ರೋಹಿಣಿ ಸಿಂಧೂರಿ vs ಡಿ.ರೂಪಾ: ಹೈಪವರ್ ಅಧಿಕಾರಿಗಳ ಜಗಳ ಸುಪ್ರೀಂ ಕೋರ್ಟ್‌ನಿಂದ, ಹೈಕೋರ್ಟ್‌ಗೆ ವಾಪಸ್!

By Sathish Kumar KH  |  First Published Nov 7, 2024, 5:58 PM IST

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಕಾನೂನು ಹೋರಾಟ ಸುಪ್ರೀಂ ಕೋರ್ಟ್ ತಲುಪಿತ್ತು. ರಾಜಿ ಮಾಡಿಕೊಳ್ಳಲು ನ್ಯಾಯಾಲಯದ ಸಲಹೆಯನ್ನು ತಿರಸ್ಕರಿಸಿದ ಇಬ್ಬರನ್ನೂ ಹೈಕೋರ್ಟ್‌ಗೆ ವಾಪಸ್ ಕಳುಹಿಸಲಾಗಿದೆ.


ಬೆಂಗಳೂರು (ನ.07): ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗಂಭೀರ ಆರೋಪ ಮಾಡಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ನಡುವಿನ ಜಗಳ ಲೋಕಲ್ ಕೋರ್ಟ್, ಹೈಕೋರ್ಟ್ ಮುಗಿದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿಯೂ ಇಬ್ಬರು ಜಗಳ ಬಗೆಹರಿಸಿಕೊಳ್ಳದ ಕಾರಣ ನೀವು ಇಲ್ಲಿ ಬರುವುದು ಬೇಡ ಪುನಃ ಹೈಕೋರ್ಟ್‌ಗೆ ಹೋಗಿ ಅಲ್ಲಿಯೇ ನ್ಯಾಯ ಪಂಚಾಯಿತಿ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ವಾಪಸ್ ಕಳುಹಿಸಿದೆ.

ಹೌದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳದ್ದೇ ದರ್ಬಾರ್ ಆಗಿತ್ತು. ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕೆಲವು ಅಶ್ಲೀಲವೆನಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅವರ ನಡತೆಯ ಮೇಲೆ ಕೆಟ್ಟ ಆರೋಪಗಳನ್ನು ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಅವರ ಮೇಲೆ ಮತ್ತಷ್ಟು ಆರೋಪಗಳನ್ನು ಮಾಡುತ್ತಾ ಇಷ್ಟಕ್ಕೆ ಮುಗಿಸುವುದಿಲ್ಲ ಎಂಬ ಸವಾಲು ಹಾಕಿದ್ದರು. ಆದರೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಡಿ.ರೂಪಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದಕ್ಕೂ ಪ್ರತಿಕ್ರಿಯೆ ಕೊಡದೇ ಕೋರ್ಟ್ ಮೆಟ್ಟಿಲೇರಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು.

Tap to resize

Latest Videos

undefined

ಸರ್ಕಾರದ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿ ಅವರು ಇಬ್ಬರ ಜಗಳವನ್ನು ನಿಲ್ಲಿಸಲು ಪ್ರಯತ್ನ ಮಾಡಲಾಯಿತಾದರೂ ಯಾರೂ ತಗ್ಗಲು ಸಿದ್ಧರಿರಲಿಲ್ಲ. ಇದರಿಂದ ಜೊತೆಗೆ ಸ್ಥಳೀಯ ಕೋರ್ಟ್‌ನಲ್ಲಿನ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದರು. ಇಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಮಧ್ಯಸ್ಥಿಕೆ ಮೂಲಕ ಕೇಸ್ ಇತ್ಯರ್ಥಪಡಿಸಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದರು. ಕೋರ್ಟ್‌ನಿಂದ ಇದಕ್ಕೆ ಅನುಮತಿ ನೀಡಲಾದರೂ, ರೋಹಿಣಿ ಸಿಂಧೂರಿ ಅವರು ಇದಕ್ಕೊಪ್ಪಿಕೊಳ್ಳಲಿಲ್ಲ. ಇದರಿಂದ ಇವರಿಬ್ಬರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮಾಡಿದಾಗಲೂ ಇಬ್ಬರೂ ಜಗಳ ಇತ್ಯರ್ಥಪಡಿಸಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ, ನೀವು ಪುನಃ ಹೈಕೋರ್ಟ್‌ಗೆ ಹೋಗಿ ಅಲ್ಲಿಯೇ ನಿಮ್ಮ ಜಗಳ ಬಗೆಹರಿಸಿಕೊಳ್ಳುವಂತೆ ವಾಪಸ್ ಕಳುಹಿಸಿದೆ.

ಇದನ್ನೂ ಓದಿ: ಇಬ್ಬರು ಒಪ್ಪಿ ಅರ್ಜಿ ವಾಪಸ್ ಪಡೆದ್ರೆ ವ್ಯಾಜ್ಯ ಇತ್ಯರ್ಥ: ರೂಪ-ರೋಹಿಣಿಗೆ ಸುಪ್ರೀಂಕೋರ್ಟ್‌ ಸಲಹೆ

ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?
ಸುಪ್ರೀಂ ಕೋರ್ಟ್‌ನಲ್ಲಿ ಐಪಿಎಸ್ ಡಿ.ರೂಪಾ Vs ಐಎಎಸ್ ರೋಹಿಣಿ ಸಿಂಧೂರಿ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಅಭಯ್ ಓಕಾ ಅವರು ಕೈಗೆತ್ತಿಕೊಂಡರು. ವಿಚಾರಣೆ ವೇಳೆ ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಾಗಿ ದೂರುದಾರೆ ಡಿ. ರೂಪಾ ಪರ ವಕೀಲರು ಕೋರ್ಟ್ ಮುಂದೆ ಒಲವು ವ್ಯಕ್ತಪಡಿಸಿದರು. ಆದರೆ, ಇದಕ್ಕೆ ರೋಹಿಣಿ ಸಿಂಧೂರಿ ಪರ ವಕೀಲರು, ಡಿ.ರೂಪಾ ಅವರು ಬೇಷರತ್ ಕ್ಷಮೆಯಾಚಿಸಿದರೆ ಮಾನನಷ್ಟ ಮೊಕದ್ದಮೆಯ ಅರ್ಜಿ ವಾಪಸ್ ಪಡೆಯುವುದಾಗಿ ತಿಳಿಸಿದರು.

ಆದರೆ, ಇದಕ್ಕೊಪ್ಪದ ಸುಪ್ರೀಂ ಕೋರ್ಟ್ ಇಬ್ಬರು ಅಧಿಕಾರಿಗಳು ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥ ಮಾಡುವಂತೆ ಪ್ರಸ್ತಾಪ ಮಾಡಲಾಯಿತು. ಇದಕ್ಕೆ ಅಗತ್ಯವಿದ್ದರೆ ಹಿರಿಯ ವಕೀಲರು ಅಥವಾ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಳ್ಳಬಹುದು ಎಂದು ತಿಳಿಸಲಾಯಿತು. ಆದರೆ, ಸುಪ್ರೀಂ ಕೋರ್ಟ್ ಪ್ರಸ್ತಾಪಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಒಪ್ಪಿಕೊಳ್ಳಲಿಲ್ಲ. ಮುಂದುವರೆದು, ಡಿ.ರೂಪಾ ನನ್ನ ಮೇಲೆ ಮಾಡಿದ ಆರೋಪಗಳು ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೆಯೇ ಇವೆ. ಹೈಕೋರ್ಟ್ ಆದೇಶದ ಬಳಿಕವೂ ರೂಪಾ ಅವರು ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ಸಂದೇಶಗಳನ್ನು ಡಿಲಿಟ್ ಮಾಡಿಲ್ಲ ಎಂದರು.

ಇದನ್ನೂ ಓದಿ: IAS Vs IPS: ಡಿ. ರೂಪಾ ಮೌದ್ಗಿಲ್‌ಗೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌, ರೋಹಿಣಿ ಸಿಂಧೂರಿಗೆ ಗೆಲುವು

ಸುಪ್ರೀಂ ಕೋರ್ಟ್‌ ಮುಂದಿಟ್ಟ ಪ್ರಸ್ತಾಪವನ್ನೂ ತಿರಸ್ಕರಿಸಿದ್ದರಿಂದ ಗರಂ ಆದ ನ್ಯಾಯಮೂರ್ತಿಗಳು, ಇಬ್ಬರು ಹಿರಿಯ ಅಧಿಕಾರಿಗಳು ಹೀಗೆ ವರ್ತಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಮಧ್ಯಸ್ಥಿಕೆ ಮೂಲಕ ಕ್ಷಮೆಗೆ ಒಪ್ಪದ ಹಿನ್ನೆಲೆಯಲ್ಲಿ ಅರ್ಜಿ ವಾಪಸ್ ಪಡೆದು ಹೈಕೋರ್ಟ್‌ನಲ್ಲಿ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳುವುದಾಗಿ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಹೇಳಿದರು. ಇಬ್ಬರ ವಾದ ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ಅಂತಿಮವಾಗಿ ನೀವು ಹೈಕೋರ್ಟ್‌ನಲ್ಲಿ ಹೋಗಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚನೆ ನೀಡಿತು. ಸುಪ್ರೀಂಕೋರ್ಟ್ ಸೂಚನೆ ಹಿನ್ನಲೆಯಲ್ಲಿ ಡಿ.ರೂಪಾ ಅವರು ತಮ್ಮ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಈ ಪ್ರಕರಣ ಹೈಕೋರ್ಟ್‌ನಲ್ಲಿ ಮುಂದುವರೆಯುತ್ತದೆ.

click me!