
ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದ ನಡುವೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹಬ್ಬದ ರಜೆ ಇಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ವಿಧಾನಸಭೆ ಅಧಿವೇಶನಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸುವ ಅಗತ್ಯದ ಹಿನ್ನೆಲೆಯಲ್ಲಿ, ಹಬ್ಬದ ದಿನವೂ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಕಂದಾಯ ಇಲಾಖೆ ಸೂಚಿಸಿದೆ.
ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರ ನಿರ್ದೇಶನದಂತೆ, ಮಾರ್ಚ್ 23, 2026ರಂದು ವಿಧಾನಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳು ಚರ್ಚೆಗೆ ಬಾಕಿ ಇರುವುದರಿಂದ, ಅವುಗಳಿಗೆ ಸಮರ್ಪಕ ಉತ್ತರ ನೀಡಲು ಪೂರ್ವ ಸಿದ್ಧತೆ ಅಗತ್ಯವಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 19ರಂದು ಯುಗಾದಿ ಹಬ್ಬದ ದಿನವೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗುವಂತೆ ಆದೇಶಿಸಲಾಗಿದೆ.
ಈ ಸೂಚನೆಯು ಕಂದಾಯ ಇಲಾಖೆಯ ಒಂಬತ್ತು ಪ್ರಮುಖ ಶಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅನ್ವಯವಾಗುತ್ತದೆ. ಮುಜರಾಯಿ, ಭೂ ಮಂಜೂರಾತಿ-1, ಭೂ ಮಂಜೂರಾತಿ-2, ಭೂ ಮಂಜೂರಾತಿ-3, ಸೇವೆಗಳು-3, ಭೂ ಕಂದಾಯ, ಭೂ ಮಾಪನ, ಭೂಮಿ ಹಾಗೂ ಭೂಸುಧಾರಣಾ ಕೋಶ ಸೇರಿದಂತೆ ವಿವಿಧ ವಿಭಾಗಗಳಿಗೆ ಸೇರಿದ ಸಿಬ್ಬಂದಿಗಳು ಕಚೇರಿಗೆ ಹಾಜರಾಗಿ ವಿಧಾನಸಭೆಯ ಬಾಕಿ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಕಂದಾಯ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಕಲಾವತಿ ಎಸ್.ಎನ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗದ ಹಿನ್ನೆಲೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಿದ ನಂತರ, ಇಲಾಖೆಯ ಹಿರಿಯ ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಆದರೆ, ಹಬ್ಬದ ದಿನವೂ ಕಡ್ಡಾಯ ಹಾಜರಾತಿ ಸೂಚನೆ ನೀಡಿರುವ ಕ್ರಮಕ್ಕೆ ಸಿಬ್ಬಂದಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಬೇಕಾದ ಸಂದರ್ಭದಲ್ಲಿ ಈ ರೀತಿಯ ಆದೇಶ ಹೊರಡಿಸಿರುವುದು ‘ಅಮಾನವೀಯ’ ಕ್ರಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ವಿಧಾನಸಭೆಯ ಕಾರ್ಯಚಟುವಟಿಕೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯಾದರೂ, ಹಬ್ಬದ ದಿನದಲ್ಲೇ ಕಚೇರಿ ಹಾಜರಾತಿ ಕಡ್ಡಾಯಗೊಳಿಸಿರುವುದು ಹಬ್ಬದ ಖುಷಿಯನ್ನು ಕಿತ್ತುಕೊಂಡಂತಾಗಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ