ಗುಡ್ ನ್ಯೂಸ್ : ರಾಜ್ಯದಿಂದ ಮರೆಯಾಗುತ್ತಿದೆ ಮಹಾಮಾರಿ ಕೊರೋನಾ

By Kannadaprabha NewsFirst Published Oct 20, 2020, 7:46 AM IST
Highlights

ಕರ್ನಾಟಕ ಜನತೆಗೆ ಇಲ್ಲಿದೆ ಗುಡ್ ನ್ಯೂಸ್... ರಾಜ್ಯದಿಂದ ನಿಧಾನವಾಗಿ ಕೊರೋನಾ ಸೋಂಕು ಮರೆಯಾಗುತ್ತಿದೆ.

ಬೆಂಗಳೂರು (ಅ.20):  ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಕೊರೋನಾ ಸೋಂಕು ಪರೀಕ್ಷೆಗಳ ಪ್ರಮಾಣ ಶೇ.73ರಷ್ಟುಹೆಚ್ಚಾಗಿದ್ದರೂ ಕಳೆದ ಒಂದು ವಾರದಿಂದ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಆದರೂ, ಇನ್ನು ಮೂರು ತಿಂಗಳು ಚಳಿಗಾಲದಿಂದಾಗಿ ಸರ್ಕಾರ ಹಾಗೂ ಸಾರ್ವಜನಿಕರ ಪಾಲಿಗೆ ಸವಾಲಾಗಿದ್ದು ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಿ ಎಂದೂ ಅವರು ಮನವಿ ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಆರ್‌ಟಿಪಿಸಿಆರ್‌ ಹಾಗೂ ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗಳ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ಸೆ.19ಕ್ಕೆ ಬೆಂಗಳೂರಿನಲ್ಲಿ 13.20 ಲಕ್ಷ ಪರೀಕ್ಷೆ ನಡೆಸಿದ್ದರೆ ಸೆ.19ರಿಂದ ಅ.18ರ ವೇಳೆಗೆ 22.90 ಲಕ್ಷಕ್ಕೆ ಹೆಚ್ಚಾಗಿದೆ. ಒಂದು ತಿಂಗಳಲ್ಲಿ 9.70 ಲಕ್ಷ ಪರೀಕ್ಷೆ ನಡೆಸಿದ್ದು ಒಟ್ಟು ಪರೀಕ್ಷೆ ಶೇ.73 ರಷ್ಟುಹೆಚ್ಚಾಗಿದೆ. ದೇಶದ ಇತರೆ ಮಹಾನಗರಗಳ ಸರಾಸರಿ ಏರಿಕೆ ಶೇ.49 ಮಾತ್ರ ಇದೆ. ಹೀಗಾಗಿ ದೇಶದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಸೋಂಕು ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಗುಡ್‌ ನ್ಯೂಸ್: ರಾಜ್ಯದಲ್ಲಿ ತಗ್ಗಿದ ಕೊರೋನಾ: ಇಲ್ಲಿದೆ ಸೋಮವಾರದ ಅಂಕಿ-ಸಂಖ್ಯೆ

ಸೋಂಕು ಪರೀಕ್ಷೆ ಹೆಚ್ಚಾದಂತೆ ಸೋಂಕು ಹಾಗೂ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಸಾವಿನ ದರ ಶೇ.1ಕ್ಕಿಂತ ಕಡಿಮೆ ಮಾಡಬೇಕು ಎಂಬುದು ನಮ್ಮ ಗುರಿ. ಪ್ರಸ್ತುತ ರಾಜ್ಯದಲ್ಲಿ ಒಟ್ಟು ಸರಾಸರಿ ಶೇ.1.37 ರಷ್ಟಿದ್ದು, ಕಳೆದ 15 ದಿನಗಳಲ್ಲಿ ಶೇ.0.93 ರಷ್ಟುಸಾವಿನದರ ಮಾತ್ರ ದಾಖಲಾಗಿದೆ.

ಇನ್ನು ಕಳೆದ ಒಂದು ವಾರದಿಂದ ಸೋಂಕಿನ ಪ್ರಮಾಣವೂ ಇಳಿಕೆಯಾಗಿದೆ. ಅ.10ಕ್ಕೆ ಮೊದಲು ನಿತ್ಯ 11 ಸಾವಿರದಷ್ಟಿದ್ದ ಸೋಂಕು ಇದೀಗ ಅ.19ಕ್ಕೆ (ಸೋಮವಾರ) 5,018ಕ್ಕೆ ಇಳಿಕೆಯಾಗಿದೆ. ಅ.10 ರಂದು 10,517, ಅ.11 ರಂದು 9,523, 12 ರಿಂದ 14ರವರೆಗೆ ಸರಾಸರಿ 7-8 ಸಾವಿರ ದಾಖಲಾಗಿದ್ದು ಅ.19ಕ್ಕೆ ಇನ್ನೂ ಕಡಿಮೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಎಚ್ಚರ ತಪ್ಪುವಂತಿಲ್ಲ, ಮುಂದಿನ 3 ತಿಂಗಳು ಸವಾಲು:

ಪ್ರಸ್ತುತ ಸೋಂಕು ಕಡಿಮೆಯಾಗಿದೆ ಎಂದು ಸಾರ್ವಜನಿಕರು ಎಚ್ಚರ ತಪ್ಪುವಂತಿಲ್ಲ. ಸಾಲು-ಸಾಲು ಹಬ್ಬಗಳ ನವೆಂಬರ್‌, ಡಿಸೆಂಬರ್‌ ಹಾಗೂ ಜನವರಿಯಲ್ಲಿ ಚಳಿಗಾಲ ಬರಲಿದೆ. ಈ ವೇಳೆ ಚಳಿ ಹೆಚ್ಚಾಗಲಿದ್ದು ಚಳಿ ಹಾಗೂ ತೇವಾಂಶ ಇರುವ ಕಡೆ ಕೊರೋನಾ ಸೇರಿದಂತೆ ಯಾವುದೇ ವೈರಾಣು ಹೆಚ್ಚು ಸಕ್ರಿಯವಾಗಿರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಎಚ್ಚರ ತಪ್ಪುವಂತಿಲ್ಲ. ಕೇಂದ್ರ ಸರ್ಕಾರದ ಪ್ರಕಾರ ಜನವರಿ ಬಳಿಕ ಕೊರೋನಾ ಔಷಧ ಬರಲಿದ್ದು, ಮುಂದಿನ ಮೂರು ತಿಂಗಳು ಜೀವ ಉಳಿಸಿಕೊಳ್ಳಬೇಕಾಗಿದೆ.

ಇದಕ್ಕಾಗಿ ಬಿಸಿ ದ್ರವ ಸೇವಿಸುವುದು. ಆವಿ ತೆಗೆದುಕೊಳ್ಳುವುದು ಸೇರಿದಂತೆ ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಹಾಗೂ ಪದೇ ಪದೇ ಕೈ ತೊಳೆಯುವುದನ್ನು ಕಡ್ಡಾಯವಾಗಿ ಮಾಡಬೇಕು ಎಂದು ಕರೆ ನೀಡಿದರು.

ಬಿಸಿ ನೀರಿನ ಹಬೆ ತಗೆದುಕೊಳ್ಳಿ: ಸುಧಾಕರ್‌

ಮುಂದಿನ ಮೂರು ತಿಂಗಳು ಚಳಿಗಾಲದಿಂದಾಗಿ ಸೋಂಕು ಉಲ್ಬಣಿಸುವ ಸಾಧ್ಯತೆ ಇದೆ. ಜೊತೆಗೆ ಕೊರೋನಾಗೆ ಔಷಧ ಬರಲು ಕನಿಷ್ಠ 3 ತಿಂಗಳು ಕಾಲಾವಕಾಶ ಬೇಕು. ಹೀಗಾಗಿ ನಿಮ್ಮನ್ನು ನೀವು 3 ತಿಂಗಳು ರಕ್ಷಣೆ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿನ ವಯೋವೃದ್ಧರು ಹಾಗೂ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಬೇಕು.

ಚಳಿಗಾದಲ್ಲಿ ಸೋಂಕಿನಿಂದ ರಕ್ಷಣೆ ಪಡೆಯಲು ಆಯುಷ್‌ ವೈದ್ಯರು ‘ಬಿಸಿ ನೀರಿನಿಂದ ಆವಿ’ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದರಿಂದ ಮೂಗು ಹಾಗೂ ಗಂಟಲಿನಲ್ಲಿರುವ ಕಫ ಹೊರಗೆ ಹೋಗುತ್ತದೆ. 50ರಿಂದ 60 ಡಿಗ್ರಿ ಸೆಲ್ಷಿಯಸ್‌ನಲ್ಲಿ ವೈರಸ್‌ ನಿಷ್ಕಿ್ರಯವಾಗುತ್ತದೆ. ಈ ನಿಟ್ಟಿನಲ್ಲಿ ಮೂಗಿನಿಂದ ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ದೊಡ್ಡ ಆಶಾಕಿರಣ ಎಂದು ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಹಬೆ ತೆಗೆದುಕೊಳ್ಳುವುದು ಹೇಗೆ?

ನೀರನ್ನು ಕಾಯಿಸಿ ನೇರವಾಗಿ ಬಿಸಿ ನೀರಿನ ಆವಿಯನ್ನು ಮೂಗಿನಿಂದ ತೆಗೆದುಕೊಳ್ಳಬಹುದು. ಈ ವೇಳೆ ಪುದಿನ ಅಥವಾ ತುಳಸಿ ಎಲೆಯನ್ನು ನೀರಿಗೆ ಹಾಕಿ ಕುದಿಸಿದರೆ ಇನ್ನೂ ಉತ್ತಮ. ಯುನಾನಿಯಲ್ಲಿ ಆರ್ಕಿಅಜೀಬ್‌ ಎಂಬ ಔಷಧಿಯಿದ್ದು, ಅದನ್ನು ಎರಡು ಹನಿ ನೀರಿಗೆ ಹಾಕಿಕೊಂಡು ಸಹ ಆವಿ ಪಡೆಯಬಹುದು ಎಂದು ಆಯುಷ್‌ ಇಲಾಖೆ ವೈದ್ಯರೊಬ್ಬರು ಮಾಹಿತಿ ನೀಡಿದರು.

click me!