
ಬೆಂಗಳೂರು: ರಾಜ್ಯದಲ್ಲಿನ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಒಂದು ದಿನದ ವೇತನ ಸಹಿತ ರಜೆ ನೀಡುವ ಆದೇಶ ಜಾರಿಗೊಳಿಸುವ ಸಂಬಂಧ ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡಬಾರದು ಎಂದು ಸರ್ಕಾರಕ್ಕೆ ಹೈಕೋರ್ಟ್ ಮೌಖಿಕವಾಗಿ ಸೂಚಿಸಿದೆ.
ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವ ನೀತಿ ಜಾರಿಗೊಳಿಸಿ ರಾಜ್ಯ ಕಾರ್ಮಿಕ ಇಲಾಖೆ 2025ರ ನ.20ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಸಲ್ಲಿಸಿರುವ ಅರ್ಜಿ, ಸೋಮವಾರ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಋತುಚಕ್ರದ ರಜೆ ನೀತಿ ಹೋಟೆಲ್ ಉದ್ಯಮದಾರರ ಹಿತಾಸಕ್ತಿಗೆ ವಿರುದ್ಧವಾಗಿದೆ. ಅಧಿಸೂಚನೆಯ ಮುಂದುವರಿದ ಭಾಗವಾಗಿ ಸರ್ಕಾರ ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡುತ್ತಿರುವುದರಿಂದ ತೀವ್ರ ಸಮಸ್ಯೆಯಾಗುತ್ತಿದೆ. ಮಹಿಳೆಯರಿಗೆ ರಕ್ಷಣೆ ನೀಡುವುದಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ. ಆದರೆ, ಉದ್ಯಮದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಳ್ಳದೇ ಅಧಿಸೂಚನೆ ಜಾರಿಗೊಳಿಸಲು ಮುಂದಾಗಿದೆ. ಕೆಲಸಗಾರರು ಮತ್ತು ಉದ್ಯೋಗದಾತರ ನಡುವೆ ಸಮಾನತೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಬೆಂಗಳೂರು ಮಹಿಳಾ ವಕೀಲರ ಪರ ವಕಿಲರು, ಅಧಿಸೂಚನೆಯಲ್ಲಿ ಉದ್ಯೋಗದಾತರಿಗೆ ಸಮಸ್ಯೆಯಾಗುವಂತಹ ಯಾವುದೇ ಅಂಶಗಳಿಲ್ಲ. ಮಾಹಿತಿಯ ಪ್ರಕಾರ ಯಾವುದೇ ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ಜಾರಿಯಾಗಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದನ್ನೂ ಓದಿ: Santosh Lad Interview: ಸಂತೋಷ್ ಲಾಡ್ ಸಂದರ್ಶನ: ಶ್ರಮಯೋಗಿಗಳ ಕಲ್ಯಾಣಕ್ಕೆ ಸರ್ಕಾರದ ಆದ್ಯತೆ
ವಾದ-ಪ್ರತಿವಾದ ಆಲಿಸಿದ ಪೀಠ, ಪ್ರಕರಣ ವಿಚಾರಣೆ ಹಂತದಲ್ಲಿದೆ. ಅರ್ಜಿಯ ಸಂಬಂಧ ವಾದ ಮಂಡಿಸಲು ಸರ್ಕಾರ ಮುಂದಾಗುತ್ತಿಲ್ಲ. ಬದಲಿಗೆ ವಿಚಾರಣೆ ಮುಂದೂಡಿಕೆ ಕೋರುತ್ತದೆ. ಇನ್ನೊಂದೆಡೆ ಶೋಕಾಸ್ ನೋಟಿಸ್ ಜಾರಿಗೊಳಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ಹಾಗಾಗಿ, ಶೋಕಾಸ್ ನೋಟಿಸ್‌ಗಳಿಗೆ ತಡೆ ನೀಡಬೇಕಾಗುತ್ತದೆ ಎಂದು ಹೇಳಿತಲ್ಲದೆ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು. ಶೋಕಾಸ್ ನೋಟಿಸ್ ನೀಡಬಾರದು ಎಂದು ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿತು.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಶಿಕ್ಷಕಿಯರಿಗೆ ಋತುಚಕ್ರ ರಜೆ: ಸರ್ಕಾರದ ಮಹತ್ವದ ಆದೇಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ