ತ ಕಾರ್ಯದರ್ಶಿಗೂ ಪ್ರವೇಶ ಇರಲಿಲ್ಲ ಅಂತೆ. ಅವರ ವಿಗ್ ಕಾರಣದಿಂದಲೋ ಏನೋ ಭಾಳ ರಹಸ್ಯವನ್ನು ಕೃಷ್ಣ ಕಾಪಾಡಿ ಕೊಳ್ಳುತ್ತಿದ್ದರು. ಪತ್ರಕರ್ತರ ಜೊತೆ ಹರಟೆ ಹೊಡೆಯುವಾಗಲೂ ಅಷ್ಟೇ ನಮ್ಮ ಮಾತು ಪ್ರಶ್ನೆ ಕೇಳಿ ಬಾಯಿ ತುಂಬಾ ನಗುತ್ತಿದ್ದರೆ ಹೊರತು ಎಂದು ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ನಾನು ಅವರ ವಿದೇಶ ಸಚಿವರಾಗಿ ಮೊದಲ ಯಾತ್ರೆಗೆ ಕಾಬುಲ್ ಗೆ ಹೋಗಿದ್ದೆ. ಯಾವತ್ತೂ ಎಲ್ಲರ ಜೊತೆಗೂ ಒಂದು ಅಂತರ ಇರುತ್ತಿತ್ತು ಆದರೆ ಊಟ ಮಾಡಿದರಾ ತಿಂಡಿ ಮಾಡಿದರಾ ಎಂದು ತಾವೇ ಕರೆದು ಕರೆದು ವಿಚಾರಿಸಿ ಕೊಳ್ಳುತ್ತಿದ್ದರು.ಯಾವತ್ತೇ ಎಲ್ಲೇ ಹೋಗಲಿ ಒಳ್ಳೆ ಸಂಧರ್ಭಕ್ಕೆ ತಕ್ಕಂತೆ ಬಟ್ಟೆಗಳು ಸುಗಂಧ ದ್ರವ್ಯ ಗಳನ್ನು ಬಳಸಿ ಸದಾ ಎಷ್ಟೇ ವಯಸ್ಸಾದರೂ ಚಾರ್ಮಿಂಗ್ ಆಗಿರುವುದು ಅವರಿಗೆ ಸಿದ್ಧಿಸಿತ್ತು.ಊಟ ತಿಂಡಿ ಕೂಡ ಹಿತ ಮಿತ ದಲ್ಲಿ ಯಾವುದು ಅತಿರೇಕ ಇಲ್ಲದ ಜೀವನ ಅವರದೇನೋ ಅನ್ನುವಷ್ಟರ ಮಟ್ಟಿಗೆ ಸದಾ ಕಾಲ ನಗುತ್ತಾ ಇರುತ್ತಿದ್ದರು. ದಿಲ್ಲಿ ಮನೆ ಕೂಡ ಅಷ್ಟೇ ಸೋಫಾ ಮತ್ತು ಪರದೆಗಳು ಸದಾ ಅವರಂತೆ ವರ್ಣ ರಂಜಿತ. ಯಾರು ಬಂದರೆ ಏನು ತಿನ್ನಲು ಕೊಡಬೇಕು ಅನ್ನೋದರಿಂದ ಹಿಡಿದು ಪಕ್ಕಾ ಚಿಕ್ಕಮಗಳೂರಿನ ಕಾಫಿವರೆಗೆ ಒಂದು ಛಾಪು ಎದ್ದು ಕಾಣುತ್ತಿತ್ತು.ನಾನಂತೂ ಅವರ ಮನೆಗೆ ಫಿಲ್ಟರ್ ಕಾಫಿ ಕುಡಿಯಲು ಎಂದೇ ಹೋಗಿ ಬರುತ್ತಿದ್ದೆ.ಕೃಷ್ಣ ಸಾಹೇಬರು ವಿದೇಶ ಸಚಿವರಾಗಿದ್ದಾಗಲೇ ಪಾಕ್ ನಲ್ಲಿ ಹೀನಾ ರಬ್ಬಾನಿ ಖಾರ ವಿದೇಶ ಸಚಿವರಾಗಿದ್ದರು. ವಿಪರೀತ ಸಿಗರೇಟ್ ಸೇದುತ್ತಿದ್ದ ಸುಂದರಿ ಹೀನಾ ವಿಪರೀತ ಗಂಟಲು ನೋವಿನಿಂದ ಬಳಲುತ್ತಿದ್ದಳು.ಕೃಷ್ಣ ಸಾಹೇಬರು ದಕ್ಷಿಣ ಅಮೇರಿಕಕ್ಕೆ ಹೋದಾಗ ಕೃಷ್ಟ ಉತ್ತಮ ದರ್ಜೆಯ ಕಾಡಿನ ಜೇನು ತುಪ್ಪ ತಂದು ಹೀನಾ ರಬ್ಬಾನಿ ಗೆ ಉಡುಗೊರೆ ಕೊಟ್ಟಿದ್ದರು. ಇವೇ ಎಸ್ ಎಂ ಕೃಷ್ಣರ ಗುಣ ವಿಶೇಷಣಗಳು.
India Gate: ರಾಷ್ಟ್ರೀಯ ಬಿಜೆಪಿಗೆ ‘ಅಧ್ಯಕ್ಷ ಸಂಕಟ’: ಪ್ರಶಾಂತ್ ನಾತು
ಕಾಂಗ್ರೆಸ್ ಬಿಡಲು ಮೂರು ಕಾರಣಗಳು
2012 ರ ಆಸುಪಾಸಿ ನಲ್ಲಿ ವಿದೇಶಾ0ಗ ಸಚಿವರಾಗಿದ್ದ ಕೃಷ್ಣ ವಿಶ್ವ ಸಂಸ್ಥೆಯ ಸಭೆಯಲ್ಲಿ ತನ್ನ ಲಿಖಿತ ಭಾಷಣ ಓದುವ ಬದಲಿಗೆ ಬೇರೆ ಯಾವುದೋ ಭಾಷಣ ಓದಿ ಟೀಕೆಗೆ ಗುರಿಯಾದರು. 2013 ರಲ್ಲಿ ಸಂಪುಟ ಪುನಾರಚನೆ ಮಾಡುವಾಗ ಆಗಿನ ಪ್ರಧಾನಿ ಡಾ ಮನಮೋಹನ ಸಿಂಗ್ ಕರೆ ಮಾಡಿ ಕೃಷ್ಣ ಅವರೇ ನಿಮಗೆ 81 ವರ್ಷ ವಯಸ್ಸಾಗಿದೆ ರಾಜೀನಾಮೆ ಕೊಡಿ ಎಂದು ಕೇಳಿದ್ದು ಕೃಷ್ಣರನ್ನು ಕೆರಳಿಸಿತು. ಆ ನಂತರ 2016 ರಲ್ಲಿ ರಾಜ್ಯಸಭೆಗೆ ಕಳುಹಿಸದೆ ಇದ್ದದ್ದು ಅವರನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ಇಂದ ದೂರ ಮಾಡಿತು.ಅನೇಕರು ಹೇಳುವ ಪ್ರಕಾರ ಸಿದ್ಧಾರ್ಥ ಮೇಲೆ ತೆರಿಗೆ ಅಧಿಕಾರಿಗಳು ಹಾಕಿದ ಒತ್ತಡ ಕೃಷ್ಣರನ್ನು ಬಿಜೆಪಿ ಸೇರುವಂತೆ ಮಾಡಿತು.