18 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಫಟಾಫಟ್ ಲಸಿಕೆ!

By Kannadaprabha NewsFirst Published Jun 27, 2021, 7:31 AM IST
Highlights

* 18 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ 2 ದಿನ ವ್ಯಾಕ್ಸಿನ್‌?

* ಜುಲೈ ಮೊದಲ ವಾರದಲ್ಲೇ ಅಭಿಯಾನ ಸಾಧ್ಯತೆ

* ಫಟಾಫಟ್‌ ಲಸಿಕೆ: 3ನೇ ವಾರ ಕಾಲೇಜು ಶುರು?

ಲಿಂಗರಾಜು ಕೋರಾ

ಬೆಂಗಳೂರು(ಜೂ.27): ಕಾಲೇಜುಗಳ ಪುನಾರಂಭಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವುದನ್ನು ಅಭಿಯಾನದ ರೂಪದಲ್ಲಿ ಕೈಗೊಳ್ಳುವ ಚಿಂತನೆ ಹೊಂದಿರುವ ರಾಜ್ಯ ಸರ್ಕಾರ ಈ ದಿಸೆಯಲ್ಲಿ ಸಿದ್ಧತೆ ಆರಂಭಿಸಿದೆ. ಎಲ್ಲ ಯೋಜಿಸಿದಂತೆ ನಡೆದರೆ, ಕಾಲೇಜು ವಿದ್ಯಾರ್ಥಿಗಳನ್ನು ಆದ್ಯತಾ ಗುಂಪು ಎಂದು ಪರಿಗಣಿಸಿ ಎಲ್ಲರಿಗೂ ಒಮ್ಮೆಗೇ ಲಸಿಕೆ ಹಾಕಲು ಜುಲೈ ಮೊದಲ ವಾರದಲ್ಲಿ 2ರಿಂದ 3 ದಿನಗಳ ಅವಧಿಯ ಅಭಿಯಾನ ನಡೆಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಈ ದಿಸೆಯಲ್ಲಿ ಆರೋಗ್ಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಸಮನ್ವಯದಲ್ಲಿ ಲಸಿಕಾಕರಣಕ್ಕೆ ಸರ್ವ ಸಿದ್ಧತೆಗಳು ಆರಂಭಗೊಂಡಿವೆ. ಸಾಧ್ಯವಾದಷ್ಟೂಏಕಕಾಲದಲ್ಲೇ ಎಲ್ಲ ಕಾಲೇಜುಗಳಲ್ಲೂ ಲಸಿಕಾಕರಣ ಆಯೋಜಿಸಿ ಕೆಲ ದಿನಗಳಲ್ಲೇ ಪೂರ್ಣಗೊಳಿಸಲು ನಿರ್ಣಯಿಸಲಾಗಿದೆ.

ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಕಾಲೇಜುಗಳನ್ನು ಭೌತಿಕವಾಗಿ ಆರಂಭಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಆದ್ಯತೆ ಮೇಲೆ ಕಾಲೇಜು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಲಸಿಕಾಕರಣ ನಡೆಸಲು ಸರ್ಕಾರ ಆಲೋಚಿಸಿದ್ದು, ಅಗತ್ಯ ಪ್ರಮಾಣದಷ್ಟುಮೊದಲ ಡೋಸ್‌ ಲಸಿಕೆ ಸಂಗ್ರಹ ಹೇಗೆ ಎಂಬ ಪ್ರಯತ್ನ ನಡೆದಿದೆ. ಲಸಿಕೆ ಸಂಗ್ರಹ ಸಾಧ್ಯವಾದರೆ ಈ ಅಭಿಯಾನಕ್ಕೆ ಜೀವ ಬರಲಿದೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯಡಿ 24 ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳು, 20ಕ್ಕೂ ಹೆಚ್ಚು ಸ್ವಾಯತ್ತ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು, ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರಗಳು, ಕಾಲೇಜು ಶಿಕ್ಷಣ ಇಲಾಖೆಯಡಿ 415 ಸರ್ಕಾರಿ ಪದವಿ ಕಾಲೇಜು, 392 ಅನುದಾನಿತ ಕಾಲೇಜು, 1800 ಖಾಸಗಿ ಪದವಿ ಕಾಲೇಜುಗಳು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಡಿ ನೂರಾರು ಎಂಜಿನಿಯರಿಂಗ್‌, ಡಿಪ್ಲೊಮಾ, ಐಟಿಐ ಕಾಲೇಜುಗಳು ಬರುತ್ತವೆ. ಇವುಗಳಲ್ಲಿ ಒಟ್ಟಾರೆ 16ರಿಂದ 18 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲರಿಗೂ ಏಕಕಾಲದಲ್ಲೇ ಲಸಿಕೆ ನೀಡಲು ಗಂಭೀರ ಪ್ರಯತ್ನ ನಡೆಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ಖಚಿತಪಡಿಸಿವೆ.

ಪ್ರಾಂಶುಪಾಲರೇ ನೋಡಲ್‌ ಅಧಿಕಾರಿ:

ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆಯು ಆಯಾ ಕಾಲೇಜು ಪ್ರಾಂಶುಪಾಲರನ್ನೇ ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶ ಮಾಡಿದೆ. ಇನ್ನು ವಿಶ್ವವಿದ್ಯಾಲಯಗಳಲ್ಲಿ ಲಸಿಕಾಕರಣದ ಜವಾಬ್ದಾರಿಯನ್ನು ಆಯಾ ವಿವಿಗಳಿಗೇ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆಯಾ ವಿವಿಯ ಕುಲಪತಿ, ಕುಲಸಚಿವರು ಸಂಬಂಧಿಸಿದ ಜಿಲ್ಲಾಡಳಿತ, ಪಾಲಿಕೆಗಳ ಜೊತೆ ಮಾತನಾಡಿ ವಿವಿ ಕ್ಯಾಂಪಸ್‌ನಲ್ಲಿ ಲಸಿಕಾಕರಣ ಆಯೋಜನೆಗೆ ಸೂಚಿಸಲು ನಿರ್ಣಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ವಿದ್ಯಾರ್ಥಿಗಳೂ ಬರೋದು ಡೌಟ್‌!

ಲಸಿಕಾಕರಣದ ಕುರಿತು ಸರ್ಕಾರ ಮಾಹಿತಿ ನೀಡಿದ ಕೂಡಲೇ ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮಾಹಿತಿ ನೀಡುವ ಪ್ರಯತ್ನ ನಡೆಸಿದ್ದೇವೆ. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ನಡೆಯದ ಕಾರಣ ಸಾಕಷ್ಟುವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದಾರೆ. ಅವರು ಲಸಿಕೆ ಪಡೆಯಲು ಅಲ್ಲಿಂದ ಪ್ರಯಾಣಿಸಬೇಕಾಗಿದೆ. ಇನ್ನು ಕೆಲವರು ನೀಡಿದ್ದ ಮೊಬೈಲ್‌ ನಂಬರ್‌ಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಹಾಗಾಗಿ ಒಂದೆರಡು ದಿನ ಲಸಿಕಾಕರಣ ನಡೆಸಿದರೆ ಪೂರ್ಣ ಪ್ರಮಾಣದ ವಿದ್ಯಾರ್ಥಿಗಳು ಹಾಜರಾಗುವ ಸಾಧ್ಯತೆ ಬಹಳ ಕಡಿಮೆ. ಹಾಜರಾಗಲಾಗದ ವಿದ್ಯಾರ್ಥಿಗಳಿಗೆ ಇಲಾಖೆಯು ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲೇ ಕಾಲೇಜಿನ ಗುರುತಿನ ಚೀಟಿ ತೋರಿಸಿ ಆದ್ಯತೆ ಮೇಲೆ ಲಸಿಕೆ ಪಡೆಯಲು ಅವಕಾಶ ನೀಡಿದರೆ ಒಳಿತು. ಏಕೆಂದರೆ ಲಸಿಕೆ ಪಡೆಯಲು ಮಕ್ಕಳು ನೂರಾರು ಕಿ.ಮೀ. ಪ್ರಯಾಣಿಸುವುದು ಅಷ್ಟುಸುರಕ್ಷಿತವಲ್ಲ ಎನ್ನುತ್ತಾರೆ ಕೆಲ ಕಾಲೇಜುಗಳ ಪ್ರಾಂಶುಪಾಲರು.

ಕಾಲೇಜು ವಿದ್ಯಾರ್ಥಿಗಳ ಲಸಿಕಾಕರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುತ್ತಿದೆ. ಜುಲೈ ಮೊದಲ ವಾರದಲ್ಲಿ ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಕೆಲ ದಿನಗಳಲ್ಲೇ ಲಸಿಕಾಕರಣ ನಡೆಸುವ ಆಲೋಚನೆ ನಡೆಸಿದೆ. ಲಸಿಕಾಕರಣ ಕಾರ್ಯಕ್ಕೆ ಈಗಾಗಲೇ ಕಾಲೇಜುಗಳ ಪ್ರಾಂಶುಪಾಲರನ್ನೇ ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

- ಪ್ರದೀಪ್‌ ಪಿ., ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ

ಎಲ್ಲೆಲ್ಲಿ ಲಸಿಕೆ ಆಂದೋಲನ?

24 ಸರ್ಕಾರಿ ವಿವಿಗಳು

20 ಖಾಸಗಿ ವಿವಿಗಳು

415 ಸರ್ಕಾರಿ ಪದವಿ ಕಾಲೇಜು

392 ಅನುದಾನಿತ ಕಾಲೇಜು

1800 ಖಾಸಗಿ ಪದವಿ ಕಾಲೇಜು

click me!