ಬೆಂಗಳೂರು(ಡಿ.21): ಬೆಂಗಳೂರು, ಬೆಳಗಾವಿ, ದಕ್ಷಿಣ ಕನ್ನಡದ ನಂತರ ಇದೀಗ ಉಡುಪಿ, ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ಒಮಿಕ್ರೋನ್ ರೂಪಾಂತರಿ(Omicron Variant) ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಒಮಿಕ್ರೋನ್ ರಾಜ್ಯದಲ್ಲಿ(Karnataka) ವ್ಯಾಪಿಸುತ್ತಿದ್ದು, ಒಂದೇ ವಾರದಲ್ಲಿ ಹೊಸದಾಗಿ ಐದು ಜಿಲ್ಲೆಗಳಿಗೆ (ಒಟ್ಟು 6 ಜಿಲ್ಲೆ) ವಿಸ್ತರಿಸಿದೆ.
ಸೋಮವಾರ ಹೊಸದಾಗಿ ಐದು ಮಂದಿಯಲ್ಲಿ ಒಮಿಕ್ರೋನ್ ದೃಢಪಟ್ಟಿದ್ದು, ಒಟ್ಟಾರೆ ಈ ರೂಪಾಂತರಿ ಸೋಂಕಿತರ ಸಂಖ್ಯೆ 19ಕ್ಕೆ ಹೆಚ್ಚಳವಾಗಿದೆ. ಈ ಹಿಂದೆ ಡಿ.1ರಿಂದ 19ವರೆಗೂ ಬೆಂಗಳೂರಿನಲ್ಲಿ(Bengaluru) ಎಂಟು, ದಕ್ಷಿಣ ಕನ್ನಡಲ್ಲಿ(Dakshina Kannada) ಐದು, ಬೆಳಗಾವಿಯಲ್ಲಿ(Belagavi) ಒಬ್ಬರು ಸೇರಿ 14 ಮಂದಿಯಲ್ಲಿ ಒಮಿಕ್ರೋನ್ ಪತ್ತೆಯಾಗಿತ್ತು. ಸೋಮವಾರ ಉಡುಪಿಯಲ್ಲಿ(Udupi) ಇಬ್ಬರಿಗೆ, ಶಿವಮೊಗ್ಗದ ಭದ್ರಾವತಿ, ಧಾರವಾಡ, ದಕ್ಷಿಣ ಕನ್ನಡದ ತಲಾ ಒಬ್ಬರು ಸೇರಿ ಐದು ಮಂದಿಯಲ್ಲಿ ಒಮಿಕ್ರೋನ್ ದೃಢಪಟ್ಟಿದೆ. ಈ ಮೂಲಕ ಹೊಸದಾಗಿ ಉಡುಪಿ, ಧಾರವಾಡ, ಶಿವಮೊಗ್ಗ ಜಿಲ್ಲೆಗೂ ರೂಪಾಂತರಿ ವ್ಯಾಪಿಸಿದೆ. ಇನ್ನು ಒಮಿಕ್ರೋನ್ ಹೊಸ ಪ್ರಕರಣಗಳು ಸೋಂಕು ಹೆಚ್ಚಿರುವ ದೇಶಗಳಿಂದ ಬಂದವರಲ್ಲಿ ಅಥವಾ ಬೆಂಗಳೂರಿನಲ್ಲಿ ವರದಿಯಾಗುವುದಕ್ಕಿಂತ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ.
undefined
Karnataka Omicron case ಆಫ್ರಿಕಾಗೂ ಮೊದಲೇ ಕರ್ನಾಟಕದಲ್ಲಿ ಓಮಿಕ್ರಾನ್ ಪತ್ತೆ, ಸಮುದಾಯಕ್ಕೆ ಹಬ್ಬಿದ ಆತಂಕ!
ಸೋಮವಾರ ರಾಜ್ಯದ ಐವರಲ್ಲಿ ಒಮಿಕ್ರೋನ್ ದೃಢಪಟ್ಟಿದ್ದು ಇವರಲ್ಲಿ ಯಾರಿಗೂ ವಿದೇಶಿ ಪ್ರಯಾಣಿಕರ ಸಂಪರ್ಕ ಸೇರಿದಂತೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈವರೆಗೆ ಒಟ್ಟು 19 ಮಂದಿಯಲ್ಲಿ ಒಮಿಕ್ರೋನ್ ಖಚಿತವಾಗಿದ್ದು ಈ ಪೈಕಿ 11 ಮಂದಿಗೆ ವಿದೇಶ ಅಥವಾ ಅನ್ಯರಾಜ್ಯದ ಪ್ರಯಾಣಿಕರ ಸಂಪರ್ಕವಿಲ್ಲ. ಅಲ್ಲದೆ, ಕಳೆದ ಮೂರು ದಿನದಲ್ಲಿ 11 ಮಂದಿಯಲ್ಲಿ ಒಮಿಕ್ರೋನ್ ದೃಢಪಟ್ಟಿದ್ದು ಈ ಪೈಕಿ 10 ಮಂದಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲದಿರುವುದು ಸೋಂಕು ರಾಜ್ಯವ್ಯಾಪಿ ಈಗಾಗಲೇ ಹಬ್ಬಿದೆ ಎಂಬುದನ್ನು ಪುಷ್ಟೀಕರಿಸುತ್ತಿದೆ.
ಸೋಂಕಿತರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಬಹುತೇಕರು ಗುಣಮುಖರಾಗಿದ್ದಾರೆ. ಇನ್ನು ಹೊಸ ಐದು ಮಂದಿ ಸೋಂಕಿತರ ಒಟ್ಟು 694 ಸಂಪರ್ಕಿತರನ್ನು ಈವರೆಗೆ ಪತ್ತೆ ಹಚ್ಚಲಾಗಿದ್ದು, ಈ ಪೈಕಿ 47 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ. ಇವರುಗಳ ವಂಶವಾಹಿ ಪರೀಕ್ಷೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Karnataka Omicron ವೈರಸ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಕಠಿಣ ಕ್ರಮ? ಸಚಿವ ಸುಧಾಕರ್ ಸುಳಿವು
ಸೋಂಕಿತರ ವಿವರ:
*ಸೋಮವಾರ ಉಡುಪಿಯ ವೃದ್ಧ ದಂಪತಿ (82 ವರ್ಷದ ಪುರುಷ ಮತ್ತು 73 ವರ್ಷದ ಮಹಿಳೆ)ಯಲ್ಲಿ ಒಮಿಕ್ರೋನ್ ಪತ್ತೆಯಾಗಿದೆ. ಕುಟುಂಬದಲ್ಲಿ ಮೊದಲ ಬಾರಿಗೆ 11 ವರ್ಷದ ಬಾಲಕನಲ್ಲಿ ಕೋವಿಡ್ ದೃಢಪಟ್ಟಿತ್ತು. ಈ ಹಿನ್ನೆಲೆ ವೃದ್ಧರು ಪರೀಕ್ಷೆಗೊಳಗಾಗಿದ್ದರು. ಡಿ.1ರಂದು ಇಬ್ಬರಿಗೂ ಕೊರೋನಾ ಖಚಿತವಾಯಿತು. ಸದ್ಯ ಇವರಿಬ್ಬರಲ್ಲೂ ಸೋಂಕಿನ ಗುಣಲಕ್ಷಣಗಳಿಲ್ಲ. ಪ್ರಾಥಮಿಕ ಸಂಪರ್ಕಿತ ಮೂವರಲ್ಲಿ ಪಾಸಿಟಿವ್ ಬಂದಿದ್ದು, ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ.
*ಶಿವಮೊಗ್ಗದ ಭದ್ರಾವತಿಯ ನರ್ಸಿಂಗ್ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿಗೆ ಡಿ.6ರಂದು ಕೊರೋನಾ ದೃಢಪಟ್ಟಿದ್ದು, ಸದ್ಯ ಗುಣಮುಖರಾಗಿದ್ದಾರೆ. ಈಕೆಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ 218 ಮಂದಿಯ ಪರೀಕ್ಷೆ ನಡೆಸಿದ್ದು 26 ಮಂದಿಯಲ್ಲಿ ಪಾಸಿಟಿವ್ ಬಂದಿದ್ದು, ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ.
*ಧಾರವಾಡದ 54 ವರ್ಷದ ಮಹಿಳೆಗೆ ಡಿ.5ರಂದು ಸೋಂಕು ಪತ್ತೆಯಾಗಿತ್ತು. ಸದ್ಯ ಗುಣಮುಖರಾಗಿದ್ದಾರೆ. 137 ಮಂದಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪರೀಕ್ಷೆ ನಡೆಸಲಾಗಿದ್ದು ನೆಗೆಟಿವ್ ವರದಿ ಬಂದಿದೆ.
*ಮಂಗಳೂರಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಡಿ. 9ಕ್ಕೆ ಕೊರೋನಾ ದೃಢಪಟ್ಟಿತ್ತು. ಸೋಂಕಿತೆಯಲ್ಲಿ ಕೋವಿಡ್‌ನ ಗುಣಲಕ್ಷಣಗಳಿಲ್ಲ. ಆಕೆಯ 42 ಪ್ರಾಥಮಿಕ ಸಂಪರ್ಕಿತರು ಮತ್ತು 293 ದ್ವಿತೀಯ ಸೋಂಕಿತರಲ್ಲಿ 18 ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ.