ಜನರ ಬೇಜವಾಬ್ದಾರಿ, ಪೌರಕಾರ್ಮಿಕರಿಗೆ ಸೋಂಕಿನ ಭೀತಿ!

By Kannadaprabha NewsFirst Published May 4, 2020, 7:38 AM IST
Highlights

ಕಸದ ಜೊತೆ ಮಾಸ್ಕ್‌ಗಳ ಮಿಶ್ರಣ| ಪೌರಕಾರ್ಮಿಕರಿಗೆ ಸೋಂಕಿನ ಭೀತಿ| ಅವೈಜ್ಞಾನಿಕ ಕ್ರಮದಿಂದ ಪೌರಕಾರ್ಮಿಕರಲ್ಲಿ ದುಗುಡ

ಬೆಂಗಳೂರು(ಮೇ.04): ಕೊರೋನಾ ಸೋಂಕು ಭೀತಿಯಿಂದ ನಗರದಲ್ಲಿ ಲಕ್ಷಾಂ​ತರ ಮಂದಿ ಮಾಸ್ಕ್‌ ಬಳಸುತ್ತಿದ್ದು, ಸಾರ್ವಜನಿಕರು ಬಳಕೆ ಮಾಡಿದ ಮಾಸ್ಕ್‌ಗಳನ್ನು ರಸ್ತೆಯಲ್ಲಿ ಎಸೆಯುವ, ತ್ಯಾಜ್ಯದಲ್ಲಿ ಮಿಶ್ರಣ ಮಾಡುತ್ತಿರುವ ಪರಿಣಾಮ ಬಿಬಿಎಂಪಿ ಪೌರ ಕಾರ್ಮಿಕರಿಗೆ ಇದೀಗ ಕೊರೋನಾ ಸೋಂಕು ತಗುಲುವ ಆತಂಕ ಎದುರಾಗಿದೆ.

ಬಿಬಿಎಂಪಿಯ 39 ವಾರ್ಡ್‌ಗಳಲ್ಲಿ ಈವರೆಗೆ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಅದ​ರಲ್ಲಿ ಈಗಾಗಲೇ 16 ವಾರ್ಡ್‌ಗಳಲ್ಲಿ ಕಳೆದ 28 ದಿನ​ಗಳಿಂದ ಹೊಸದಾಗಿ ಸೋಂಕು ಪ್ರಕರಣ ಪತ್ತೆಯಾ​ಗಿಲ್ಲ. ಇನ್ನು 23 ವಾರ್ಡ್‌ಗಳನ್ನು ಕಂಟೈನ್ಮೆಂಟ್‌ ಮಾಡಿ​ಲಾಗಿದೆ. ಈ ಎಲ್ಲ ವಾರ್ಡ್‌ಗಳು ಸೇರಿದಂತೆ 198 ವಾರ್ಡ್‌ಗಳಲ್ಲಿ ಇರುವ ಸಾರ್ವಜನಿಕರು ಕೊರೋನಾ ಸೋಂಕಿನಿಂತ ಬಚಾವ್‌ ಆಗುವುದಕ್ಕೆ ಮಾಸ್ಕ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

ದಾವಣಗೆರೆಯಲ್ಲಿ 21 ಕೇಸ್‌ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಸೋಂಕು!

ಆದರೆ, ಬಳಕೆ ಮಾಡಿದ ಮಾಸ್ಕ್‌ಗಳನ್ನು ಸಾರ್ವಜನಿಕರು ರಸ್ತೆಯಲ್ಲಿ ಎಸೆಯುವುದು, ಹಸಿ ಮತ್ತು ಒಣ ಕಸದಲ್ಲಿ ಮಿಶ್ರಣ ಮಾಡಿ ಪೌರಕಾರ್ಮಿಕರಿಗೆ ನೀಡುತ್ತಿದ್ದಾರೆ. ಪೌರಕಾರ್ಮಿಕರು ಈ ಮಾಸ್ಕ್‌ಗಳನ್ನು ತ್ಯಾಜ್ಯದಿಂದ ಪ್ರತ್ಯೇಕ ಮಾಡಬೇಕಾಗಿದೆ. ಹೀಗಾಗಿ ಪೌರಕಾರ್ಮಿಕರಿಗೂ ಕೊರೋನಾ ಸೋಂಕು ಹರಡುವ ಭೀತಿ ಇದೀಗ ಎದುರಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌, ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತುಕೊಂಡು ಕಸ ನೀಡಬೇಕು. ಇಂತಹ ಕಠಿಣ ಸಂದರ್ಭದಲ್ಲೂ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರ ಆರೋಗ್ಯ ಕಾಳಜಿಯ ಬಗ್ಗೆ ಬಿಬಿಎಂಪಿಯೊಂದಿಗೆ ಸಾರ್ವಜನಿಕರು ಚಿಂತಿಸಬೇಕು ಎಂದಿದ್ದಾರೆ.

ಕಂಟೈನ್ಮೆಂಟ್‌ ಪ್ರದೇಶದಲ್ಲಿ ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಸಂಪೂರ್ಣ ರಕ್ಷಣಾ ಕವಚ ನೀಡುವ ಕೆಲಸವನ್ನು ಪ್ರಾರಂಭಿಸಿದ್ದೇವೆ. ಪ್ರತ್ಯೇಕವಾಗಿ ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗದೆ ಇರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ.

-ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ).

click me!