Udupi: ಕೊಲ್ಲೂರಿನಲ್ಲಿ ಸಲಾಂ ಮಂಗಳಾರತಿ ಪೂಜೆಯೇ ಚಾಲ್ತಿಯಲ್ಲಿಲ್ಲ..!

By Suvarna NewsFirst Published Mar 27, 2022, 4:30 PM IST
Highlights

ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ (Kolluru Mookmbika) ನಡೆಯುವ ಸಲಾಂ ಮಂಗಳಾರತಿ (Salam Mangalarathi) ಪದ್ಧತಿಯ ಬಗ್ಗೆ ವಿಶ್ವ ಹಿಂದೂ ಪರಿಷತ್ (VHP) ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಈ ರೀತಿಯ ಪದ್ಧತಿಯೇ ದೇವಾಲಯದಲ್ಲಿ ಚಾಲ್ತಿಯಲ್ಲಿಲ್ಲ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.
 

ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ (Kolluru Mookmbika) ನಡೆಯುವ ಸಲಾಂ ಮಂಗಳಾರತಿ (Salam Mangalarathi) ಪದ್ಧತಿಯ ಬಗ್ಗೆ ವಿಶ್ವ ಹಿಂದೂ ಪರಿಷತ್ (VHP) ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಈ ರೀತಿಯ ಪದ್ಧತಿಯೇ ದೇವಾಲಯದಲ್ಲಿ ಚಾಲ್ತಿಯಲ್ಲಿಲ್ಲ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.

ಟಿಪ್ಪು ಸುಲ್ತಾನ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಸಲುವಾಗಿ ಅನಾದಿಕಾಲದಿಂದ ಸಲಾಂ ಮಂಗಳಾರತಿ ಎಂಬ ಪೂಜೆ ನಡೆಸಲಾಗುತ್ತಿತ್ತು. ರಾತ್ರಿ ನಡೆಯುವ ಮಹಾಪೂಜೆಗೂ ಮುನ್ನ ಸಲಾಂ ಮಂಗಳಾರತಿಯ ಹೆಸರಲ್ಲಿ ದೇವರಿಗೆ ಆರತಿ ಬೆಳಗಾಗುತ್ತಿತ್ತು. ಈ ಬಗ್ಗೆ ಈ ಹಿಂದೆಯೂ ಅನೇಕ ಬಾರಿ ಚರ್ಚೆಯೂ ನಡೆದಿತ್ತು.

ಆದರೆ ಮತಾಂಧ ಟಿಪ್ಪುವಿನ ಹೆಸರಲ್ಲಿ ದಾಸ್ಯದ ಸಂಕೇತವಾಗಿರುವ ಸಲಾಂ ಎಂಬ ಶಬ್ದ ಬಳಸಿ ಪೂಜೆ ನಡೆಸುವುದು ಸರಿಯಲ್ಲ. ಪೂಜೆ ಕೇವಲ ಆರತಿಗೆ ಸೀಮಿತವಾಗಿರಲಿ ಎಂದು ವಿಶ್ವ ಹಿಂದೂ ಪರಿಷತ್ ಗಮನ ಸೆಳೆದಿತ್ತು. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಸಚಿವರು ಮತ್ತು ಅಧಿಕಾರಿಗಳಿಗೆ ಮನವಿಯನ್ನು ಕೂಡ ನೀಡಿತ್ತು.

ರಸ್ತೆ ಬದಿ ನಿಂತು ಮಾತನಾಡಿದ್ರೆ ಆಗಲ್ಲ: ಕೊಲ್ಲೂರು ವಿವಾದಕ್ಕೆ ಯುಟಿ ಖಾದರ್ ಗರಂ!

ಸಲಾಂ ಮಂಗಳಾರತಿ ಪೂಜೆಯೇ ಚಾಲ್ತಿಯಲ್ಲಿಲ್ಲವೇ?

ಹೀಗೊಂದು ಚರ್ಚೆ ಈಗ ಆರಂಭವಾಗಿದೆ. ದೇವಾಲಯದ ಅರ್ಚಕ ಮೂಲಗಳು ಹೇಳುವ ಪ್ರಕಾರ, ರಾತ್ರಿ ಪೂಜೆಗೂ ಮುನ್ನ ಪ್ರದೋಷ ಪೂಜೆ ನಡೆಸಲಾಗುತ್ತದೆ. ಇಲ್ಲಿ ಟಿಪ್ಪುವಿನ ಹೆಸರಿನಲ್ಲಿ ಯಾವುದೇ ಸಂಕಲ್ಪ ಮಾಡುವ ಪರಿಪಾಠ ಇಲ್ಲ. ರೂಢಿಯಲ್ಲಿ ಜನ ಈ ಪೂಜೆಯನ್ನು ಸಲಾಂ ಮಂಗಳಾರತಿ ಎನ್ನುತ್ತಿದ್ದರು. ಧಾರ್ಮಿಕ ಭಾಷೆಯಲ್ಲಿ ಈ ಪೂಜೆಯನ್ನು ಪ್ರದೋಷ ಪೂಜೆಯನ್ನು ಎನ್ನುತ್ತಾರೆ. ವಾಸ್ತವದಲ್ಲಿ ಸಲಾಂ ಪೂಜೆ ಎಂಬುವ ಪದ್ಧತಿಯೇ ಚಾಲ್ತಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

ಟಿಪ್ಪು ಕ್ಷೇತ್ರಕ್ಕೆ ಭೇಟಿ ನೀಡಿದ ನೆನಪಲ್ಲಿ ಆತ ದೇವಿಗೆ ಸಲಾಂ ಮಾಡಿದ ಎಂಬ ಕಾರಣಕ್ಕೆ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ ಎಂಬ ಕಥೆ ಹಿಂದಿನಿಂದಲೂ ರೂಢಿಯಲ್ಲಿದೆ . ಇದನ್ನು ಹೊರತುಪಡಿಸಿದರೆ ಈ ಪೂಜೆ ನಡೆಸುವ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲ.  ಸಲಾಂ ಮಂಗಳಾರತಿ ಎಂಬ ಪೂಜೆಯೇ ಚಾಲ್ತಿಯಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಅವರು ಕೂಡ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಪ್ರದೋಷ ಪೂಜೆ ನಡೆಸುವ ಶ್ರೀಧರ ಅಡಿಗರು ಹೇಳೋದೇನು?

ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಪ್ರದೋಷ, ಎರಡು ರಾತ್ರಿ ಕಾಲದಲ್ಲಿ ಪೂಜೆ ನಡೆಯುತ್ತದೆ. ಇದೊಂದು ಬಹಳ ಅರ್ಥಗರ್ಭಿತವಾದ ಪೂಜೆ. ಪ್ರದೋಷ  ಕಾಲ ಎಂಬುದಕ್ಕೆ ಬಹಳ ಮಹತ್ವವಿದೆ. ಪ್ರದೋಷ ಕಾಲದಲ್ಲಿ ಎಲ್ಲಾ ದೇವಿ ದೇವತೆಗಳ ಸಾನಿಧ್ಯ ಇರುತ್ತದೆ ಎಂಬ ನಂಬಿಕೆಯಿದೆ. ಪ್ರದೋಷ ಕಾಲದಲ್ಲಿ ನಡೆಯುವ ಪೂಜೆಗಳ ವೈಶಿಷ್ಟ ಬೇರೆಯೇ ಇದೆ. ನಾವು ಆ ಕಾಲದಲ್ಲಿ ದೇವಿಗೆ ಪೂಜೆಯನ್ನ ನಡೆಸುತ್ತೇವೆ. ವೈಭವೋಪೇತವಾಗಿ ರಾಗೋಪಚಾರ ದೀಪಾರಾಧನೆಗಳನ್ನು ನಡೆಸುತ್ತೇವೆ. 

ತಾಯಿ ಮೂಕಾಂಬಿಕೆಗೆ 'ಸಲಾಂ' ಬೇಡ ಆರತಿ ಸಾಕು, ಹೆಸರು ಬದಲಿಸಲು ವಿಹಿಂಪ ಮನವಿ

ಕರುಣಾ ಕರುಣಿಕೆಯಲ್ಲಿ ಕೇಳಿಬಂದ ಪ್ರಕಾರ ದೊರೆ ಟಿಪ್ಪು ಪೂಜೆಯಲ್ಲಿ ಭಾಗವಹಿಸಿದ್ದ. ಪ್ರದೋಷ ಪೂಜೆ ಸಂದರ್ಭದಲ್ಲಿ ಸಲಾಮ್ ಮಾಡಿದ್ದ ಅಂತ ಕರುಣಾಕರುಣಿಕ ಅರ್ಥಾತ್ ವಾಡಿಕೆಯಾಗಿ ಬಂದಿದೆ. ಇದಕ್ಕೆ ಯಾವುದೇ ತರಹದ ದಾಖಲೆಗಳು ಇಲ್ಲ. ಇದೊಂದು ಹೇಳಿಕೊಂಡು ಬಂದಿರುವಂತಹ ಮಾತು. ಪ್ರದೋಷ ಪೂಜೆ ಪ್ರದೋಷ ಮಂಗಳಾರತಿ ಎಂದೇ ದಾಖಲೆಯಲ್ಲಿರುವ ಧಾರ್ಮಿಕ ಪ್ರಾಧಾನ್ಯತೆ ಪೂಜೆಗೆ ಇದೆ. ಇದು ಹಿಂದಿನಿಂದಲೂ ಇವತ್ತಿಗೂ ನಡೆದುಕೊಂಡು ಬಂದಿರುವಂತಹ ಆಚರಣೆ. ರಾಷ್ಟ್ರದ ಯೋಗಕ್ಷೇಮಕ್ಕೋಸ್ಕರ ಪೂಜೆ ಸಂದರ್ಭದಲ್ಲಿ ಪ್ರಾರ್ಥನೆ ನಡೆಯುತ್ತದೆ. ಪೂಜೆ ಸಂದರ್ಭ ಟಿಪ್ಪು ಭಾಗವಹಿಸಿದ್ದ ಎಂದು ಹೇಳಿಕೊಂಡು ಬಂದಿದ್ದಾರೆ. ಹಾಗಾಗಿ ಈ ಹೆಸರು ಬಂದಿರಬಹುದು.

- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ ಉಡುಪಿ 

click me!