ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಬಳಿಕ ಕುಮಾರ ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. ಯತ್ನಾಳ್ ಉಚ್ಚಾಟನೆಯಿಂದ ಪಕ್ಷಕ್ಕೆ ಆಗುವ ಪರಿಣಾಮಗಳ ಬಗ್ಗೆ ಅವರು ಮಾತನಾಡಿದ್ದಾರೆ.
ವಿಜಯ್ ಮಲಗಿಹಾಳ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಪಟ್ಟು ಹಿಡಿದಿದ್ದ ಭಿನ್ನಮತೀಯರ ಬಣಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಬಣದ ನಾಯಕರೂ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೈಕಮಾಂಡ್ ಪಕ್ಷದಿಂದಲೇ ಉಚ್ಚಾಟನೆ ಮಾಡಿದೆ. ಆದರೂ ಯತ್ನಾಳ್ ಅವರ ಮಾತಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬೆಂಕಿ ಉಗುಳುತ್ತಲೇ ಇದ್ದಾರೆ. ಆದರೆ, ಯತ್ನಾಳ್ ಅವರೊಂದಿಗೆ ಗುರುತಿಸಿಕೊಂಡ ಹಲವು ಮುಖಂಡರು ಒಂದು ರೀತಿಯಲ್ಲಿ ಅತಂತ್ರವಾದಂತೆ ಕಾಣುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯತ್ನಾಳ್ ಟೀಂನ ಹಿರಿಯ ಮುಖಂಡರೂ ಆಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾದದ್ದು ಹೀಗೆ.
ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ನಿಮ್ಮ ತಂಡದ ಮುಖಂಡರು ಮೌನಕ್ಕೆ ಶರಣಾಗಿದ್ದಾರಲ್ವ?
ಈ ವಿಚಾರದಲ್ಲಿ ನಾವು ಯಾರೂ ಮೌನಕ್ಕೆ ಶರಣಾಗಿಲ್ಲ. ಉಚ್ಚಾಟನೆ ಬೆನ್ನಲ್ಲೇ ಸಭೆ ಮಾಡಿ ಚರ್ಚಿಸಿದ್ದೇವೆ. ಎಲ್ಲರೂ ಮಾತನಾಡಿದ್ದೇವೆ. ಈ ವಿಚಾರವಾಗಿಯೇ ನಾವು ಕೇಂದ್ರ ಮತ್ತು ರಾಜ್ಯದ ಕೆಲ ನಾಯಕರ ಜತೆಗೆ ಸಂಪರ್ಕದಲ್ಲಿದ್ದೇವೆ. ಸಂಘಟನೆ ಸರಿ ಮಾಡಬೇಕು ಎಂಬುದು ನಮ್ಮ ಹೋರಾಟ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.
ಇದನ್ನೂ ಓದಿ: ಶಾಸಕ ಯತ್ನಾಳ್ ಆರೋಪಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ: ಬಿ.ವೈ.ವಿಜಯೇಂದ್ರ
ಯತ್ನಾಳ್ ಉಚ್ಚಾಟನೆಯಿಂದ ನಿಮ್ಮ ಬಣಕ್ಕೆ ಬಿಗ್ ಶಾಕ್ ಆಗಿರಬೇಕಲ್ವಾ?
ಹಾಗೇನಿಲ್ಲ. ಇದು ನಿರೀಕ್ಷಿತ. ಮೊದಲ ಮತ್ತು ಎರಡನೆಯ ನೋಟಿಸ್ ಬಂದಾಗ ಈ ಕುರಿತು ಅನುಮಾನ ಮೂಡಿತ್ತು. ಉಚ್ಚಾಟನೆ ಎನ್ನುವುದು ರಾಜಕಾರಣದಲ್ಲಿ ಸಾಮಾನ್ಯ. ಆದರೆ, ತಂಡದಲ್ಲಿ ಒಬ್ಬರು ಅಲುಗಾಡಿದರೂ ಅದರ ಪರಿಣಾಮ ಇಡೀ ತಂಡಕ್ಕೆ ಉಂಟಾಗುತ್ತದೆ. ಹೀಗಾಗಿ, ಉಚ್ಚಾಟನೆ ನಿರ್ಧಾರದಿಂದ ನಮಗೆಲ್ಲ ಬೇಸರವಾಯಿತು. ನಮ್ಮ ಪ್ರಕಾರ ಉಚ್ಚಾಟನೆ ತಪ್ಪು. ಹಾಗಂತ ನಾವು ವರಿಷ್ಠರ ನಿರ್ಧಾರ ಪ್ರಶ್ನಿಸುವುದಿಲ್ಲ. ಆದರೆ, ವರಿಷ್ಠರು ಒಂದು ಬಾರಿ ಯತ್ನಾಳ್ ಅವರನ್ನು ಖುದ್ದು ಕರೆಸಿ ಮಾತನಾಡಬೇಕಿತ್ತು.
ಯತ್ನಾಳ್ ಅವರ ಹಿಡಿತವಿಲ್ಲದ ಮಾತುಗಳೇ ನಿಮ್ಮ ಬಣಕ್ಕೆ ಮುಳುವಾಯಿತೇ?
ಯತ್ನಾಳ್ ಅವರ ವಾದ ತಪ್ಪಿಲ್ಲ. ಅವರು ಹೇಳುವ ವಿಚಾರ ಇವತ್ತು ರಾಜಕಾರಣದಲ್ಲಿ ನಡೆಯುತ್ತಿರುವಂಥದ್ದೇ. ಅವರೊಬ್ಬ ಪ್ರಾಮಾಣಿಕ, ಶುದ್ಧ ಹಾಗೂ ನಿಷ್ಕಳಂಕ ನಾಯಕ. ಅವರ ಉತ್ತರ ಕರ್ನಾಟಕದ ಭಾಷೆ ತುಸು ಕಟುವಾಗಿ ಕೇಳುತ್ತದೆ. ಅವರು ಪಕ್ಷದಲ್ಲಿನ ಲೋಪದೋಷಗಳ ಬಗ್ಗೆ ಹೇಳಿಕೆ ನೀಡುತ್ತಲೇ ವೈಯಕ್ತಿಕ ಮಟ್ಟದ ಟೀಕೆಗೆ ಹೋಗುತ್ತಾರೆ. ಅವರು ವಿಚಾರಧಾರೆಯಿಂದ ಬೇರೆಡೆ ಹೋಗುವುದಿಲ್ಲ. ಆದರೆ, ವಿಷಯ ಪ್ರಸ್ತುತಪಡಿಸುವಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ನಾವು ಬಿಡಿ, ಅನೇಕ ಸ್ವಾಮೀಜಿಗಳು, ನಾಯಕರು, ಹಿತೈಷಿಗಳೂ ಸ್ವಲ್ಪ ನೋಡಿ ಹೇಳಿಕೆ ಕೊಡಿ, ವೈಯಕ್ತಿಕ ಟೀಕೆ ಬೇಡ ಎಂದು ಸಲಹೆ ನೀಡಿದ್ದಾರೆ. ಆದರೆ, ಯತ್ನಾಳ್ ಅವರ ವ್ಯಕ್ತಿತ್ವವೇ ಅಂಥದ್ದು. ತಮಗೆ ಸರಿ ಅನಿಸಿದ್ದನ್ನೇ ಹೇಳುತ್ತಾರೆ.
ಪಕ್ಷದಿಂದ ಉಚ್ಚಾಟನೆ ಆದವರೊಂದಿಗೆ ನೀವು ಸಭೆ ಮಾಡುವುದು ಕೂಡ ಪಕ್ಷ ವಿರೋಧಿ ಚಟುವಟಿಕೆ ಆಗುವುದಿಲ್ಲವೇ?
ಹೌದು. ಇನ್ನು ಮುಂದೆ ಯತ್ನಾಳ್ ಅವರೊಂದಿಗೆ ನಾವು ಸಭೆ ಮಾಡುವಂತಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಆರೋಪ ಬರುತ್ತದೆ. ಮೊನ್ನೆ ಉಚ್ಚಾಟನೆ ಆಗಿ ಒಂದು ದಿನವಾಗಿದ್ದರಿಂದ ಅವರನ್ನೂ ಸಭೆಗೆ ಕರೆದಿದ್ದೆವು. ಒಂದು ಬಾರಿ ಅವರೊಂದಿಗೆ ಮುಖಾಮುಖಿ ಚರ್ಚೆ ಮಾಡಬೇಕಿತ್ತು. ‘ಇದೇ ರೀತಿಯಾದರೆ ಸಮಸ್ಯೆಯಾಗುತ್ತದೆ, ತಪ್ಪಾಗುತ್ತದೆ. ಆಗಿದ್ದನ್ನು ತಿದ್ದಿಕೊಂಡು ಹೋಗೋಣ. ಇನ್ನು ಮೇಲೆ ಹೀಗೆ ಹೇಳಿಕೆ ನೀಡುವುದು ಬೇಡ’ ಎಂಬ ಮಾತನ್ನು ನಾವೆಲ್ಲರೂ ಹೇಳಿದೆವು. ಆದರೆ, ಯಥಾಪ್ರಕಾರ ಅವರು ಮತ್ತೆ ತಮ್ಮದೇ ಧಾಟಿಯಲ್ಲಿ ಮಾತು ಮುಂದುವರೆಸಿದ್ದಾರೆ. ಅವರನ್ನು ತಡೆಯುವುದು ಕಷ್ಟ. ಮುಂದೆ ಅವರೊಂದಿಗೆ ಸಭೆ ಮಾಡುವುದಕ್ಕೆ ಆಗುವುದಿಲ್ಲ.
ಈಗ ಯತ್ನಾಳ್ ಅವರು ಬೇರೆ ಪಕ್ಷಕ್ಕೆ ವಲಸೆ ಹೋಗುತ್ತಾರೋ ಅಥವಾ ತಮ್ಮದೇ ಪಕ್ಷ ಸ್ಥಾಪನೆ ಮಾಡುತ್ತಾರೋ?
ಇಲ್ಲ, ಇಲ್ಲ ಯತ್ನಾಳ್ ಎಲ್ಲಿ ಹೋಗುತ್ತಾರೆ ಹೇಳಿ. ಮುಂಚೆ ಜೆಡಿಎಸ್‌ಗೆ ಹೋಗಿದ್ದರು. ಈಗ ಜೆಡಿಎಸ್ ನಮ್ಮೊಂದಿಗಿದೆ. ಕಾಂಗ್ರೆಸ್‌ಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಹೊಸ ಪಕ್ಷ ಕಟ್ಟುತ್ತಾರೆ ಎಂದು ಇಲ್ಲಿವರೆಗೆ ಅವರು ಹೇಳಿಲ್ಲ. ಅವರೊಂದಿಗೆ ಖುದ್ದು ಮಾತನಾಡಿ ಖಚಿತಪಡಿಸಿಕೊಂಡಿದ್ದೇನೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಅಂತೆ ಕಂತೆಗಳು ಬರುತ್ತಿವೆ ಅಷ್ಟೇ.
ಯತ್ನಾಳ್ ಉಚ್ಚಾಟನೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬದಲಾಯಿಸುವ ನಿಮ್ಮ ಬಣದ ಗುರಿ ಈಡೇರುವ ವಿಶ್ವಾಸ ಉಳಿದಿದೆಯೇ?
ಯತ್ನಾಳ್ ಅವರ ಉಚ್ಚಾಟನೆ ಅಥವಾ ವಿಜಯೇಂದ್ರ ಬಲಾವಣೆಗೆ ಸಂಬಂಧವಿಲ್ಲ. ವಿಜಯೇಂದ್ರ ಬದಲಾವಣೆ ಆಗಬೇಕು ಎನ್ನುವುದಕ್ಕಿಂತ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಆಗಬೇಕು. ಮುಂದೆ ನಮ್ಮದೇ ಪಕ್ಷ ಅಧಿಕಾರಕ್ಕೆ ತರಲು ಈ ಬದಲಾವಣೆ ಆಗಬೇಕು. ಇಲ್ಲಿ ಯಾರನ್ನೋ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ನಾವು ಹೋರಾಟ ಮಾಡುತ್ತಿಲ್ಲ. ಈಗಿನ ರಾಜ್ಯಾಧ್ಯಕ್ಷರು ಅಮೆಚೂರ್ ಇದ್ದಾರೆ. ಅವರಿಗೆ ಪಕ್ಷದ ಕಾರ್ಯಕರ್ತರ ಹಾಗೂ ಜನರ ವಿರೋಧವಿದೆ. ಅಧ್ಯಕ್ಷರ ಆಯ್ಕೆಯಲ್ಲಿ ತಪ್ಪಾಗಿದೆ. ಪಕ್ಷದಲ್ಲಿ ಹಿರಿತನಕ್ಕೆ ಆದ್ಯತೆ ನೀಡಬೇಕು. ಇಷ್ಟೆಲ್ಲ ಆದರೂ ಏಕೆ ಪಕ್ಷದ ಎಲ್ಲಾ ಸಂಸದರು ಅವರ ಪರ ನಿಲ್ಲಲಿಲ್ಲ? ಶಾಸಕರು ಏಕೆ ನಿಲ್ಲಲಿಲ್ಲ? ಇಲ್ಲಿ ಒಬ್ಬರ ಪರ ಅಥವಾ ವಿರೋಧದ ಪ್ರಶ್ನೆ ಬರುವುದಿಲ್ಲ. ಪಕ್ಷದ ಸಂಘಟನೆ ಸರಿಪಡಿಸಬೇಕು ಎಂಬುದು ನಮ್ಮ ಹೋರಾಟ. ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿನ ಬಿಜೆಪಿ ಸೋಲಿಗೆ ಪಕ್ಷ ಸಂಘಟನೆ ವೈಫಲ್ಯವೇ ಕಾರಣ.
ಯತ್ನಾಳ್ ಅವರ ಉಚ್ಚಾಟನೆ ಹಿಂಪಡೆಯಲು ಹೈಕಮಾಂಡ್‌ನ ಮನವೊಲಿಸುವಿರಾ?
ಬದಲಾವಣೆ ಮಾಡಲು ಮಾರ್ಗ ಇದೆ. ಇದಕ್ಕೆ ಸಂಘಟನೆ ಮುಖಾಂತರ ಹೋಗಬೇಕು. ನಾವು ವೈಯಕ್ತಿಕವಾಗಿ ರಾಷ್ಟ್ರ ನಾಯಕರನ್ನು ಭೇಟಿಯಾಗಿ ಚರ್ಚಿಸುವುದು ಬೇರೆ. ಯತ್ನಾಳ್ ಅವರು ತಮ್ಮದು ತಪ್ಪಾಗಿದೆ. ಕ್ಷಮಿಸಿ ಬಿಡಿ ಎನ್ನುವುದು ಬೇರೆ. ಅವರ ಲೆಟರ್‌ಗೆ ನಾವು ಸಹಿ ಮಾಡಲು ಆಗಲ್ಲ. ಮೌಖಿಕವಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಯತ್ನಾಳ್ ರಾಜ್ಯ ನಾಯಕ. ಅವರ ಹಿಂದೆ ಸಾಕಷ್ಟು ಹಿಂದೂ ಸಂಘಟನೆಗಳಿವೆ. ಉಚ್ಚಾಟನೆಗೆ ಹಿಂದೂ ಸಂಘಟನೆಗಳ ಮುಖಂಡರು, ಪಕ್ಷದ ಮುಖಂಡರು, ಪಂಚಮಸಾಲಿ ಸಮುದಾಯ, ಸ್ವಾಮೀಜಿಗಳು ಬೇಸರಗೊಂಡಿದ್ದಾರೆ. ಇದರ ವಿರುದ್ಧ ಪ್ರತಿಭಟನೆಗಳು, ಧರಣಿ ಹಾಗೂ ಹೋರಾಟಗಳು ನಡೆಯುತ್ತಿವೆ. ಇದು ಪಕ್ಷಕ್ಕೆ ಹೊಡೆತ ನೀಡಲಿದೆ.
ಯತ್ನಾಳ್ ಸೇರಿ ನಿಮ್ಮ ಬಣದ ಮುಖಂಡರು ವಿಜಯೇಂದ್ರ ವಿರುದ್ಧ ಹರಿಹಾಯುತ್ತಿರುವುದು ಯಾಕೆ?
ವಿಜಯೇಂದ್ರ ಅವರಿಗೆ ಪ್ರಬುದ್ಧತೆ ಇಲ್ಲ. ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಸೋತಿದ್ದಾರೆ. ನಮ್ಮ ಸಂಸದರು ಇರುವ ಕಡೆ ಸೋಲಾಗಿದೆ. ಸಂಡೂರಿನಲ್ಲಿ ಸಂಘಟನೆ ಕೊರತೆಯಿಂದ ಸೋಲಾಗಿದೆ. ಚನ್ನಪಟ್ಟಣ ಸೋಲಿಗೆ ಸಂಘಟನೆ ವೈಫಲ್ಯವೇ ಕಾರಣ. ಎಚ್.ಡಿ.ಕುಮಾರಸ್ವಾಮಿಗೆ ನಾವು ಮಂಡ್ಯ ಸೀಟು ಬಿಟ್ಟು ಕೊಟ್ಟೆವು. ಕೇಂದ್ರದಲ್ಲಿ ಮಂತ್ರಿ ಮಾಡಿದೆವು. ಚನ್ನಪಟ್ಟಣ ಸೀಟು ನಾವು ಉಳಿಸಿಕೊಳ್ಳಲು ಅವರ ಮನವೊಲಿಸುವಲ್ಲಿ ವಿಫಲವಾಗಿದ್ದೇವೆ. ನಮ್ಮ ಪಕ್ಷಕ್ಕೆ ಸೇರಿದ್ದ ಸುಮಲತಾ ಅವರ ಸೀಟು ಕುಮಾರಸ್ವಾಮಿಗೆ ಬಿಟ್ಟು ಕೊಟ್ಟ ಬಳಿಕ ಏನು ಮಾಡಿದ್ದೇವೆ? ನಮ್ಮ ರಾಜ್ಯದ ನಾಯಕರನ್ನು ನಾವು ಕಾಪಾಡಿಕೊಳ್ಳಬೇಕು. ಒಬ್ಬರು ಇಬ್ಬರಿಂದ ಪಕ್ಷ ಕಟ್ಟಲು ಅಥವಾ ಪಕ್ಷ ಕೆಡವಲು ಸಾಧ್ಯವಿಲ್ಲ. ಸಂಘಟಿತವಾಗಿ ಹೋರಾಡಬೇಕು. ವಿಜಯೇಂದ್ರ ಮುಖ ತೋರಿಸಿ ಮತ್ತೊಬ್ಬ ಯಡಿಯೂರಪ್ಪರನ್ನು ಸೃಷ್ಟಿಸಲು ಸಾಧ್ಯವಿಲ್ಲ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಹೋರಾಟಗಳು ಒಂದೂ ತಾರ್ಕಿಕ ಅಂತ್ಯ ಕಾಣಲಿಲ್ಲ.
ಈ ಗೊಂದಲಗಳ ಬಗ್ಗೆ ವಿಜಯೇಂದ್ರ ಅವರು ನಿಮ್ಮ ತಂಡದೊಂದಿಗೆ ಮಾತುಕತೆ ನಡೆಸಲು ಪ್ರಯತ್ನ ನಡೆಸಿದ್ದರಂತೆ?
ಹೈಕಮಾಂಡ್ ಮಟ್ಟದಲ್ಲಿ ಆಯಿತು. ರಾಜ್ಯದಲ್ಲಿ ಆಗಲಿಲ್ಲ. ಏಕೆಂದರೆ, ಇವರಿಗೆ ಗುಂಪು ಇರಬೇಕು. ಯತ್ನಾಳ್ ಅವರನ್ನು ಬೈದರಷ್ಟೇ ಇವರ ಅಸ್ತಿತ್ವ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಪಕ್ಷದ ಸಂಘಟನೆ ದೃಷ್ಟಿಯಲ್ಲಿ ಒಮ್ಮೆಯೂ ಚರ್ಚಿಸಿಲ್ಲ. ವಿಜಯೇಂದ್ರರ ಟೀಂ ನೋಡಿದರೆ ಅರ್ಥವಾಗುತ್ತದೆ. ಚೇಲಾಗಳ ರೀತಿ ಪಕ್ಷ ಮುನ್ನಡೆಸಲು ಸಾಧ್ಯವಿಲ್ಲ.
ನಿಮ್ಮ ಹೋರಾಟಕ್ಕೆ ಮಣಿಯದೆ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವ ನಿರ್ಧಾರ ಹೊರಬಿದ್ದಲ್ಲಿ ಏನು ಮಾಡುವಿರಿ?
ಹೈಕಮಾಂಡ್ ತೀರ್ಮಾನ ನಮಗೆ ಗೊತ್ತಿಲ್ಲ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವು ಪಾಲಿಸಬೇಕು. ವಿಜಯೇಂದ್ರ ಮುಖಂಡತ್ವದಲ್ಲೇ ಪಕ್ಷ ಸಂಘಟನೆ ಎಂದರೆ ಮತ್ತೆ ಗುಂಪು ಸೃಷ್ಟಿಯಾಗುತ್ತದೆ. ಹೀಗೆ ಮುಂದುವರೆಸಿದರೆ, ಅವರು ವಿಫಲರಾಗುತ್ತಾರೆ, ನಾವೂ ವಿಫಲರಾಗುತ್ತೇವೆ. ಪಕ್ಷ ಮತ್ತಷ್ಟು ಹಾಳಾಗಲಿದೆ. ವಿಜಯೇಂದ್ರಗೆ ರಾಜ್ಯದಲ್ಲಿ ಪಕ್ಷ ಮುನ್ನಡೆಸುವ ಸಾಮರ್ಥ್ಯ ಮತ್ತು ಆಲೋಚನಾ ಶಕ್ತಿ ಇಲ್ಲ. ಯಡಿಯೂರಪ್ಪ ರೀತಿ ಪಕ್ಷ ಸಂಘಟಿಸಿ ಮುನ್ನಡೆಸಲು ಸಾಧ್ಯವಿಲ್ಲ. ಯಡಿಯೂರಪ್ಪ ಪಕ್ಷ ಮುನ್ನಡೆಸಿದ ಕಾಲ ಬೇರೆ. ಅವರಲ್ಲಿ ಅನುಭವ, ಜಾಣತನ, ಎಲ್ಲರ ವಿಶ್ವಾಸ ಗಳಿಸುವ ಚಾಕಚಕ್ಯತೆ, ಎಲ್ಲದಕ್ಕಿಂತ ಹೆಚ್ಚಾಗಿ ಪಕ್ಷ ಅಧಿಕಾರಕ್ಕೆ ತರುವ ಒತ್ತಾಸೆ ಇತ್ತು. ವಿಜಯೇಂದ್ರಗೆ ಏನಿದೆ? ಎಲ್ಲವನ್ನೂ ದುಡ್ಡಿನಿಂದ ಮಾಡುತ್ತೇನೆ ಎಂದರೆ ಅದು ಆಗುವುದಿಲ್ಲ. ಪಕ್ಷ ಸಂಘಟನೆಯೇ ಬೇರೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಬೇಕು.
ಯತ್ನಾಳ್ ಉಚ್ಚಾಟನೆ ಬಳಿಕ ವಿಜಯೇಂದ್ರ ಅವರು ಏಕಾಏಕಿ ತುಂಬಾ ಸಕ್ರಿಯರಾದಂತೆ ಕಂಡು ಬರುತ್ತಿದೆ?
ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕುಳಿತ ಮಾತ್ರಕ್ಕೆ ಹೋರಾಟನಾ? ಪಕ್ಷದೊಳಗೆ ಸರಿ ಮಾಡಿಕೊಳ್ಳದೆ ಹೋರಾಟ ಮಾಡಿದರೆ ಏನು ಪ್ರಯೋಜನ? ಹೈಕಮಾಂಡ್ ಬಳಿ ಕುಳಿತು ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಬೇಕು. ರಾಜ್ಯದಲ್ಲಿ ಆಡಳಿತ ವೈಫಲ್ಯವಾಗಿದೆ, ಗ್ಯಾರಂಟಿಗಳ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ. ನೀವು ಏನು ಮಾಡುತ್ತಿದ್ದೀರಿ? ಬಾಗಿಲು ಹಾಕಿಕೊಂಡ ಬಳಿಕ ಹೋರಾಟ ಮಾಡುವುದಾ? ಸದನದಲ್ಲಿ ಏನು ಹೋರಾಟ ಮಾಡಿದ್ದಾರೆ? ದರ ಏರಿಕೆ ಬಗ್ಗೆ ಸದನದಲ್ಲಿ ಘೋಷಣೆ ಮಾಡುತ್ತಾರೆ. ಆ ಬಗ್ಗೆ ವಿರೋಧ ಪಕ್ಷವಾಗಿ ಪ್ರಬಲ ಹೋರಾಟ ಮಾಡಲಿಲ್ಲ. ಪಕ್ಷದ ಶಾಸಕರನ್ನು ಅಮಾನತು ಮಾಡಿದರು. ಇದರ ವಿರುದ್ಧವೂ ಸಮರ್ಪಕ ಹೋರಾಟ ನಡೆಯಲಿಲ್ಲ.
ಇದನ್ನೂ ಓದಿ: ಶಾಸಕ ಯತ್ನಾಳ್ ಕಾಂಗ್ರೆಸ್‌ಗೆ ಸೂಟ್ ಆಗಲ್ಲ: ಸಚಿವ ಸತೀಶ್ ಜಾರಕಿಹೊಳಿ
ಹಾಗಾದರೆ ರಾಜ್ಯ ಬಿಜೆಪಿಯಲ್ಲಿನ ಪ್ರಸಕ್ತ ಸಮಸ್ಯೆಗೆ ಅಂತಿಮ ಪರಿಹಾರ ಏನು?
ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ. ವಿಷಾಯಾಧಾರಿತ ಹೋರಾಟ ಮುಂದುವರೆಯಲಿದೆ. ಪಕ್ಷ ಸಂಘಟನೆ ಸಂಬಂಧ ಹೈಕಮಾಂಡ್‌ಗೆ ಕನ್ವಿನ್ಸ್ ಮಾಡುತ್ತೇವೆ.
ಬಿಜೆಪಿ ತಟಸ್ಥ ಬಣದ ಬಹುತೇಕ ನಾಯಕರು ನಿಮ್ಮ ಪರ ಇದ್ದಾರಂತೆ ಹೌದೇ?
ಹೌದು, ಬಹುತೇಕರು ನಮ್ಮ ಜತೆಗೆ ಇದ್ದಾರೆ. ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ ಸೇರಿ ಅನೇಕರೊಂದಿಗೆ ನಾವು ಮಾತನಾಡಿದ್ದೇವೆ. ಆ ಪೈಕಿ ಯಾರೊಬ್ಬರೂ ನಾವು ಮಾಡುತ್ತಿರುವುದು ಸರಿ ಅಲ್ಲ ಎಂದು ಹೇಳಿಲ್ಲ. ಹೈಕಮಾಂಡ್, ಸಂಘದಲ್ಲಿ ನಮ್ಮ ಪರ ವಾದ ಮಾಡಿದ್ದಾರೆ. ಯತ್ನಾಳ್ ಅಮಾನತು ಸರಿಯಲ್ಲ ಎಂದಿದ್ದಾರೆ.