ಭರತ್‌ ಮನೆಯಲ್ಲಿ ಮಡುಗಟ್ಟಿದ ಶೋಕ: ಪಹಲ್ಗಾಂ ಉಗ್ರರ ದಾಳಿಗೆ ಜೀವತೆತ್ತ ಭೂಷಣ್‌

Published : Apr 25, 2025, 10:13 AM ISTUpdated : Apr 25, 2025, 10:22 AM IST
ಭರತ್‌ ಮನೆಯಲ್ಲಿ ಮಡುಗಟ್ಟಿದ ಶೋಕ: ಪಹಲ್ಗಾಂ ಉಗ್ರರ ದಾಳಿಗೆ ಜೀವತೆತ್ತ ಭೂಷಣ್‌

ಸಾರಾಂಶ

ಪಹಲ್ಗಾಂನಲ್ಲಿ ಉಗ್ರರ ದಾಳಿಗೆ ಜೀವತೆತ್ತ ಭರತ್‌ ಭೂಷಣ್‌ ಅಂತಿಮ ದರ್ಶನಕ್ಕಾಗಿ ಬಂದವರೆದುರು ತಂದೆ ಚನ್ನವೀರಪ್ಪ ಕಣ್ಣೀರು ಹಾಕುತ್ತಿದ್ದರು. ಮುದ್ದಿನ ಮಗನನ್ನು ಕಳೆದುಕೊಂಡ ತಾಯಿ ಶೈಲಾಕುಮಾರಿ ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಕಣ್ಣೆದುರೇ ಗಂಡ ಬಲಿಯಾಗಿದ್ದನ್ನು ನೋಡಿದ್ದ ಪತ್ನಿ ಡಾ.ಸುಜಾತಾ ಕಣ್ಣೀರ ಕಟ್ಟೆಯೊಡೆದಿತ್ತು. 

ಬೆಂಗಳೂರು (ಏ.25): ಪಹಲ್ಗಾಂನಲ್ಲಿ ಉಗ್ರರ ದಾಳಿಗೆ ಜೀವತೆತ್ತ ಭರತ್‌ ಭೂಷಣ್‌ ಅಂತಿಮ ದರ್ಶನಕ್ಕಾಗಿ ಬಂದವರೆದುರು ತಂದೆ ಚನ್ನವೀರಪ್ಪ ಕಣ್ಣೀರು ಹಾಕುತ್ತಿದ್ದರು. ಮುದ್ದಿನ ಮಗನನ್ನು ಕಳೆದುಕೊಂಡ ತಾಯಿ ಶೈಲಾಕುಮಾರಿ ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಕಣ್ಣೆದುರೇ ಗಂಡ ಬಲಿಯಾಗಿದ್ದನ್ನು ನೋಡಿದ್ದ ಪತ್ನಿ ಡಾ.ಸುಜಾತಾ ಕಣ್ಣೀರ ಕಟ್ಟೆಯೊಡೆದಿತ್ತು. ಇದ್ಯಾವುದರ ಪರಿವೆಯೇ ಇಲ್ಲದ ಭರತ್‌ ಭೂಷಣ್‌ ಮೂರೂವರೆ ವರ್ಷದ ಪುತ್ರ ಹವೀಶ್‌ ಮಾತ್ರ ಕಾಂಪೌಂಡ್ ಮೇಲೆ ಕೂತು ಸುಮ್ಮನೆ ಅತ್ತಿಂದಿತ್ತ ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಮತ್ತಿಕೆರೆಯ ಸುಂದರ ನಗರದ 4ನೇ ಅಡ್ಡರಸ್ತೆಯಲ್ಲಿರುವ ಭರತ್‌ಭೂಷಣ್‌ ಮನೆಯಲ್ಲಿ ಶೋಕ ಮಡುಗಟ್ಟಿತ್ತು. ಮನೆಯೆದುರು ಬೆಳಗ್ಗೆಯಿಂದ ಮಧ್ಯಾಹ್ನ 3ಗಂಟೆವರೆಗೆ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರ ಇಡಲಾಗಿತ್ತು. ಸಂಬಂಧಿಕರು, ಕುಟುಂಬಸ್ಥರು, ಸುತ್ತಮುತ್ತಲ ನಿವಾಸಿಗಳು, ಸಾಕಷ್ಟು ಸಂಖ್ಯೆಯಲ್ಲಿ ತಂಡೋಪತಂಡವಾಗಿ ಆಗಮಿಸಿ ಅಂತಿಮ ದರ್ಶನ ಪಡೆದು, ದುರಂತಕ್ಕಾಗಿ ಮರುಗಿದರು. ಬೆಳಗ್ಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸ್ಥಳೀಯ ಶಾಸಕ ಮುನಿರತ್ನ, ಮಾಜಿ ಸಚಿವ ಅಶ್ವತ್ಥ ನಾರಾಯಣ, ಸಿ.ಟಿ.ರವಿ, ನಿಖಿಲ್‌ ಕುಮಾರಸ್ವಾಮಿ ಮತ್ತಿತರ ಗಣ್ಯರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅಂತಿಮ ನಮನ ಸಲ್ಲಿಸಿದರು.

ಉದ್ಯಾನಕ್ಕೆ ಭರತ್‌ ಭೂಷಣ್‌ ಹೆಸರು: ಇವರ ಮನೆ ಸಮೀಪವೇ ಇರುವ ಉದ್ಯಾನವನಕ್ಕೆ ಇದೀಗ ಭರತ್‌ ಭೂಷಣ್ ಹೆಸರಿಡಲಾಗಿದೆ. ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗನ ನೆನಪು ಶಾಶ್ವತವಾಗಿಸಲು ಈ ನಾಮಕರಣ ಮಾಡಲಾಯಿತು.

ಭಟ್ಕಳದಲ್ಲಿ ಇದ್ದಾರೆ 14 ಪಾಕಿಸ್ತಾನಿಗಳು, ಆದರೆ ದೇಶ ತೊರೆಯಬೇಕಾಗಿಲ್ಲ

ಕಾಲಿಗೆ ಸಣ್ಣ ಗಾಯ ಆಗಿದೆ ಅಂದಿದ್ರು: ನಮಗೆ ಅಘಾತವಾಗಬಾರದು ಎಂದು ಉಗ್ರ ದಾಳಿಯಿಂದ ಸಾವು ಸಂಭವಿಸಿದ ವಿಷಯವೇ ತಿಳಿಸಿರಲಿಲ್ಲ. ಅವನಿಗೆ ಅಲ್ಲಿ ಕಾಲಿಗೆ ಏನೋ ಸಣ್ಣ ಗಾಯ ಆಗಿದೆಯಂತೆ, ಆರ್ಮಿ ಆಸ್ಪತ್ರೆಯಲ್ಲಿದ್ದಾನೆ. ನಾವು ಹೋಗಿ ಕರೆದುಕೊಂಡು ಬರ್ತೀವಿ ಎಂದು ದೊಡ್ಡ ಮಗ, ಸುಜಾತಾ ಅಣ್ಣ ತೆರಳಿದ್ದರು. ನಿವೃತ್ತ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ (ಡಿಡಿಪಿಐ) ಚನ್ನವೀರಪ್ಪ ಪುತ್ರನ ಸಾವಿನ ಬಗ್ಗೆ ಹೇಳುತ್ತ ಕಣ್ಣೀರು ಹಾಕಿದ್ದು ಹೀಗೆ. 21ನೇ ತಾರೀಖು ರಾತ್ರಿ ಪೋನ್ ಮಾಡಿ ಮಾತನಾಡಿದ್ದೆ. ಊಟ ಆಯ್ತು, 23ರಂದು ವಾಪಸ್‌ ಬರ್ತೀವಿ ಅಂತ ಹೇಳಿದ್ರು. ಈಗ ನೋಡಿದ್ರೆ ಈ ರೀತಿ ವಾಪಸಾಗಿದ್ದಾನೆ ಎಂದು ಭಾವುಕರಾದರು. ಸರ್ಕಾರ ನಂಬಿ ಪ್ರವಾಸಿಗರು ಕಾಶ್ಮೀರಕ್ಕೆ ಹೋಗುತ್ತಾರೆ ಅಂದರೆ ಭದ್ರತೆ ನೀಡಬೇಕು‌. ಉಗ್ರರು ಮತ್ತೆ ತಲೆ ಎತ್ತದಂತೆ ಶಿಕ್ಷೆ ಕೊಡಿಸಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ