ಸದ್ಯಕ್ಕೆ ಡಿಕೆಶಿ ಬಂಧನ ಮಾಡುವ ಉದ್ದೇಶ ಇಲ್ಲ: ಕೋರ್ಟ್‌ಗೆ ಇ.ಡಿ.

Published : Nov 24, 2022, 08:39 AM IST
ಸದ್ಯಕ್ಕೆ ಡಿಕೆಶಿ ಬಂಧನ ಮಾಡುವ ಉದ್ದೇಶ ಇಲ್ಲ: ಕೋರ್ಟ್‌ಗೆ ಇ.ಡಿ.

ಸಾರಾಂಶ

ಎರಡನೇ ಇಸಿಐಆರ್‌ ಸಲ್ಲಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಇ.ಡಿ, ಸದ್ಯಕ್ಕೆ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುವ ಉದ್ದೇಶ ತನಗಿಲ್ಲ ಎಂದು ತಿಳಿಸಿದೆ. 

ನವದೆಹಲಿ(ನ.24):  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.) ಸಲ್ಲಿಸಿದ್ದ ಎರಡನೇ ಇಸಿಐಆರ್‌ (ಜಾರಿ ನಿರ್ದೇಶನಾಲಯದ ಮಾಹಿತಿ ವರದಿ) ರದ್ದು ಮಾಡುವಂತೆ ಕೋರಿ ಹಾಗೂ ಬಂಧನದಿಂದ ರಕ್ಷಣೆ ನೀಡುವಂತೆ ಮನವಿ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬುಧವಾರ ದೆಹಲಿ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಎರಡನೇ ಇಸಿಐಆರ್‌ ಸಲ್ಲಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಇ.ಡಿ, ಸದ್ಯಕ್ಕೆ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುವ ಉದ್ದೇಶ ತನಗಿಲ್ಲ ಎಂದು ತಿಳಿಸಿದೆ.

2018ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ.ಯು ಈಗಾಗಲೇ ತನಿಖೆ ನಡೆಸಿದ್ದು, ಇದೀಗ 2020ರಲ್ಲಿ ಮತ್ತೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ. ದಾಖಲಿಸಿರುವ ಇಸಿಐಆರ್‌ ಅನ್ನು ರದ್ದು ಮಾಡುವಂತೆ ಕೋರಿ ಡಿ.ಕೆ.ಶಿವಕುಮಾರ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2018 ಮತ್ತು 2020ರಲ್ಲಿ ದಾಖಲಾದ ಪ್ರಕರಣಗಳು ಒಂದೇ ರೀತಿಯ ಅಪರಾಧಕ್ಕೆ ಸಂಬಂಧಿಸಿದ್ದಾಗಿವೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಪದೇ ಪದೇ ಇ.ಡಿ. ಸಮನ್ಸ್‌ ಜಾರಿ ಮಾಡುತ್ತಿದೆ. ಹೀಗಾಗಿ ಬಂಧನದಿಂದಲೂ ರಕ್ಷಣೆ ನೀಡುವಂತೆ ಕೋರಿ ಅವರು ಮನವಿ ಮಾಡಿದ್ದರು.

National Herald PMLA case: 3 ತಾಸು ಇ.ಡಿ. ವಿಚಾರಣೆ ಎದುರಿಸಿದ ಡಿ.ಕೆ.ಶಿವಕುಮಾರ್‌

ಡಿ.ಕೆ.ಶಿವಕುಮಾರ್‌ ಅವರ ಅರ್ಜಿಗೆ ಆಕ್ಷೇಪ ಸಲ್ಲಿಸಿ ಅಫಿಡವಿಟ್‌ ಸಲ್ಲಿಸಿದ ಇ.ಡಿ, ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ದಾಖಲಾಗಿರುವ ಇಸಿಐಆರ್‌ಗಳು ವಿಭಿನ್ನ ವಾಸ್ತವಾಂಶಗಳನ್ನು ಅವಲಂಬಿಸಿವೆ. ಅಲ್ಲದೆ, ಈ ಕುರಿತ ವಿಚಾರಣೆಯನ್ನು ಆರಂಭ ಮಾಡುವ ಸಂದರ್ಭ ಪಾಲಿಸಬೇಕಾದ ಮಾರ್ಗಸೂಚಿಗಳೂ ವಿಭಿನ್ನವಾಗಿವೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡ ಹಣದ ಪ್ರಮಾಣವೂ ವಿಭಿನ್ನವಾಗಿದೆ ಎಂದು ವಾದಿಸಿದೆ. ಹೀಗಾಗಿ ಅರ್ಜಿದಾರರು ತಾನು ಅದೇ ಪ್ರಕರಣದಲ್ಲಿ ಈಗಾಗಲೇ ತನಿಖೆಗೊಳಗಾಗಿದ್ದೇನೆ ಎಂದು ಹೇಳುವಂತಿಲ್ಲ ಎಂದು ಇ.ಡಿ. ವಾದಿಸಿದೆ. ಇ.ಡಿ.ಯ ಈ ಅಫಿಡವಿಟ್‌ಗೆ ಉತ್ತರ ನೀಡಲು ನ್ಯಾ. ಮುಕ್ತಾ ಗುಪ್ತಾ ಮತ್ತು ಅನಿಶ್‌ ದಯಾಳ್‌ ಅವರಿದ್ದ ಪೀಠವು ಡಿ.ಕೆ.ಶಿವಕುಮಾರ್‌ ಅವರಿಗೆ ಒಂದು ವಾರಗಳ ಕಾಲ ನೀಡಿದೆ. ಮುಂದಿನ ವಿಚಾರಣೆಯನ್ನು ಡಿ.2ಕ್ಕೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

ದುಬೈಗೆ ತೆರಳಲು ಕೋರ್ಟ್‌ ಅನುಮತಿ ಕೋರಿದ ಡಿಕೆಶಿ

ದೆಹಲಿಯ ತಮ್ಮ ಫ್ಲ್ಯಾಟ್‌ನಲ್ಲಿ ಸಿಕ್ಕ ಹಣದ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಇ.ಡಿ.ನ್ಯಾಯಾಲಯದ ಎದುರು ಬುಧವಾರ ಹಾಜರಾದ ಡಿ.ಕೆ.ಶಿವಕುಮಾರ್‌ ಅವರು ಡಿ.1ರಿಂದ 8ರ ವರೆಗೆ ದುಬೈ ಪ್ರವಾಸಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಿದರು. ಈ ಕುರಿತು ನ.26ಕ್ಕೆ ತನ್ನ ಅಭಿಪ್ರಾಯ ತಿಳಿಸುವುದಾಗಿ ಇ.ಡಿ. ಹೇಳಿದ್ದು, ಮುಂದಿನ ವಿಚಾರಣೆಯನ್ನು ಜ.18ಕ್ಕೆ ಮುಂದೂಡಲಾಗಿದೆ.

ಪದೇ ಪದೇ ಇ.ಡಿ.ಸಮನ್ಸ್‌ ನೀಡಿ ಹಿಂಸೆ: ಡಿ.ಕೆ.ಶಿವಕುಮಾರ್‌

ಐಟಿ ಎಫ್‌ಐಆರ್‌ನಲ್ಲಿ ಮತ್ತು ಸಿಬಿಐನಿಂದ ಮಾಡಲ್ಪಟ್ಟಆರೋಪವು ಪ್ರಕರಣದ ವಿಭಿನ್ನ ವಿಧಾನವನ್ನು ತೋರಿಸುತ್ತದೆ. ಜತೆಗೆ ಇದರಲ್ಲಿ ಬೇರೆ ಬೇರೆ ವ್ಯಕ್ತಿಗಳ ಪಾತ್ರವೂ ಬೆಳಕಿಗೆ ಬರಬಹುದು.

ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್‌ ಪರ ವಕೀಲರು ಪದೇ ಪದೇ ಸಮನ್ಸ್‌ ನೀಡುವ ವಿಚಾರ ಪ್ರಸ್ತಾಪಿಸಿ ಬಂಧನದಿಂದ ರಕ್ಷಣೆ ನೀಡುವಂತೆ ಮನವಿ ಮಾಡಿದಾಗ, ನ್ಯಾಯಪೀಠವು ಇ.ಡಿ.ಅಧಿಕಾರಿಗಳನ್ನು ಕರೆಸಿ ಈ ಕುರಿತು ಸ್ಪಷ್ಟನೆ ಕೇಳಿತು. ಆಗ ಅಧಿಕಾರಿಗಳು ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುವ ಸಾಧ್ಯತೆ ಸದ್ಯಕ್ಕಂತೂ ಇಲ್ಲ ಎಂದು ಸ್ಪಷ್ಟಪಡಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ