Property Gift Deed ಸಾಗುವಳಿದಾರರಿಗೆ ಇನಾಮು ಭೂಮಿ ಹಕ್ಕು, ಅರ್ಜಿ ಸಲ್ಲಿಸಲು 1 ವರ್ಷ ಅವಕಾಶ!

Published : Dec 21, 2021, 12:45 AM IST
Property Gift Deed ಸಾಗುವಳಿದಾರರಿಗೆ ಇನಾಮು ಭೂಮಿ ಹಕ್ಕು,  ಅರ್ಜಿ ಸಲ್ಲಿಸಲು 1 ವರ್ಷ ಅವಕಾಶ!

ಸಾರಾಂಶ

ವಿಧಾನಸಭೆಯಲ್ಲಿ  ಇನಾಮು ಭೂಮಿ ಹಕ್ಕು ಮಸೂದೆ ಅಂಗೀಕಾರ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಲು 1 ವರ್ಷ ಅವಕಾಶ ವಿಧಾನಸಭೆ,ವಿಧಾನ ಪರಿಷತ್‌ನಲ್ಲೂ ಅಂಗೀಕಾರ 

ಬೆಂಗಳೂರು(ಡಿ.21): ರಾಜ್ಯದಲ್ಲಿರುವ ಸಾವಿರಾರು ಎಕರೆ ಇನಾಮು ಜಮೀನನ್ನು ಹಾಲಿ ಸಾಗುವಳಿದಾರರ ಹೆಸರಿಗೆ ಮಂಜೂರಾತಿ ಮಾಡಿಕೊಡಲು ರೂಪಿಸಿರುವ ಕರ್ನಾಟಕ ಕೆಲವು ಇನಾಮುಗಳ ರದ್ದತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2021ಕ್ಕೆ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ದೊರೆಯಿತು. ಕಂದಾಯ ಸಚಿವ ಆರ್‌.ಅಶೋಕ್‌ ಅವರು ಮಂಡಿಸಿದ ಈ ಮಸೂದೆ ಸದನದಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಂಗೀಕಾರವಾಯಿತು.

ಈ ವಿಧೇಯಕಕ್ಕೆ ರಾಜ್ಯ ವಿಧಾನ ಪರಿಷತ್‌ನಲ್ಲೂ ಅಂಗೀಕಾರ ದೊರೆತರೆ ತೋಟಿ, ತಳವಾರ, ಪೂಜಾರಿ ಸೇರಿದಂತೆ ಬೇರೆ ಬೇರೆ ಇನಾಂ ಜಮೀನು ಸಾಗುವಳಿ ಮಾಡುತ್ತಿರುವವರು ಸಂಬಂಧಿಸಿದ ಜಮೀನಿನ ಅಧಿಭೋಗದಾರನಾಗಿ ನೋಂದಾಯಿತನಾಗಲು (ತಮ್ಮ ಹೆಸರಿಗೆ ಖಾತೆ ಪಹಣಿ ಪಡೆಯಲು) ಹಕ್ಕು ಪಡೆಯಲಿದ್ದಾರೆ. ಅಂತಹ ಹಕ್ಕುದಾರರು ತಾವು ಸಾಗುವಳಿ ಮಾಡುತ್ತಿರುವ ಇನಾಂ ಭೂಮಿಯ ಅಧಿಭೋಗದಾರಿಕೆಗೆ ಕೋರಿ ಸಂಬಂಧಪಟ್ಟತಹಶೀಲ್ದಾರ್‌ ಅವರ ನ್ಯಾಯಾಲಯದಲ್ಲಿ ಮುಂದಿನ ಒಂದು ವರ್ಷದವರೆಗೂ ಅರ್ಜಿ ಸಲ್ಲಿಸಬಹುದಾಗಿದೆ.

Karnataka Assembly Session : ರಾಜ್ಯದ ಸಾವಿರಾರು ರೈತರಿಗೆ ಗುಡ್ ನ್ಯೂಸ್ : ಪಹಣಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಸದಸ್ಯರ ಆಕ್ಷೇಪ:
ಈ ಮಧ್ಯೆ, ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ತಿದ್ದುಪಡಿಯಲ್ಲಿ ಸ್ಪಷ್ಟತೆ ತಂದು ಇದು ರೈತರಿಗೆ ಅನುಕೂಲವಾಗುವಂತೆ ಮಾಡಬೇಕು. ಗ್ರಾಮೀಣ ಭಾಗಕ್ಕೆ ಮಾತ್ರ ಅನ್ವಯಿಸುವಂತೆ ಸರ್ಕಾರ ನೋಡಿಕೊಳ್ಳಬೇಕು. ಇಲ್ಲದಿದ್ದರೆ 1961ರ ಇನಾಂ ಭೂ ಶಾಸನ ರದ್ದತಿ ಕಾಯಿದೆಯಡಿ ಸರ್ಕಾರದ ವಶವಾಗಿದ್ದ ಸಾವಿರಾರು ಎಕರೆ ಭೂ ಪ್ರದೇಶ ಖಾಸಗಿ ಪಾಲಾಗುವ ಸಾಧ್ಯತೆ ಹೆಚ್ಚಿದೆ. ದಟ್ಟಾರಣ್ಯ ಸೇರಿದಂತೆ ಬೆಲೆ ಬಾಳುವ ಇನಾಂ ಭೂ ಪ್ರದೇಶಕ್ಕೆ ಸುಮಾರು 45 ವರ್ಷ ನಂತರ ಖಾಸಗಿ ವ್ಯಕ್ತಿಗಳನ್ನು ಒಡೆಯರನ್ನಾಗಿಸುವುದಕ್ಕೆ ಸರ್ಕಾರ ಚಾಲನೆ ನೀಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನಾಂ ಜಮೀನು ಸದ್ಯ ಯಾರದ್ದೋ ಹೆಸರಲ್ಲಿರುತ್ತದೆ. ಆದರೆ, ಆ ಭೂಮಿಯನ್ನು ಇನ್ಯಾವುದೋ ರೈತ ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುತ್ತಾನೆ. ಅಂತಹ ಭೂಮಿಯನ್ನು ಮೂಲ ಇನಾಂದಾರನ ಹೆಸರಿಗೆ ನೀಡದೆ ಹಾಲಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತನನ್ನು ಅಧಿಭೋಗದಾರನ್ನಾಗಿ ಮಾಡಬೇಕು. ಇಲ್ಲದಿದ್ದರೆ ಸಾಕಷ್ಟುವಿವಾದ, ಅಕ್ರಮಗಳಿಗೆ ಎಡೆಯಾಗುತ್ತದೆ ಎಂದು ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ಎಚ್‌.ಕೆ.ಪಾಟೀಲ್‌, ಶಿವಲಿಂಗೇಗೌಡ ಸೇರಿದಂತೆ ಹಲವು ಸದಸ್ಯರು ಮನವಿ ಮಾಡಿದರು.

ಸದಸ್ಯರ ಎಲ್ಲ ಸಲಹೆಗಳನ್ನು ಕಾಯ್ದೆ ಜಾರಿಗೆ ನಿಯಮಾವಳಿ ರೂಪಿಸುವ ಅವಧಿಯಲ್ಲಿ ಪರಿಗಣಿಸುವುದಾಗಿ ಸಚಿವ ಆರ್‌.ಅಶೋಕ್‌ ಭರವಸೆ ನೀಡಿದರು. ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ಮಾತನಾಡಿ, ಸಾಗುವಳಿ ಮಾಡುತ್ತಿರುವ ವ್ಯಕ್ತಿ ಇನಾಂ ಭೂಮಿಯ ಮೂಲ ಸಾಗುವಳಿದಾರನ ಕುಟುಂಬದವನಾಗಿದ್ದರೆ ಅವರಿಗೇ ನೋಂದಣಿಯಾಗುತ್ತದೆ. ಇಲ್ಲದಿದ್ದರೆ ಅದು ಸರ್ಕಾರದ ವಶವಾಗಿರುತ್ತದೆ. ಹಾಗಾಗಿ ಅಂತಹ ಸಂದರ್ಭದಲ್ಲಿ ಹಾಲಿ ಯಾವ ರೈತ ಆ ಜಮೀನಿನಲ್ಲಿ ಉಳುಮೆ ಮಾಡುತ್ತಿರುತ್ತಾರೋ ಅವರಿಗೆ ನೋಂದಣಿ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ಸರ್ಕಾರಿ ಸರ್ವೇಯರ್‌ಗಳಿಗೂ ಅವಕಾಶ:
ಸರ್ಕಾರಿ ಸರ್ವೇಯರ್‌ಗಳು ಅಸ್ತಿಗಳ ವಿಭಜನೆಗೆ ನಕ್ಷೆ (11ಇ ಸ್ಕೆಚ್‌), ಭೂಪರಿವರ್ತನೆ ಪೋಡಿ ಮಾಡುವ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುವ ಸಂಬಂಧ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಯಿತು. ಪ್ರಸ್ತುತ ಈ ಕಾರ್ಯವನ್ನು ಪರವಾನಗಿ ಪಡೆದ ಸರ್ವೇಯರ್‌ ಮಾತ್ರ ಮಾಡುತ್ತಿದ್ದಾರೆ. ವಿಧೇಯಕದಲ್ಲಿ ಸರ್ಕಾರಿ ಸರ್ವೇಯರ್‌ಗಳಿಗೂ ಅವಕಾಶ ನೀಡಲಾಗಿದೆ.

ಕೈಗಾರಿಕೆಗಳಿಗೆ ಆಸ್ತಿ ತೆರಿಗೆ:
ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ದರವನ್ನು ನಿಗದಿಪಡಿಸಲು ಅನುಕೂಲವಾಗುವ ಕರ್ನಾಟಕ ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಯಿತು. ಕೈಗಾರಿಕೆಗಳಿಗೆ ಆಸ್ತಿ ತೆರಿಗೆಯನ್ನು ವಾಣಿಜ್ಯ ಕಟ್ಟಡಗಳಿಗಿಂತ ಕಡಿಮೆ ವಿಧಿಸಿದರೆ ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನ ಮತ್ತು ಸ್ಥಾಪನೆಗೆ ಅನುಕೂಲವಾಗುತ್ತದೆ. ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾದರೆ ಸ್ಥಳೀಯವಾಗಿ ಉದ್ಯೋಗವಕಾಶ ಹಾಗೂ ಆದಾಯ ಹೆಚ್ಚಳವಾಗಲಿದೆ ಎಂಬ ಉದ್ದೇಶದಿಂದ ವಿಧೇಯಕನ್ನು ಮಂಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ