ಶಾಂತಿ ಕಾಪಾಡಲು ಸಿಎಂ ಬೊಮ್ಮಾಯಿ-ಮಹಾರಾಷ್ಟ್ರ ಸಿಎಂ ಶಿಂಧೆ ಸಮ್ಮತಿ

By Govindaraj S  |  First Published Dec 7, 2022, 8:22 AM IST

ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಂಗಳವಾರ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ.


ಬೆಂಗಳೂರು (ಡಿ.07): ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಂಗಳವಾರ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ನನ್ನೊಂದಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು. ಎರಡೂ ರಾಜ್ಯಗಳಲ್ಲಿ ಶಾಂತಿ ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಎರಡೂ ರಾಜ್ಯಗಳ ನಡುವೆ ಸೌಹಾರ್ದಯುತ ಬಾಂಧವ್ಯ ಇರುವುದರಿಂದ ಕರ್ನಾಟಕದ ಗಡಿಗೆ ಸಂಬಂಧಿಸಿದಂತೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.

Tap to resize

Latest Videos

ಮಹಾ ಕಿಡಿಗೆ ಬೆಳಗಾವಿ ಗಡಿ ಉದ್ವಿಗ್ನ: ರಾಜಕಾರಣಿಗಳ ವಿರುದ್ಧ ಕರವೇ ಕೆಂಡ

ಚುನಾವಣೆಗೆ ಬಳಸಲ್ಲ: ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ್‌ ಪಾಟೀಲ್‌ ಮತ್ತು ಶಂಭುರಾಜ್‌ ದೇಸಾಯಿ ಅವರು ಬೆಳಗಾವಿಗೆ ಬಾರದೆ ಇರುವುದಕ್ಕೂ ರಾಜ್ಯದ ವಿಧಾನಸಭೆ ಚುನಾವಣೆಗೂ ಸಂಬಂಧವಿಲ್ಲ. ಈ ವಿಚಾರವನ್ನು ಚುನಾವಣೆಗೆ ಬಳಸುವುದಿಲ್ಲ. ಗಡಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದವರು ಬಹಳ ವರ್ಷಗಳಿಂದ ವಿವಾದ ಮಾಡಿಕೊಂಡು ಬಂದಿದ್ದಾರೆ. ವಿವಾದದಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಎರಡೂ ಕಡೆ ಪ್ರತಿಕ್ರಿಯೆ ಬರುತ್ತದೆ. ಜನರ ಮಧ್ಯೆ ಇರುವ ಸಾಮರಸ್ಯ ಕದಡುವ ಕೆಲಸ ಬೇಡ ಎಂದು ಹೇಳಿದ್ದೇನೆ. 

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವಿದ್ದು, ನಮ್ಮ ನಡೆ ಸಂವಿಧಾನಬದ್ಧವಾಗಿರುವುದರಿಂದ ಕಾನೂನು ಸಮರವನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ನಮಗೆ ಚುನಾವಣಾ ದೃಷ್ಟಿಕೋನವಿಲ್ಲ ಅಥವಾ ವಿವಾದ ಹುಟ್ಟಿಸುವ ಇರಾದೆಯೂ ಇಲ್ಲ. ನಮ್ಮ ಗಡಿ ಹಾಗೂ ಜನರ ರಕ್ಷಣೆ ಮಾಡುವ ಕೆಲಸಕ್ಕೆ ನಾವು ಬದ್ಧರಾಗಿದ್ದೇವೆ. ಮಹಾರಾಷ್ಟ್ರ, ತೆಲಂಗಾಣ, ಕೇರಳದಲ್ಲಿರುವ ಕನ್ನಡಿಗರ ಹಿತಚಿಂತನೆಯನ್ನೂ ಮಾಡುತ್ತಿದ್ದೇವೆ. ಗಡಿ ಭಾಗದಲ್ಲಿರುವ ಎಲ್ಲ ಕನ್ನಡಿಗರ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಯಾವುದೇ ಕಾರಣಕ್ಕೂ ಶಾಂತಿ ಕದಡಲು ಬಿಡುವುದಿಲ್ಲ ಎಂದರು.

ಮಹಾ ವಾಹನ ಮೇಲೆ ದಾಳಿ ತಡೆಗೆ 24 ಗಂಟೆ ಗಡುವು: ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯಿಂದ ಬೆಳಗಾವಿ ಗಡಿ ವಿವಾದ ಭುಗಿಲೆದ್ದಿದ್ದು, ಬೆಳಗಾವಿಯಲ್ಲಿ ಮಹಾರಾಷ್ಟ್ರ ವಾಹನಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮಹಾರಾಷ್ಟ್ರದ ವಾಹನಗಳ ಮೇಲಿನ ದಾಳಿ ನಿಲ್ಲದಿದ್ದರೆ ಮಹಾರಾಷ್ಟ್ರ ಇಲ್ಲಿಯವರೆಗೂ ಅನುಸರಿಸಿಕೊಂಡು ಬರುತ್ತಿರುವ ಸಂಯಮ ಬದಲಾಗಬಹುದು. ಪರಿಸ್ಥಿತಿ ಹತೋಟಿಗೆ ಬರದಿದ್ದರೆ ನಾನು ಬೆಳಗಾವಿಗೆ ಭೇಟಿ ನೀಡುತ್ತೇನೆ. ಬಳಿಕ ಏನೇ ನಡೆದರೂ ಅದಕ್ಕೆ ಕರ್ನಾಟಕ ಸರ್ಕಾರವೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ ಎಂದು ಎನ್‌ಸಿಪಿ ನಾಯಕ ಶರದ ಪವಾರ ಎಚ್ಚರಿಕೆ ನೀಡಿದ್ದಾರೆ.

ಮುಂಬೈನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಂಬಂಧ ಮಹಾರಾಷ್ಟ್ರ ಉಪಮುಖ್ಯಮಂತ್ರಿಯವರು ಕರ್ನಾಟಕ ಸಿಎಂ ಅವರನ್ನು ಸಂಪರ್ಕಿಸಿ, ಮಾತನಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕರ್ನಾಟಕದ ಮುಖ್ಯಮಂತ್ರಿ ದಾಳಿಗೆ ಪ್ರಚೋದನೆ ನೀಡುತ್ತಿದ್ದರೆ ಅದು ದೇಶದ ಏಕತೆಗೆ ಧಕ್ಕೆ. ಕರ್ನಾಟಕದಲ್ಲಿ ಈ ಕೆಲಸ ನಡೆಯುತ್ತಿದ್ದರೆ ಕೇಂದ್ರ ಸರ್ಕಾರ ಕಣ್ಮುಚ್ಚಿದೆ. ಬುಧವಾರದಿಂದ ಸಂಸತ್‌ ಅಧಿವೇಶನ ಆರಂಭವಾಗಲಿದ್ದು, ಮಹಾರಾಷ್ಟ್ರದ ಸಂಸದರು ಒಟ್ಟಾಗಿ ಈ ಕುರಿತು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಬೇಕು ಎಂದು ಹೇಳಿದರು.

ಮಹಾ ಸಚಿವರಿಗೆ ‘ಗಡಿ’ ನಿರ್ಬಂಧ: ಆದೇಶ ಹೊರಡಿಸಿದ ಬೆಳಗಾವಿ ಜಿಲ್ಲಾಧಿಕಾರಿ

ಬೆಳಗಾವಿಯಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಸಮಿತಿಯ ಪ್ರಮುಖ ಪದಾಧಿಕಾರಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅವರ ಕಚೇರಿ ಎದುರು ಪೊಲೀಸ್‌ ಪಡೆ ನಿಯೋಜಿಸಲಾಗಿದೆ. ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ತಡೆದು, ತಪಾಸಣೆ ನಡೆಸಲಾಗುತ್ತಿದೆ. ಅಲ್ಲಿನ ಮರಾಠಿ ಭಾಷಿಕರು ಭಯಭೀತರಾಗಿದ್ದಾರೆ ಎಂದು ದೂರಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

click me!