ಹಾಸನ ಮಂಗಳೂರು ಹೆದ್ದಾರಿ ಶಿರಾಡಿಘಾಟ್ ಸಂಚಾರ ನಿರ್ಬಂಧ ಆದೇಶ ಹಿಂಪಡೆಯಲಾಗಿದೆ. ಇದೀಗ ಹೊಸ ಆದೇಶ ಹೊರಡಿಸಲಾಗಿದ್ದು, ಲಘುವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಹಾಸನ(ಜು.17): ಹಾಸನ, ಹಾಗೂ ದಕ್ಷಿಣ ಕನ್ನಡ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರವ ಕಾರಣದಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಸಂಭವಿಸಿತ್ತು. ಹೀಗಾಗಿ ಶಿರಾಡಿಘಾಟ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ಮಳೆ ಆರ್ಭಟ ಕಡಿಮೆಯಾಗಿರುವ ಕಾರಣ ಶಿರಾಡಿಘಾಟ್ ನ ಪರ್ಯಾಯ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸಲು ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಕಾರು,ಜೀಪು, ಟೆಂಪೊ, ಮಿನಿ ವ್ಯಾನ್ ಆಂಬುಲೆನ್ಸ್‌ಗಳು ಏಕಮುಖವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಆದರೆ ಮಾರ್ಗದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಸಕಲೇಶಪುರ, ಆನೆಮಹಲ್, ಕ್ಯಾನಹಳ್ಳಿ, ಚಿನ್ನಹಳ್ಳಿ,ಕಡಗರಹಳ್ಳಿ ಮಾರ್ಗದಲ್ಲಿ ಮಾರನಹಳ್ಳಿ ತಲುಪಿ ಮಂಗಳೂರಿಗೆ ಹೋಗಲು ಅವಕಾಶ ನೀಡಲಾಗಿದೆ. ಇನ್ನು ಮಂಗಳೂರಿನಿಂದ ಬೆಂಗಳೂರಿಗೆ ಹೋಗೋ ಕಾರು, ಜೀಪು, ಟೆಂಪೊ, ಮಿನಿ ವ್ಯಾನ್‌ಗಳು ಮಾರನಹಳ್ಳಿಯಿಂದ ಕಾಡುಮನೆ, ಕಾರ್ಲೆ ಕೂಡಿಗೆ, ಆನೆಮಹಲ್ ಸಕಲೇಶಪುರ ಮಾರ್ಗದ ಮೂಲಕ ಬೆಂಗಳೂರಿಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.
ಭಾರಿ ಮಳೆಯಿಂದ ಶಿರಾಡಿಘಾಟ್‌ನಲ್ಲಿ ಭೂಕುಸಿತ ಸಂಭವಿಸಿತ್ತು. ದೋಣಿಗಲ್ ಬಳಿ ಹೆದ್ದಾರಿ ಸಂಪೂರ್ಣ ಕುಸಿದಿತ್ತು. ಹೀಗಾಗಿ ಅಪಾಯಕಾರಿ ರಸ್ತೆಯಲ್ಲಿ ಸಂಚಾರ್ ನಿರ್ಬಂಧಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಜುಲೈ 15 ರಂದು ಆದೇಶ ಹೊರಡಿಸಿದ್ದರು. ಇದೀಗ ಮಳೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಜುಲೈ 15ರ ಆದೇಶ ಹಿಂಪಡೆದು ಇದೀಗ ಲಘು ವಾಹನಗಳಿಗೆ ಶಿರಾಡಿಘಾಟ್‌ನಲ್ಲೇ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಎರಡೂ ಕಡೆಯಿಂದ ಯಾವುದೇ ಸಮಸ್ಯೆ ಆಗದಂತೆ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ.
ಶಿರಾಡಿಘಾಟ್ ಸುರಂಗ ಮಾರ್ಗ ನಿರ್ಮಾಣದ ಮೆಗಾ ಯೋಜನೆ ಕೇಂದ್ರದ ಮುಂದಿದೆ: ಸದಾನಂದಗೌಡ
ದೋಣಿಗಲ್ ಭೂ ಕುಸಿತದಿಂದಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ದೊಣಿಗಲ್- ಹೆಗ್ಗದ್ದೆ ತನಕದ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ನಿಷೇಧಿಸಿ ಹೊಸದಾಗಿ ಆದೇಶ ಹೊರಡಿಸಿದ್ದರು. ಹೀಗಾಗಿ ಮಾಹಿತಿ ಇಲ್ಲದ ಟ್ಯಾಂಕರ್ ಮತ್ತಿತರ ಸರಕು ತುಂಬಿದ ವಾಹನಗಳು ಗುಂಡ್ಯವರೆಗೆ ಆಗಮಿಸಿದಾಗ ಸಂಚಾರ ನಿಷೇಧವಾಗಿರುವುದು ತಿಳಿದು, ವಾಪಸ್ ಬರಲೂ ಆಗದೆ ಮುಂದೆ ಹೋಗಲೂ ಆಗದೆ ಹೆದ್ದಾರಿ ಬದಿಯಲ್ಲೇ ಠಿಕಾಣಿ ಬಾರಿ ರಸ್ತೆ ಜಾಮ್ ಆಗಿತ್ತು. ಗುಂಡ್ಯದ ಮಂಗಳೂರು ಭಾಗದ ಹೆದ್ದಾರಿಯುದ್ದಕ್ಕೂ ವಾಹನಗಳ ಸಾಲು ಕಂಡು ಬಂದಿದೆ. ಗುಂಡ್ಯದ ಹಾಸನದ ಭಾಗದಲ್ಲಿ ಯಾವುದೇ ವಾಹನಗಳು ಸಂಚರಿಸದ ಕಾರಣ ಘಾಟಿ ರಸ್ತೆಯುದ್ದಕ್ಕೂ ಬಿಕೋ ಎನ್ನುವಂತಿತ್ತು.
Shiradi Ghat Road ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೇರಿಸಲು ಕೇಂದ್ರ ಗ್ರೀನ್ ಸಿಗ್ನಲ್, ಸಿಎಂ ಧನ್ಯವಾದ
ಕಳೆದ ಕೆಲ ದಿನಗಳ ಮಳೆಗೆ ಶಿರಾಡಿಘಾಟ್‌ನಲ್ಲಿ ಮೂರು ಬಾರಿ ಭೂಸುಕಿತ ಸಂಭವಿಸಿತ್ತು. ಒಂದು ವಾರದ ಹಿಂದೆ ಕುಸಿತ ಸಂಭವಿಸಿ ಸಂಚಾರ ಆತಂಕಕ್ಕೆ ಕಾರಣವಾಗಿತ್ತು. ಆಗ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೇಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ ಮತ್ತೆರಡು ಬಾರಿ ಕುಸಿತ ಕಂಡ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು. ಘಾಟ್‌ನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ದುರಸ್ತಿ ಕಾಮಗಾರಿ ಕೂಡ ವಿಳಂಬವಾಗಿತ್ತು. ಇದೀಗ ಮರಳು ಚೀಲ ಸೇರಿದಂತೆ ತಾತ್ಕಾಲಿಕ ಕಾಮಾಗಾರಿ ಮಾಡಲಾಗಿದೆ.ಉಳಿದ ರಸೆಗಳಲ್ಲಿ ಉಂಟಾದವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ಆಗಿರುವ ಅನಾನುಕೂಲತೆಯನ್ನು ಪರಿಗಣಿಸಿ ಹಾಸನ ಜಿಲ್ಲಾಧಿಕಾರಿಯವರು ತನ್ನ ಮೊದಲ ಆದೇಶವನ್ನು ಪರಿಷ್ಕರಿಸಿದ್ದಾರೆ.