ಸಿಎಂ ಕುರ್ಚಿ ಕನಸು ನನಸಾಗುತ್ತಾ? ಅಂಕೋಲಾ ದೇವಿಯ ಸನ್ನಿಧಿಯಲ್ಲಿ ಡಿಕೆಶಿಗೆ ಸಿಕ್ಕ ಆ 'ಶುಭ ಸೂಚನೆ' ಏನು?

Kannadaprabha News   | Kannada Prabha
Published : Dec 20, 2025, 07:34 AM IST
DK Shivakumar Gets Auspicious Signs from Goddess Jagadeshwari

ಸಾರಾಂಶ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಂಕೋಲಾದ ಆಂದ್ಲೆ ಜಗದೀಶ್ವರಿ ದೇವಸ್ಥಾನದಲ್ಲಿ ಇಷ್ಟಾರ್ಥಸಿದ್ಧಿ ಪೂಜೆ ಸಲ್ಲಿಸಿದರು. ತಾಯಿ ತನಗೆ ಶುಭ ಸೂಚನೆ ನೀಡಿದ್ದಾಳೆ ಎಂದ ಡಿಕೆಶಿ, ಮುಖ್ಯಮಂತ್ರಿ ಹುದ್ದೆಯ ಕುರಿತ ಪ್ರಶ್ನೆಗೆ ಇದು ತನ್ನ ಮತ್ತು ದೇವಿಯ ನಡುವಿನ ವಿಚಾರವೆಂದು ಗೂಢಾರ್ಥವಾಗಿ ನುಡಿದರು.

ಕಾಕರಮಠ (ಡಿ.20): ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಶುಕ್ರವಾರ ತಾಲೂಕಿನ ಆಂದ್ಲೆಯ ಶ್ರೀ ಜಗದೇಶ್ವರಿ ದೇವಸ್ಥಾನಕ್ಕೆ ತೆರಳಿ ಸಂಕಷ್ಟಹರಣ ಹಾಗೂ ಇಷ್ಟಾರ್ಥಸಿದ್ಧಿ ಕಾಳರಾತ್ರಿ ಎಳ್ಳು ಅಮಾವಾಸ್ಯೆ ಮಾಲೆ ಪೂಜೆಯಲ್ಲಿ ಪಾಲ್ಗೊಂಡು ಧನ್ಯತೆ ಮರೆದರು.

ಶುಕ್ರವಾರ ಬೆಳಗ್ಗೆ 8.30ಕ್ಕೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುವ ಬಗ್ಗೆ ಅಧಿಕೃತ ಸಂದೇಶ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ವರದಿ ರವಾನೆಯಾಗಿತ್ತು. ಆದರೆ ಶಿವಕುಮಾರ ಅವರು ಬಂದಿದ್ದು ಮಾತ್ರ ಮಧ್ಯಾಹ್ನ 1 ಗಂಟೆಗೆ. ಸುಮಾರು ಒಂದೂವರೆ ಗಂಟೆಗಳ ಕಾಲ ಶಿವಕುಮಾರ ಅವರು ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.

ದೇವಸ್ಥಾನದ ಒಳಕ್ಕೆ ಉಪ ಮುಖ್ಯಮಂತ್ರಿ ಅವರಿಗೆ ಮಾತ್ರ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ ಸೈಲ ಸೇರಿದಂತೆ ಅನೇಕ ಮುಖಂಡರು ದೇವಸ್ಥಾನದ ಹೊರಭಾಗದಲ್ಲಿಯೆ ನಿಂತಿದ್ದರು. ದೇವಸ್ಥಾನದ ಬಾಗಿಲು ಮುಚ್ಚಿ ಪೂಜಾ ಕಾರ್ಯಗಳು ನಡೆದವು.

ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಉಪಸ್ಥಿತರಿದ್ದರು.

ಶುಭ ಸೂಚನೆ ನೀಡಿದ್ದಾಳೆ: ಡಿಕೆಶಿ

ಪೂಜಾ ಕಾರ್ಯದ ಆನಂತರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, 5 ವರ್ಷಗಳ ಹಿಂದೆ ಈ ಸ್ಥಳಕ್ಕೆ ಬಂದು ಕುಟುಂಬದ ಕೆಲಸಕ್ಕೆ ಪ್ರಾರ್ಥನೆ ಮಾಡಿದ್ದೆ, ಅದು ಈಡೇರಿತ್ತು. ಮತ್ತೆ ಇಲ್ಲಿಗೆ ಬರುತ್ತೇನೆ ಎಂದಿದ್ದೆ, ಬಂದಿದ್ದೇನೆ. ತಾಯಿ ಜಗದೀಶ್ವರಿ ಆಶೀರ್ವಾದ ಮಾಡು ಎಂದು ಕೇಳಿಕೊಂಡಿದ್ದೇನೆ. ತಾಯಿ ನನ್ನೊಂದಿಗೆ ಮಾತನಾಡಿದ್ದಾಳೆ, ಶುಭ ಸೂಚನೆ ಕೂಡ ನೀಡಿದ್ದಾಳೆ ಎಂದರು.

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಖುರ್ಚಿಗೆ ಎರಡೂವರೆ ವರ್ಷ ಅಂತ ಯಾವುದೇ ಒಪ್ಪಂದ ಆಗಿಲ್ಲ. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಹಾಗೆ ಹೈಕಮಾಂಡ್‌ ಕೂಡ ನನ್ನ ಪರವಾಗಿದೆ ಎಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ, ನಾನು ಯಾವತ್ತೂ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರಲ್ಲ ಎಂದು ಹೇಳಿಲ್ಲ. ಹಾಗೆ ಹೈಕಮಾಂಡ್ ಕೂಡ ಅವರ ಪರವಾಗಿಲ್ಲ ಅಂತಾ ಹೇಳಿಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿ ಇದ್ದದ್ದಕ್ಕೆ ಅವರು ಸಿಎಂ ಆಗಿದ್ದಾರೆ. ನಮ್ಮಲ್ಲಿ ಒಪ್ಪಂದ ಆಗಿದೆ, ಅದರಂತೆ ನಡೆದುಕೊಳ್ಳುತ್ತೇನೆ. ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್‌ ಕೂಡ ಒಂದು ಒಪ್ಪಂದಕ್ಕೆ ಬಂದಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಹುದ್ದೆಗಾಗಿ ದೇವರಲ್ಲಿ ಏನಾದರೂ ಪ್ರಾರ್ಥನೆ ಮಾಡಿಕೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ ಅವರು, ಇದು ನನ್ನ ಹಾಗೂ ತಾಯಿಯ ನಡುವಿನ ವಿಚಾರ. ಆದರೆ ನನಗೆ ತಾಯಿ ನನ್ನ ಜತೆಗಿರುತ್ತಾಳೆ ಎಂಬ ನಂಬಿಕೆ ಇದೆ ಎಂದರು.

ಇನ್ನು 2019ರಲ್ಲಿ ನೀವು ತೊಂದರೆಯಲ್ಲಿದ್ದಾಗ ಇಂತಹದೆ ಸಂದರ್ಭದಲ್ಲಿ ನಿಮಗೆ ಒಳ್ಳೆಯದಾಗುತ್ತದೆ ಎಂದು ತಾಯಿ ಜಗದೀಶ್ವರಿ ದರ್ಶನದಲ್ಲಿ ದಿನಾಂಕ ನೀಡಿದ್ದರು. ಹಾಗೆ ನಿಮ್ಮ ಇಷ್ಟಾರ್ಥಕ್ಕಾಗಿ ಪೂಜೆ ಸಲ್ಲಿಸಿದ ವೇಳೆ ನಿಮಗೇನಾದರೂ ಒಳ್ಳೆಯ ಸಮಯಕ್ಕೆ ದೇವಿ ದಿನಾಂಕ ನಿಗದಿ ಮಾಡಿದ್ದಾಳೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಮುಗುಳು ನಗುತ್ತಲೇ, ಯಾವುದೇ ಉತ್ತರ ನೀಡದೆ ನಿರ್ಗಮಿಸಿದರು.

ಪ್ರಸಾದ ನೀಡಿದ್ದಾಳೆ: ಡಿ.ಕೆ. ಶಿವಕುಮಾರ್ ಅವರಿಗೆ ದೇವಿ ಜಗದೀಶ್ವರಿ ಪ್ರಸಾದ ನೀಡಿದ್ದಾಳೆ. ಶಿವಕುಮಾರ ಅವರ ಇಷ್ಟಾರ್ಥ ಈಡೇರುತ್ತದೆ ಎಂದು ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನದ ಅರ್ಚಕ ಗಣೇಶ ನಾಯ್ಕ ಹೇಳಿದ್ದಾರೆ.

ಸಾಮಾನ್ಯವಾಗಿ ಅಮಾವಾಸ್ಯೆ ದಿನ ತಾಯಿ ಮಾತನಾಡುವುದಿಲ್ಲ. ಆದರೆ ಅವರು ತಾಯಿಯೊಂದಿಗೆ ದರ್ಶನ ಪಡೆದು ಮಾತನಾಡಿಕೊಂಡು ತೆರಳಿದ್ದಾರೆ. ಅವರಿಗೆ ಯಾರೇ ಶತ್ರುಗಳಿದ್ದರೂ, ಅಡೆ ತಡೆಗಳಿದ್ದರೂ ಈ ಸ್ಥಳಕ್ಕೆ ಬಂದು ಪ್ರಾರ್ಥಿಸಿಕೊಂಡೆ ಅದು ಮುಕ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಆ ಪ್ರಕಾರವಾಗಿ ದೇವಿಯೊಂದಿಗೆ ಅವರು ಮಾತನಾಡಿದ್ದಾರೆ. ಅದಕ್ಕೆ ತಾಯಿಯ ಪ್ರಸಾದ ಕೂಡ ಆಗಿದೆ ಎಂದು ಹೇಳಿದರು.

ಮತ್ತೆ ಒಂದು ತಿಂಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿ ಇಷ್ಟಾರ್ಥ ಈಡೇರಿದ ಆನಂತರ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಆಗ ಯಾವುದೇ ದರ್ಶನ ಇರುವುದಿಲ್ಲ. ವಿವಿಧ ವಿಶೇಷ ಪೂಜೆ ಇರುತ್ತದೆ ಎಂದು ಹೇಳಿದರು.

ತೀರ್ಮಾನಕ್ಕೆ ಹೈಕಮಾಂಡ್‌ ಇದೆ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವವರು, ಮುಂದೆ ಆಗಿಯೇ ಆಗುತ್ತಾರೆ, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಲ್ಲ ಎಂದರೆ ಹೇಳಲು ನಾವು ಯಾರು? ಅವರು ಹೌದು ಎಂದರೆ ಹೌದು ಎನ್ನಲು ನಾವ್ಯಾರು? ಅದರ ತಿರ್ಮಾನಕ್ಕೆ ನಮಗೆ ಹೈಕಮಾಂಡ್ ಇದೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.

ಸತೀಶ್ ಜಾರಕಿಹೊಳಿ ಊರಲ್ಲಿ ಅಧಿವೇಶನ ನಡೆಯುತ್ತಿದೆ. ಇದರಲ್ಲಿ ಹೀಗಾಗಿ ಎಲ್ಲ ಒಟ್ಟಿಗೆ ಊಟ ಮಾಡೋಣ ಎಂದು ಮಾಡಿದ್ದಾರೆ, ಯಾವುದೇ ಡಿನ್ನರ್ ಪಾಲಿಟಿಕ್ಸ್ ಇಲ್ಲ. ನಾವು ರೆಸಾರ್ಟ್‌, ಡಿನ್ನರ್ ಪಾರ್ಟಿ ರಾಜಕಾರಣ ಮಾಡುವವರಲ್ಲ. ಊಟಕ್ಕೆ ಕರೆದರೆ ರಾಜಕೀಯಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ 20 ಲಕ್ಷ ಅಕ್ರಮ ವಲಸಿಗರು? ಪೊಲೀಸರ ಲೆಕ್ಕದಲ್ಲಿ ಕೇವಲ 485 ಮಂದಿ!
Karnataka News Live: ಸಿಎಂ ಕುರ್ಚಿ ಕನಸು ನನಸಾಗುತ್ತಾ? ಅಂಕೋಲಾ ದೇವಿಯ ಸನ್ನಿಧಿಯಲ್ಲಿ ಡಿಕೆಶಿಗೆ ಸಿಕ್ಕ ಆ 'ಶುಭ ಸೂಚನೆ' ಏನು?