ಮಂಗಳೂರಲ್ಲಿ ನಿಪಾ ಆತಂಕ ಆತಂಕ: ರಕ್ತ, ಗಂಟಲುದ್ರವ ಪುಣೆ ಪ್ರಯೋಗಾಲಯಕ್ಕೆ ರವಾನೆ!

By Kannadaprabha NewsFirst Published Sep 15, 2021, 7:42 AM IST
Highlights

* ಮಂಗಳೂರಲ್ಲಿ ನಿಪಾ ಆತಂಕ ಅನಗತ್ಯ ಎಂದು ಡೀಸಿ ಸ್ಪಷ್ಟನೆ

* ನಿಪಾ ಭೀತಿಯಿಂದ ಕಾರವಾರ ವ್ಯಕ್ತಿ ಆಸ್ಪತ್ರೆಗೆ ದಾಖಲು

* ರಕ್ತ, ಗಂಟಲುದ್ರವ ಪುಣೆ ಪ್ರಯೋಗಾಲಯಕ್ಕೆ ರವಾನೆ

* ವ್ಯಕ್ತಿಗೆ ನಿಪಾ ಲಕ್ಷಣಗಳಿಲ್ಲ, ಭೀತಿ ಬೇಡ-ಡಿಸಿ ಹೇಳಿಕೆ

ಮಂಗಳೂರು(ಸೆ.15): ಕೇರಳದಲ್ಲಿ ಕಂಡುಬಂದಿರುವ ನಿಪಾ ವೈರಸ್‌ ಆತಂಕ ಕರ್ನಾಟಕದಲ್ಲೂ ಕಂಡುಬಂದಿದೆ. ಕಾರವಾರದ ವ್ಯಕ್ತಿಯೊಬ್ಬ ತನಗೆ ನಿಪಾ ಇದೆ ಎಂದು ತೀವ್ರವಾಗಿ ಆತಂಕಗೊಂಡು ಆಸ್ಪತ್ರೆ ಸೇರಿದ್ದಾನೆ. ಈತನ ರಕ್ತ, ಗಂಟಲುದ್ರವ ಮತ್ತು ಮೂತ್ರದ ಮಾದರಿಯನ್ನು ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಕಾರವಾರ ಮೂಲದ ಯುವಕನೊಬ್ಬನಿಗೆ ಜ್ವರ, ತಲೆನೋವು, ಹೃದಯ ಬಡಿತದಲ್ಲಿ ಏರಿಳಿತ ಕಂಡುಬಂದಿದ್ದು ಈತ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು, ಆಸ್ಪತ್ರೆ ಸೇರಿರುವ ಕಾರವಾರ ಮೂಲದ ವ್ಯಕ್ತಿ ನಿಫಾ ಭೀತಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಗೋವಾದಲ್ಲಿ ಆರ್‌ಟಿಪಿಸಿಆರ್‌ ಕಿಟ್‌ ತಯಾರಿಸುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 25ರ ಹರೆಯದ ವ್ಯಕ್ತಿಗೆ ಜ್ವರ, ಹೃದಯ ಬಡಿತದಲ್ಲಿ ಏರಿಳಿತ ಹಾಗೂ ತಲೆನೋವು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ನಿಫಾದ ಲಕ್ಷಣ ಇರಬಹುದು ಎಂಬ ಶಂಕೆಯಲ್ಲಿ ಆತ ಕಾರವಾರದಲ್ಲಿ ಆಸ್ರತ್ರೆಗೆ ಖುದ್ದು ದಾಖಲಾಗಿದ್ದ. ಬಳಿಕ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ತೆರಳಿದ್ದ. ಸದ್ಯ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ ಆ ವ್ಯಕ್ತಿಯಲ್ಲಿ ಯಾವುದೇ ರೀತಿಯ ನಿಫಾ ಲಕ್ಷಣಗಳು ಕಂಡು ಬಂದಿಲ್ಲ. ಹಾಗಿದ್ದರೂ ಆತನ ರಕ್ತ, ಗಂಟಲು ದ್ರವ ಹಾಗೂ ಯೂರಿನ್‌ ಮಾದರಿಯನ್ನು ತಪಾಸಣೆಗಾಗಿ ಬೆಂಗಳೂರಿನಿಂದ ಪುಣೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ನೀಡಿದರು.

ನಿಫಾಕ್ಕೆ ಸಂಬಂಧಿಸಿ ಆ ವ್ಯಕ್ತಿ ಎಲ್ಲಿಯೂ ಯಾರದ್ದೇ ಸಂಪರ್ಕಕ್ಕೆ ಬಂದಿಲ್ಲ. ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಆತ ಹಬ್ಬಕ್ಕಾಗಿ ಕಾರವಾರದಲ್ಲಿ ತನ್ನ ಮನೆಗೆ ಬೈಕ್‌ನಲ್ಲಿ ಬಂದ ವೇಳೆ ಮಳೆಯಲ್ಲಿ ನೆನೆದು ರಾತ್ರಿ ಜ್ವರದ ಬಂದಿತ್ತು. ಈ ಬಗ್ಗೆ ಗೂಗಲ್‌ನಲ್ಲಿ ಆತ ಹುಡುಕಾಡಿದಾಗ ಇದು ನಿಫಾದ ಲಕ್ಷಣವಿರಬಹುದೇನೋ ಎಂಬ ಆತಂಕದಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸ್ಪಷ್ಟಪಡಿಸಿದರು.

click me!