ಕೆಎಸ್ಸಾರ್ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ

By Kannadaprabha News  |  First Published Jul 21, 2021, 7:26 AM IST
  • ಕೊರೋನಾ ಸೋಂಕು ತಗ್ಗಿದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ 
  • ಒಂದೇ ದಿನ ನಿಗಮದ ವ್ಯಾಪ್ತಿಯಲ್ಲಿ 12.94 ಲಕ್ಷ ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 

ಬೆಂಗಳೂರು (ಜು.21): ಕೊರೋನಾ ಸೋಂಕು ತಗ್ಗಿದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಸೋಮವಾರ ಒಂದೇ ದಿನ ನಿಗಮದ ವ್ಯಾಪ್ತಿಯಲ್ಲಿ 12.94 ಲಕ್ಷ ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ನಿಗಮದ 16 ವಿಭಾಗಗಳ ಪೈಕಿ ಐದು ವಿಭಾಗಗಳಲ್ಲಿ ತಲಾ ಒಂದು ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ. ಉಳಿದ ವಿಭಾಗಗಳಲ್ಲಿ ಚಿತ್ರದುರ್ಗ ವಿಭಾಗ ಹೊರತುಪಡಿಸಿ 10 ವಿಭಾಗಗಳಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ. ಕಳೆದ ಒಂದು ವಾರದಿಂದ ಹತ್ತು ಲಕ್ಷದ ಅಜುಬಾಜಿನಲ್ಲಿದ್ದ ಪ್ರಯಾಣಿಕರ ಸಂಖ್ಯೆ ಇದೀಗ 12 ಲಕ್ಷದ ಗಡಿ ದಾಟಿರುವುದು ನಿಗಮಕ್ಕೆ ಕೊಂಚ ನೆಮ್ಮದಿ ತಂದಿದೆ. ಕೊರೋನಾ ಪೂರ್ವದಲ್ಲಿ ನಿಗಮದ ಬಸ್ಸುಗಳಲ್ಲಿ ಪ್ರತಿ ನಿತ್ಯ ಸುಮಾರು 28 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಕೊರೋನಾ ಲಾಕ್‌ಡೌನ್‌ ಸಡಿಲಿಕೆ ಬಳಿಕ ಪ್ರಯಾಣಿಕರ ಸಂಖ್ಯೆ 1 ಲಕ್ಷದೊಳಗೆ ಇಳಿಕೆಯಾಗಿತ್ತು.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್

Tap to resize

Latest Videos

ಅನ್‌ಲಾಕ್‌ ಬಳಿಕ ಪ್ರಯಾಣಿಕ ಸಂಖ್ಯೆ ಏರಿಕೆಯಾಗದ ಪರಿಣಾಮ ಸಾರಿಗೆ ಆದಾಯ ಡೀಸೆಲ್‌ ವೆಚ್ಚಕ್ಕೂ ಸಾಲುತ್ತಿರಲಿಲ್ಲ. ಇದೀಗ ಪ್ರಯಾಣಿಕರ ಸಂಖ್ಯೆ ಕೊಂಚವೇ ಏರಿಕೆಯಾಗುತ್ತಿದ್ದು, ಆದಾಯವೂ ವೃದ್ಧಿಸುತ್ತಿದೆ.

ಬಸ್ಸುಗಳ ಕಾರ್ಯಾಚರಣೆ ಕೊರೋನಾ ಪೂರ್ವದ ಸ್ಥಿತಿಗೆ ಮರುಳಲು ಸಮಯ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟುಏರಿಕೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಇದೀಗ ಕೊರೋನಾ ಸೋಂಕು ತಗ್ಗಿದ್ದು, ಜನ ಬಸ್‌ಗಳತ್ತ ಮುಖ ಮಾಡುತ್ತಿದ್ದಾರೆ. ನಿಗಮದಲ್ಲಿ ಸುಮಾರು 8,400 ಬಸ್ಸುಗಳಿದ್ದು, ಪ್ರಯಾಣಿಕರ ದಟ್ಟಣೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ನಿತ್ಯ ಸುಮಾರು 4,500 ಬಸ್‌ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಯಾಣಿಕರ ಸಂಚಾರದ ಮಾಹಿತಿ

ದಿನಾಂಕ ಪ್ರಯಾಣಿಕರ ಸಂಖ್ಯೆ(ಲಕ್ಷ)

ಜು.19...12.94

ಜು.18....9.09

ಜು.17...10.66

ಜು.16....10.65

ಜು.15...10.97

ಜು.14.....10.96

ಜು.13....11.38

ಜು.19ಕ್ಕೆ 1 ಲಕ್ಷ ದಾಟಿದ ವಿಭಾಗ

ವಿಭಾಗ ಪ್ರಯಾಣಿಕರ ಸಂಖ್ಯೆ(ಲಕ್ಷ)

ರಾಮನಗರ...1,02,178

ತುಮಕೂರು...1,16,702

ಚಿಕ್ಕಬಳ್ಳಾಪುರ...1,05,550

ಮೈಸೂರು ನಗರ...1,08,272

ಚಾಮರಾಜನಗರ...1,01,454

click me!