
ಬೆಂಗಳೂರು(ಮೇ26): ಲಾಕ್‌ಡೌನ್ ಭೀತಿಯಿಂದಾಗಿ ಊರಿಗೆ ಹೋದ ವೇಳೆ ಕೆ.ಜಿ.ಹಳ್ಳಿ ವ್ಯಾಪ್ತಿಯ ಕಾಚರಕನಹಳ್ಳಿಯಲ್ಲಿನ ಕೂಲಿ ಕಾರ್ಮಿಕರ ಶೆಡ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಿ ನೆಲಸಮಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಕೂಲಿ ಕಾರ್ಮಿಕರು ಕೆ.ಜಿ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. 30 ಗುಡಿಸಲುಗಳಿಗೆ ಬೆಂಕಿ ಹಾಕಿದ್ದರೆ, ಉಳಿದ ಸುಮಾರು 50-60 ಗುಡಿಸಲುಗಳನ್ನು ದುಷ್ಕರ್ಮಿಗಳು ಕಿತ್ತು ಹಾಕಿದ್ದಾರೆ. ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಾಣಸವಾಡಿ ಎಸಿಪಿ ಹೇಳಿದ್ದಾರೆ.
ಕಾಚರಕನಹಳ್ಳಿಯ ವಿಸ್ತಾರವಾದ ಕೆರೆ ಪ್ರದೇಶದಲ್ಲಿ ಉತ್ತರ ಕರ್ನಾಟಕ ಜಿಲ್ಲೆಯ ಸುಮಾರು 300ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಶೆಡ್ ಹಾಕಿಕೊಂಡಿದ್ದು, ಕಳೆದ ಹತ್ತು ವರ್ಷಗಳಿಂದ ಇಲ್ಲಿಯೇ ವಾಸವಿದ್ದಾರೆ. ಶೆಡ್‌ಗಳ ಸಮೀಪ ಯಾವುದೇ ಮನೆಗಳಿಲ್ಲ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಶೆಡ್‌ಗಳಿಗೆ ಬೆಂಕಿ ಹಾಕಿದ್ದು, ಕೆಲವು ಶೆಡ್‌ಗಳನ್ನು ಕಿತ್ತು ಹಾಕಿದ್ದಾರೆ. ಅಂದಾಜು 80ಕ್ಕೂ ಹೆಚ್ಚು ಶೆಡ್‌ಗಳು ಸಂಪೂರ್ಣ ಹಾನಿಯಾಗಿವೆ. ಈವರೆಗೆ ಯಾರೂ ಕೂಡ ಇಲ್ಲಿನ ಕೂಲಿ ಕಾರ್ಮಿಕರಿಗೆ ತೊಂದರೆ ಕೊಟ್ಟಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಕ್ಕಲೆಬ್ಬಿಸಲು ಈ ರೀತಿ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದರು.
ಊರುಗಳಿಗೆ ತೆರಳಿದ್ದ ಸಾರ್ವಜನಿಕರು ಪುನಃ ಗುಡಿಸಲುಗಳಿಗೆ ವಾಪಸ್ ಆಗಿದ್ದಾರೆ. ಗುಡಿಸಲು ಹಾನಿಯಾಗಿರುವ ಕಾರಣ ಕುಟುಂಬಗಳು ರಸ್ತೆ ಸಮೀಪವೇ ಮಲಗುತ್ತಿದ್ದು, ಅಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದೇವೆ. ಗುಡಿಸಲಿಗೆ ಹಾನಿ ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ನಿವಾಸಿಯೊಬ್ಬರು ಆಗ್ರಹಿಸಿದ್ದಾರೆ.
ಶಾಲಾ ಪುಸ್ತಕ, ಬಟ್ಟೆ ಬೆಂಕಿಗಾಹುತಿ:
ಇನ್ನು ಮೂವತ್ತು ಗುಡಿಸಲುಗಳಿಗೆ ಬೆಂಕಿ ಹಾಕಿರುವ ಹಿನ್ನೆಲೆಯಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಪುಸ್ತಕ ಹಾಗೂ ಬಟ್ಟೆಗಳು, ಕೆಲವೊಂದು ದಾಖಲೆಗಳು ಬೆಂಕಿಗಾಹುತಿಯಾಗಿವೆ. ಇದರದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿದ್ದು, ಅವರಿಗೆ ಓದಲು ಪುಸ್ತಕಗಳಿಲ್ಲದಂತಾಗಿವೆ ಎಂದು ಪೋಷಕರೊಬ್ಬರು ಅಳಲು ತೋಡಿಕೊಂಡರು.
ಲಾಕ್‌ಡೌನ್‌ನಿಂದಾಗಿ ನಮ್ಮೂರಿಗೆ ಹೋಗಿದ್ದೇವು, ತುಂಬ ಕಷ್ಟದಲ್ಲಿದ್ದು, ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ನಮ್ಮ ಆಸ್ತಿ ಎಂದು ಕೆಲವರು ಈ ರೀತಿ ಮಾಡುತ್ತಿದ್ದಾರೆ. ಶಾಲಾ ಪುಸ್ತಕಗಳೆಲ್ಲಾ ನಾಶವಾಗಿದೆ. ಮಳೆ ಬಂದರೆ ಇರಲು ಸೂರಿಲ್ಲ. ರಸ್ತೆಯಲ್ಲಿ ಅಡುಗೆ, ಊಟ ಮಾಡುವ ದುಸ್ಥಿತಿ ಇದ್ದು, ನಮಗೆ ಬದುಕುವ ಹಕ್ಕಿಲ್ಲವೇ ಎಂದು ಕೂಲಿ ಕಾರ್ಮಿಕ ವ್ಯಕ್ತಿ ಕಣ್ಣೀರು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ