ಮಹಾರಾಷ್ಟ್ರ ಸರ್ಕಾರ ತಮ್ಮ ಗ್ರಾಮದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದು, ತಾವು ಕರ್ನಾಟಕಕ್ಕೆ ಸೇರಲು ಸಿದ್ಧ ಎಂದಿರುವ ಮಹಾರಾಷ್ಟ್ರದ ಜತ್ ತಾಲೂಕಿನ ಉಡುಗಿ ಗ್ರಾಮದ 17 ಜನ ಕನ್ನಡಿಗರಿಗೆ ಮಹಾರಾಷ್ಟ್ರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಬೆಳಗಾವಿ/ಅಥಣಿ (ಡಿ.07): ಮಹಾರಾಷ್ಟ್ರ ಸರ್ಕಾರ ತಮ್ಮ ಗ್ರಾಮದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದು, ತಾವು ಕರ್ನಾಟಕಕ್ಕೆ ಸೇರಲು ಸಿದ್ಧ ಎಂದಿರುವ ಮಹಾರಾಷ್ಟ್ರದ ಜತ್ ತಾಲೂಕಿನ ಉಡುಗಿ ಗ್ರಾಮದ 17 ಜನ ಕನ್ನಡಿಗರಿಗೆ ಮಹಾರಾಷ್ಟ್ರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆ ಮೂಲಕ ಕರ್ನಾಟಕ ಸೇರಬೇಕೆನ್ನುವ ಕನ್ನಡಿಗರ ಧ್ವನಿ ಅಡಗಿಸಲು ಮಹಾರಾಷ್ಟ್ರ ಪೊಲೀಸರು ಮುಂದಾಗಿದ್ದಾರೆ.
ಇನ್ನು ಮುಂದೆ ಕರ್ನಾಟಕ ಸೇರ ಬಯಸುವ ಹೋರಾಟ ನಡೆಸುವ ಮುನ್ನ ಪೊಲೀಸರ ಗಮನಕ್ಕೆ ತರಬೇಕು. ಒಂದು ವೇಳೆ ಗಮನಕ್ಕೆ ತರದೆ ಹಾಗೇ ಪ್ರತಿಭಟನೆ ಮಾಡಿದರೆ, ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಡಿ.2ರಂದು ಗಡಿ ಗ್ರಾಮದ 45 ಗ್ರಾಮಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು ಎಂದು ಉಡುಗಿ ಗ್ರಾಮದಲ್ಲಿ ಠರಾವ್ ಪಾಸ್ ಮಾಡಲಾಗಿತ್ತು. ಅಲ್ಲದೆ, ಗ್ರಾಮಸ್ಥರು ಕನ್ನಡ ಧ್ವಜ ಹಾರಿಸಿ, ಕನ್ನಡ, ಕರ್ನಾಟಕದ ಪರವಾಗಿ ಘೋಷಣೆ ಕೂಗಿದ್ದರು.
ಮಹಾ ಕಿಡಿಗೆ ಬೆಳಗಾವಿ ಗಡಿ ಉದ್ವಿಗ್ನ: ರಾಜಕಾರಣಿಗಳ ವಿರುದ್ಧ ಕರವೇ ಕೆಂಡ
ಕರ್ನಾಟಕ ಸೇರಲು ಗಡಿಯ 11 ಗ್ರಾಪಂಗಳ ಠರಾವ್: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಭುಗಿಲೆದ್ದಿರುವ ಸಂದರ್ಭದಲ್ಲೇ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ 11 ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡುವಂತೆ ಠರಾವ್ ಪಾಸ್ ಮಾಡಿ, ಸೊಲ್ಲಾಪುರ ಜಿಲ್ಲಾಧಿಕಾರಿಗೆ ಠರಾವ್‌ನ ಪ್ರತಿ ಜೊತೆಗೆ ಮನವಿ ಸಲ್ಲಿಸಿವೆ. ‘ನಿಮ್ಮ ರಾಜ್ಯ ಅಭಿವೃದ್ಧಿ ಕಂಡಿದೆ. ಹೀಗಾಗಿ, ನಮ್ಮ ಎಲ್ಲ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ಮುಖ್ಯಮಂತ್ರಿಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಕ್ಕಲಕೋಟೆ ತಾಲೂಕಿನ ಆಳಗೆ, ಶೇಗಾಂವ, ಕಲ್ಲಕರ್ಜಾಳ, ಧಾರಸಂಗ, ಕೆಗಾಂವ, ದೇವಿಕವಟಾ, ಶಾವಳ, ಹಿಳ್ಳಿ, ಅಂದೇವಾಡಿ, ಪಾನ್ ಮಂಗರುಳ, ಕೋರ್ಸೆಗಾಂವ, ಠರಾವ್ ಪಾಸು ಮಾಡಿರುವ 11 ಗ್ರಾ.ಪಂ.ಗಳು. ಇದೇ ವೇಳೆ, ಇನ್ನೂ 65 ಗ್ರಾಮ ಪಂಚಾಯಿತಿಗಳು ಠರಾವ್ ಪಾಸ್ ಮಾಡಲು ಸಿದ್ಧತೆ ನಡೆಸಿವೆ. ಇದೇ ವೇಳೆ, ಡಿ.19 ರಿಂದ ಆರಂಭವಾಗಲಿರುವ ಬೆಳಗಾವಿಯ ಅಧಿವೇಶನದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಅಕ್ಕಲಕೋಟ ಭಾಗದ ಕನ್ನಡಿಗರು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಭೇಟಿಗೆ ಅವಕಾಶ ದೊರಕಿಸಿಕೊಡುವಂತೆ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಶಾಂತಿ ಕಾಪಾಡಲು ಸಿಎಂ ಬೊಮ್ಮಾಯಿ-ಮಹಾರಾಷ್ಟ್ರ ಸಿಎಂ ಶಿಂಧೆ ಸಮ್ಮತಿ
ಇದಕ್ಕೆ ಪ್ರತಿಕ್ರಿಯಿಸಿರುವ ಚಂದರಗಿ, ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಗಡಿ ಕನ್ನಡಿಗರಿಗೆ ಭರವಸೆ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ತಮ್ಮ ಗ್ರಾಮಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ತಮ್ಮ ಭಾಗವನ್ನು ಅಲ್ಲಿನ ಸರ್ಕಾರ ನಿರ್ಲಕ್ಷಿಸಿದೆ. ತಮ್ಮ ಹಳ್ಳಿಗಳಲ್ಲಿ ಕನ್ನಡಿಗರ ಸಂಖ್ಯೆಯೇ ಹೆಚ್ಚಾಗಿರುವುದರಿಂದ ಮಹಾರಾಷ್ಟ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತ ಬಂದಿದೆ. ಹೀಗಾಗಿ, ಅನಿವಾರ್ಯವಾಗಿ ತಾವು ಇದೀಗ ಕರ್ನಾಟಕಕ್ಕೆ ಸೇರ್ಪಡೆಯಾಗುವ ಬಗ್ಗೆ ಒಲವು ಹೊಂದುವಂತಾಗಿದೆ ಎಂಬುದು ಅವರ ಆರೋಪ.