'ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಫೆಬ್ರವರಿ-ಮಾರ್ಚ್ ಹಣ ಯಾವಾಗ ಬರುತ್ತೆ? ಸದನಕ್ಕೆ ತಪ್ಪು ಮಾಹಿತಿ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು!

Kannadaprabha News, Ravi Janekal |   | Kannada Prabha
Published : Dec 20, 2025, 09:36 AM IST
Outrage against Minister Hebbalkar for asking Grihalakshmi to pay dues

ಸಾರಾಂಶ

ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಫೆಬ್ರವರಿ-ಮಾರ್ಚ್ ತಿಂಗಳ ಹಣ ಬಿಡುಗಡೆಯಾಗದ ಕಾರಣ ಬಿಜೆಪಿ ತೀವ್ರ ಆಕ್ರೋಶ.. ಹಣ ಬರುತ್ತದೆಂದು ನಂಬಿ ಸಾಲ ಮಾಡಿದ್ದ ಮಹಿಳೆಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನದಲ್ಲಿ ತಪ್ಪು ಮಾಹಿತಿ ನೀಡಿ ನಂತರ ಒಪ್ಪಿಕೊಂಡಿದ್ದಾರೆ..

ಬೆಳಗಾವಿ/ಬೆಂಗಳೂರು (ಡಿ.20) : ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ- ಮಾರ್ಚ್ ತಿಂಗಳ ಬಾಕಿಯನ್ನು ಬಿಡುಗಡೆ ಮಾಡುವಂತೆ ಬಿಜೆಪಿ ಹಾಗೂ ಮಹಿಳೆಯರು ಆಗ್ರಹಿಸಿದ್ದಾರೆ

ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗೃಹಲಕ್ಷ್ಮೀ ಅನ್ನೋದು ಚುನಾವಣಾ ಲಕ್ಷ್ಮೀ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್‌ ಸಚಿವರಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಕನಿಷ್ಠ ಮಾಹಿತಿ ಕೂಡ ಅವರಿಗಿಲ್ಲ ಎಂದು ಕುಟುಕಿದ್ದಾರೆ. ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಮಾತನಾಡಿ, ಗೃಹಲಕ್ಷ್ಮೀ ‌ಹಣವನ್ನು ಈ ಸರ್ಕಾರ ಫಟಾಫಟ್‌ ಅಂತ ಲೂಟಿ ಹೊಡೆದಿದೆ. ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮಹಿಳೆಯರ ಐದು ಸಾವಿರ ಕೋಟಿ ಹಣ ಯಾಮಾರಿಸಿದ್ದಾರೆ. ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೇ ಸುಳ್ಳು ಹೇಳಿ, ಸಿಕ್ಕಿಹಾಕಿಕೊಂಡಿದ್ದಾರೆ ಎಂದು ದೂರಿದ್ದಾರೆ. ಈ ಹಣ ಯಾರ ಖಾತೆಗೆ? ಯಾವ ಚುನಾವಣೆಗೆ ಹೋಗಿದೆ? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ. ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.

ವನಿತೆಯರ ಆಕ್ರೋಶ:

ಇದೇ ವೇಳೆ, ತಮ್ಮ ಖಾತೆಗೆ ಗೃಹಲಕ್ಷ್ಮೀ ಹಣ ಹಾಕದ ಸರ್ಕಾರದ ನಿರ್ಧಾರಕ್ಕೆ ಮಹಿಳೆಯರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಣ ನಂಬಿ ಸಾಲ ಮಾಡಿದ್ದೇವೆ. ನಮಗೆ ಆಸೆ ತೋರಿಸಿ ಈಗ ಮೋಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಾಕಿ ಕೊಡಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯಡಿ ಎರಡ್ಮೂರು ತಿಂಗಳ ಮಾಸಿಕ ಕಂತು ನನ್ನ ಖಾತೆಗೆ ಜಮಾ ಆಗಿಲ್ಲ. ಕೂಡಲೇ ಬಾಕಿ ಉಳಿದಿರುವ ಕಂತನ್ನು ಸರ್ಕಾರ ಪಾವತಿಸಲು ಕ್ರಮ ಕೈಗೊಳ್ಳಬೇಕು.

- ವೀಣಾ ಎಸ್‌.ಎಂ., ಮಹಾಲಕ್ಷ್ಮಿ ನಗರ, ಬೆಳಗಾವಿ.--

ಆರಂಭದಲ್ಲಿ ಸರಿ ಆಗಿ ಬರುತ್ತಿತ್ತು

ಆರಂಭದಲ್ಲಿ ಪ್ರತಿ ತಿಂಗಳು ಮನೆಯ ಯಜಮಾನಿ ಖಾತೆಗೆ ಸರಿಯಾಗಿ ಹಣ ಹಾಕುತ್ತಿದ್ದರು. ಇತ್ತೀಚೆಗೆ ಎರಡ್ಮೂರು ತಿಂಗಳಿಗೊಮ್ಮೆ ಹಣ ಬರುತ್ತಿದೆ. ಈಗ ಕಳೆದ ಜನವರಿಯಿಂದ ಇಲ್ಲಿವರೆಗೆ‌ ಒಂದು ವರ್ಷವೇ ಮುಗಿಯುತ್ತ ಬಂದಿದೆ. ಆದರೆ, ಗೃಹಲಕ್ಷ್ಮೀ ಯೋಜನೆಯಲ್ಲಿ ಕೇವಲ ಎಂಟು ಕಂತಿನ ಹಣ ಮಾತ್ರವೇ ಹಾಕಿದ್ದಾರೆ. ಇನ್ನೂ ಮೂರ್ನಾಲ್ಕು ತಿಂಗಳ ಹಣ ಆದಷ್ಟು ಬೇಗ ಹಾಕಿದರೆ ಬಡವರಿಗೆ ಅನುಕೂಲವಾಗಲಿದೆ.

- ಜ್ಯೋತಿ ಎಂ, ಗೃಹಿಣಿ, ವಿಜಯಪುರ.

2,000 ರು. ಹಣ ಕಳೆದ ಎರಡು-ಮೂರು ತಿಂಗಳಿಂದ ಮಹಿಳೆಯರ ಖಾತೆಗೆ ಬಂದಿಲ್ಲ. ಅಲ್ಲದೆ, 2025ರ ಫೆಬ್ರವರಿ-ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಹಣವೇ ಇನ್ನೂ ಸಂದಾಯವಾಗಿಲ್ಲ’ ಎಂಬ ಸಂಗತಿ ರಾಜ್ಯದ ವನಿತೆಯರ, ಪ್ರತಿಪಕ್ಷ ಬಿಜೆಪಿಯರ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಗೃಹಲಕ್ಷ್ಮೀ ಹಣ ಬಿಡುಗಡೆ ವಿಳಂಬದ ಬಗ್ಗೆ ಸದನದಲ್ಲಿ ಮಾತನಾಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಆಗಸ್ಟ್‌ ತಿಂಗಳವರೆಗೆ ಹಣವನ್ನು ಪೂರ್ತಿಯಾಗಿ ಬಿಡುಗಡೆ ಮಾಡಿದ್ದೇವೆ ಎಂದಿದ್ದರು. ಆದರೆ, ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣವೇ ಇನ್ನೂ ಬಿಡುಗಡೆ ಆಗಿಲ್ಲ ಎಂದು ಪ್ರತಿಪಾದಿಸಿದ್ದ ಬಿಜೆಪಿ ನಾಯಕರು, ಈ ಕುರಿತ ದಾಖಲೆಯನ್ನೂ ಬಿಡುಗಡೆ ಮಾಡಿದ್ದರು. ಅಂತಿಮವಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ‘ಹೌದು..ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣ ರಿಲೀಸ್‌ ಆಗಿಲ್ಲ’ ಎಂದು ಸದನದಲ್ಲಿ ತಿಳಿಸಿದ್ದಾರೆ.

ಹಣ ಬರುತ್ತೆಂದು ಸಾಲ ಮಾಡಿದ್ದೇವೆ

ಫೆಬ್ರವರಿ-ಮಾರ್ಚ್‌ ಗೃಹಲಕ್ಷ್ಮೀ ಹಣವನ್ನು ಸರ್ಕಾರ ಜಮಾ ಮಾಡಿಲ್ಲ. ಈ ಹಣ ಬರುವ ನಂಬಿಕೆಯಿಂದ ಕುಟುಂಬ ನಿರ್ವಹಣೆ, ಮನೆಯ ಬಾಡಿಗೆ, ಮಕ್ಕಳ ಶಿಕ್ಷಣ ಮತ್ತಿತರ ಖರ್ಚು ವೆಚ್ಚಕ್ಕಾಗಿ ಖಾಸಗಿಯವರ ಬಳಿ ಸಾಲ ಮಾಡಿದ್ದೇವೆ. - ಚಾಂದನಿ ಸೈಫುದ್ಧಿನ್ ನದಾಫ್‌, ಬಾಗಲಕೋಟೆ

ಆಸೆ ತೋರಿಸಿಮೋಸ ಮಾಡ್ತಿದ್ದಾರೆ

ಮಕ್ಕಳಿಗೆ ಚಾಕೊಲೇಟ್‌ ಆಸೆ ತೋರಿಸುವ ರೀತಿ ಸರ್ಕಾರ ಮೋಸ ಮಾಡುತ್ತಿದೆ. ಗೃಹಲಕ್ಷ್ಮೀ ಹಣವನ್ನು ಯಾರು ಕೇಳಿದ್ದರು. ಆಸೆ ತೋರಿಸಿ ಈಗ ಮೋಸ ಮಾಡುತ್ತಿದ್ದಾರೆ.

- ವನಿತಾ ಭಟ್‌, ಮಂಜಗುಣಿ, ಶಿರಸಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಅಧಿವೇಶನ ಕೊನೆ ದಿನವೂ ಗದ್ದಲ: ವಿಪಕ್ಷ, ಸಂಘಟನೆಗಳಿಂದ ಪ್ರತಿಭಟನೆ!
ಸಿಎಂ ಕುರ್ಚಿ ಕನಸು ನನಸಾಗುತ್ತಾ? ಅಂಕೋಲಾ ದೇವಿಯ ಸನ್ನಿಧಿಯಲ್ಲಿ ಡಿಕೆಶಿಗೆ ಸಿಕ್ಕ ಆ 'ಶುಭ ಸೂಚನೆ' ಏನು?