
ಬೆಂಗಳೂರು: ದೇಶದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸುಮಾರು 3,000 ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಅತಂತ್ರಗೊಂಡಿದ್ದು, ಕಾರ್ಯಾಚರಣೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಫ್ಯಾಬ್ರಿಕೇಷನ್, ವೇಲ್ಡಿಂಗ್, ಹೀಟ್ ಟ್ರೀಟ್ಮೆಂಟ್, ಆಹಾರ ಸಂಸ್ಕರಣೆ ಮತ್ತಿತರ ಕೈಗಾರಿಕೆಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಬಳಕೆಯಾಗುತ್ತದೆ. ಆದರೆ, ಕಳೆದ 10 ದಿನಗಳಿಂದ ಗ್ಯಾಸ್ ಪೂರೈಕೆ ಅಸಮರ್ಪಕವಾಗಿದೆ. ಕಳೆದ ಕೆಲ ದಿನಗಳಿಂದ ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯಯವಾಗಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ತಮ್ಮ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಇದರಿಂದ ಉದ್ಯೋಗಿಗಳಿಗೆ ಸಂಬಳ ನೀಡಲು ಕೂಡ ಸಮಸ್ಯೆ ಆಗುವ ಆತಂಕ ಎದುರಾಗಿದೆ.
ಪೀಣ್ಯದಲ್ಲಿರುವ 13,500 ಕೈಗಾರಿಕೆಗಳ ಪೈಕಿ ಸುಮಾರು 3,000 ಕೈಗಾರಿಕೆಗಳು ಗ್ಯಾಸ್ ಅವಲಂಬಿತವಾಗಿವೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಮಸ್ಯೆಯಾಗಿದೆ. ಈ ಕುರಿತು ಸಂಬಂಧಿಸಿದ ಗ್ಯಾಸ್ ಪೂರೈಸುವ ಏಜೆನ್ಸಿಗಳನ್ನು ಕೇಳಿದಾಗ, ಲಭ್ಯತೆ ಆಧಾರದ ಮೇಲೆ ಪೂರೈಸುತ್ತೇವೆ. ನಮಗೆ ಸರಬರಾಜು ಆದರೆ ಗ್ಯಾಸ್ ಪೂರೈಕೆ ಸಹಜ ಸ್ಥಿತಿಗೆ ಬರುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಪೀಣ್ಯ ಕೈಗಾರಿಕಾ ಸಂಘದ ಪದಾಧಿಕಾರಿ, ಮಾಜಿ ಅಧ್ಯಕ್ಷ ಆರ್. ಶಿವಕುಮಾರ್ ಹೇಳಿದರು.
ಆದಷ್ಟು ಬೇಗ ಪರಿಸ್ಥಿತಿ ಸುಧಾರಣೆಯಾಗಿ ಗ್ಯಾಸ್ ಸರಬರಾಜು ಸಹಜ ಸ್ಥಿತಿಗೆ ಬಂದರೆ ಒಳ್ಳೆಯದು. ಇಲ್ಲದಿದ್ದರೆ ಕೈಗಾರಿಕೆಗಳನ್ನು ಬಂದ್ ಮಾಡುವುದು ಅನಿವಾರ್ಯವಾಗಲಿದೆ. ಇದರಿಂದ ಉದ್ಯೋಗಿಗಳಿಗೆ ಸಂಬಳ ನೀಡಲು ಸಮಸ್ಯೆ ಆಗುತ್ತದೆ. ಅಲ್ಲದೇ, ಮುಂಚಿತವಾಗಿ ಪಡೆದುಕೊಂಡಿರುವ ಆರ್ಡರ್‌ಗಳನ್ನು ಸರಿಯಾದ ಸಮಯಕ್ಕೆ ಡೆಲಿವರಿ ನೀಡದಿದ್ದರೆ ದಂಡವನ್ನು ವಿಧಿಸುತ್ತಾರೆ. ಅದನ್ನು ಕೂಡ ಭರಿಸಬೇಕಾಗುತ್ತದೆ. ಸದ್ಯಕ್ಕೆ ಗ್ಯಾಸ್ ಅವಲಂಬಿತ ಕೈಗಾರಿಕೆಗಳ ಸ್ಥಿತಿ ಕಷ್ಟವಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಸಮಸ್ಯೆ ಗಂಭೀರವಾಗಿದೆ. ಆದರೆ, ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಈವರೆಗೆ ಯಾವುದೇ ಸಭೆ ನಡೆಸುವ ಪ್ರಯತ್ನ ಮಾಡಿಲ್ಲ. ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದು ಹಾಗೂ ಸಿಲಿಂಡರ್ ಕೊರತೆಯಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಕೈಗಾರಿಕೆಗಳು ಹಾಗೂ ಉದ್ಯೋಗಿಗಳಿಗೆ ತೊಂದರೆ ಆಗದಂತೆ ಅನುಸರಿಸಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿಲ್ಲ ಎಂದು ಶಿವಕುಮಾರ್ ಹೇಳಿದರು.
ಅನೇಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಇಂಧನ ವೆಚ್ಚವು ಒಟ್ಟು ಉತ್ಪಾದನಾ ವೆಚ್ಚದ ಸುಮಾರು ಶೇ.15ರಿಂದ 30 ರಷ್ಟಿರುತ್ತದೆ. ಎಲ್‌ಪಿಜಿ ಬೆಲೆಯಲ್ಲಿನ ಯಾವುದೇ ಏರಿಕೆ ಅಥವಾ ಪೂರೈಕೆಯಲ್ಲಿನ ವ್ಯತ್ಯಯಗಳು ನೇರವಾಗಿ ಉತ್ಪಾದನೆ ಮತ್ತು ವ್ಯವಹಾರದ ಸುಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಅಡುಗೆ ಅನಿಲ ಕೊರತೆ ಭೀತಿ: ತುರ್ತು ಅಧಿಕಾರ ಬಳಸಿ LPG ಉತ್ಪಾದನೆ ಹೆಚ್ಚಿಸಲು ಕೇಂದ್ರದ ಆದೇಶ!
- ಲೋಹದ ಎರಕ ಹೊಯ್ಯುವುದು ಮತ್ತು ಅಚ್ಚು ತಯಾರಿಕೆ ಘಟಕಗಳು
- ಹೀಟ್ ಟ್ರೀಟ್ಮೆಂಟ್ ಪ್ರೊಸೆಸ್ಸಿಂಗ್ ಯುನಿಟ್
- ಪೌಡರ್ ಕೋಟಿಂಗ್ ಉದ್ಯಮಗಳು
- ಎಂಜಿನಿಯರಿಂಗ್ ಫ್ಯಾಬ್ರಿಕೇಷನ್ ಮತ್ತು ವೆಲ್ಡಿಂಗ್
- ಆಹಾರ ಸಂಸ್ಕರಣಾ ಘಟಕಗಳು
- ರಸಾಯನಿಕ ಮತ್ತು ಔಷಧೀಯ ಉತ್ಪಾದನಾ ಸಂಸ್ಥೆಗಳು
ಇದನ್ನೂ ಓದಿ: ಭಾರತದ ಮೇಲೆ ಇರಾನ್-ಇಸ್ರೇಲ್ ತೈಲ ರಾಷ್ಟ್ರಗಳ ಯುದ್ಧ ಎಫೆಕ್ಟ್; ವಾಣಿಜ್ಯ LPG ಸಿಲಿಂಡರ್ ಡಿಸ್ಕೌಂಟ್ ಕ್ಯಾನ್ಸಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ