ಎನ್‌ಆರ್‌ಐ ಫೋರಂಗೆ ಬಲ ತುಂಬಲು ಅನಿವಾಸಿ ಕನ್ನಡಿಗರ ಆಗ್ರಹ

By Kannadaprabha News  |  First Published Aug 9, 2023, 7:42 AM IST

ವಿದೇಶಗಳಲ್ಲಿನ ಕನ್ನಡಿಗರು ಸಂಕಷ್ಟಕ್ಕೀಡಾದಾಗ ರಾಜ್ಯ ಸರ್ಕಾರದಿಂದ ಸೂಕ್ತ ನೆರವು ಸಿಗುವಂತೆ ಮಾಡಲು ನಿಷ್ಕ್ರಿಯಗೊಂಡಿರುವ ರಾಜ್ಯದ ಅನಿವಾಸಿ ಭಾರತೀಯ ಫೋರಂಗೆ ಶಕ್ತಿ ತುಂಬಲು ಕ್ರಮ ಕೈಗೊಳ್ಳಬೇಕು ಎಂದು ಅನಿವಾಸಿ ಕನ್ನಡಿಗರು ಆಗ್ರಹಿಸಿದ್ದಾರೆ.


ಬೆಂಗಳೂರು (ಆ.09): ವಿದೇಶಗಳಲ್ಲಿನ ಕನ್ನಡಿಗರು ಸಂಕಷ್ಟಕ್ಕೀಡಾದಾಗ ರಾಜ್ಯ ಸರ್ಕಾರದಿಂದ ಸೂಕ್ತ ನೆರವು ಸಿಗುವಂತೆ ಮಾಡಲು ನಿಷ್ಕ್ರಿಯಗೊಂಡಿರುವ ರಾಜ್ಯದ ಅನಿವಾಸಿ ಭಾರತೀಯ ಫೋರಂಗೆ ಶಕ್ತಿ ತುಂಬಲು ಕ್ರಮ ಕೈಗೊಳ್ಳಬೇಕು ಎಂದು ಅನಿವಾಸಿ ಕನ್ನಡಿಗರು ಆಗ್ರಹಿಸಿದ್ದಾರೆ. ಪ್ರವಾಸ, ವ್ಯಾಸಂಗ ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ವಿದೇಶಕ್ಕೆ ತೆರಳುವ ಹಾಗೂ ವಿದೇಶಗಳಲ್ಲಿಯೇ ನೆಲೆಸಿರುವ ಕನ್ನಡಿಗರು ಸಮಸ್ಯೆಗೆ ಸಿಲುಕಿದಾಗ ಅವರಿಗೆ ನೆರವಾಗುವ ಸಲುವಾಗಿ ಕಳೆದ 10 ವರ್ಷಗಳ ಹಿಂದೆ ಅನಿವಾಸಿ ಭಾರತೀಯ ಫೋರಂ ರಚಿಸಲಾಗಿತ್ತು. ಕೇವಲ ಕನ್ನಡಿಗರ ಸುರಕ್ಷತೆಯನ್ನಷ್ಟೇ ಅಲ್ಲದೆ ರಾಜ್ಯದಲ್ಲಿ ಬಂಡವಾಳ ಹೂಡಲು ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸೆಳೆಯುವುದು ಇದರ ಉದ್ದೇಶವಾಗಿತ್ತು.

ಅದಕ್ಕಾಗಿಯೇ 2016ರಲ್ಲಿ ಎನ್‌ಆರ್‌ಐ ಪಾಲಿಸಿ ಆಫ್‌ ಕರ್ನಾಟಕ ರೂಪಿಸಿ ಪ್ರಕಟಿಸಲಾಗಿತ್ತು. ಈ ನೀತಿಯಿಂದಾಗಿ ವಿದೇಶಗಳಲ್ಲಿನ ಕನ್ನಡಿಗರು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೂ ಉತ್ಸುಕತೆ ತೋರಿಸಿದ್ದರು. 2018ರವರೆಗೆ ಉತ್ತಮವಾಗಿ ನಡೆದಿದ್ದ ರಾಜ್ಯದ ಎನ್‌ಆರ್‌ಐ ಫೋರಂನ ಚಟುವಟಿಕೆ ಅದಾದ ನಂತರ ಸ್ಥಗಿತಗೊಂಡಿದೆ. ರಾಜ್ಯದ ಎನ್‌ಆರ್‌ಐ ಫೋರಂಗೆ 2018ರಿಂದೀಚೆಗೆ ಸರ್ಕಾರದಿಂದ ಸಮರ್ಪಕವಾಗಿ ಅನುದಾನವೂ ದೊರೆತಿಲ್ಲ. ಸದ್ಯ, ಫೋರಂಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದಾರೆಯಾದರೂ, ಅವರ ನಂತರ ಉಪಾಧ್ಯಕ್ಷರ ನೇಮಕವಾಗಿಲ್ಲ. ಅಲ್ಲದೆ, ಸದಸ್ಯ ಕಾರ್ಯದರ್ಶಿಯಾಗಿ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆಯಾದರೂ, ಅವರ ಕೆಳಹಂತದ ಯಾವುದೇ ಸಿಬ್ಬಂದಿಯಿಲ್ಲ. ಹೀಗಾಗಿ ರಾಜ್ಯದ ಎನ್‌ಆರ್‌ಐ ಫೋರಂ ಇದ್ದೂ ಇಲ್ಲದಂತಾಗಿದೆ.

Tap to resize

Latest Videos

ಬಿಬಿಎಂಪಿ ಕಾಮಗಾರಿ ಬಿಲ್‌ ಪಾವತಿಗೆ ಕಮಿಷನ್‌: ಸಿಎಂಗೆ ದೂರು

ರಾಜ್ಯದ ಎನ್‌ಆರ್‌ಐ ಫೋರಂ ನಿಷ್ಕ್ರಿಯಗೊಂಡ ಕಾರಣದಿಂದಲೇ ಕೊರೋನಾ ಸಂದರ್ಭದಲ್ಲಿ ವಿದೇಶದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ಸಾಕಷ್ಟುಸಮಸ್ಯೆ ಎದುರಿಸುವಂತಾಯಿತು. ಅಲ್ಲದೆ, ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾದಾಗಲೂ ಅಲ್ಲಿದ್ದ ಕನ್ನಡಿಗರು ರಾಜ್ಯಕ್ಕೆ ವಾಪಾಸಾಗಲು ಪರದಾಡಿದರು. ಹೀಗೆ ಹಲವು ಸಂದರ್ಭದಲ್ಲಿ ವಿದೇಶದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರೆತರಲು ಕಷ್ಟಪಡುವಂತಾಗಿತ್ತು. ಅದೇ ರಾಜ್ಯದ ಎನ್‌ಆರ್‌ಐ ಫೋರಂಗೆ ಉಪಾಧ್ಯಕ್ಷರನ್ನು ನೇಮಿಸಿ ಫೋರಂನ್ನು ಕ್ರಿಯಾಶೀಲವನ್ನಾಗಿಸಿದರೆ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕೆಲಸ ಸುಲಭವಾಗುತ್ತದೆ. ಪ್ರಮುಖವಾಗಿ ಯಾವ ದೇಶದಲ್ಲಿ ಕನ್ನಡಿಗರು ಸಿಲುಕಿರುತ್ತಾರೋ, ಅಲ್ಲಿನ ರಾಯಭಾರಿ ಕಚೇರಿ ಸಂಪರ್ಕಿಸಿ ಸೂಕ್ತ ವ್ಯವಸ್ತೆ ಮಾಡಲು ಸಹಕಾರಿಯಾಗಲಿದೆ. ಹೀಗಾಗಿ ಶೀಘ್ರದಲ್ಲಿ ರಾಜ್ಯದ ಎನ್‌ಆರ್‌ಐ ಫೋರಂ ಸಕ್ರಿಯವಾಗುವಂತೆ ಮಾಡಬೇಕು ಎಂದು ಅನಿವಾಸಿ ಕನ್ನಡಿಗರು ಒತ್ತಾಯಿಸಿದ್ದಾರೆ.

ಎನ್‌ಆರ್‌ಐ ಕನ್ನಡಿಗರಿಗಾಗಿ ಸಚಿವಾಲಯ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಎನ್‌ಆರ್‌ಐ ಕನ್ನಡಿಗರಿಗಾಗಿಯೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಘೋಷಿಸಿತ್ತು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಚುನಾವಣಾ ಪ್ರಚಾರ ಭಾಷಣದಲ್ಲಿಯೂ ಸರ್ಕಾರ ಅಧಿಕಾರಕ್ಕೆ ಬಂದರೆ ಎನ್‌ಆರ್‌ಐ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆ ಸಚಿವಾಲಯವು ಎನ್‌ಆರ್‌ಐ ಕನ್ನಡಿಗರಿಗೆ ಸಂಬಂಧಿಸಿದ ಕಾರ್ಯವನ್ನಷ್ಟೇ ಮಾಡಲಿದೆ.

ಎನ್‌ಆರ್‌ಐ ಫೋರಂನ್ನು ಗಟ್ಟಿಗೊಳಿಸುವುದು, ಎನ್‌ಆರ್‌ಐ ಕನ್ನಡಿಗರಿಗೆ ಗುರುತಿನ ಕಾರ್ಡ್‌ಗಳನ್ನು ನೀಡಿ ಎನ್‌ಆರ್‌ಐ ಕನ್ನಡಿಗರ ದಾಖಲೆಗಳನ್ನು ಸಂಗ್ರಹಿಸಿ ಸುರಕ್ಷಿತಗೊಳಿಸುವುದಾಗಿಯೂ ಭರವಸೆ ನೀಡಲಾಗಿತ್ತು. ಇದೀಗ ಎನ್‌ಆರ್‌ಐ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಸಂಬಂಧಿಸಿದ ಚರ್ಚೆಗಳು ಶುರುವಾಗಿವೆ. ಕೇರಳದಲ್ಲಿ ಈಗಾಗಲೇ ಎನ್‌ಆರ್‌ಐ ಕೇರಳಿಗರಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಲಾಗಿದೆ. ಅಲ್ಲದೆ, ಆ ಸಚಿವಾಲಯಕ್ಕಾಗಿ ವಾರ್ಷಿಕ 160 ಕೋಟಿ ರು. ಬಜೆಟ್‌ ಮೀಸಲಿಡಲಾಗಿದೆ. ರಾಜ್ಯದಲ್ಲೂ ಅದೇ ಮಾದರಿಯಲ್ಲಿ ಎನ್‌ಆರ್‌ಐ ಕನ್ನಡಿಗರಿಗಾಗಿ ಸಚಿವಾಲಯ ಸ್ಥಾಪಿಸಿ, ಬಜೆಟ್‌ ಮೀಸಲಿಡುವ ಬಗ್ಗೆ ಕಾಂಗ್ರೆಸ್‌ ಪಕ್ಷ ವ್ಯಾಪ್ತಿಯಲ್ಲಿ ಚರ್ಚಿಸಲಾಗಿದೆ.

ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಾಜ್ಯ ಸರ್ಕಾರ ಆದೇಶ

ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಕನ್ನಡಿಗರಿಗೆ ನೆರವಾಗಲು ರಾಜ್ಯದ ಎನ್‌ಆರ್‌ಐ ಫೋರಂನ್ನು ಗಟ್ಟಿಗೊಳಿಸುವ ಅವಶ್ಯಕತೆಯಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಫೋರಂಗೆ ಸಾಕಷ್ಟು ನೆರವು ನೀಡಿದ್ದರು. ಅದಾದ ನಂತರ ನಿಷ್ಕಿ್ರಯಗೊಂಡಿತ್ತು. ಈಗ ಮತ್ತೆ ಫೋರಂಗೆ ಬಲ ತುಂಬಬೇಕಿದೆ.
- ಡಾ. ಆರತಿ ಕೃಷ್ಣ, ರಾಜ್ಯದ ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ

click me!