ರಾಜ್ಯದಲ್ಲಿ ಶಾಂತಿ ಕಾಪಾಡಲು ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಶಾಂತಿ, ನೆಮ್ಮದಿ ಹಾಗೂ ನಿರ್ಭಯದ ವಾತಾವರಣ ನಿರ್ಮಿಸಲು ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅಪರಾಧಗಳನ್ನು ನಿಯಂತ್ರಿಸಿ, ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ಅವರು ಕರೆ ನೀಡಿದರು.

CM Siddaramaiah instructs the police to maintain peace in the state rav

ಬೆಂಗಳೂರು (ಏ.3) : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿದ್ದಾಗ ಹೆಚ್ಚು ಬಂಡವಾಳ ಹರಿದು ಬರುತ್ತದೆ. ಬಂಡವಾಳ ಬಂದರೆ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ. ಹೀಗಾಗಿ ಪೊಲೀಸರು ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ನಿರ್ಭಯದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೋರಮಂಗಲದ ಕೆಎಸ್‌ಆರ್‌ಪಿ ಕವಾಯತು ಮೈದಾನದಲ್ಲಿ ಬುಧವಾರ ನಡೆದ ‘ಪೊಲೀಸ್‌ ಧ್ವಜ ದಿನಾಚರಣೆ’ ಹಾಗೂ 472 ಪೊಲೀಸ್‌ ಅಧಿಕಾರಿ-ಸಿಬ್ಬಂದಿಗೆ ‘ಮುಖ್ಯಮಂತ್ರಿ ಅವರ ಪದಕ’ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ, ಹೂಡಿಕೆ, ಅಭಿವೃದ್ಧಿ, ಉದ್ಯೋಗ ಸೃಷ್ಟಿ ಒಂದಕ್ಕೊಂದು ಸಂಬಂಧವಿದೆ. ಕರ್ನಾಟಕ ಮುಂದುವರೆದ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಅಭಿವೃದ್ಧಿ ಪಥದತ್ತ ಸಾಗುವಲ್ಲಿ ಪೊಲೀಸ್‌ ಇಲಾಖೆ ಮಹತ್ತರ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.

Latest Videos

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾವೇರಿ ನೀರು ದರ ಏರಿಕೆ: ಪ್ರತಿ ಲೀಟರ್‌ಗೆ 1 ಪೈಸೆ ಹೆಚ್ಚಳ?

ಹೆಣ್ಣು ಮಕ್ಕಳ ರಕ್ಷಣೆ, ದುರ್ಬಲರ ರಕ್ಷಣೆ, ಆಸ್ತಿಗಳ ರಕ್ಷಣೆಯಲ್ಲಿ ಪೊಲೀಸರು ದಕ್ಷತೆ, ಪ್ರಾಮಾಣಕತೆಯಿಂದ ಕೆಲಸ ಮಾಡಿದಾಗ ಸಮಾಜದಲ್ಲಿ ಶಾಂತಿ-ನೆಮ್ಮದಿ ಕಾಣಲು ಸಾಧ್ಯ. ಪೊಲೀಸ್‌ ಇಲಾಖೆಯಲ್ಲಿ ಡಿಜಿಪಿಯಿಂದ ಕಾನ್ಸ್‌ಟೇಬಲ್‌ ವರೆಗೆ ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು. ಆಗ ಮಾತ್ರ ಅಪರಾಧಗಳ ನಿಯಂತ್ರಣ ಸಾಧ್ಯವಾಗುತ್ತದೆ. ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ ಅಪರಾಧಗಳು ಇಳಿಮುಖವಾಗಿವೆ. ಇದನ್ನು ಮತ್ತಷ್ಟು ಇಳಿಕೆ ಮಾಡಬೇಕು. ಮಾದಕವಸ್ತುಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತವೆ. ಇದನ್ನು ನಿಯಂತ್ರಿಸಿ ಮುಂದಿನ ಸಮಾಜದ ಭವಿಷ್ಯವಾಗಿರುವ ಯುವ ಜನತೆಯನ್ನು ರಕ್ಷಿಸಬೇಕು. ರಾಜ್ಯವನ್ನು ಮಾದಕವಸ್ತು ಮುಕ್ತಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಣ ತೊಡಬೇಕು ಎಂದರು.

ಇತ್ತೀಚೆಗೆ ಸಮಾಜದಲ್ಲಿ ಸೈಬರ್‌ ಅಪರಾಧಗಳು ಮತ್ತು ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ. ಈ ಸೈಬರ್‌ ಅಪರಾಧಗಳನ್ನು ಕಡಿಮೆ ಮಾಡುವುದು ಸವಾಲು. ಹೀಗಾಗಿ ಲಭ್ಯ ಅಧುನಿಕ ವಿಧಾನಗಳು, ಆಧುನಿಕ ಆವಿಷ್ಕಾರಗಳನ್ನು ಬಳಸಿಕೊಂಡು ಈ ಸೈಬರ್‌ ಅಪರಾಧಗಳನ್ನು ಪತ್ತೆ ಮಾಡಬೇಕು. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸಲಹೆ ನೀಡಿದರು.

ತಪ್ಪು ಮಾಡಿದರೆ ಸಹಿಸಲ್ಲ:

ಜರ್ಮನಿ ಪ್ರಧಾನಿ, ಪ್ರತಿನಿಧಿಗಳು ರಾಜ್ಯದ ಪೊಲೀಸ್ ಕೌಶಲ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ. ಕರ್ನಾಟಕ ಪೊಲೀಸ್‌ಗೆ ದೇಶದಲ್ಲಿ ಒಳ್ಳೆಯ ಹೆಸರಿದೆ. ನಂಬರ್‌ ಒನ್‌ ಸ್ಥಾನಕ್ಕೆ ಬಂದಾಗ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಪೊಲೀಸರ ಅಗತ್ಯ ಮತ್ತು ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಸದಾ ಸಿದ್ಧವಿದೆ. ಆದರೆ, ಪೊಲೀಸರು ತಪ್ಪು ಮಾಡಿದರೆ ನಾವು ಸಹಿಸಲ್ಲ ಎಂದು ಎಚ್ಚರಿಕೆ ಸಹ ನೀಡಿದರು.

ಜಗತ್ತಿನಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರವನ್ನು ಸೇಫ್‌ ಸಿಟಿ ಮಾಡಲು ಪ್ರಯತ್ನ ಮಾಡಬೇಕು. ಜನರು ನಿರ್ಭಯದಿಂದ ಬದುಕುವ ವಾತಾವರಣ ನಿರ್ಮಿಸಬೇಕು. ಗೂಂಡಾಗಳನ್ನು ಮಟ್ಟಹಾಕಬೇಕು. ಪೊಲೀಸ್‌ ಬೀಟ್‌ ವ್ಯವಸ್ಥೆ ಹೆಚ್ಚು ಮಾಡಬೇಕು. ಇದಕ್ಕೆ ಅಗತ್ಯರುವ ಹೆಚ್ಚುವರಿ ವಾಹನಗಳು ಸೇರಿದಂತೆ ಅಗತ್ಯ ಸವಲತ್ತುಗಳನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸೈಬರ್‌ ಕ್ರೈಂ ನಿಯಂತ್ರಣ ಅಗತ್ಯ:

ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಜತೆಗೆ ಜನರ ನೆಮ್ಮದಿಯನ್ನು ಕಾಪಾಡಲಾಗಿದೆ. ಕೋಮು ಪ್ರಚೋದನೆ ಮಾಡುವವರು ಅಡಗಿ‌ದ್ದಾರೆ. ರಾಜ್ಯದಲ್ಲಿ ವಾರ್ಷಿಕ 20 ಸಾವಿರ ಸೈಬರ್‌ ಪ್ರಕರಣಗಳು ದಾಖಲಾಗುತ್ತಿವೆ. ಈ ಸೈಬರ್‌ ಕ್ರೈಂಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಮತ್ತಷ್ಟು ಕಠಿಣವಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಮತ್ತಿತರರು ಉಪಸ್ಥಿತರಿದ್ದರು.

3 ವರ್ಷದ ಪದಕ ಒಟ್ಟಿಗೆ ಪ್ರದಾನ

ಕಾರಣಾಂತರಗಳಿಂದ ಕಳೆದ 3 ವರ್ಷಗಳಿಂದ ಪೊಲೀಸ್‌ ಅಧಿಕಾರಿ-ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಒಟ್ಟಿಗೆ 400ಕ್ಕೂ ಅಧಿಕ ಪೊಲೀಸ್‌ ಅಧಿಕಾರಿ-ಸಿಬ್ಬಂದಿಗೆ ಪದಕ ವಿತರಿಸಲಾಗಿದೆ. ಇದರಿಂದ ಉಳಿದ ಪೊಲೀಸ್‌ ಅಧಿಕಾರಿ-ಸಿಬ್ಬಂದಿ ಪ್ರೇರಣೆ ಪಡೆದು ದಕ್ಷತೆ, ಪ್ರಾಮಾಣಿಕತೆ, ಪರಿಣತಿಯಿಂದ ಕೆಲಸ ಮಾಡಿ ನೀವು ಕೂಡ ಪುರಸ್ಕಾರಕ್ಕೆ ಭಾಜನರಾಗಬೇಕು ಎಂದ ಸಿದ್ದರಾಮಯ್ಯ, ಪದಕ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: ಹಾಲು, ವಿದ್ಯುತ್‌ ಬಳಿಕ ಇದೀಗ ಮತ್ತೊಂದು ದರ ಏರಿಕೆ ಬರೆ! ಡೀಸೆಲ್ ದರ ₹2 ಹೆಚ್ಚಳ!

ರಾಜ್ಯದಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಕ್ಸಲರನ್ನು ಶರಣಾಗತಿ ಮಾಡಿಸಿ, ನಕ್ಸಲ್ ಮುಕ್ತ ಕರ್ನಾಟಕವಾಗಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಬ್ಯಾಂಕ್ ಪ್ರಕರಣದ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಿದ್ದಾರೆ. ದಾವಣಗೆರೆಯಲ್ಲಿನ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕೋಟ್ಯಂತರ ರು.‌ ಮೌಲ್ಯದ ಚಿನ್ನಾಭರಣ ಪತ್ತೆಹಚ್ಚಿದ್ದಾರೆ. ಮುಂದಿನ ದಿನಗಳಲ್ಲೂ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿ ಮುಖ್ಯಮಂತ್ರಿ ಪದಕ ಪಡೆಯುವಂತಾಗಲಿ ಎಂದು ಪರಮೇಶ್ವರ್‌ ಹೇಳಿದರು.

vuukle one pixel image
click me!