ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಅಭಿವೃದ್ಧಿಯ ಹಿತ ಚಿಂತನೆಯಿಂದ ಬುಧವಾರ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿಲ್ಲ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಜೂ.21): ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಅಭಿವೃದ್ಧಿಯ ಹಿತ ಚಿಂತನೆಯಿಂದ ಬುಧವಾರ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿಲ್ಲ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಕೆಎಂಎಫ್ ಅಧ್ಯಕ್ಷರ ಅಧಿಕಾರದ ಅವಧಿ ಇನ್ನೂ ಒಂದು ವರ್ಷವಿದ್ದು, ತಮಗೆ ಎಲ್ಲ ನಿರ್ದೇಶಕರ ಬೆಂಬಲವಿದ್ದರೂ ಸಹ ಸಂಸ್ಥೆಯ ಪ್ರಗತಿಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದೆ ಮುಂಬರುವ ಹೊಸ ಅಧ್ಯಕ್ಷರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ.
ಆ ಮೂಲಕ ರಾಜ್ಯದ ರೈತರ, ಹೈನುಗಾರರ ಹಾಗೂ ಗ್ರಾಹಕರ ಹಿತ ರಕ್ಷಣೆಗೆ ಸದಾ ಬದ್ಧನಿದ್ದೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆಎಂಎಫ್ ವಾರ್ಷಿಕವಾಗಿ ಸುಮಾರು 20 ಸಾವಿರ ಕೋಟಿ ರು.ಗಳ ವಹಿವಾಟು ಹೊಂದಿರುವ ರೈತರ ಹೆಮ್ಮೆಯ ಸಂಸ್ಥೆಯಾಗಿದೆ. ತಮ್ಮ ಆಡಳಿತ ಅವಧಿಯಲ್ಲಿ ಸಂಸ್ಥೆಯ ಉತ್ಕೃಷ್ಟತೆಯನ್ನು ಹೆಚ್ಚಿಸುವ ಹಾಗೂ ಪಾರದರ್ಶಕ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಆ ಮೂಲಕ ರಾಜ್ಯದ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಸಮಸ್ತ ಅಧಿಕಾರಿಗಳ ಸಹಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಅಧಿಕಾರ ಬಂತು ಎಂದರೆ 2-3 ಸಿಎಂ ಬದಲಿಸುವ ಚಾಳಿ ಬಿಜೆಪಿಯದ್ದು: ಸಚಿವ ಮಹದೇವಪ್ಪ
ಸರ್ಕಾರದ ಬೆಂಬಲ ಹಾಗೂ ನಿರ್ದೇಶಕರ ಸಹಕಾರದಿಂದ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಿದ್ದೇನೆ. ಮುಂದೆ ಬರುವ ಹೊಸ ಅಧ್ಯಕ್ಷರು ಸಂಸ್ಥೆಯನ್ನು ಇನ್ನಷ್ಟುಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲಿ. ಕೆಎಂಎಫ್ ಬಲವರ್ಧನೆಗಾಗಿ ತಮ್ಮ ಆಡಳಿತಾವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಸಂಸ್ಥೆಗೆ ಎಲ್ಲಿಯೂ ಕಪ್ಪು ಚುಕ್ಕೆ ಬರದಂತೆ ಉತ್ತಮ ಆಡಳಿತ ನಡೆಸಿದ್ದೇನೆ. ಕೊರೋನಾ ಸಂಕಷ್ಟಸಮಯದಲ್ಲಿ ರೈತರಿಗೆ ಕೆಎಂಎಫ್‌ನಿಂದ ಅಗತ್ಯ ಸಹಾಯ ನೀಡುವ ಮೂಲಕ ಸಂಸ್ಥೆಯ ಹಿರಿಮೆ ಹೆಚ್ಚಿಸುವ ಕೆಲಸಗಳನ್ನು ಮಾಡಿರುವ ತೃಪ್ತಿ ತಮಗಿದೆ ಎಂದು ಅವರು ತಿಳಿಸಿದ್ದಾರೆ.
ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ: ಸಚಿವ ದಿನೇಶ್ ಗುಂಡೂರಾವ್
ಇಂದು ಕೆಎಂಎಫ್ ಚುನಾವಣೆ: ಭೀಮಾ ನಾಯಕ್ ಅಧ್ಯಕ್ಷ?: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದ್ದು, ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್ ಶಾಸಕ ಭೀಮಾನಾಯಕ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಚುನಾವಣೆಯಲ್ಲಿ ಅದರಲ್ಲಿ 14 ಒಕ್ಕೂಟದ ಪ್ರತಿನಿಧಿಗಳು, ಪಶುಸಂಗೋಪನಾ ಇಲಾಖೆ ನಿರ್ದೇಶಕ, ಸಹಕಾರ ಇಲಾಖೆ ರಿಜಿಸ್ಟಾರ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಒಬ್ಬರು ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 18 ಮಂದಿ ಮತದಾನ ಮಾಡಲಿದ್ದಾರೆ. ಭೀಮಾ ನಾಯಕ್ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಹೀಗಾಗಿ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ.