ರಾಜ್ಯದಲ್ಲಿ ಕೊರೋನಾ ಮಾತ್ರ ಇದ್ದವರಾರೂ ಸತ್ತಿಲ್ಲ!| ಬೇರೆ ಗಂಭೀರ ಅನಾರೋಗ್ಯ ಹೊಂದಿದ್ದವರಷ್ಟೇ ಕೊರೋನಾದಿಂದ ಸಾವು| ಆರೋಗ್ಯವಂತ ವ್ಯಕ್ತಿ ಮೇಲೆ ಕೊರೋನಾ ಮಾರಣಾಂತಿಕ ಪರಿಣಾಮ ಇಲ್ಲ
ಬೆಂಗಳೂರು(ಮೇ.26): ರಾಜ್ಯದಲ್ಲಿ ಯಾವುದೇ ಆರೋಗ್ಯವಂತ ಹಾಗೂ ದೀರ್ಘಕಾಲೀನ, ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರದ ಯಾವೊಬ್ಬ ಕೊರೋನಾ ಸೋಂಕಿತರೂ ಮೃತಪಟ್ಟಿಲ್ಲ. ಆದರೆ, ಮೃತಪಟ್ಟವರಲ್ಲಿ ಬಹುತೇಕರು ಸೋಂಕು ತಗುಲಿದ ನಂತರ ತಾವು ಈ ಮೊದಲೇ ಹೊಂದಿದ್ದ ರೋಗಗಳು ಉಲ್ಬಣಗೊಂಡು ಜೀವ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕರೋನಾ ಸಂಪೂರ್ಣ ಆರೋಗ್ಯವಂತ ವ್ಯಕ್ತಿ ಮೇಲೆ ಅಂತಹ ಪರಿಣಾಮ ಬೀರಿಲ್ಲ. ಈವರೆಗೂ ವರದಿಯಾಗಿರುವ 2,182 ಪ್ರಕರಣಗಳಲ್ಲಿ 1912 ಮಂದಿಗೆ ಸೋಂಕಿನ ಲಕ್ಷಣಗಳೂ ಸಹ ವರದಿಯಾಗಿಲ್ಲ.
ದೇಶದ ಸರಾಸರಿಗೆ ಹೋಲಿಸಿಕೊಂಡರೆ ಸೋಂಕಿತರ ಸಾವಿನ ಸಂಖ್ಯೆ ತೀವ್ರ ಕಡಿಮೆ ಇದೆ. ದೇಶದಲ್ಲಿ ಪ್ರತಿ 10 ಲಕ್ಷ ಮಂದಿಗೆ 33.3 ರಷ್ಟುಮಂದಿ ಸೋಂಕಿತರು ಸಾವನ್ನಪ್ಪಿದ್ದರೆ ರಾಜ್ಯದಲ್ಲಿ 6.9 ಮಂದಿ ಮಾತ್ರ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಬರೋಬ್ಬರಿ 155 ಮಂದಿ ಸಾವನ್ನಪ್ಪಿದ್ದಾರೆ.
ಕೊರೋನಾ ಕೇಸ್ ಹೆಚ್ಚಳ: 50ನೇ ಸ್ಥಾನದಲ್ಲಿದ್ದ ಭಾರತ, ವಿಶ್ವದಲ್ಲೇ ನಂ.10!
ರಾಜ್ಯದಲ್ಲಿ ಈವರೆಗೂ 45 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದು, ಇದರಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಳಿದ 43 ಮಂದಿಯಲ್ಲಿ ಎಲ್ಲರೂ ಸಾರಿ (ತೀವ್ರ ಉಸಿರಾಟ), ಕಿಡ್ನಿ ವೈಫಲ್ಯ, ಹೃದಯ ಸಮಸ್ಯೆ, ಎಚ್‌ಐವಿ, ಕ್ಯಾನ್ಸರ್‌ನಂತಹ ದೀರ್ಘಕಾಲೀನ ಅನಾರೋಗ್ಯಗಳು ಇದ್ದವು. ಹೀಗಾಗಿ ಮೃತಪಟ್ಟವರಲ್ಲಿ ಬಹುತೇಕರು ವೃದ್ಧರಾಗಿದ್ದು, ರೋಗ ನಿರೋಧಕ ಶಕ್ತಿ ಇಲ್ಲದೆ ಹಾಗೂ ಬೇರೆ ಅನಾರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
60 ವರ್ಷ ಮೇಲ್ಪಟ್ಟವರು 27ಮಂದಿ:
ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಪೈಕಿ 10 ಮಂದಿ 70 ವರ್ಷ ಮೇಲ್ಪಟ್ಟವರು, 17 ಮಂದಿ 60ರಿಂದ 70 ವರ್ಷ ವಯಸ್ಸಿನವರು, 12 ಮಂದಿ 50ರಿಂದ 60 ವರ್ಷ, 4 ಮಂದಿ 40ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ. ಉಳಿದಂತೆ 30 ವರ್ಷ ಮೇಲ್ಪಟ್ಟಒಬ್ಬ ವ್ಯಕ್ತಿ ಮಾತ್ರ ಮೃತಪಟ್ಟಿದ್ದು, ಅವರಿಗೆ ಎಚ್‌ಐವಿಯಂತಹ ದೀರ್ಘಕಾಲೀನ ಗಂಭೀರ ಅನಾರೋಗ್ಯ ಸಮಸ್ಯೆ ಇತ್ತು. ಹೀಗಾಗಿ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲೇ ಅಧಿಕ ಸಾವು:
ಒಟ್ಟು ಸಾವಿನಲ್ಲಿ ಬೆಂಗಳೂರಿನಲ್ಲಿ 9, ಕಲಬುರಗಿ 7, ದಕ್ಷಿಣ ಕನ್ನಡ 7, ದಾವಣಗೆರೆ, ವಿಜಯಪುರ ತಲಾ 4, ತುಮಕೂರು, ಚಿಕ್ಕಬಳ್ಳಾಪುರ, ಬೀದರ್ ತಲಾ 2, ಬೆಳಗಾವಿ, ಉಡುಪಿ, ಬಾಗಲಕೋಟೆ, ಬಳ್ಳಾರಿ, ಗದಗ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.
ರಾಜ್ಯದ 8 ಜಿಲ್ಲೆಗಳಲ್ಲಿ ಈಗ ಕೊರೋನಾ ಶತಕ!
357 ವೃದ್ಧರಿಗೆ ಸೋಂಕು, ಐಸಿಯುನಲ್ಲಿ 17 ಮಂದಿ
ಒಟ್ಟು 2183 ಪ್ರಕರಣಗಳಲ್ಲಿ 357 ಮಂದಿ ವೃದ್ಧರಿದ್ದಾರೆ. 60 ವರ್ಷ ಮೇಲ್ಪಟ್ಟವರು 181 ಮಂದಿ, 50ರಿಂದ 60 ವರ್ಷ ವಯಸ್ಸಿನ 176 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಅರ್ಧದಷ್ಟುಮಂದಿ ಇನ್ನೂ ಆಸ್ಪತ್ರೆಗಳಲ್ಲೇ ಇದ್ದಾರೆ. ಈ ಪೈಕಿ 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.