
ಬೆಂಗಳೂರು(ಜೂ.27): ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳ ಪೈಕಿ 14 ಸಾವಿರ ಅಂಗನವಾಡಿಗಳಿಗೆ ವಿದ್ಯುತ್, 13 ಸಾವಿರ ಅಂಗನವಾಡಿಗಳಿಗೆ ಶೌಚಾಲಯ, 18 ಸಾವಿರ ಅಂಗನವಾಡಿ ಕೇಂದ್ರಗಳಿಗೆ ಫ್ಯಾನ್ ಸೌಲಭ್ಯ ಇಲ್ಲ. ಇವುಗಳಿಗೆ ಸೌಲಭ್ಯ ಕಲ್ಪಿಸಲು ಪ್ರತ್ಯೇಕ ಹಣಕಾಸಿನ ಲಭ್ಯತೆ ಇಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಸಂಬಂಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ಸರ್ಕಾರ ಈ ವಿಷಯವನ್ನು ತಿಳಿಸಿದೆ.
ಸರ್ಕಾರದ ಈ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ವಿದ್ಯುತ್ ಸಂಪರ್ಕ ಮತ್ತು ಶೌಚಾಲಯ ವ್ಯವಸ್ಥೆ ಇಲ್ಲದೆ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಅಂಗನವಾಡಿಗಳಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸಲು ಪ್ರತ್ಯೇಕ ಅನುದಾನ ಇಲ್ಲ ಎಂದು ತಿಳಿಸಿರುವುದು ಆಶ್ಚರ್ಯದ ಸಂಗತಿಯಾಗಿದೆ ಎಂದಿದೆ.
ಶಾಲೆಗಿಂತಲೂ ಮೊದಲೇ ಅಂಗನವಾಡಿಗಳು ಆರಂಭ? ಮಾರ್ಗಸೂಚಿ ಬಿಡುಗಡೆ
ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವ ಸಂಬಂಧ ನ್ಯಾಯಾಲಯಗಳು ಕಾಲಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಕ್ರೋಢೀಕರಿಸಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ಅವುಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿತು.
ಲಿಖಿತ ಹೇಳಿಕೆಯಲ್ಲಿ ಏನಿದೆ?:
ರಾಜ್ಯದಲ್ಲಿರುವ 65,911 ಅಂಗನವಾಡಿ ಕೇಂದ್ರಗಳ ಪೈಕಿ 50,963 ಅಂಗನವಾಡಿಗಳಲ್ಲಿ ವಿದ್ಯುತ್ ಸಂಪರ್ಕವಿದೆ, 14,948 ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಇವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಂದಾಜು 45.33 ಕೋಟಿ ರು. ಬೇಕು. ಅದೇ ರೀತಿ 52,221 ಅಂಗನವಾಡಿಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆ ಇದ್ದು, 13,690 ಅಂಗನವಾಡಿಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಶೌಚಾಲಯ ಇಲ್ಲದ ಒಟ್ಟು ಅಂಗನವಾಡಿಗಳಲ್ಲಿ 3,524 ಅಂಗನವಾಡಿ ಕೇಂದ್ರಗಳು ಸರ್ಕಾರಿ ಕಟ್ಟಡಗಳಲ್ಲಿದ್ದು, ಈ ಕೇಂದ್ರಗಳಲ್ಲಿ ಶೌಚಾಲಯ ಕಟ್ಟಲು 21.19 ಕೋಟಿ ರು. ಬೇಕು. 18,974 ಅಂಗನವಾಡಿಗಳಿಗೆ ಫ್ಯಾನ್ ಒದಗಿಸಲು 11.27 ಕೋಟಿ ರು. ಬೇಕು ಎಂದು ಸರ್ಕಾರ ಹೇಳಿದೆ.
ರಾಜ್ಯದ ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ 125 ಕೋಟಿ ರು.ಗಳನ್ನು 2021-22ನೇ ಸಾಲಿನ ಆಯವ್ಯಯದಲ್ಲಿ ಮೀಸಲಿಡಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ 6,700 ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಹಾಗೂ 8,300 ಕಟ್ಟಡಗಳಿಗೆ ಫ್ಯಾನ್ ಸೌಲಭ್ಯ ಮತ್ತು 1,700 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಕಟ್ಟಲು ಹಾಗೂ 771 ಹೊಸ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ಬಳಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ