
ಎಂ.ಎಲ್. ಲಕ್ಷ್ಮೀಕಾಂತ್
ಬೈತೂಲ್ (ಗೋವಾ) : ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳ್ಳಂಬೆಳಗ್ಗೆ ನೆಲಕ್ಕಪ್ಪಳಿಸುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಅವರು ಹತರಾಗಿದ್ದಾರೆ. ಕೂಡಲೇ ಜನರು, ರಕ್ಷಣಾ ತಂಡ ಸ್ಥಳಕ್ಕೆ ದೌಡಾಯಿಸಿವೆ. ಸುಮ್ಮನೆ ಊಹಿಸಿಕೊಳ್ಳಿ. ತೀರದಿಂದ ನೂರಾರು ಕಿ.ಮೀ. ದೂರದಲ್ಲಿರುವ ತೈಲ ಬಾವಿಗಳಲ್ಲಿ ದುಡಿಯಲು ನಿತ್ಯ ಹೆಲಿಕಾಪ್ಟರ್‌ಗಳಲ್ಲಿ ಪ್ರಯಾಣಿಸುವ ತೈಲ ಕಂಪನಿಗಳ ಸಿಬ್ಬಂದಿಯ ಕಾಪ್ಟರ್ ಕೂಡ ಪವಾರ್ ವಿಮಾನದ ರೀತಿಯಲ್ಲಿ ಸಮುದ್ರ ಮಧ್ಯೆ ಪತನಗೊಂಡರೆ?!
ಅಲ್ಲಿ ರಕ್ಷಣೆಗೆ ಯಾರೂ ಇರುವುದಿಲ್ಲ. ಆದರೂ ಅವರು ಹೊರಗೆ ಬರುತ್ತಾರೆ! ಅದು ಹೇಗೆ ಎಂಬ ಪ್ರಶ್ನೆಗೆ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಕಂಪನಿಯಾಗಿರುವ ಒಎನ್‌ಜಿಸಿ ನೀಡುವ ತರಬೇತಿ.
ನಾಲ್ಕನೇ ಆವೃತ್ತಿಯ ‘ಇಂಡಿಯಾ ಎನರ್ಜಿ ವೀಕ್ (ಭಾರತ ಇಂಧನ ಸಪ್ತಾಹ)- 2026’ ದಕ್ಷಿಣ ಗೋವಾದ ಬೇತೂಲ್‌ನಲ್ಲಿರುವ ಒಎನ್‌ಜಿಸಿಗೆ ಸೇರಿದ ದೇಶದ ಅತಿದೊಡ್ಡ ಹಾಗೂ ವಿಶ್ವದರ್ಜೆಯ ಅಡ್ವಾನ್ಸ್ಡ್ ಟ್ರೇನಿಂಗ್ ಇನ್ಸ್‌ಟಿಟ್ಯೂಟ್‌ನಲ್ಲಿ ಆಯೋಜನೆಗೊಂಡಿದೆ. ಅದರಲ್ಲಿ ಭಾಗಿಯಾಗಿರುವ ದೇಶದ ವಿವಿಧ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳಿಗೆ ಅಲ್ಲಿರುವ ತರಬೇತಿಯ ಪ್ರಾತ್ಯಕ್ಷಿಕೆಯನ್ನು ಬುಧವಾರ ಒಎನ್‌ಜಿಸಿ ಸಿಬ್ಬಂದಿ ಪ್ರಸ್ತುತಪಡಿಸಿದರು.
ಬೇತೂಲ್‌ನಲ್ಲಿ 250 ಎಕರೆ ಬರಡು ನೆಲದಲ್ಲಿ ಒಎನ್‌ಜಿಸಿಯ ತರಬೇತಿ ಕೇಂದ್ರಗಳು, ಸಮ್ಮೇಳನ ಸಭಾಂಗಣಗಳು ಹಾಗೂ ಪ್ರದರ್ಶನ ಕೇಂದ್ರಗಳ ಸಾಮ್ರಾಜ್ಯವೇ ಸೃಷ್ಟಿಯಾಗಿದೆ. ತೈಲ ಬಾವಿಗಳಿಂದ ತೈಲ- ಅನಿಲ ನಿಯಂತ್ರಣ ಮೀರಿದ ಒತ್ತಡದಿಂದ ರಭಸವಾಗಿ ಹೊರಗೆ ಬಂದರೆ ಅದನ್ನು ಹತ್ತಿಕ್ಕುವುದು ಹೇಗೆ? ತೈಲ ಟ್ಯಾಂಕರ್‌ಗಳಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಾಗ ನಂದಿಸುವುದು ಹೇಗೆ? ಸಿಬ್ಬಂದಿ ಯಾವ ರೀತಿ ಸಮನ್ವಯತೆಯಿಂದ ಕೆಲಸ ಮಾಡಬೇಕು? ಕಾರ್ಯಾಚರಣೆ ಮುಗಿದ ಬಳಿಕ ತಲೆ ಎಣಿಕೆ ಮಾಡಿ ಎಲ್ಲರೂ ಇದ್ದಾರಾ ಎಂಬುದನ್ನು ಯಾವ ರೀತಿ ಖಚಿತಪಡಿಸಿಕೊಳ್ಳಬೇಕು ಎಂಬುದೂ ಸೇರಿ ಮೈನವಿರೇಳಿಸುವ ಸಾಹಸ ಹೊಂದಿದ್ದ ಪ್ರಾತ್ಯಕ್ಷಿಕೆಯನ್ನು ಎತ್ತರದ ಗೋಪುರದಲ್ಲಿ ಪತ್ರಕರ್ತರನ್ನು ಕೂರಿಸಿ ಒಎನ್‌ಜಿಸಿ ಪ್ರಸ್ತುತಪಡಿಸಿತು.
ಸಮುದ್ರದಲ್ಲಿ ಕಾಪ್ಟರ್ ಪತನ ಹೊಂದಿದಾಗ ಅದರ ಒಳಗೆ ಇರುವವರು ಯಾವ ರೀತಿ ಪಾರಾಗಿ ಹೊರಬರಬೇಕು ಎಂಬ ತರಬೇತಿಗಾಗಿಯೇ ಸಮುದ್ರ ರಕ್ಷಣಾ ಕೇಂದ್ರ ಎಂಬ ಘಟಕವಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ 2024ರಲ್ಲಿ ಉದ್ಘಾಟನೆಯಾದ ಘಟಕವಿದು. ಈ ಕೇಂದ್ರದಲ್ಲಿ ತರಬೇತಿ ಪಡೆಯುವವರಿಗೆ ಮುಖ್ಯವಾಗಿ ಕಾಪ್ಟರ್ ಪತನವಾದಾಗ ಎದೆಗುಂದದೆ, ಬದುಕಲು ಏನು ಮಾಡಬೇಕು ಎಂಬುದನ್ನು ತರಬೇತಿ ನೀಡಲಾಗುತ್ತದೆ. ಜೀವ ರಕ್ಷಕ ಜಾಕೆಟ್‌ಗಳನ್ನು ಧರಿಸಿ, ತುರ್ತು ನಿರ್ಗಮನ ದ್ವಾರದ ಮೂಲಕ ಯಾವ ರೀತಿ ಹೊರಗೆ ಬರಬೇಕು, ಬಂದ ಮೇಲೆ ಯಾವ ರೀತಿ ಒಬ್ಬರ ಕೈಯನ್ನು ಒಬ್ಬರು ಹಿಡಿದು ಜೀವ ಉಳಿಸಿಕೊಳ್ಳಬೇಕು ಎಂಬುದನ್ನು ಕಲಿಸಿಕೊಡಲಾಗುತ್ತದೆ. ಕಾಪ್ಟರ್ ಪತನಗೊಂಡ ಬಳಿಕ ರಕ್ಷಣಾ ತಂಡಗಳು ಆಗಮಿಸುವವರೆಗೂ ಬದುಕುಳಿಯುವ ಕಲೆಯನ್ನು ಇಲ್ಲಿ ಹೇಳಿಕೊಡಲಾಗುತ್ತದೆ.
ಸಾಗರ, ಕತ್ತಲು, ಹೆಲಿಕಾಪ್ಟರ್ ಶಬ್ದ ರೀತಿಯ ಕೃತಕ ವಾತಾವರಣ ನಿರ್ಮಿಸಿ ಕ್ರೇನ್‌ನಿಂದ ಕಾಪ್ಟರ್ ಪ್ರತಿಕೃತಿ ಬೀಳಿಸಿ, ಅದು ಮುಳುಗಿದ ಬಳಿಕ ಸಿಬ್ಬಂದಿ ಯಾವ ರೀತಿ ಬರುತ್ತಾರೆ ಎಂಬುದನ್ನು ಮಾಧ್ಯಮಗಳಿಗೆ ಪ್ರದರ್ಶಿಸಲಾಯಿತು. ಈ ಪ್ರಾತ್ಯಕ್ಷಿಕೆ ನೀಡಿದ ನಾಲ್ಕೂ ಮಂದಿ ಯುವತಿಯರು.
ಬೈತೂಲ್: ಇಂಡಿಯಾ ಎನರ್ಜಿ ವೀಕ್ ಎಂಬ ಭಾರತೀಯ ಇಂಧನ ಕ್ಷೇತ್ರದ ದೊಡ್ಡ ಜಾಗತಿಕ ಕಾರ್ಯಕ್ರಮ ಶುರುವಾಗಿದ್ದು ಬೆಂಗಳೂರಿನಲ್ಲಿ. 2023ರ ಫೆಬ್ರವರಿ 6ರಿಂದ 8ರವರೆಗೆ ಆಯೋಜನೆಗೊಂಡಿತ್ತು. ಅದು ಮತ್ತೆ ಬೆಂಗಳೂರಿಗೆ ಬರುವುದಿಲ್ಲ. ಏಕೆಂದರೆ, ಪ್ರವಾಸಿ ತಾಣ ಗೋವಾವನ್ನು ಕಾಯಂ ನೆಲೆ ಮಾಡಿಕೊಂಡಿದೆ. ಇದಕ್ಕಾಗಿ ಒಎನ್‌ಜಿಸಿ ಈಗಾಗಲೇ 4000 ಆಸನ ಸಾಮರ್ಥ್ಯದ ಪೃಥ್ವಿ ಎಂಬ ವಿಶಾಲ, ಅತ್ಯಾಧುನಿಕ ಸಮ್ಮೇಳನ ಸಭಾಂಗಣವನ್ನು ಕೇವಲ 13 ತಿಂಗಳಲ್ಲಿ ಕಟ್ಟಿ ನಿಲ್ಲಿಸಿದೆ. ಸಂಚಾರ ದಟ್ಟಣೆ ನಿವಾರಣೆಗಾಗಿ ರಸ್ತೆ, ಹೆಲಿಪ್ಯಾಡ್ ನಿರ್ಮಿಸಿದೆ. ಸ್ಪೀಡ್ ಬೋಟ್‌ಗಳಲ್ಲಿ ಅತಿಥಿಗಳನ್ನು ಕರೆತರಲು ಜೆಟ್ಟಿಯನ್ನು ಕೂಡ ನಿರ್ಮಾಣ ಮಾಡಿದೆ. ಈ ಜೆಟ್ಟಿಯನ್ನು ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಮಂಗಳವಾರ ಸಂಜೆ ಉದ್ಘಾಟಿಸಿದ್ದಾರೆ.
ಬೆಂಗಳೂರಿಗೆ ಕೊಚ್ಚಿ ಅನಿಲ 3 ತಿಂಗಳಲ್ಲಿ
ಬೇತೂಲ್: ಸಾಕಷ್ಟು ತಡವಾಗಿರುವ ಕೊಚ್ಚಿ- ಬೆಂಗಳೂರು ಅನಿಲ ಕೊಳವೆ ಮಾರ್ಗ ಕಾಮಗಾರಿ ಮುಂದಿನ 2- 3 ತಿಂಗಳಲ್ಲಿ ಮುಕ್ತಾಯವಾಗಲಿದೆ. ಕೊಚ್ಚಿಯಿಂದ ಅನಿಲ ನೇರವಾಗಿ ಬೆಂಗಳೂರಿಗೆ ಸರಬರಾಜಾಗಲಿದೆ ಎಂದು ಸರ್ಕಾರಿ ಸ್ವಾಮ್ಯದ ಅನಿಲ ಕಂಪನಿ ಪೆಟ್ರೋನೆಟ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅಕ್ಷಯ್ ಕುಮಾರ್ ಸಿಂಗ್ ತಿಳಿಸಿದರು.
ಕೊಚ್ಚಿಯಲ್ಲಿ ಪೆಟ್ರೋನೆಟ್ ಕಂಪನಿ 5 ದಶಲಕ್ಷ ಟನ್ ಸಾಮರ್ಥ್ಯದ ಎಲ್‌ಎನ್‌ಜಿ ಘಟಕ ಹೊಂದಿದ್ದರೂ ಬೆಂಗಳೂರು ಪೈಪ್‌ಲೈನ್ ಕಾಮಗಾರಿ ಮುಗಿಯದ ಕಾರಣ 1.2 ದಶಲಕ್ಷ ಟನ್ ಸಾಮರ್ಥ್ಯವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಬೆಂಗಳೂರು ಪೈಪ್‌ಲೈನ್ ಕಾಮಗಾರಿ ಮುಗಿದರೆ ಕೊಚ್ಚಿಯಿಂದ ನೇರವಾಗಿ ನೈಸರ್ಗಿಕ ಅನಿಲವನ್ನು ಸರಬರಾಜು ಮಾಡಬಹುದಾಗಿದೆ. ಬೆಂಗಳೂರಿಗೆ ಸಂಪರ್ಕ ಸಿಕ್ಕರೆ ಈ ನೈಸರ್ಗಿಕ ಅನಿಲ ಮಾರ್ಗ ರಾಷ್ಟ್ರೀಯ ಗ್ಯಾಸ್ ಗ್ರಿಡ್‌ಗೆ ಸೇರ್ಪಡೆಯಾಗಲಿದೆ. ಬೆಂಗಳೂರಿನಿಂದ ಗುವಾಹಟಿ, ಹಲ್ಡಿಯಾವರೆಗೂ ಸಂಪರ್ಕ ಸಾಧ್ಯವಾಗಲಿದೆ ಎಂದು ವಿವರಿಸಿದರು. ಈ ಯೋಜನೆಯಿಂದ ದೇಶದಲ್ಲಿ ನೈಸರ್ಗಿಕ ಇಂಧನ ಉತ್ತೇಜಿಸುತ್ತಿರುವ ಸರ್ಕಾರಕ್ಕೆ ಮತ್ತಷ್ಟು ಬಲ ಸಿಗಲಿದೆ.
ಎಂ.ಕೆ. ಹುಬ್ಬಳ್ಳಿ ಎಲ್‌ಎನ್‌ಜಿ ಘಟಕ ಕಾಮಗಾರಿ ಪೂರ್ಣ
ಬೇತೂಲ್: ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿರುವ, ಕಡಿಮೆ ಇಂಗಾಲವನ್ನು ಹೊರಸೂಸುವ ನೈಸರ್ಗಿಕ ಅನಿಲ ಎಲ್‌ಎನ್‌ಜಿ (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಅನ್ನು ಟ್ರಕ್‌ನಂತಹ ದೊಡ್ಡ ವಾಹನಗಳಿಗೆ ತುಂಬುವ ಕೇಂದ್ರ ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ.
ಸರ್ಕಾರಿ ಸ್ವಾಮ್ಯದ ಅನಿಲ ಕಂಪನಿ ಪೆಟ್ರೋನೆಟ್ ಇದರ ಕಾಮಗಾರಿಯನ್ನು ಮುಗಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ಸೇವೆ ಆರಂಭವಾಗಲಿದೆ ಎಂದು ಕಂಪನಿಯ ಎಂಡಿ ಹಾಗೂ ಸಿಇಒ ಎ.ಕೆ. ಮಿಶ್ರಾ ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ