ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸಿದೆ. ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
ಬೆಂಗಳೂರು (ಏ.3) : ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುವ ಮೂಲಕ ಪ್ರತಿಪಕ್ಷ ಬಿಜೆಪಿ ಜನಾಕ್ರೋಶದ ಕಹಳೆ ಮೊಳಗಿಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಧರಣಿಯಲ್ಲಿ ಭಾಗಿಯಾಗಿ ಹೋರಾಟಕ್ಕೆ ಹುಮ್ಮಸ್ಸು ಮೂಡಿಸಿದ್ದಾರೆ.
ಬೆಲೆ ಏರಿಕೆ ವಿರುದ್ಧ ಬುಧವಾರ ಮಧ್ಯಾಹ್ನದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದು, ಇದು ಗುರುವಾರ ಮಧ್ಯಾಹ್ನದವರೆಗೂ ಮುಂದುವರೆಯಲಿದೆ. ಬಳಿಕ ಇದೇ ತಿಂಗಳ 5ರಂದು ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದೆ. ಬಳಿಕ 7ರಿಂದ ಬೆಲೆ ಏರಿಕೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಜನಾಕ್ರೋಶ ಯಾತ್ರೆ ಆರಂಭಿಸಲಿದೆ.
ಹಾಲು, ಮೊಸರು, ವಿದ್ಯುತ್, ಡೀಸೆಲ್ ದರ, ಕಸ ತೆರಿಗೆ ಹೀಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಗೆ ಪ್ರತಿಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಎಸ್ವೈ ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಶಾಸಕರು, ಮಾಜಿ ಶಾಸಕರು ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಕಾಂಗ್ರೆಸ್ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾವೇರಿ ನೀರು ದರ ಏರಿಕೆ: ಪ್ರತಿ ಲೀಟರ್‌ಗೆ 1 ಪೈಸೆ ಹೆಚ್ಚಳ?
ಬಿಎಸ್‌ವೈ ಭಾಗಿ:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಹುಮ್ಮಸ್ಸು ಮೂಡಿಸಿದರು. ಹಲಗೆ ಬಾರಿಸುವ ಮೂಲಕ ಪ್ರತಿಭಟನೆ ಆರಂಭಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಇಡೀ ದಿನ ಫ್ರೀಡಂಪಾರ್ಕ್‌ನಲ್ಲೇ ತಂಗಿದರು. ಪ್ರತಿಭಟನೆಯಲ್ಲಿ ಗೇಲಿ ಮಾಡುವಂಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಟೂನ್, ರಾವಣನ ಚಿತ್ರದಲ್ಲಿ ಸಚಿವರ ಮುಖವಾಡಗಳನ್ನು ಹಾಕಿ ಸರ್ಕಾರದ ನಡೆಯನ್ನು ಈ ವೇಳೆ ತೀವ್ರವಾಗಿ ಖಂಡಿಸಲಾಯಿತು. ಅಲ್ಲದೆ, ಪ್ರತಿಭಟನೆ ಸ್ಥಳದಲ್ಲಿ ಕಟಕಟೆ ನಿರ್ಮಿಸಿ ಅಲ್ಲಿ ಕಾಂಗ್ರೆಸ್ ಸರ್ಕಾರವನ್ನು ನಿಲ್ಲಿಸುವ ಕಾರ್ಯ ಮಾಡಲಾಯಿತು.
ಗಮನ ಸೆಳೆದ ಕಾರ್ಟೂನ್:
ಸಿದ್ದರಾಮಯ್ಯ ಮೇಷ್ಟ್ರಾಗಿ ಕಾಂಗ್ರೆಸ್ ಶಾಸಕರಿಗೆ ಪಾಠ ಮಾಡುವ ಕಾರ್ಟೂನ್ ಮಾಡಲಾಗಿದ್ದು, ಇಂಗ್ಲೀಷ್‌ನ ಎ ಯಿಂದ ಝೆಡ್ ವರೆಗೆ ಸರ್ಕಾರದ ವೈಫಲ್ಯಗಳನ್ನು ತಿಳಿಸುವ ಟೀಕೆಗಳನ್ನು ಪ್ರತಿಭಟನಾ ಸ್ಥಳದಲ್ಲಿ ಪ್ರದರ್ಶಿಸಲಾಗಿದೆ. ಇದೇ ವೇಳೆ ಎರಡು ಪುಟಗಳ ಕಾಂಗ್ರೆಸ್ ಸರ್ಕಾರದ ವಿರುದ್ಧದ ಆರೋಪ ಪಟ್ಟಿಯನ್ನೂ ಬಿಡುಗಡೆ ಮಾಡಲಾಯಿತು. ಆರೋಪಪಟ್ಟಿಯಲ್ಲಿ ಬೆಲೆ ಏರಿಕೆ ಸೇರಿ ವಿವಿಧ ಇಲಾಖೆಗಳಲ್ಲಿನ ಆಡಳಿತ ವೈಫಲ್ಯಗಳ ಕುರಿತು ಮಾಹಿತಿ ಒದಗಿಸಲಾಯಿತು.
ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ತಮ ಗ್ಯಾರಂಟಿಗಳನ್ನು ಪೂರ್ಣಗೊಳಿಸಲು ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಹಾಲು, ವಿದ್ಯುತ್, ಕಸ, ಡೀಸೆಲ್ ಹೀಗೆ ಪ್ರತಿಯೊಂದರ ಮೇಲೂ ತೆರಿಗೆ ಹೆಚ್ಚಳ ಮಾಡಲಾಗಿದೆ. ಜನರ ಪಾಲಿಗೆ ಈ ಸರ್ಕಾರ ಶಾಪ. ದರ ಹೆಚ್ಚಳ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬೆಲೆ ಏರಿಕೆ ಮೂಲಕ ಲೂಟಿ-ಅಶೋಕ್:
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಚುನಾವಣೆಗೂ ಮುನ್ನ ಬೆಲೆ ಏರಿಕೆ ಮಾಡುವುದಿಲ್ಲ, ಐದು ಗ್ಯಾರಂಟಿ ಕೊಡುತ್ತೇವೆ ಎಂದು ತಿಳಿಸಿತ್ತು. ಆದರೆ ಎರಡು ವರ್ಷಗಳಲ್ಲಿ ಹಾಲಿನ ದರ ಮೂರು ಬಾರಿ ಏರಿಸಲಾಗಿದೆ. ಈ ಸರ್ಕಾರದಲ್ಲಿ 136 ಜನ ಕಳ್ಳರಿದ್ದಾರೆ. ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲದಿರುವ ಕಾರಣ ಬೆಲೆ ಏರಿಕೆ ಮೂಲಕ ಲೂಟಿ ಮಾಡಲಾಗುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು. ಬಿಜೆಪಿ ವಿರುದ್ಧದ ಶೇ.40 ಕಮಿಷನ್ ಆರೋಪಕ್ಕೆ ಸಾಕ್ಷಿ ಇಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಕಮಿಷನ್ ಪಡೆದುಕೊಳ್ಳುತ್ತಿದೆ. ಸ್ಮಾರ್ಟ್ ಮೀಟರ್‌ನಲ್ಲಿ ಹಗರಣ ನಡೆದಿದೆ. ಸಿದ್ದರಾಮಯ್ಯ ಹೆಸರಿಗಷ್ಟೇ ಮುಖ್ಯಮಂತ್ರಿಯಾಗಿದ್ದು, ಸರ್ಕಾರ ಗಾಲಿ ಕುರ್ಚಿಯಲ್ಲಿದೆ ಎಂದರು.
ಬಿಜೆಪಿ ರಾಜ್ಯ ಉಸ್ತುವಾರಿ ಸುಧಾಕರ್ ರೆಡ್ಡಿ ಮಾತನಾಡಿ ಕರ್ನಾಟಕದಲ್ಲಿ ಭ್ರಷ್ಟರ ಸರ್ಕಾರ ಇದ್ದು, ಗ್ಯಾರಂಟಿ ಯೋಜನೆಗಳನ್ನು ಕೇವಲ ಚುನಾವಣೆಗಾಗಿ ಬಳಸಿಕೊಂಡಿದೆ. ಇದೀಗ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಬಿಜೆಪಿ ವಿರುದ್ಧ ಶೇ.40ರಷ್ಟು ಕಮಿಷನ್‍ನ ಸುಳ್ಳು ಆರೋಪ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸುಳ್ಳು ಆರೋಪಕ್ಕಾಗಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಕಾಂಗ್ರೆಸ್‌ನಲ್ಲಿ ಕಲೆಕ್ಷನ್ ಜಗಳ ಜೋರಾಗಿದೆ. ಕಾಂಗ್ರೆಸ್‌ನದು ಜನ ವಿರೋಧಿ ಸರ್ಕಾರ. ಈ ಸರ್ಕಾರ ತೊಲಗಿಸಬೇಕು. ಕಾಕಾ ಪಾಟೀಲ್‌ಗೆ ಮತ್ತು ಮಹದೇವವಪ್ಪಗೆ ಬರೆ ನೀಡಲಾಗಿದ್ದು, ಜಮೀರ್ ಅಹ್ಮದ್‌ಗೆ ಬೆಣ್ಣೆ ಕೊಡಲಾಗಿದೆ. ಮತಾಧಾರಿತ ಮೀಸಲಾತಿಯನ್ನು ಡಾ.ಬಿ ಆರ್ ಅಂಬೇಡ್ಕರ್ ಅವರೇ ಒಪ್ಪಿಲ್ಲ. ಆದರೆ ಇದಕ್ಕಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಅನ್ನು ಪಾಕಿಸ್ತಾನಕ್ಕೆ ಓಡಿಸಿಯಾದರೂ ಸಂವಿಧಾನ ಉಳಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಹಾಲು, ವಿದ್ಯುತ್ ಬಳಿಕ ಇದೀಗ ಮತ್ತೊಂದು ದರ ಏರಿಕೆ ಬರೆ! ಡೀಸೆಲ್ ದರ ₹2 ಹೆಚ್ಚಳ!
ಇಷ್ಟಕ್ಕೇ ಹೋರಾಟ ನಿಲ್ಲಿಸಲ್ಲ
ರಾಜ್ಯದ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆಯ ನಿರ್ಧಾರದಿಂದ ಹಿಂದಕ್ಕೆ ಸರಿಯುವವರೆಗೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಹಮ್ಮಿಕೊಳ್ಳಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ,
- ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ
ಬೆಲೆ ಏರಿಕೆ ‘ಕೈ’ ಗ್ಯಾರಂಟಿ
ರಾಜ್ಯದಲ್ಲಿ ‘ಬೆಲೆ ಏರಿಕೆ ಗ್ಯಾರಂಟಿ’ ನೀಡುವ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. ಇದು ಮನುಷ್ಯತ್ವ ಇರುವ ಸರ್ಕಾರವಲ್ಲ, ಬೆಲೆ ಏರಿಕೆ ಹಾಗೂ ಸರ್ಕಾರದ ದುರಾಡಳಿತದ ವಿರೋಧಿಸಿ ಜನಾಕ್ರೋಶ ಯಾತ್ರೆ ಕೈಗೊಳ್ಳಲಿದ್ದೇವೆ.
ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಬಿಜೆಪಿ ರೈತ ವಿರೋಧಿರೈತರಿಗೆ ನೆರವಾಗುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದು, ಅದರ ವಿರುದ್ಧ ಬಿಜೆಪಿ ಪ್ರತಿಭಟಿಸುತ್ತಿದೆ. ಆಮೂಲಕ ತಾನು ರೈತ ವಿರೋಧಿ ಎಂಬುದನ್ನು ತೋರಿಸಿದೆ
- ಡಿ.ಕೆ. ಶಿವಕುಮಾರ್, ಡಿಸಿಎಂ