ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು (ಜೂ.25): ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮುಂದಿನ 24 ಗಂಟೆಯಲ್ಲಿ 115 ಮಿ.ಮೀ ನಿಂದ 204 ಮಿ.ಮೀ ವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರಾವಳಿಯ ಮೂರು ಜಿಲ್ಲೆಗಳಿಗೂ ಆರೆಂಜ್ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.
ಜತೆಗೆ, ಸಮುದ್ರದಲ್ಲಿ 40 ರಿಂದ 55 ಕಿ.ಮೀ ವೇಗದಲ್ಲಿ ಜೋರು ಗಾಳಿ ಬೀಸುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಿಗೆ ಮುಂಗಾರು ವ್ಯಾಪಿಸಿದ್ದು, ಉತ್ತಮ ಮಳೆಯಾಗುತ್ತಿದೆ. ಮುಂದಿನ ಐದು ದಿನ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಬಿಎಂಪಿ ಚುನಾವಣೆ ಮಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್
ಕಳೆದ ಶುಕ್ರವಾರ ಕಾರವಾರದಲ್ಲಿ ಅತಿ ಹೆಚ್ಚು 14 ಸೆಂ.ಮೀ ಮಳೆಯಾದ ವರದಿಯಾಗಿದೆ. ಉಳಿದಂತೆ ಹೊನ್ನಾವರದಲ್ಲಿ 12, ಮಂಕಿ, ಕುಮಟಾದಲ್ಲಿ ತಲಾ 10, ಗೋಕರ್ಣ, ಶಿರಾಲಿಯಲ್ಲಿ ತಲಾ 9, ಅಂಕೋಲಾ ಗೇರುಸೊಪ್ಪಾ, ಪಣಂಬೂರಿನಲ್ಲಿ ತಲಾ 7 ಸೆಂ.ಮೀ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಡಗು, ಕರಾವಳಿಯಲ್ಲಿ ಮಳೆ: ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ ಸೇರಿ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬಿ.ಕೆ.ಗ್ರಾಮದಲ್ಲಿ ಸಿಡಿಲಿಗೆ ರೈತನೊಬ್ಬ ಬಲಿಯಾಗಿದ್ದಾನೆ.
ಗ್ರಾಮದ ವಾಸಿ ಬಸಪ್ಪ ದುರಗಪ್ಪ ಮೇತ್ರಿ (40) ಎಂಬುವರು ಶನಿವಾರ ಮಧ್ಯಾಹ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿಯಿತು. ಇದೇ ವೇಳೆ, ಅವರ ಜೊತೆ ಕೆಲಸ ಮಾಡುತ್ತಿದ್ದ ಗ್ರಾಮದ ವಿಠ್ಠಲ ಕೋಣಪ್ಪ ಮಾದರ (38) ಎಂಬುವರು ಗಾಯಗೊಂಡಿದ್ದು, ಮುಧೋಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿರಾಡಿ ಘಾಟಲ್ಲಿ ಸುರಂಗ ಮಾರ್ಗ ಯೋಜನೆಗೆ ಸರ್ಕಾರ ಮರುಜೀವ: ಸಚಿವ ಸತೀಶ್ ಜಾರಕಿಹೊಳಿ
ಕರಾವಳಿ, ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು, ಉಡುಪಿ ನಗರಕ್ಕೆ ನೀರು ಪೂರೈಸುವ ಸ್ವರ್ಣಾ ನದಿಯ ನೀರಿನ ಮಟ್ಟದಲ್ಲಿ ಒಂದೇ ದಿನ 2.45 ಮೀಟರ್‌ನಷ್ಟುನೀರು ಏರಿಕೆಯಾಗಿದೆ. ಕಾರವಾರ ತಾಲೂಕಿನ ಕಡವಾಡದಲ್ಲಿ ಕೈಗಾ-ಕಾರವಾರ ಬಸ್ಸು, ಭಟ್ಕಳ ತಾಲೂಕಿನ ಹಿಂದೂ ಕಾಲನಿ ರಸ್ತೆಯಲ್ಲಿ ಖಾಸಗಿ ಶಾಲಾ ಬಸ್ ಕೆಸರಿನಲ್ಲಿ ಹೂತುಕೊಂಡು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಹಂಪಿಯಲ್ಲಿ ಮಹಾರಾಷ್ಟ್ರದಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ಕಾರಿನ ಮೇಲೆ ಮಾವಿನಮರದ ಟೊಂಗೆಯೊಂದು ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.