* ಉಷ್ಣ ವಿದ್ಯುತ್ ಉತ್ಪಾದನೆ 5600 ಮೆ.ವ್ಯಾ. ಬದಲು 2764 ಮೆ.ವ್ಯಾ.ಗೆ ಕುಸಿತ: ಶೇ.52 ಕೊರತೆ
* ರಾಯಚೂರು, ಬಳ್ಳಾರಿಯಲ್ಲಿ 2 ಘಟಕ ಸ್ಥಗಿತ
* ಇದೇ ಸ್ಥಿತಿ ಮುಂದುವರಿದರೆ ರಾಜ್ಯಕ್ಕೆ ಕತ್ತಲೆ ಭೀತಿ
ಶ್ರೀಕಾಂತ್ ಎನ್.ಗೌಡಸಂದ್ರ
ಬೆಂಗಳೂರು(ಅ.12): ಕಲ್ಲಿದ್ದಲು ಕೊರತೆಯಿಂದ(Coal Crisis) ರಾಜ್ಯದ ವಿದ್ಯುತ್ (Electricity) ಉತ್ಪಾದನೆ ಹಾಗೂ ಪೂರೈಕೆ ಮೇಲೆ ಪರಿಣಾಮ ಆಗುವುದಿಲ್ಲ ಎಂದು ಸರ್ಕಾರ ಹೇಳುತ್ತಲೇ ಇದ್ದರೂ ರಾಜ್ಯದಲ್ಲಿ ಕಳೆದ ಎರಡು ತಿಂಗಳಿಗೆ ಹೋಲಿಸಿದರೆ ಕಲ್ಲಿದ್ದಲು ಕೊರತೆಯಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಶೇ.52ರಷ್ಟು ಕುಸಿದಿದೆ. ಅಲ್ಲದೆ, ರಾಜ್ಯದ ಒಟ್ಟಾರೆ ವಿದ್ಯುತ್ ಉತ್ಪಾದನೆಯೂ ಶೇ.52ರಷ್ಟುಕುಸಿತ ಕಂಡಿದೆ.
Coal Crisis| ಕಲ್ಲಿದ್ದಲು ಸಮಸ್ಯೆ ಇಲ್ಲ: ವಿದ್ಯುತ್ ಕೊರತೆ ಆಗಲ್ಲ: ಸಚಿವ ಜೋಶಿ
ಇದರ ಪರಿಣಾಮ ಬೆಂಗಳೂರು(Bengaluru) ಸೇರಿದಂತೆ ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಭಾರಿ ವಿದ್ಯುತ್ ಕಡಿತ ಆರಂಭವಾಗಿದೆ. ರಾಜ್ಯಾದ್ಯಂತ ವಿವಿಧ ಎಸ್ಕಾಂಗಳು(ESCOM) ವಿದ್ಯುತ್ ಕಡಿತದ ಪರ್ವ ಶುರು ಮಾಡಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ರಾಜ್ಯಕ್ಕೆ ಕಗ್ಗತ್ತಲು ಆವರಿಸುವ ಆತಂಕ ಎದುರಾಗಿದೆ.
ಹೌದು, ರಾಜ್ಯವು ಉಷ್ಣ ವಿದ್ಯುತ್, ಜಲವಿದ್ಯುತ್ ಹಾಗೂ ಸೌರ ವಿದ್ಯುತ್‌ನಿಂದ ಗರಿಷ್ಠ 8,852 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಅಲ್ಲದೆ, ನಿತ್ಯ ಸರಾಸರಿ 5,600 ಮೆ.ವ್ಯಾಟ್‌ನಷ್ಟು ಉಷ್ಣ ವಿದ್ಯುತ್ ಉತ್ಪಾದಿಸುತ್ತಿತ್ತು. ಇದೀಗ ಕಲ್ಲಿದ್ದಲು ಕೊರತೆಯಿಂದ ಈ ವಿದ್ಯುತ್ ಉತ್ಪಾದನೆ 2,764 ಮೆ.ವ್ಯಾಟ್‌ಗೆ ಕುಸಿದಿದೆ. ಕಳೆದ ಎರಡು ತಿಂಗಳಿಗೆ ಹೋಲಿಸಿದರೆ ಉತ್ಪಾದನೆ ಶೇ.52ರಷ್ಟು ಕುಸಿದಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಕ್ಷಾಮದ ಲಕ್ಷಣಗಳು ಗೋಚರಿಸಿವೆ.
ರಾಯಚೂರು ಉಷ್ಣ ವಿದ್ಯುತ್ ಸ್ಥಾವರ (RTCS), ಬಳ್ಳಾರಿಯ ಬಿಪಿಟಿಎಸ್, ಯರಮರಸ್‌ನ ವೈಟಿಪಿಎಸ್ ಘಟಕಗಳಲ್ಲಿ ಕಲ್ಲಿದ್ದಲಿನಿಂದ ಗರಿಷ್ಠ 5,020 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದೆ. ಕಳೆದ ಆ.10ರಂದು ಮೂರು ಘಟಕಗಳಿಂದ 3,132 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ, ಪ್ರಸ್ತುತ ಕಲ್ಲಿದ್ದಲು ಕೊರತೆಯಿಂದ ಅ.10ಕ್ಕೆ ಈ ಪ್ರಮಾಣ 1,524 ಮೆ.ವ್ಯಾಟ್‌ಗೆ ಕುಸಿದಿದೆ. ಅಲ್ಲದೆ, ರಾಯಚೂರು ಹಾಗೂ ಬಳ್ಳಾರಿ ಉಷ್ಣ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ಎರಡು ಉತ್ಪಾದನಾ ಘಟಕ ಸ್ಥಗಿತಗೊಳಿಸಿರುವ ಬಗ್ಗೆ ಇಂಧನ ಇಲಾಖೆಯೇ ಅಧಿಕೃತವಾಗಿ ಒಪ್ಪಿಕೊಂಡಿದೆ.
Coal Crisis| ಕಲ್ಲಿದ್ದಲು ಸಮಸ್ಯೆ ಇಲ್ಲ: ವಿದ್ಯುತ್ ಕೊರತೆ ಆಗಲ್ಲ: ಸಚಿವ ಜೋಶಿ
ಆ.10ರಂದು ಗರಿಷ್ಠ 1,113 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದ ಆರ್‌ಟಿಪಿಎಸ್ 475 ಮೆ.ವ್ಯಾಟ್‌ಗೆ, 1,430 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದ ಬಿಟಿಪಿಎಸ್ 342 ಮೆ.ವ್ಯಾಟ್‌ಗೆ ಕುಸಿದಿದೆ. ಕಲ್ಲಿದ್ದಲಿನ ತೀವ್ರ ಕೊರತೆಯಿಂದಾಗಿಯೇ ಉಷ್ಣ ವಿದ್ಯುತ್ ಘಟಕಗಳು ಒಟ್ಟು ಸಾಮರ್ಥ್ಯದ ಶೇ.30 ಹಾಗೂ ಸರಾಸರಿ ಉತ್ಪಾದನೆಯ ಶೇ.50ಕ್ಕೆ ಕುಸಿತ ಕಂಡಿವೆ. ಹೀಗಾಗಿ ರಾಜ್ಯದಲ್ಲಿ ನಿತ್ಯ ಸರಾಸರಿ ಉತ್ಪಾದನೆಯಾಗುತ್ತಿದ್ದ 5,600 ಮೆ.ವ್ಯಾಟ್ ವಿದ್ಯುತ್ ಪ್ರಮಾಣ ಅ.10ರ ವೇಳೆಗೆ ಕೇವಲ 2,764 ಮೆ.ವ್ಯಾಟ್‌ಗೆ (ಶೇ.49) ಕುಸಿದಿದೆ.
ಇದರ ಬೆನ್ನಲ್ಲೇ ಎನ್‌ಪಿಎಚ್ (ಕಾಳಿನದಿ) ವಿದ್ಯುತ್ ಉತ್ಪಾದನೆ 515 ಮೆ.ವ್ಯಾಟ್‌ನಿಂದ 100 ಮೆ.ವ್ಯಾಟ್‌ಗೆ ಕುಸಿದಿದೆ. ಈ ಎಲ್ಲಾ ಕಾರಣಗಳಿಂದಾಗಿ ವಿದ್ಯುತ್‌ನ ತೀವ್ರ ಅಭಾವ ಸೃಷ್ಟಿಯಾಗಿದೆ.
ಕೇಂದ್ರದಿಂದಲೂ ಹೆಚ್ಚುವರಿ ವಿದ್ಯುತ್ ಇಲ್ಲ:
ರಾಜ್ಯದ ವಿದ್ಯುತ್ ಬೇಡಿಕೆಯನ್ನು ರಾಜ್ಯದ ಉತ್ಪಾದನಾ ಮೂಲಗಳಿಂದಲೇ ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರದ ವಿದ್ಯುತ್ ಮೂಲಗಳಿಂದ 17 ಸಾವಿರ ಮೆ.ವ್ಯಾಟ್‌ವರೆಗೆ (ಒಟ್ಟು ಸಾಮರ್ಥ್ಯ) ವಿದ್ಯುತ್ ಪಡೆಯುವ ಅವಕಾಶವಿದೆ. ಆದರೆ, ಬೇಡಿಕೆಗೆ ತಕ್ಕಂತೆ ವಿವಿಧ ಮೂಲಗಳಿಂದ 5 ಸಾವಿರದಿಂದ 6 ಸಾವಿರ ಮೆ.ವ್ಯಾಟ್ ವಿದ್ಯುತ್ ರಾಜ್ಯಕ್ಕೆ ಪೂರೈಕೆಯಾಗುತ್ತಿತ್ತು. ಇದರಿಂದಾಗಿ ರಾಜ್ಯದ ಉತ್ಪಾದನೆ ಹಾಗೂ ಕೇಂದ್ರದ ಮೂಲಗಳ ವಿದ್ಯುತ್ ಸೇರಿದಂತೆ ಗರಿಷ್ಠ 11,000 ಮೆ.ವ್ಯಾಟ್ ವಿದ್ಯುತ್ ಲಭ್ಯವಾಗುತ್ತಿತ್ತು.
Coal Crisis| ಕಲ್ಲಿದ್ದಲು ಸಮಸ್ಯೆ ಇಲ್ಲ: ವಿದ್ಯುತ್ ಕೊರತೆ ಆಗಲ್ಲ: ಸಚಿವ ಜೋಶಿ
ಆ.10ರಂದು ಕೇಂದ್ರದ ಮೂಲಗಳಿಂದ 5,406 ಮೆ.ವ್ಯಾಟ್ ವಿದ್ಯುತ್ ಪೂರೈಕೆಯಾಗಿತ್ತು. ಇದೀಗ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿತಗೊಂಡಿದ್ದರೂ, 4,807 ಮೆ.ವ್ಯಾಟ್ ವಿದ್ಯುತ್ ಮಾತ್ರ ಕೇಂದ್ರದಿಂದ ಪೂರೈಕೆ ಮಾಡಲಾಗಿದೆ. ಕಲ್ಲಿದ್ದಲು ಕೊರತೆಯಿಂದ ಕೇಂದ್ರದ ಗ್ರಿಡ್‌ಗೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಕೇಂದ್ರವೂ ನೆರವು ನೀಡುವ ಸ್ಥಿತಿಯಲ್ಲಿಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಆ.10 ರಂದು ಪೂರೈಕೆಯಾದ ವಿದ್ಯುತ್:
ಗರಿಷ್ಠ (ಪೀಕ್ ಲೋಡ್) - ಕನಿಷ್ಠ (ಮಿನಿಮಮ್ ಲೋಡ್)
11,023 ಮೆ.ವ್ಯಾಟ್ - 6,062 ಮೆ.ವ್ಯಾಟ್
ಅ.10 ರಂದು ಪೂರೈಕೆಯಾದ ವಿದ್ಯುತ್:
ಗರಿಷ್ಠ (ಪೀಕ್‌ಲೋಡ್) - ಕನಿಷ್ಠ (ಮಿನಿಮಮ್ ಲೋಡ್)
7,587 ಮೆ.ವ್ಯಾಟ್ - 5,115 ಮೆ.ವ್ಯಾಟ್
ಆಗಸ್ಟ್ 10ರ ಉಷ್ಣ ಸ್ಥಾವರಗಳ ವಿದ್ಯುತ್ ಉತ್ಪಾದನೆ (ಮೆ.ವ್ಯಾಟ್‌ಗಳಲ್ಲಿ)
ವಿದ್ಯುತ್ ಉತ್ಪಾದನಾ ಕೇಂದ್ರ- ಗರಿಷ್ಠ ಲೋಡ್ - ಕನಿಷ್ಠ ಲೋಡ್
ಆರ್‌ಟಿಪಿಎಸ್ - 1,113 - 970
ಬಿಟಿಪಿಎಸ್- 1,430 -764
ವೈಟಿಪಿಎಸ್- 589- 540
ಒಟ್ಟು - 3132 -2,274
ಅ.10ರ ವಿದ್ಯುತ್ ಉತ್ಪಾದನೆ
ವಿದ್ಯುತ್ ಉತ್ಪಾದನಾ ಕೇಂದ್ರ- ಗರಿಷ್ಠ ಲೋಡ್ - ಕನಿಷ್ಠ ಲೋಡ್
ಆರ್‌ಟಿಪಿಎಸ್ - 475 -494
ಬಿಟಿಪಿಎಸ್ - 342 - 384
ವೈಟಿಪಿಎಸ್ - 707 - 669
ಒಟ್ಟು - 1524 - 1547
ಬೆಸ್ಕಾಂ ವ್ಯಾಪ್ತಿಯಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ
ಬೆಸ್ಕಾಂ ವ್ಯಾಪ್ತಿಯ ವಿವಿಧ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಮಂಗಳವಾರ ಹಾಗೂ ಬುಧವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ತುಮಕೂರು ವೃತ್ತದ ತುಮಕೂರು, ಮಧುಗಿರಿ, ಕುಣಿಗಲ್, ತಿಪಟೂರು, ದಾವಣಗೆರೆ ವೃತ್ತದ ದಾವಣಗೆರೆ, ಹರಿಹರ, ಹಿರಿಯೂರು ಹಾಗೂ ಚಿತ್ರದುರ್ಗ, ರಾಮನಗರ ವೃತ್ತದ ರಾಮನಗರ, ಚಂದಾಪುರ, ಕನಕಪುರ, ಮಾಗಡಿ ವಿಭಾಗ, ಕೋಲಾರ ವೃತ್ತದ ಕೋಲಾರ, ಕೆಜಿಎಫ್, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ವಿಭಾಗಗಳಲ್ಲಿ ಅ.12 ಹಾಗೂ 13 ರಂದು ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.