ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 450ಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಬೆಳಗಾವಿ (ಡಿ.07): ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 450ಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 4ರ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್ ಬಳಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಕೊಲ್ಲಾಪುರದ ಶಿವಸೇನೆ ಕಾರ್ಯಕರ್ತರು ಗಡಿಗೆ ನುಗ್ಗಿ ಗಲಾಟೆ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟುಹೆಚ್ಚಿಸಲಾಗಿದೆ.
ಪುಣೆಯಲ್ಲಿ ಕರ್ನಾಟಕ ಬಸ್‌ಗೆ ಮಸಿ, ಐವರ ಬಂಧನ: ಮಹಾರಾಷ್ಟ್ರದ ಪುಣೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕರ್ನಾಟಕ ರಾಜ್ಯ ಸಾರಿಗೆಯ 10ಕ್ಕೂ ಹೆಚ್ಚು ಬಸ್‌ಗಳ ಮೇಲೆ ಶಿವಸೇನೆ ಕಾರ್ಯಕರ್ತರು ‘ಜೈ ಮಹಾರಾಷ್ಟ್ರ’ ಎಂದು ಕೇಸರಿ ಹಾಗೂ ಕಪ್ಪು ಬಣ್ಣದಿಂದ ಬರೆದಿದ್ದು, ಈ ಸಂಬಂಧ 5 ಮಂದಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಮಸಿ ಬಳಿದಿದ್ದಾರೆ.
ಶಾಂತಿ ಕಾಪಾಡಲು ಸಿಎಂ ಬೊಮ್ಮಾಯಿ-ಮಹಾರಾಷ್ಟ್ರ ಸಿಎಂ ಶಿಂಧೆ ಸಮ್ಮತಿ
ಬಸ್ಸಿನ ಚಾಸಿಗೆ ಜೋತು ಬಿದ್ದ ಹೋರಾಟಗಾರ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಹಲವಾರು ಕನ್ನಡ ಪರ ಹೋರಾಟಗಾರರು ಬೆಳಗಾವಿಯತ್ತ ಧಾವಿಸುತ್ತಿದ್ದರು. ಪೊಲೀಸರು ಅವರನ್ನು ಹಿರೇಬಾಗೇವಾಡಿಯ ಟೋಲ್‌ಗೇಟ್‌ನಲ್ಲೇ ತಡೆದರು. ಈ ವೇಳೆ, ಕೆಲವು ಹೋರಾಟಗಾರರು ಆಯತಪ್ಪಿ ನೆಲಕ್ಕೆ ಬಿದ್ದರು. ಇನ್ನೂ ಕೆಲವರು ರಸ್ತೆ ಮೇಲೆ ಬಿದ್ದು ಉರುಳಾಡಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೋರ್ವ ಬಸ್ಸಿನ ಕೆಳಭಾಗ ಹೋಗಿ ಚಾಸಿ ಹಿಡಿದು ಜೋತು ಬಿದ್ದ. ಈತನನ್ನು ಹೊರಗೆ ತರಲು ಪೊಲೀಸರು ಹರಸಾಹಸ ಪಟ್ಟರು. ಕೆಲವರು ಬಸ್‌ನ ಕಿಟಕಿಯ ಮೂಲಕ ಹೊರಗೆ ಜಿಗಿದರು. ಕೊನೆಗೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬೇರೆ ಕಡೆ ಕರೆದುಕೊಂಡು ಹೋದರು.
ಸಂಸತ್ತಿನಲ್ಲಿ ಬರುವುದೇ ಗಡಿ ವಿಚಾರ: ಲೋಕಸಭಾ ಅಧಿವೇಶನ ಬುಧವಾರದಿಂದ ಆರಂಭವಾಗಲಿದ್ದು, ಸಂಸತ್ತಿನಲ್ಲಿ ಬೆಳಗಾವಿ ಗಡಿ ವಿಚಾರ ಪ್ರಸ್ತಾಪವಾಗುವುದೇ ಎನ್ನುವ ಕುತೂಹಲ ಮೂಡಿದೆ. ಬೆಳಗಾವಿ ಗಡಿ ವಿಚಾರದ ಬಗ್ಗೆ ಮಹಾರಾಷ್ಟ್ರದ ಶಿವಸೇನೆ ಸಂಸದರು ಧ್ವನಿ ಎತ್ತಲು ತಯಾರಾಗಿದ್ದಾರೆ. ಆದರೆ, ಕರ್ನಾಟಕದ ಸಂಸದರು ಈ ಬಗ್ಗೆ ಈವರೆಗೂ ಚಕಾರವೆತ್ತಿಲ್ಲ. ಬೆಳಗಾವಿ ಗಡಿ ವಿವಾದ ವಿಚಾರವಾಗಿ ಶಿವಸೇನೆ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಬಣದ ಸಂಸದರು ಕೇಂದ್ರ ಗೃಹ ಸಚಿವ ಅಮಿತ ಶಾ ಅವರೊಂದಿಗೆ ಚರ್ಚೆ ನಡೆಸಲು ತೀರ್ಮಾನಿಸಿದ್ದರೆ, ಶಿವಸೇನೆ ಉದ್ಧವ ಠಾಕ್ರೆ ಬಣದ ಸಂಸದರು ಈ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ತೀರ್ಮಾನಿಸಿದ್ದಾರೆ.
ಮಹಾ ಕಿಡಿಗೆ ಬೆಳಗಾವಿ ಗಡಿ ಉದ್ವಿಗ್ನ: ರಾಜಕಾರಣಿಗಳ ವಿರುದ್ಧ ಕರವೇ ಕೆಂಡ
ಬೆಳಗಾವಿ ಗಡಿ ವಿಚಾರದಲ್ಲಿ ಗಡಿಭಾಗದ ಸಂಸದರು ಸೇರಿದಂತೆ ರಾಜ್ಯದ ಯಾವುದೇ ಸಂಸದರು ಈವರೆಗೂ ಚಕಾರವೆತ್ತಿಲ್ಲ. ಜಿಲ್ಲೆಯ ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವಾಗಿ ಈವರೆಗೂ ಒಂದೇ ಒಂದು ಹೇಳಿಕೆ ನೀಡಿಲ್ಲ. ಇದು ಈಗಾಗಲೇ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಂಸತ್ತಿನಲ್ಲಿ ರಾಜ್ಯದ ಸಂಸದರು ಗಡಿ ವಿಚಾರ ಪ್ರಸ್ತಾಪ ಮಾಡದಿದ್ದರೆ ಮತ್ತೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆಯಿದೆ.