ಯುಗಾದಿ ಹಬ್ಬ ಹಿನ್ನೆಲೆ ಬೆಂಗಳೂರಿಂದ ಊರಿಗೆ: ತುಂಬಿ ತುಳುಕುತ್ತಿರುವ ಮೆಜೆಸ್ಟಿಕ್, ಟಿಕೆಟ್ ಬೆಲೆ ದುಬಾರಿ!

Published : Mar 18, 2026, 07:02 PM IST
Ugadi Rush in Bengaluru

ಸಾರಾಂಶ

ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಜಂಗುಳಿ ಉಂಟಾಗಿದೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ವಿಪರೀತವಾಗಿ ಏರಿಸಿದ್ದು, ಇದಕ್ಕೆ ಪ್ರತಿಯಾಗಿ ಸಾರಿಗೆ ಇಲಾಖೆ ದಾಳಿ ನಡೆಸಿ ದಂಡ ವಿಧಿಸುತ್ತಿದೆ.

ಬೆಂಗಳೂರು: ಯುಗಾದಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಯಾಣಿಕರ ಸಂಚಾರ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಹಬ್ಬವನ್ನು ಕುಟುಂಬ ಸಮೇತವಾಗಿ ಊರಿನಲ್ಲಿ ಆಚರಿಸಲು ನಗರದಿಂದ ದೊಡ್ಡ ಸಂಖ್ಯೆಯಲ್ಲಿ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದು, ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜನಸಂದಣಿ ತಾರಕಕ್ಕೇರಿತ್ತು.

ಬ್ಯಾಗ್ ಹಿಡಿದು ಕುಟುಂಬ ಸಮೇತವಾಗಿ ಬಸ್ ಹತ್ತಲು ಜನರು ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು, ಬಸ್‌ಗಳು ಬರುವಷ್ಟರಲ್ಲಿ ಪ್ರಯಾಣಿಕರು ಕಿಟಕಿಗಳ ಮೂಲಕ ಬ್ಯಾಗ್‌ಗಳನ್ನು ಹಾಕಿ ಸೀಟ್ ಹಿಡಿಯಲು ಯತ್ನಿಸುತ್ತಿರುವುದು ಕಾಣಿಸಿತು. ತುಮಕೂರು, ಚಿತ್ರದುರ್ಗ, ಹಾಸನ, ಮಂಗಳೂರು, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಶಿರಸಿ, ಧಾರವಾಡ, ಕಲಬುರಗಿ, ಬಳ್ಳಾರಿ, ಬೀದರ್, ಯಾದಗಿರಿ, ವಿಜಯನಗರ, ರಾಯಚೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳತ್ತ ತೆರಳುವ ಬಸ್‌ಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

ಒಟ್ಟಾರೆ 2,325 ಹೆಚ್ಚುವರಿ ಬಸ್‌

ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಸ್ಥೆಗಳು ಒಟ್ಟಾರೆ 2,325 ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಿವೆ. ಮಾರ್ಚ್ 18, 19 ಮತ್ತು 20 ರಂದು ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯ ವಿವಿಧ ಸ್ಥಳಗಳಿಗೆ ಈ ಹೆಚ್ಚುವರಿ ವಾಹನಗಳನ್ನು ಸಂಚರಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಇನ್ನೊಂದೆಡೆ, ಹಬ್ಬದ ಸಂದರ್ಭವನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಎರಡು ರಿಂದ ಮೂರು ಪಟ್ಟು ಹೆಚ್ಚಿಸಿರುವುದು ಪ್ರಯಾಣಿಕರಿಗೆ ಭಾರೀ ಆಘಾತ ಉಂಟುಮಾಡಿದೆ. ಬೆಂಗಳೂರಿನಿಂದ ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಮಾರ್ಗಗಳಲ್ಲಿ ಟಿಕೆಟ್ ದರಗಳು ಗಗನಕ್ಕೇರಿವೆ.

ಸಾಮಾನ್ಯ ದಿನಗಳಲ್ಲಿ ₹600 ಇರುವ ಬೆಂಗಳೂರು-ಮಂಗಳೂರು ಪ್ರಯಾಣ ದರವು ₹2,999ರವರೆಗೆ ಏರಿಕೆಯಾಗಿದೆ. ಬೆಂಗಳೂರು-ಧಾರವಾಡ/ಹುಬ್ಬಳ್ಳಿ ಮಾರ್ಗದಲ್ಲಿ ₹400-1,300 ದರವು ₹4,500ರವರೆಗೆ, ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ₹400 ದರವು ₹2,799ಕ್ಕೆ, ಬೆಂಗಳೂರು-ಧರ್ಮಸ್ಥಳಕ್ಕೆ ₹500 ದರವು ₹3,600ಕ್ಕೆ ಹಾಗೂ ಬೆಂಗಳೂರು-ಮೈಸೂರು ಮಾರ್ಗದಲ್ಲಿ ₹350 ದರವು ₹2,500ರವರೆಗೆ ಏರಿಕೆಯಾಗಿದೆ. ಈ ದರ ಏರಿಕೆ ಹಿನ್ನೆಲೆಯಲ್ಲಿ ಹಲವರು “ಇಂತಹ ದರ ನೋಡಿದ್ರೆ ಊರಿಗೆ ಹೋಗದೇ ಇರೋದ್ರೇ ಒಳಿತು” ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹಬ್ಬದ ಸಮಯದಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗುತ್ತಿದ್ದಂತೆ, ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಆರ್‌ಟಿಒ ಅಧಿಕಾರಿಗಳು ಭಾರೀ ದಾಳಿ ನಡೆಸಿದ್ದು, ಖಾಸಗಿ ಬಸ್‌ಗಳ ಮೇಲೆ ಪರಿಶೀಲನೆ ಕೈಗೊಂಡಿದ್ದಾರೆ.

ಹತ್ತು ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ತಪಾಸಣೆ

ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಗಳೂರು ವ್ಯಾಪ್ತಿಯ ಹತ್ತು ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಗಿದೆ. ಪ್ರಯಾಣಿಕರ ಟಿಕೆಟ್‌ಗಳನ್ನು ಪರಿಶೀಲಿಸಿ, ಹೆಚ್ಚುವರಿ ದರ ವಸೂಲಿ ಮಾಡುತ್ತಿದ್ದ ಬಸ್ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಯುಗಾದಿ ಹಬ್ಬದ ಹಿನ್ನೆಲೆ ವಿಶೇಷ ತಂಡಗಳನ್ನು ರಚಿಸಿರುವ ಸಾರಿಗೆ ಇಲಾಖೆ ರಾಜ್ಯಾದ್ಯಂತ ಇಂತಹ ಕಾರ್ಯಾಚರಣೆಗಳನ್ನು ಮುಂದುವರಿಸಲು ತೀರ್ಮಾನಿಸಿದ್ದು, ಮೊದಲ ದಿನವೇ ಖಾಸಗಿ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಿದೆ. ಸಾರ್ವಜನಿಕರ ಅನುಕೂಲ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಔಷಧಿಗಳ ಖರೀದಿಗೆ 868 ಕೋಟಿ ಟೆಂಡರ್‌: ಸಚಿವ ದಿನೇಶ್‌ ಗುಂಡೂರಾವ್‌
ಮಗನಿಗೆ ಮದ್ವೆ ಮಾಡಿದ್ರೆ ನೀವು ಫಿನಿಶ್‌ ಅಂತಾ ತಾಯಿಗೆ ಹೇಳಿದ ಆರ್ಯವರ್ಧನ್‌ ಗುರೂಜಿ, 'This is business' ಎಂದ ನೆಟ್ಟಿಗರು!