ಹೆಲ್ಮೆಟ್ ಧರಿಸದಿದ್ದರೆ ಮೂರು ತಿಂಗಳು ಲೈಸೆನ್ಸ್ ರದ್ದು!

By Kannadaprabha NewsFirst Published Oct 20, 2020, 7:30 AM IST
Highlights

ಹೆಲ್ಮೆಟ್‌ ಧರಿಸದಿದ್ದರೆ 3 ತಿಂಗಳು ಲೈಸೆನ್ಸ್‌ ರದ್ದು|  4 ವರ್ಷದ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ|  ಹಳೇ ನಿಯಮ ಕಟ್ಟುನಿಟ್ಟು ಜಾರಿಗೆ ಆದೇಶ

ಬೆಂಗಳೂರು(ಅ.20): ರಾಜ್ಯದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ನಾಲ್ಕು ವರ್ಷ ಮೇಲ್ಪಟ್ಟಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಹೆಲ್ಮೆಟ್‌ ಧರಿಸದ ಚಾಲಕನಿಗೆ ದಂಡ ವಿಧಿಸುವುದರ ಜೊತೆಗೆ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಈಗಾಗಲೇ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 129ರ ಪ್ರಕಾರ ದ್ವಿಚಕ್ರವಾಹನ ಸವಾರರು ಹೆಲ್ಮೆಟ್‌ ಧರಿಸುವುದು ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 230 ಉಪನಿಯಮ(1)ರ ಅನ್ವಯ ರಾಜ್ಯದಲ್ಲಿ ದ್ವಿಚಕ್ರವಾಹನ ಸವಾರ ಹಾಗೂ ಹಿಂಬದಿ ಸವಾರ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದೀಗ ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರವು ದ್ವಿಚಕ್ರವಾಹನದಲ್ಲಿ ಪ್ರಯಾಣಿಸುವ ನಾಲ್ಕು ವರ್ಷ ಮೇಲ್ಪಟ್ಟವರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವಂತೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಿದೆ.

ಆದೇಶದ ಪ್ರಕಾರ, ಚಾಲಕ ಹೆಲ್ಮೆಟ್‌ ಧರಿಸದಿದ್ದರೆ ಚಾಲನಾ ಪರವಾನಗಿ ಅಮಾನತುಗೊಳಿಸಲಾಗುತ್ತದೆ. ಹಿಂಬದಿ ಸವಾರ ಮತ್ತು ಮಕ್ಕಳು ಹೆಲ್ಮೆಟ್‌ ಧರಿಸದಿದ್ದರೆ ದಂಡ ಮಾತ್ರ ವಿಧಿಸಲಾಗುತ್ತದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಪ್ರತಿ ತಿಂಗಳು ಮಾಹಿತಿ ಕೊಡಿ:

ಇನ್ನು ಮುಂದೆ ರಾಜ್ಯದಲ್ಲಿ ಹೆಲ್ಮೆಟ್‌ ಧರಿಸದೆ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ನಿಗದಿತ ದಂಡ ವಿಧಿಸುವುದರ ಜೊತೆಗೆ ಚಾಲನಾ ಪರವಾನಗಿಯನ್ನು ಕನಿಷ್ಠ ಮೂರು ತಿಂಗಳ ಕಾಲ ಅಮಾನತುಗೊಳಿಸುವ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಾರಿಗೆ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದ್ದಾರೆ. ಅಂತೆಯೇ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ದಾಖಲಾದ ಪ್ರಕರಣಗಳ ಸಂಖ್ಯೆ, ಪೊಲೀಸ್‌ ಠಾಣೆಗಳಿಂದ ಬಂದ ಪ್ರಕರಣಗಳ ಸಂಖ್ಯೆ ಹಾಗೂ ಅಮಾನತು ಮಾಡಿದ ಚಾಲನಾ ಪರವಾನಗಿಗಳ ಸಂಖ್ಯೆಯನ್ನು ಜಂಟಿ ಸಾರಿಗೆ ಆಯುಕ್ತರು ಹಾಗೂ ಅಪರ ಸಾರಿಗೆ ಆಯುಕ್ತರಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಮಕ್ಕಳು ಹೆಲ್ಮೆಟ್‌ ಧರಿಸೋದು ಕಷ್ಟ

ನಾಲ್ಕು ವರ್ಷ ಮೇಲ್ಪಟ್ಟವರು ಹೆಲ್ಮೆಟ್‌ ಧರಿಸುವ ನಿಯಮ ಹಾಗೂ ಹೆಲ್ಮೆಟ್‌ ಧರಿಸದ ಬೈಕ್‌ ಚಾಲಕನ ಪರವಾನಗಿ ಮೂರು ತಿಂಗಳು ಅಮಾನತುಗೊಳಿಸುವ ನಿಯಮ ಈಗಾಗಲೇ ಜಾರಿಯಲ್ಲಿದೆ. ಆದರೆ ಈ ಎರಡೂ ನಿಯಮ ರಾಜ್ಯದಲ್ಲಿ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಇದೀಗ ಕಟ್ಟುನಿಟ್ಟಿನ ಜಾರಿಗೆ ಸರ್ಕಾರ ಸೂಚಿಸಿದೆ. ಇದರ ಅನ್ವಯ ಇನ್ನುಮುಂದೆ ನಾಲ್ಕು ವರ್ಷ ಮೇಲ್ಪಟ್ಟಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯಬೇಕಾದರೆ ಕಡ್ಡಾಯವಾಗಿ ಹೆಲ್ಮೆಟ್‌ ಹಾಕಿಸಬೇಕು. ಇಲ್ಲವಾದರೆ, ಬೈಕ್‌ ಚಾಲಕ ದಂಡ ತೆರಬೇಕು. ಮತ್ತೊಂದೆಡೆ ನಾಲ್ಕು-ಐದು ವರ್ಷದ ಮಕ್ಕಳು ಹೆಲ್ಮೆಟ್‌ ಧರಿಸುವಂತೆ ನೋಡಿಕೊಳ್ಳುವುದು ಕಷ್ಟ. ಪ್ರಯಾಣದ ವೇಳೆ ಮಕ್ಕಳು ನಿದ್ರೆಗೆ ಜಾರುವುದು ಸಾಮಾನ್ಯ. ಪೋಷಕರೊಂದಿಗೆ ಬೈಕ್‌ನಲ್ಲಿ ತೆರಳುವಾಗ ಹೆಲ್ಮೆಟ್‌ ಧರಿಸಿ ಕೂರಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

click me!