ಮುಡಾ ಹಗರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದರ ಮೇಲೆ ಒಂದರಂತೆ ಸಂಕಷ್ಟ ಎದುರಾಗುತ್ತಿದ್ದು, ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ ಬೆನ್ನಲ್ಲೇ ಇದೀಗ ಜಾರಿ ನಿರ್ದೇಶನಾಲಯದ (ಇ.ಡಿ.) ಕಂಟಕ ಎದುರಾಗುವ ಸಾಧ್ಯತೆ ಇದೆ.
ಬೆಂಗಳೂರು (ನ.08): ಮುಡಾ ಹಗರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದರ ಮೇಲೆ ಒಂದರಂತೆ ಸಂಕಷ್ಟ ಎದುರಾಗುತ್ತಿದ್ದು, ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ ಬೆನ್ನಲ್ಲೇ ಇದೀಗ ಜಾರಿ ನಿರ್ದೇಶನಾಲಯದ (ಇ.ಡಿ.) ಕಂಟಕ ಎದುರಾಗುವ ಸಾಧ್ಯತೆ ಇದೆ. ಮೈಸೂರು ಲೋಕಾಯುಕ್ತ ಪೊಲೀಸರ ವಿಚಾರಣೆ ಬಳಿಕ ಇ.ಡಿ. ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಲೋಕಾಯುಕ್ತ ಜತೆಗೆ ಪ್ರಕರಣ ಇ.ಡಿ.ಯಲ್ಲಿಯೂ ದಾಖಲಾಗಿರುವ ಕಾರಣ ತನಿಖೆಯ ಭಾಗವಾಗಿ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಸಾಧ್ಯತೆಗಳಿವೆ.
ಮುಡಾ ವಿಚಾರದಲ್ಲಿ ಇ.ಡಿ. ಅಧಿಕಾರಿಗಳು ಈಗಾಗಲೇ ಹಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಲವು ಮಹತ್ವದ ಮಾಹಿತಿಗಳನ್ನು ಕ್ರೋಢೀಕರಿಸಲಾಗಿದೆ. ಅಲ್ಲದೇ, ಮೈಸೂರಿನಲ್ಲಿನ ಮುಡಾ ಕಚೇರಿಯ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದರ ಜತೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಡೆವಲಪರ್‌ವೊಬ್ಬರು ಸೇರಿದಂತೆ ಮುಡಾ ಮಾಜಿ ಆಯುಕ್ತರ ನಿವಾಸ ಮತ್ತು ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ದಾಳಿ ವೇಳೆ ಲಭ್ಯವಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಮುಡಾದ ಮಾಜಿ ಅಧ್ಯಕ್ಷ ಮರಿಗೌಡ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.
undefined
ಸಿ.ಪಿ.ಯೋಗೇಶ್ವರ್ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್: ದೇವೇಗೌಡ ವಾಗ್ದಾಳಿ
ಡೆವಲಪರ್ ಮಂಜುನಾಥ್, ಮುಡಾ ಮಾಜಿ ಆಯುಕ್ತರಾದ ನಟೇಶ್, ದಿನೇಶ್ ಕುಮಾರ್ ಸೇರಿದಂತೆ ಹಲವರ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಮುಡಾ ಹಗರಣ ಸಂಬಂಧ ಸಮಗ್ರವಾಗಿ ದಾಖಲೆಗಳನ್ನು ಕ್ರೋಢೀಕರಿಸಿಕೊಳ್ಳಲಾಗಿದೆ. ಮುಡಾ ಹಗರಣ ನಡೆದ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿ, ಸಿಬ್ಬಂದಿಯನ್ನು ಸಹ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಪ್ರತಿ ವಿಚಾರಣೆಯಲ್ಲಿಯೂ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಈ ಮಾಹಿತಿ ಮೇರೆಗೆ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಂದ ಅಭಿಯೋಜನೆಗೆ ಅನುಮತಿ ಪಡೆದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ಪೊಲೀಸರ ಮೇಲೆ ವಿಶ್ವಾಸದ ಕೊರತೆ ಇದೆ ಎಂದು ಇ.ಡಿ. ಸಂಸ್ಥೆಗೂ ದೂರು ನೀಡಿದ್ದರು.
ಸಿದ್ದುಗೆ ತಾಕತ್ತಿದ್ದರೆ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ಯಡಿಯೂರಪ್ಪ ಸವಾಲು
ಈ ದೂರಿನ ಮೇರೆಗೆ ಇ.ಡಿ. ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಹಗರಣಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರಿಗೂ ನೋಟಿಸ್ ನೀಡಿ ವಿಚಾರಣೆಗೊಳಪಡಿಸುತ್ತಿದ್ದಾರೆ. ಈಗಾಗಲೇ ಹಲವರನ್ನು ವಿಚಾರಣೆ ನಡೆಸಿರುವ ಇ.ಡಿ. ಅಧಿಕಾರಿಗಳು ಮುಂದಿನ ದಿನದಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸಂಬಂಧಿ ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರನ್ನು ವಿಚಾರಣೆಗೊಳಪಡಿಸಲು ಸಜ್ಜಾಗಿದ್ದಾರೆ. ಸಂಪೂರ್ಣ ಮಾಹಿತಿಯನ್ನಿಟ್ಟುಕೊಂಡು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.