ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳ ದಿನಗೂಲಿ ರೂ.200 ರಿಂದ ರೂ.525ಕ್ಕೇರಿಕೆ!

Published : Jul 17, 2022, 10:39 AM IST
ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳ ದಿನಗೂಲಿ ರೂ.200 ರಿಂದ ರೂ.525ಕ್ಕೇರಿಕೆ!

ಸಾರಾಂಶ

ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ದಿನಗೂಲಿ 525 ರು.ಗಳನ್ನು ನೀಡಲಾಗುತ್ತದೆ. ಸದ್ಯ 200 ರು. ಕೊಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬೆಂಗಳೂರು (ಜು.17): ರಾಜ್ಯದಲ್ಲಿನ ಎಲ್ಲಾ ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ಕೂಲಿ ದರವನ್ನು ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಶ್ವಾಸನೆ ನೀಡಿದ್ದಾರೆ. ಶನಿವಾರ ವಿಕಾಸಸೌಧದಲ್ಲಿ ಕಾರಾಗೃಹ ಅಭಿವೃದ್ಧಿ ಮಂಡಳಿಯ ಪ್ರಥಮ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ಕೂಲಿ ದರದ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ನೀಡಲಾಗಿದೆ. ಕಾರ್ಮಿಕ ಇಲಾಖೆ ನಿಗದಿ ಪಡಿಸಿರುವ ಕನಿಷ್ಠ ಕೂಲಿ 525 ರು. ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 7 ಕೋಟಿ ರು. ವಿಶೇಷ ಅನುದಾನ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ‘ಪ್ರಸ್ತುತ 200 ರು. ನೀಡಲಾಗುತ್ತಿದ್ದು, 100 ರು. ಭೋಜನಕ್ಕಾಗಿ ಕಡಿತಗೊಳಿಸಲಾಗುತ್ತಿದೆ. ಇದಲ್ಲದೆ, ಕೇಂದ್ರ ಕಾರಾಗೃಹಗಳಲ್ಲಿ ಬಂಧಿಯಾಗಿರುವ ಮಾನವ ಸಂಪನ್ಮೂಲವನ್ನು ರಾಷ್ಟ್ರೀಯ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಚಿಂತನೆ ಇದೆ.

ಕಾರಾಗೃಹದಲ್ಲಿ ಪ್ರಸ್ತುತ ನೇಯ್ಗೆ, ಮರಗೆಲಸ, ಬೇಕರಿ, ಜಮಾಖಾನ, ಶಾಮಿಯಾನ, ಸೋಪ್‌ ಮತ್ತು ಇತರೆ ಕೈಗಾರಿಕಾ ಚಟುವಟಿಕೆಗಳು ನಡೆಯುತ್ತಿವೆ. ಹಾಲಿ ಇರುವ ಯಂತ್ರೋಪಕರಣಗಳ ಉನ್ನತೀಕರಣ, ಕೈದಿಗಳಿಗೆ ವೃತ್ತಿಯಲ್ಲಿ ನೈಪುಣ್ಯತೆ ಒಳಗೊಂಡಂತೆ ಹಲವಾರು ಸುಧಾರಣಾ ಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ’ ಎಂದರು.

ಅಕ್ರಮ ನಡೆದರೆ ಅಧಿಕಾರಿ ಹೊಣೆ: ಇದೇ ವೇಳೆ ಕಾರಾಗೃಹದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಯಾವುದೇ ಕಾರಾಗೃಹದಲ್ಲಿ ಇನ್ನು ಮುಂದೆ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಸಂಬಂಧಪಟ್ಟಅಧಿಕಾರಿಗಳನ್ನೇ ನೇರ ಹೊಣೆ ಮಾಡಬೇಕಾಗುತ್ತದೆ. ಬೆಂಗಳೂರಿನ ಪರಪ್ಪನ ಅಗ್ರಹಾರ, ಬೆಳಗಾವಿಯ ಹಿಂಡಲಗಾ ಸೇರಿದಂತೆ ಕೆಲವು ಜೈಲುಗಳಲ್ಲಿ ನಿರಂತರವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿಯಾಗುತ್ತಿದೆ. ಆದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ದಿನದಲ್ಲಿ ಇಂತಹ ಘಟನೆಗಳು ನಡೆದರೆ ಸಂಬಂಧಪಟ್ಟವರು ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಅಕ್ರಮಕ್ಕೆ ಅಧಿಕಾರಿಗಳ ಸಹಕಾರ: ‘ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಮೋಜುಮಸ್ತಿ ಮಾಡಲು ಅವಕಾಶ ನೀಡಿದವರು ಯಾರು? ಜೈಲಿನಲ್ಲಿ ಬಂದೋಬಸ್‌್ತ ಇದ್ದರೂ ಎಲ್ಲಾ ಸವಲತ್ತುಗಳು ರಾಜಾರೋಷವಾಗಿ ಸಿಗುತ್ತಿವೆ ಎಂದರೆ ಯಾರನ್ನು ಹೊಣೆ ಮಾಡಬೇಕು? ನಮ್ಮ ಅಧಿಕಾರಿಗಳ ಸಹಕಾರವಿಲ್ಲದೆ ಇಂತಹ ಚಟುವಟಿಕೆಗಳು ನಡೆಯಲು ಸಾಧ್ಯವೇ ಇಲ್ಲ’ ಎಂದ ಹೇಳಿದ ಅವರು, ‘ಇನ್ನು ಮುಂದೆ ಕಡ್ಡಾಯವಾಗಿ ಪ್ರತಿ ತಿಂಗಳು ರಾಜ್ಯದ ಎಲ್ಲಾ ಬಂದೀಖಾನೆಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಬೇಕು. ಅಗತ್ಯವಿದ್ದರೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ರಾಜ್ಯ ಕಾರಾಗೃಹಗಳ ಡಿಜಿಪಿ ಅಲೋಕ್‌ ಮೋಹನ್‌, ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ಸೂದ್‌, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಇತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!