
ಬೆಂಗಳೂರು(ಸೆ.15): ಮೈಸೂರು ಜಿಲ್ಲೆಯಲ್ಲಿ ದೇವಸ್ಥಾನಗಳ ತೆರವಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಬಿಜೆಪಿಯೇ ದೇವಸ್ಥಾನಗಳನ್ನು ಒಡೆಸಿದೆ. ಬೇರೆ ಸರ್ಕಾರ ಇದ್ದಾಗ ದೇಗುಲ ಧ್ವಂಸ ನಡೆದಿದ್ದರೆ ಬಿಜೆಪಿಗರು ಸುಮ್ಮನಿರುತ್ತಿದ್ದರೇ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ದೇವಾಲಯಗಳನ್ನು ತೆರವುಗೊಳಿಸುವುದಕ್ಕೆ ಮೂಲ ಕಾರಣ ಬಿಜೆಪಿ. ಹಿಂದುತ್ವದ ಹೆಸರಲ್ಲೇ ದೇಶವನ್ನು ಆವರಿಸಿಕೊಳ್ಳುವುದಕ್ಕೆ ಬಿಜೆಪಿ ಹೊರಟಿದೆ ಎಂದು ಮಾಜಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಕಿಡಿಕಾರಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಆಪಾದನೆ ಮಾಡಿದ್ದರು. ಅದರ ಬೆನ್ನಲ್ಲೇ ಕುಮಾರಸ್ವಾಮಿ ಅವರೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಂಜನಗೂಡಿನಲ್ಲಿ ದೇಗುಲ ತೆರವು ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹಿಂದೂಗಳ ರಕ್ಷಣೆ ಹಾಗೂ ಹಿಂದೂ ಧಾರ್ಮಿಕ ರಕ್ಷಣೆಯ ಪೇಟೆಂಟ್‌ನ್ನು ಬಿಜೆಪಿ ತೆಗೆದುಕೊಂಡಿದೆ. ಜಿಲ್ಲಾಡಳಿತ ಕೂಡ ಸರ್ಕಾರದ ಅಧೀನದಲ್ಲೇ ಬರುವುದು. ಸರ್ಕಾರಕ್ಕಿಂತ ಜಿಲ್ಲಾಡಳಿತ ದೊಡ್ಡದಲ್ಲ. ಜಿಲ್ಲಾಡಳಿತ ಸರ್ಕಾರದ ಅಂಗವೇ ಆಗಿದೆ. ಸರ್ಕಾರ ಮನಸ್ಸು ಮಾಡಿದ್ದರೆ ದೇಗುಲ ತೆರವುಗೊಳಿಸುವುದನ್ನು ನಿಲ್ಲಿಸಬಹುದಿತ್ತು ಎಂದರು.
ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಮಾಡುತ್ತಿದೆ. ಆದರೆ ಹಿಂದೂ ಜಾಗರಣ ವೇದಿಕೆ ಕೂಡ ಬಿಜೆಪಿಯ ಅಂಗ ಸಂಸ್ಥೆ. ಬಿಜೆಪಿಯ ಅಂಗ ಸಂಸ್ಥೆಯಿಂದಲೇ ಪ್ರತಿಭಟನೆ ನಡೆಯುತ್ತಿದೆ ಎಂದು ಟೀಕಿಸಿದರು.
ಹಲವು ಘಟನೆಗಳಲ್ಲಿ ತೀರ್ಪು ಬಂದಾಗಲೂ ಸರ್ಕಾರ ರಕ್ಷಣೆ ಕೊಟ್ಟಿದೆ. ಹಿಂದೂ ದೇವಾಲಯಗಳ ರಕ್ಷಣೆ ಮಾಡುವುದಕ್ಕೆ ಸರ್ಕಾರಕ್ಕೆ ಅವಕಾಶವಿತ್ತು. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ದೇವಸ್ಥಾನ ತೆರವುಗೊಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಬೇಕು. ಒಡೆಸೋದು ಇವರೇ, ಈಗ ಹೋರಾಟ ಮಾಡಿಸುತ್ತಿರುವುದು ಇವರೇ. ಇದನ್ನು ಪ್ರಚಾರಕ್ಕೆ ಉಪಯೋಗಿಸಿಕೊಳ್ಳದೇ ಸಮಸ್ಯೆ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ