* ತನಿಖೆಯ ಅಂತಿಮ ವರದಿ ಸಲ್ಲಿಸದಂತೆ ಎಸ್‌ಐಟಿಗೆ ಹೈಕೋರ್ಟ್ ಸೂಚನೆ
* ಅರ್ಜಿ ವಿಚಾರಣೆ ಜು.27ಕ್ಕೆ ಮುಂದೂಡಿದ ನ್ಯಾಯಪೀಠ
* ಎಸ್‌ಐಟಿ ಜು.27ರವರೆಗೆ ತನಿಖೆಯ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸಬಾರದು
ಬೆಂಗಳೂರು(ಜು.21): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿರುವ ಅರ್ಜಿ ವಿಚಾರಣೆಯನ್ನು ಜು.27ಕ್ಕೆ ಮುಂದೂಡಿರುವ ಹೈಕೋರ್ಟ್, ಅಲ್ಲಿಯವರೆಗೂ ತನಿಖೆಯ ಅಂತಿಮ ವರದಿ ಸಲ್ಲಿಸದಂತೆ ಎಸ್‌ಐಟಿಗೆ ಸೂಚಿಸಿದೆ.
ಈ ಕುರಿತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ನಿಗದಿಯಾಗಿತ್ತು. ಆದರೆ, ಸಮಯ ಅಭಾವದಿಂದ ಅರ್ಜಿಯ ವಿಚಾರಣೆ ನಡೆಸಲು ಆಗದ ಕಾರಣ ಗುರುವಾರ ಅರ್ಜಿಯ ವಿಚಾರಣೆಗೆ ನಿಗದಿಪಡಿಸಲು ಕೋರ್ಟ್ ಅಧಿಕಾರಿಗೆ ನ್ಯಾಯಪೀಠ ಸೂಚಿಸಿತು.
'ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗುವುದು ಪಕ್ಕಾ'
ಈ ಮಧ್ಯೆ ಎಸ್‌ಐಟಿ ಪರ ವಕೀಲರು ಹಾಜರಾಗಿ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಎಫ್‌ಐಆರ್‌ಗಳ ಕುರಿತ ತನಿಖೆಯ ವರದಿಯನ್ನು ಸೋಮವಾರಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ವಿಚಾರಣೆಯನ್ನು ಜು.26 ಮುಂದೂಡುವಂತೆ ಕೋರಿದರು. ಆದರೆ, ಪ್ರಕರಣದ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಮಂಗಳವಾರ ಅರ್ಜಿ ವಿಚಾರಣೆ ನಡೆಸುವಂತೆ ಕೋರಿದರು. ಆ ಮನವಿ ಮೇರೆಗೆ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಜು.27ಕ್ಕೆ ಮುಂದೂಡಿತು. ಅಲ್ಲದೆ, ಎಸ್‌ಐಟಿಯು ಈ ಹಿಂದೆ ನೀಡಿರುವ ಭರವಸೆಯಂತೆ ಜು.27ರವರೆಗೆ ತನಿಖೆಯ ಅಂತಿಮ ವರದಿ ಕ್ಕೆ ಸಲ್ಲಿಸಬಾರದು ಎಂದು ಸೂಚಿಸಿತು.